ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ಬೇರಿಗೆ ಇಳಿದರೆ ಮಾತ್ರ ಕಾವ್ಯ

ಕುಮಟಾ ತಾಲ್ಲೂಕು ಐದನೇ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಹಿರಿಯ ಕವಿ ಬಿ.ಎ.ಸನದಿ ಹೇಳಿಕೆ
Last Updated 9 ಜನವರಿ 2017, 8:23 IST
ಅಕ್ಷರ ಗಾತ್ರ
ಕುಮಟಾ: ‘ತನ್ನ ಹುಟ್ಟೂರಿನ ಪರಂಪರೆಯನ್ನು ಅರಿಯಲು ಬದುಕಿನ ಬೇರಿಗೆ ಇಳಿಯುವವರಿಗೆ ಮಾತ್ರ ಕಾವ್ಯ ದಕ್ಕುತ್ತದೆ’ ಎಂದು ಕುಮಟಾದ ಹೆಗಡೆ ಗ್ರಾಮದಲ್ಲಿ ಭಾನುವಾರ ಮುಕ್ತಾಯ­ಗೊಂಡ ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮರೋಪ ಸಮರಂಭದಲ್ಲಿ ‘ಪಂಪ ’ ಪ್ರಶಸ್ತಿಗೆ ಆಯ್ಕೆಗೊಂಡಿರುವ ಕವಿ ಬಿ.ಎ. ಸನದಿ ಹೇಳಿದರು.
 
‘ಕುಮಟಾದ ಬಾಳಿಗಾ ಮಹಾ­ವಿದ್ಯಾಲಯ ಈ ಭಾಗದಲ್ಲಿ ಜಾಗೃತಿ ಮೂ­ಡಿ­ಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಅಂಥ ಸಂಸ್ಥೆಯ ಕನ್ನಡ ಪ್ರಾಧ್ಯಾಪಕ ಹಾಗೂ  ಸರ್ವಾಂಗ ಕಲೆ­ಯಾದ ಯಕ್ಷಗಾನದ ಸಂಶೋಧಕ ಡಾ. ಜಿ. ಎಲ್‌. ಹೆಗಡೆ.  ಶಿಕ್ಷಕರಾದವರು ಹಳ್ಳಿಗಳು  ಹುಟ್ಟಿ ಬೆಳೆದ ಬಗೆಯನ್ನು ತಮ್ಮ ವಿದ್ಯಾರ್ಥಿಗಳಿಗೆ ತಿಳಿಸಿದರೆ  ಮುಂದೆ ಅವರಿಗೂ ತಮ್ಮ  ನೆಲದ ಮೇಲೆ ಪ್ರೀತಿ ಹುಟ್ಟಲು ಕಾರಣವಾಗುತ್ತದೆ. ನಮ್ಮಲ್ಲಿ ಭಿನ್ನಾಭಿಪ್ರಾಯ ಏನೇ ಇರಲಿ, ಅದು  ಎಂದೂ ದ್ವೇಷವಾಗಬಾರದು’ ಎಂದರು.
 
 ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ, ‘ ತಾಳೆಗರಿ ಕೃತಿಯನ್ನು ಸಂಗ್ರಹಿಸಿಟ್ಟು ಅದರ ಪ್ರಯೋಜನ ಸ್ಥಳೀಯ ಸಾಹಿತಿ­ಗಳಿಗೆ ಸಿಗುವಂತೆ ಮಾಡಿರುವ ವಿದ್ವಾಂಸ ಎನ್‌.ಕೆ. ಹೆಗಡೆ ಅವರು ಹೆಗಡೆ ಗ್ರಾಮದವರು ಎನ್ನುವುದು ಈ ಗ್ರಾಮದ ಹೆಗ್ಗಳಿಕೆ. ಬನವಾಸಿಯ ಕದಂಬೋತ್ಸ­ವದಲ್ಲಿ ನಡೆಯುವ ‘ ಪಂಪ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಆದಷ್ಟು ಹೆಚ್ಚು ಜನರು ಪಾಲ್ಗೊಳ್ಳುವ ಮೂಲಕ ನಾವೆಲ್ಲ ಕನ್ನಡತನ ತೋರಬೇಕಾಗಿದೆ’ ಎಂದರು.  ಇದಕ್ಕೂ ಮೊದಲು ನಡೆದ ‘ಇತಿಹಾಸ ನಾಡು–ನುಡಿ’ ಗೋಷ್ಠಿಯಲ್ಲಿ ಡಾ. ಗೋಪಾ­ಲಕೃಷ್ಣ ಹೆಗಡೆ ‘ ಇತಿಹಾಸ ಪುಟದಲ್ಲಿ ಹೆಗಡೆ ಗ್ರಾಮ’,  ಎಂ.ಜಿ. ಭಟ್ಟ ‘ ನುಡಿ ಹಬ್ಬ ಆಚರಣೆ ಸವಾಲುಗಳು’ ಹಾಗೂ ಚಿದಾನಂದ ಭಂಡಾರಿ, ‘ ಕನ್ನಡ ನಾಡು ನುಡಿ ಸಾಗಿ ಬಂದ ದಾರಿ’ ಕುರಿತು ಮಾತನಾಡಿದರು. ಡಾ. ಸುರೇಶ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ,  ಶಾರದಾ ಭಟ್ಟ ಅವರ ಅಧ್ಯಕ್ಷತೆಯಲ್ಲಿ ಮಕ್ಕಳ ಕವಿಗೋಷ್ಠಿ ನಡೆಯಿತು.
 
ಸ್ಥಳೀಯ ಸಾಧಕರನ್ನು ಸನ್ಮಾನಿಸಲಾ­ಯಿತು.  ಕತೆ, ಕವನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾ­ಯಿತು. ವೇದಿಕೆಯಲ್ಲಿ  ಲಕ್ಷ್ಮಣ ನಾಯ್ಕ, ಡಿ.ಎಂ. ಕಾಮತ್,  ಡಾ. ಜಿ.ಜಿ.ಹೆಗಡೆ, ಎನ್‌.ಬಿ. ಶಾನಭಾಗ,  ನಾಗರಾಜ ನಾಯಕ,  ವಿನೋದ ಪ್ರಭು, ಸೂರಜ ನಾಯ್ಕ,  ಜಗನ್ನಾಥ ನಾಯ್ಕ, ರತ್ನಾಕರ ನಾಯ್ಕ,  ಉಮೇಶ ಮುಂಡಳ್ಳಿ, ಡಾ. ಶ್ರೀಧರ ಉಪ್ಪಿನಗಣಪತಿ ಹಾಜರಿದ್ದರು.
 
***
ಸಮ್ಮೇಳನದ ನಿರ್ಣಯಗಳು... 
ಕುಮಟಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಸರ್ಕಾರ ಕನಿಷ್ಠ 5 ಗುಂಟೆ ಜಾಗ ನೀಡಬೇಕು ಎಂದು ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ಡಾ. ಶ್ರೀಧರ ಉಪ್ಪಿನಗಣಪತಿ ಸೂಚಿಸಿದಾಗ, ಶಿಕ್ಷಕ ಎಂ.ಎಂ. ನಾಯ್ಕ ಅನುಮೋದಿಸಿದರು.
 
ಪ್ರಾಥಮಿಕ ಶಾಲೆಯ 5ರಿಂದ 7ನೇ ತರಗತಿಯ ಪಠ್ಯದಲ್ಲಿ ಯಕ್ಷಗಾನ ಕುರಿತು ಪಾಠ ಸೇರ್ಪಡೆಯಾಗಬೆಕು ಎಂದು ಶಿಕ್ಷಕ ಡಿ.ಜಿ. ಪಂಡಿತ ಸೂಚಿಸಿದಗ ಶಿಕ್ಷಕ ಚಿದಾನಂದ ಭಂಡಾರಿ ಅನುಮೋದಿಸಿದರು ಹೆಗಡೆ ಹಾಗೂ ಮಾಸೂರು ಗ್ರಾಮಗಳ ನಡುವೆ ಸಂಪರ್ಕಕ್ಕಾಗಿ ಅಘನಾಶಿನಿ ನದಿಗೆ ತೂಗು ಸೇತುವೆ ಅಗತ್ಯ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ರತ್ನಾಕರ ನಾಯ್ಕ ಸೂಚಿಸಿದಾಗ  ವಕೀಲ ವಿನಾಯಕ ಪಟಗಾರ ಹಾಗೂ ಹೆಗಡೆ ಗ್ರಾಮಸ್ಥರ­ಲ್ಲೊಬ್ಬರಾದ ಲಕ್ಷ್ಮಣ ನಾಯ್ಕ ಅನುಮೋದಿಸಿದರು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT