ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನ ಐಕ್ಯ ಸ್ಥಳದಲ್ಲಿಯೇ ಮೌಢ್ಯ ಬಿತ್ತನೆ

ಬಸವಣ್ಣನ ಐಕ್ಯ ಮಂಟಪದಲ್ಲಿ ಸ್ಟಿಕ್ಕರ್‌ ಹಚ್ಚುತ್ತಿರುವ ಯಾತ್ರಾರ್ಥಿಗಳು, ಎಲ್ಲರಲ್ಲಿ ಮೂಢನಂಬಿಕೆ ಬಿತ್ತನೆ: ಆರೋಪ
Last Updated 9 ಜನವರಿ 2017, 8:17 IST
ಅಕ್ಷರ ಗಾತ್ರ
ಕೂಡಲಸಂಗಮ: ಮೂಢನಂಬಿಕೆಯ ವಿರುದ್ಧ ಹೋರಾಡಿದ ಬಸವಣ್ಣನ ಐಕ್ಯ ಸ್ಥಳದಲ್ಲಿಯೇ ನಿತ್ಯ ಮೂಢನಂಬಿಕೆ ನಡೆಯುತ್ತಿರುವುದು ಬಸವಾಭಿ ಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
 
12ನೇ ಶತಮಾನದಲ್ಲಿ ಮೂಢ ನಂಬಿಕೆ, ಕಂದಾಚಾರಗಳ ವಿರುದ್ಧ ಹೋರಾಡಿ ಕೂಡಲಸಂಗಮದಲ್ಲಿ ಲಿಂಗೈಕ್ಯರಾದ ಬಸವಣ್ಣನ ಐಕ್ಯ ಸ್ಥಳದಲ್ಲಿಯೇ ಕೆಲವು ಪಟ್ಟ ಭದ್ರ ಹಿತಾಸಕ್ತಿ ಹೊಂದಿದ ವ್ಯಾಪಾರಿಗಳು ಮೂಢನಂಬಿಕೆ ಬೆಳೆಸುತ್ತಿರುವುದು ಬಸವಾಭಿಮಾನಿಗಳಿಗೆ ನೋವು ಉಂಟು ಮಾಡಿದೆ.
 
ಬಸವಣ್ಣ ಐಕ್ಯ ಸ್ಥಳವಾದ  ಕೂಡಲಸಂಗಮಕ್ಕೆ ರಾಜ್ಯ ಮಾತ್ರವಲ್ಲದೇ ದೇಶದ ವಿವಿಧ ಭಾಗಗಳಿಂದ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಬರುವ ಭಕ್ತರಿಗೆ ಕೆಲವು ವ್ಯಾಪಾರಿಗಳು ಬಸವಣ್ಣ, ಸಂಗಮನಾಥ, ಇಷ್ಟಲಿಂಗ, ವಿವಿಧ ದೇವರುಗಳ ಸ್ಟಿಕ್ಕರ್‌ಗಳನ್ನು ಐಕ್ಯ ಸ್ಥಳದಲ್ಲಿ ಅಂಟಿಸಿದರೆ ಒಳ್ಳೆಯ ದಾಗುವುದು, ವ್ಯಾಪಾರ ವೃದ್ಧಿಯಾ ಗುವುದು, ಮಕ್ಕಳಾಗದವರಿಗೆ ಮಕ್ಕಳಾ ಗುತ್ತವೆ, ಕೌಟುಂಬಿಕ ಸಮಸ್ಯೆ ನಿವಾರಣೆ ಆಗುತ್ತವೆ ಎಂದು ಹೇಳಿ ಸ್ಟಿಕ್ಕರ್‌ಗಳನ್ನು ₹ 5 ರಿಂದ 10 ಕ್ಕೆ ಒಂದರಂತೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಹಲವು ಬಸವ ಭಕ್ತರಿಂದ ಕೇಳಿಬರುತ್ತಿದೆ. 
 
ವ್ಯಾಪಾರದ ಉದ್ದೇಶದಿಂದ ಬಸವಣ್ಣನವರ ಐಕ್ಯ ಸ್ಥಳದಲ್ಲಿ ಯಾರು ಮೂಢನಂಬಿಕೆ ಬೆಳೆಸುವ ಕಾರ್ಯ ಮಾಡಬಾರದು. ಸದ್ಯ ಐಕ್ಯ ಸ್ಥಳಕ್ಕೆ ಹೋಗುವ ಮೆಟ್ಟಿಲಿನ ಬಳಿಯ ಗೋಡೆಗಳು ಸಂಪೂರ್ಣ ಸ್ಟಿಕ್ಕರ್‌ನಿಂದ ತುಂಬಿವೆ, ಇದನ್ನು ನೋಡಿದ ಕೆಲವು ಮುಗ್ಧ ಭಕ್ತರು ಸ್ಟಿಕ್ಕರ್‌ ಹಚ್ಚುವರು ಇಂತಹ ಮೂಢನಂಬಿಕೆ, ಸಂಪ್ರದಾಯಗಳನ್ನು ಕೂಡಲೇ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ತಡೆಯುವ ಕಾರ್ಯ ಮಾಡಬೇಕು ಎಂದು ಬಳ್ಳಾರಿಯ ವಿನೋದ ಪಾಟೀಲ ಹೇಳಿದರು.
 
 ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಮಹಾದೇವ ಮುರುಗಿ ಪತ್ರಿಕೆಯೊಂದಿಗೆ ಮಾತನಾಡಿ ಐಕ್ಯ ಮಂಟಪದಲ್ಲಿ ಭಕ್ತರು, ಪ್ರವಾಸಿಗರು ಹಚ್ಚಿದ ಸ್ಟಿಕ್ಕರ್‌ಗಳನ್ನು ತೆಗೆಸುವಂತಹ ಕಾರ್ಯಮಾಡುತ್ತೇವೆ ಮುಂದೆ ಇಂತಹ ಕಾರ್ಯವನ್ನು ಭಕ್ತರು ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.
 
***
‘ಬಸವಣ್ಣನ ತತ್ವಗಳಿಗೆ ಕಳಂಕ’
ಮೌಢ್ಯತೆ ಮುಕ್ತ ಸಮಾಜ ನಿರ್ಮಾಣ ಮಾಡಿದ ಬಸವಣ್ಣನ ನೆಲದಲ್ಲಿ ಮತ್ತೆ ಮೌಢ್ಯವನ್ನು ಬಿತ್ತುವ ಕೆಲಸವನ್ನು ಕೆಲವು ಪಟ್ಟ ಭದ್ರ ಹಿತ್ತಾಸಕಿಗಳು ಮಾಡುತ್ತಿರುವುದು ದುರಂತ. ಬಸವಣ್ಣನ ಐಕ್ಯ ಸ್ಥಳದಲ್ಲಿ ಇಂತಹ ಘಟನೆ ನಡೆದಿರುವುದು ಖಂಡನೀಯ. ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಇಂತಹ ಘಟನೆಯನ್ನು ತಡೆದು ಬಸವಣ್ಣನ ತತ್ವಗಳಿಗೆ ಕಳಂಕ ಬರದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ  ಹೇಳಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT