ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಚುನಾವಣೆ; ಶಾಂತಿಯುತ ಮತದಾನ

ಮಂಡ್ಯದಲ್ಲಿ ಶೇ 31.99, ಪಾಂಡವಪುರದಲ್ಲಿ ಶೇ 36.13 ಮತದಾನ
Last Updated 9 ಜನವರಿ 2017, 6:50 IST
ಅಕ್ಷರ ಗಾತ್ರ

ಮಂಡ್ಯ: ಸ್ಥಳೀಯ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆಯೂ ಸೇರಿದಂತೆ ಜಿಲ್ಲೆಯ ವಿವಿಧ ಎಪಿಎಂಸಿಗಳಿಗೆ  ಭಾನುವಾರ ನಡೆದ ಮತದಾನ ನೀರಸವಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.

  ಮಂಡ್ಯ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮತದಾನ ನೀರಸವಾಗಿ ನಡೆದಿದೆ. 14 ಸ್ಥಾನಗಳಲ್ಲಿ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಉಳಿದ 12  ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೇ 31.99 ರಷ್ಟು ಮತದಾನ ನಡೆದಿದೆ.

ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಮತದಾನ ನಡೆಯಿತು. ಹೆಚ್ಚಿನ ಮತಗಟ್ಟೆಗಳಲ್ಲಿ ಮತದಾರರ ಸಾಲು ಕಂಡು ಬರಲಿಲ್ಲ.  ಮತಗಟ್ಟೆಗಳ ಮುಂದೆ ಅಭ್ಯರ್ಥಿಗಳ ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿದ್ದರು. ಕೊನೆ ಗಳಿಗೆಯಲ್ಲಿಯೂ  ಮತ ಕೇಳುತ್ತಿದ್ದರು.

ಶೇ 32.53 ಮತದಾನ
ಕೆ.ಆರ್.ಪೇಟೆ: ತಾಲ್ಲೂಕಿನ ಎಪಿಎಂಸಿ ಚುನಾವಣೆಯಲ್ಲಿ ಶೇ.32.53 ರಷ್ಟು ಮತದಾನವಾಗಿದೆ. ಒಟ್ಟು 99,714 ಮತದಾರರ ಪೈಕಿ 32,498 ಮತದಾರರು ಮಾತ್ರ ಮತ ಚಲಾಯಿಸಿದ್ದಾರೆ. 23,234 ಪುರುಷರು ಹಾಗೂ 9,264 ಮಹಿಳೆಯರು  ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ತಹಶೀಲ್ದಾರ್  ಕೆ.ರತ್ನಾ ತಿಳಿಸಿದರು.
ಕೆರಗೋಡು ವರದಿ: ಹೋಬಳಿ ವ್ಯಾಪ್ತಿಯ ಕೀಲಾರ ಮತ್ತು ಕೆರಗೋಡು ಕ್ಷೇತ್ರಗಳಿಗೆ ಶಾಂತಿಯುತ ಮತದಾನ ನಡೆದಿದೆ.

ಕೀಲಾರ ಸಾಮಾನ್ಯ ಕ್ಷೇತ್ರದಲ್ಲಿ ಇಬ್ಬರೇ ಅಭ್ಯರ್ಥಿಗಳಿದ್ದು, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೆ.ಪಿ.ವೀರಪ್ಪ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯಶಂಕರ ನಡುವೆ ನೇರ ಸ್ಪರ್ಧೆ ನಡೆದಿದೆ. ಕೆರಗೋಡು ಸಾಮಾನ್ಯ ಕ್ಷೇತ್ರದಿಂದ ನಾಲ್ಕು ಜನ ಅಭ್ಯರ್ಥಿಗಳಿದ್ದು, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಬೋರೇಗೌಡ ಮತ್ತು ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ವ್ಯೋಮಕೇಶವ ನಡುವೆ ನೇರ ಸ್ಪರ್ಧೆ ನಡೆದಿದೆ.

150 ಮತಗಟ್ಟೆ
ಕೆ.ಆರ್.ಪೇಟೆ: ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೇಶಕರ ಆಯ್ಕೆಗಾಗಿ 150 ಮತಗಟ್ಟೆಗಳಲ್ಲಿ ಮತದಾನ ನಡೆಯಿತು.
ಶಾಸಕ ನಾರಾಯಣಗೌಡ, ಪತ್ನಿ ದೇವಕಿ ಅವರ ಸಮೇತ ಆಗಮಿಸಿ ಮತ ಚಲಾಯಿಸಿದರು. ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜೆ.ಪ್ರೇಮಕುಮಾರಿ ಕೂಡ ಮತಚಲಾಯಿಸಿದರು. 11 ಕ್ಷೇತ್ರಗಳಿಗೆ 29 ಜನ ಕಣದಲ್ಲಿದ್ದಾರೆ. 

ಮತದಾನಕ್ಕೆ ಸಾಲು
ಪಾಂಡವಪುರ: ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಶೇ 36.13 ರಷ್ಟು  ಮತದಾನ ನಡೆಯಿತು.
ಬೆಳಿಗ್ಗೆ 8 ರಿಂದ 5 ಗಂಟೆಯವರೆಗೆ ನಡೆದ ಮತದಾನದಲ್ಲಿ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮತಗಟ್ಟೆ ಕೇಂದ್ರಗಳಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಅಭ್ಯರ್ಥಿಗಳ ಬೆಂಬಲಿಗರು ಆಟೊ, ಸ್ಕೂಟರ್‌, ಕಾರುಗಳಲ್ಲಿ ಮತದಾರರನ್ನು ಕರೆತಂದು ಮತಚಲಾಯಿಸಲು ನೆರವಾಗುತ್ತಿದ್ದರು.
ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಸ್ವಗ್ರಾಮ ಕ್ಯಾತನಹಳ್ಳಿಯಲ್ಲಿ, ಸಂಸದ ಸಿ.ಎಸ್. ಪುಟ್ಟರಾಜು ಸ್ವಗ್ರಾಮ ಚಿನಕುರಳಿಯಲ್ಲಿ ಮತಚಲಾಯಿಸಿದರು.

ಶ್ರೀರಂಗಪಟ್ಟಣ:  ಶೇ 27.5 ಚಲಾವಣೆ
ಶ್ರೀರಂಗಪಟ್ಟಣ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 11 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೇ 27.5ರಷ್ಟು ಮತದಾನ ನಡೆದಿದೆ.

ಒಟ್ಟು 54,552 ಮಂದಿ ಮತದಾರರ ಪೈಕಿ 12,748 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ ಎಂದು ಉಪತಹಶೀಲ್ದಾರ್‌ ಭರತ್‌ ತಿಳಿಸಿದ್ದಾರೆ. ಶಾಸಕ ರಮೇಶ ಬಂಡಿಸಿದ್ದೇಗೌಡ ಸ್ವಗ್ರಾಮ ಅರಕೆರೆ ಮತಗಟ್ಟೆಯಲ್ಲಿ ಮತದಾನ ಮಾಡಿದರು. ನಗುವನಹಳ್ಳಿ ಮತಗಟ್ಟೆಯಲ್ಲಿ ಕಾಳಿಸಿದ್ದನಹುಂಡಿ ಗ್ರಾಮದ 95 ವರ್ಷದ ನಾಗಮ್ಮ ತಮ್ಮ ಸಹಾಯಕರ ಜತೆ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು.

ಪಾಲಹಳ್ಳಿ ಮತಗಟ್ಟೆಯಲ್ಲಿ ಕಣದಿಂದ ನಿವೃತ್ತಿ ಪಡೆದ ದಾಸೇಗೌಡ ಅವರು ಜೆಡಿಎಸ್‌ ಬೆಂಬಲಿತ ಶಂಕರೇಗೌಡ ಅವರ ಪರ ಮತ ಯಾಚಿಸುತ್ತಿದ್ದು ವಿಶೇಷವಾಗಿತ್ತು.
ಕೆಲವು ಮತಗಟ್ಟೆಗಳ ಬಳಿ ಮತದಾರರಿಗೆ ಅಭ್ಯರ್ಥಿಗಳ ಬೆಂಬಲಿಗರು ಬಹಿರಂಗವಾಗಿ ಹಣ ಹಂಚುತ್ತಿದ್ದ ದೃಶ್ಯ ಕಂಡುಬಂತು.

ಕೆ.ಶೆಟ್ಟಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಪ್ರಮಿಳಾ ಬಸವರಾಜು ಅವಿರೋಧವಾಗಿ ಆಯ್ಕೆಯಾಗಿದ್ದು,  ಆಸುಪಾಸಿನ ಗ್ರಾಮಗಳಲ್ಲಿ ಚುನಾವಣೆ ನೀರಸವಾಗಿತ್ತು. ಎಲ್ಲಿಯೂ ಗೊಂದಲ ಉಂಟಾಗಿಲ್ಲ ಎಂದು ಚುವಾವಣಾಧಿಕಾರಿಯೂ ಆದ ತಹಶೀಲ್ದಾರ್‌ ಕೆ. ಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT