ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತ್ಯ ಪರಿಷತ್‌ ಕನ್ನಡದ ತವರು

ಹೊಳೆನರಸೀಪುರ ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ; ಮಂಜೇಗೌಡ ಅಭಿಮತ
Last Updated 9 ಜನವರಿ 2017, 7:04 IST
ಅಕ್ಷರ ಗಾತ್ರ

ಹೊಳೆನರಸೀಪುರ: ಕನ್ನಡ ಭಾಷೆಗೆ ಸಾಹಿತ್ಯ ಪರಿಷತ್‌ ತವರು ಮನೆ ಇದ್ದಂತೆ. ತವರು ಮನೆಯಲ್ಲಿ ಮಗಳಿಗೆ ಸಿಗುವ ಗೌರವ, ಆದರ, ಸ್ಥಾನಮಾನ, ರಕ್ಷಣೆ ಎಲ್ಲವನ್ನೂ ಸಾಹಿತ್ಯ ಪರಿಷತ್‌ ಕನ್ನಡಕ್ಕೆ ನೀಡಿದೆ ಎಂದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಹೇಳಿದರು.

ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು. ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು, ಸಮ್ಮೇಳನಗಳು ಕನ್ನಡ ಭಾಷೆಯ ಹಿರಿಮೆಯನ್ನು ಸಾರುತ್ತವೆ. ಕನ್ನಡಿಗರು ಇತರ ಭಾಷೆಗಳನ್ನು ಗೌರವಿಸುತ್ತ ಕನ್ನಡವನ್ನು ಉಳಿಸಿ ಬೆಳೆಸುವ ಸಿಪಾಯಿಗಳಂತಿರಬೇಕು ಎಂದರು.

ರಾಷ್ಟ್ರಧ್ವಜ ಹಾರಿಸಿದ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ತಹಶೀಲ್ದಾರ್‌ ವೈ.ಎಂ. ರೇಣುಕುಮಾರ್‌ ಮಾತನಾಡಿ, ನಮ್ಮ ಭಾಷೆಗೆ ತಾಯಿಯ ಸ್ಥಾನಮಾನ ನೀಡಿದ್ದೇವೆ. ಅಷ್ಟೇ ಗೌರವದಿಂದ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಸದಾ ತೊಡಗಿಕೊಂಡಿರಬೇಕು. ಕನ್ನಡ ಕಾರ್ಯಕ್ರಮಗಳು ನಿರಂತರ ನಡೆಯುತ್ತಿರಬೇಕು ಎಂದರು.

ಸಮ್ಮೇಳನಾಧ್ಯಕ್ಷ ಗುಂಜೇವು ಅಣ್ಣಾಜಪ್ಪ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್‌.ಪುಟ್ಟಸೋಮಪ್ಪ, ಬಾ.ರಾ. ಸುಬ್ಬರಾಯ, ಕೆ.ಬಿ.ವೆಂಕಟಸ್ವಾಮಿ, ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಪ್ರೇಮಾ ಮಂಜುನಾಥ್‌, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆರಗೋಡು ಮಹೇಶ್‌, ವಾಸವಿ ಕ್ಲಬ್‌ ಅಧ್ಯಕ್ಷ ಮುರಳಿಧರ ಗುಪ್ತ, ಸ್ವಾಮಿ ವಿವೇಕಾನಂದ ಯುವ ವೇದಿಕೆಯ ಅಧ್ಯಕ್ಷ ರೆಹಮಾನ್‌, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್‌, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಆರ್‌.ಬಿ.ಪುಟ್ಟೇಗೌಡ, ನರಸಿಂಹಶೆಟ್ಟಿ, ಮಂಜುನಾಥ್‌, ಚೆನ್ನೇಗೌಡ, ವೈ.ವಿ.ಚಂದ್ರಶೇಖರ್‌ ಸಮ್ಮೇಳನದ ನೇತೃತ್ವ ವಹಿಸಿದ್ದರು.

ಭಾರತ ಜ್ಞಾನ ವಿಜ್ಞಾನ ಪರಿಷತ್ತಿನ ತಾಲ್ಲೂಕು ಘಟಕದ ಸದಸ್ಯರು ನಾಡಗೀತೆ ಮತ್ತು ರೈತಗೀತೆಯನ್ನು ಹಾಡಿ ಗಮನ ಸೆಳೆದರು.

ಕನ್ನಡದ ಜನರು ಎಲ್ಲ ಕ್ಷೇತ್ರದಲ್ಲೂ ಬೆಳೆಯಬೇಕು: ದೇವೇಗೌಡ
ಹೊಳೆನರಸೀಪುರ:  ನಾಡಿನ ಜನರು ಎಲ್ಲ ಕ್ಷೇತ್ರದಲ್ಲೂ ಬೆಳೆಯಬೇಕು. ವಿಜ್ಞಾನ, ತಂತ್ರಜ್ಞಾನ, ಕೈಗಾರಿಕಾ ಕ್ಷೇತ್ರಗಳಲ್ಲಿ ಕನ್ನಡಿಗರು ನಿರೀಕ್ಷಿತ ಮಟ್ಟದಲ್ಲಿ ತೊಡಗಿಸಿಕೊಂಡಿಲ್ಲ ಎಂದು ಸಂಸದ ಎಚ್‌.ಡಿ.ದೇವೇಗೌಡ ಹೇಳಿದರು.

ಪಟ್ಟಣದಲ್ಲಿ ಭಾನುವಾರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಬೈಕ್‌ ರ್‌್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಕನ್ನಡ ನಾಡಿನಲ್ಲಿ ಹೆಚ್ಚೆಚ್ಚು ಕನ್ನಡ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸದ ವಿಷಯ. ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ತು ಹಿಂದೆ ಸೊರಗಿತ್ತು. ಅಲ್ಲಿನ ಸಿಬ್ಬಂದಿಗೆ ವೇತನ ನೀಡಲು ಪರದಾಡುವ ಪರಿಸ್ಥಿತಿ ಇತ್ತು. ನಾನು ಮುಖ್ಯಮಂತ್ರಿ ಆದಾಗ ಪರಿಷತ್ತಿಗೆ ಹೆಚ್ಚಿನ ಅನುದಾನ ನೀಡಿ ರಾಜ್ಯದಲ್ಲಿ ನಿರಂತರ ಕನ್ನಡ ಕಾರ್ಯಕ್ರಮಗಳು ನಡೆಯುವಂತೆ ಮಾಡಿದೆ ಎಂದರು.
ಕನ್ನಡ ಕನ್ನಡಿಗರಿಂದಲೇ ಉಳಿಯಬೇಕು. ಆಡಳಿತದಲ್ಲಿ ಕನ್ನಡ ಇನ್ನೂ ವ್ಯವಸ್ಥಿತವಾಗಿ ಜಾರಿಯಾಗಿಲ್ಲ ಎಂದರು.

ಸಮ್ಮೇಳನಾಧ್ಯಕ್ಷ ಗುಂಜೇವು ಅಣ್ಣಾಜಪ್ಪ ಅವರನ್ನು ಅಭಿನಂದಿಸಿದರು. ತಹಶೀಲ್ದಾರ್‌ ರೇಣುಕುಮಾರ್‌,  ನಾಯಕಹಳ್ಳಿ ಮಂಜೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಕೆ.ಕುಮಾರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT