ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳುಗೋಡುವಿನಲ್ಲಿ ಬ್ರಾಹ್ಮಿ ಲಿಪಿಯ ಶಿಲೆ ಪತ್ತೆ

Last Updated 9 ಜನವರಿ 2017, 8:39 IST
ಅಕ್ಷರ ಗಾತ್ರ

ವಿರಾಜಪೇಟೆ: ಸಮೀಪದ ಬಾಳುಗೋಡುವಿನ ಕೊಡವ ಸಾಂಸ್ಕೃತಿಕ ಕೇಂದ್ರದ ಬಳಿ ಶಾತವಾಹನರ ಕಾಲದ ಬ್ರಾಹ್ಮಿ ಲಿಪಿಯಲ್ಲಿ ಬರೆಯಲಾದ ಶಿಲೆಯನ್ನು ಹೊಂದಿರುವ ಸಾಂಸ್ಕೃತಿಕ ಗುಡ್ಡವೊಂದು ಪತ್ತೆಯಾಗಿದೆ.

ಸುಮಾರು 500 ಮೀ. ಉದ್ದ  ಹಾಗೂ 200 ಮೀ. ಅಗಲದಲ್ಲಿರುವ ಎರಡು ಗುಡ್ಡದಲ್ಲಿ ಸುಮಾರು 2ರಿಂದ 3ನೇ ಶತಮಾನದ  ಸೇರಿದ ಲಿಪಿ ಹಾಗೂ ಅವಶೇಷಗಳು ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಪತ್ತೆಯಾಗಿದ್ದು ವಿಶೇಷವೆನಿಸಿದೆ.

ಜತೆಗೆ ಒಂದು ಗುಡ್ಡದ ಮೇಲ್ಭಾಗದಲ್ಲಿ ಕಟ್ಟಡವೊಂದರ ಚೌಕ ಆಕಾರದ ತಳಪಾಯದ ಅವಶೇಷವು ಸ್ಪಷ್ಟವಾಗಿ ಗೋಚರಿಸುತ್ತಿರುವುದು ಈ ಭಾಗದಲ್ಲಿ 2ನೇ ಶತಮಾನಕ್ಕಿಂತ ಹಿಂದೆಯೇ ಜನಜೀವನ ಇತ್ತು ಎನ್ನುವುದು ಸಾಕ್ಷಿಯಾಗಿದೆ ಎನ್ನಲಾಗಿದೆ.

ಎರಡು ತಿಂಗಳ ಹಿಂದೆ ಭಾರತೀಯ ಪುರಾತತ್ವ ಇಲಾಖೆಯ ನಿವೃತ್ತ ಉಪ ಅಧೀಕ್ಷಕ ನಾಯಕಂಡ ಸಿ. ಪ್ರಕಾಶ್ ಎಂಬುವವರು ಬಾಳುಗೋಡುವಿನ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಭಾಗಿಯಾಗಲು ಆಗಮಿಸಿದ್ದರು. ಈ ಸಂದರ್ಭ ಅವರು ತಮ್ಮ ಹವ್ಯಾಸದಂತೆ ಸಮಾರಂಭ ನಡೆಯುತ್ತಿರುವ ಸ್ಥಳದಿಂದ ಅನತಿ ದೂರದಲ್ಲಿರುವ ಗುಡ್ಡದಲ್ಲಿ ಸಂಚರಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಈ ಬಗ್ಗೆ ಭಾನುವಾರ ಮಾಧ್ಯಮದವರಿಗೆ ಮಾಹಿತಿ ನೀಡಿದ ನಾಯಕಂಡ ಸಿ. ಪ್ರಕಾಶ್ ಕೆಲವು ದಿನಗಳ ಹಿಂದೆ ಇಲ್ಲಿ ನಡೆದ ಸಮಾರಂಭಕ್ಕೆ ಆಗಮಿಸಿದ್ದ ತಾನು ಗುಡ್ಡದಲ್ಲಿ ಸಂಚರಿಸಿದಾಗ ಶಿಲೆಯೊಂದರಲ್ಲಿ ಬ್ರಾಹ್ಮಿಲಿಪಿಯಲ್ಲಿ ಬರೆಯಲಾಗಿರುವುದನ್ನು ಕಂಡು ಕುತೂಹಲಗೊಂಡ. ಬಳಿಕ ಅವುಗಳು ಚಿತ್ರವನ್ನು ತೆಗೆದು ಪುರಾತತ್ವ ಇಲಾಖೆಯ ಲಿಪಿತಜ್ಞರಾದ ತನ್ನ ಸ್ನೇಹಿತರೊಂದಿಗೆ ಪರಿಶೀಲಿಸಿದಾಗ ಅವು ಶಾತವಾಹನರ ಕಾಲದವು ಎನ್ನುವುದು ಸ್ಪಷ್ಟವಾಯಿತು.

ಒಂದು ಶಿಲೆಯಲ್ಲಿ ಪ್ರಾಕೃತ ಭಾಷೆಯಲ್ಲಿ ಬ್ರಾಹ್ಮಿ ಲಿಪಿಯನ್ನು ಬಳಸಿ ‘ಅಪವಮಾಚ’ ಎಂದು ಬರೆಯಲಾಗಿದೆ. ಇದು ವ್ಯಕ್ತಿಯೊಬ್ಬನ ಹೆಸರು, ಇಲ್ಲವೆ ಬಿರುದಾಗಿರಬಹುದು. ಇದರೊಂದಿಗೆ ಗುಡ್ಡದ ಮೇಲ್ಭಾಗದಲ್ಲಿ ಕಾಣಿಸುವ ಕಟ್ಟಡವೊಂದರ ಅವಶೇಷಗಳು ಇಲ್ಲಿ 1900 ವರ್ಷಗಳ ಹಿಂದೆಯೇ ಜನರು ವಾಸಿಸುತ್ತಿದ್ದರು ಎನ್ನುವುದಕ್ಕೆ ಬಲವಾದ ಪುರಾವೆಯಾಗಿದೆ. ಬಹುಶಃ ಆ ಕಟ್ಟಡ ಕೋಟೆ, ಇಲ್ಲವೆ ಕೋಟೆಯಲ್ಲಿನ ಕಾವಲು ಗೋಪುರ ಅಥವಾ ಅರಮನೆಯ ಅವಶೇಷವಾಗಿರುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದರು.

ಬ್ರಾಹ್ಮಿಲಿಪಿಯಲ್ಲಿ ಶಿಲೆಯಲ್ಲಿ ಬರೆಯಲಾಗಿರುವುದು, ಗುಡ್ಡದಲ್ಲಿರುವ ಕಲ್ಲುಗಳ ಆಕಾರ ಹಾಗೂ ಕಟ್ಟಡದ ಅವಶೇಷಗಳನ್ನು ನೋಡಿದರೆ ಒಂದಕ್ಕೊಂದು ಪರಸ್ಪರ ತಾಳೆಯಾಗುತ್ತಿದೆ. ಹೆಚ್ಚಿನ ಸಂಶೋಧನೆಯಿಂದ ಸ್ಪಷ್ಟ ಚಿತ್ರಣ ದೊರೆಯಲು ಸಾಧ್ಯ. ಸುಮಾರು 100 ಮೀ. ಎತ್ತರದ ಈ ಗುಡ್ಡವು ಸಾಂಸ್ಕೃತಿಕ ಗುಡ್ಡವಾಗಿರುವ ಸಾಧ್ಯತೆ ಹೆಚ್ಚಿದೆ. ಇಲ್ಲಿರುವ ಶಿಲೆಗಳು ಹಾಗೂ ಅವಶೇಷವನ್ನು ಸಂರಕ್ಷಿಸಿ, ಗುಡ್ಡವನ್ನು ಉತ್ಖನನ ಮಾಡಿದರೆ ಜಿಲ್ಲೆಯ ಪ್ರಾಚೀನ ಜನಜೀವನದ ಬಗ್ಗೆ ಮತ್ತಷ್ಟು ಮಾಹಿತಿ ಹೊರಬೀಳಲಿದೆ. ಇದರಿಂದ ಬಾಳುಗೋಡು ನೈಜ ಪ್ರವಾಸಿ ತಾಣವಾಗಲಿದ್ದು, ಕೊಡವ ಸಾಂಸ್ಕೃತಿಕ ಕೇಂದ್ರದ ಹಿರಿಮೆ ಮತ್ತಷ್ಟು ಹೆಚ್ಚಲಿದೆ ಎಂದು ಮಾಹಿತಿ ನೀಡಿದರು.

ಭಾರತೀಯ ಪುರಾತತ್ವ ಇಲಾಖೆಯಲ್ಲಿ ನಾಗಪುರ, ದೆಹಲಿ, ನರ್ಮದಾ ಕಣಿವೆ, ಆಂದ್ರ ಪ್ರದೇಶ, ಅರುಣಾಚಲ ಪ್ರದೇಶ, ಹಂಪಿ ಮುಂತಾದೆಡೆ ಸುಮಾರು 33 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಕೇವಲ 3 ತಿಂಗಳ ಹಿಂದೆ ನಿವೃತ್ತರಾಗಿರುವ ನಾಯಕಂಡ ಸಿ. ಪ್ರಕಾಶ್‌ರವರ ಅನುಭವದ ಮಾತು ನಿಜವಾದರೆ ಕೊಡಗಿನ ಇತಿಹಾಸಕ್ಕೆ ಹೊಸ ತಿರುವು ದೊರಕಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT