ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಕ್ಸೂಚಿ ಬರೆಯುವ ‘ಹಾವೇರಿ ಸಮ್ಮೇಳನ’

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ನ 2ನೇ ರಾಜ್ಯ ಸಮ್ಮೇಳನ
Last Updated 9 ಜನವರಿ 2017, 8:53 IST
ಅಕ್ಷರ ಗಾತ್ರ
ಹಾವೇರಿ: ‘ಹಾವೇರಿಯ ಹೆಸರು ಸಮ್ಮೇಳನಗಳ ಜೊತೆ ಹೆಚ್ಚಾಗಿ ಕೇಳಿಬರುತ್ತವೆ. ಇಲ್ಲಿ ನಡೆದ ಹಲವಾರು ಸಮ್ಮೇಳನಗಳು ರಾಜ್ಯ ರಾಜಕೀಯದವನ್ನೇ ಬದಲಾಯಿಸಿವೆ. ಈ ನಿಟ್ಟಿನಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ರಾಜ್ಯ ಸಮ್ಮೇಳನವೂ ದಿಕ್ಸೂಚಿ ಬರೆಯಲಿದೆ’ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷದ ರಾಜ್ಯ ಮಂಡಳಿಯ ಪ್ರಧಾನ ಕಾರ್ಯದರ್ಶಿ ಪಿ.ವಿ. ಲೋಕೇಶ್ ಹೇಳಿದರು. 
 
ನಗರದ ಸರ್ಕಾರಿ ಶಾಲಾ (ಸಂಖ್ಯೆ–2) ಆವರಣದಲ್ಲಿ ನಡೆದ ‘ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ನ 2ನೇ ರಾಜ್ಯ ಸಮ್ಮೇಳನ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 
 
‘ಬಿಸಿಯೂಟ ಕಾರ್ಯಕರ್ತೆಯರ ಸಮಸ್ಯೆಯನ್ನು ಸರ್ಕಾರಗಳು ಬಗೆಹರಿಸಬೇಕು. ಇಲ್ಲದಿದ್ದರೆ, ಅವರ ಹೋರಾಟವು ರಾಜಕೀಯದ ಮೇಲೆ ಪ್ರಭಾವ ಬೀರಲಿದೆ’ ಎಂದ ಅವರು,
 
‘50 ದಿನ ಕೊಡಿ. ಕಪ್ಪುಹಣವನ್ನು ಹೊರಗೆ ತರುತ್ತೇನೆ’ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಈಗ ತಮ್ಮ ಮಾತು ಉಳಿಸಿಕೊಳ್ಳಲಿ. ಒಟ್ಟು ಬಂದ ಹಣದ ಲೆಕ್ಕ ನೀಡಲಿ. ಕನಿಷ್ಠ ಪಕ್ಷ ಈ ಬಾರಿಯ ಬಜೆಟ್‌ನಲ್ಲಾದರೂ ಕಾರ್ಮಿಕರಿಗೆ, ಬಡವರಿಗೆ, ರೈತರಿಗೆ ಹಣ ನೀಡಲಿ’ ಎಂದರು. 
 
‘ಈ ದೇಶದ ಭವಿಷ್ಯದ ಸೈನಿಕರು, ವೈದ್ಯರು, ಎಂಜಿನಿಯರ್, ರೈತರಾಗುವ ಮಕ್ಕಳಿಗೆ ಅನ್ನ ಬೇಯಿಸಿ ಹಾಕುವವರು ಅಕ್ಷರ ದಾಸೋಹ ಕಾರ್ಯಕರ್ತೆಯರು. ಆದರೆ, ಅವರ ಕುಟುಂಬದ ಸಮರ್ಪಕ ಊಟಕ್ಕೆ ಬೇಕಾದ ವೇತನವನ್ನೂ ಸರ್ಕಾರ ನೀಡುತ್ತಿಲ್ಲ’ ಎಂದರು. 
 
ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ‘ರಾಜಕಾರಣಿಗಳ ಅಲಕ್ಷ್ಯವನ್ನು ಧಿಕ್ಕರಿಸಿ ಹಕ್ಕುಗಳನ್ನು ಪಡೆಯಲು ಸಂಘಟನೆ ಹಾಗೂ ಹೋರಾಟವೇ ಅಸ್ತ್ರ. ನಾನೂ ಕಾರ್ಮಿಕ ಸಂಘಟನೆ ಮೂಲಕವೇ ಬೆಳೆದು ಬಂದವನು. ಅಡುಗೆ ಕಾರ್ಯಕರ್ತೆಯರ ಸಮಸ್ಯೆ ಇತ್ಯರ್ಥಕ್ಕೂ ಶ್ರಮಿಸುತ್ತೇನೆ’ ಎಂದರು. 
 
ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಎನ್. ಶಿವಣ್ಣ ಬಿಸಿಯೂಟ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಮಂಡಿಸಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಫೆಡರೇಶನ್‌ ಸದಸ್ಯೆ ಶಾರದಮ್ಮ ಹಿರೇಮಠ, ಸಮ್ಮೇಳನ ಸಿದ್ಧತಾ ಸಮಿತಿ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಫೆಡರೇಶನ್‌ನ ಎಂ.ಜಯಮ್ಮನವರ, ಪುಷ್ಪಾವತಿ, ಸರೋಜ, ಸುನಿತಾ ಮರಕಳ್ಳಿ, ನೀಲಮ್ಮ ವಾಲಿ, ಕುಸುಮಾ ಕುಮ್ಮೂರ, ಲಲಿತಮ್ಮ ನಾಗನಗೌಡ್ರ, ಸುನಂದಮ್ಮ ರೇವಣಕರ, ಗೌರಮ್ಮ ನಾಯ್ಕರ ಮತ್ತಿತರರು ಇದ್ದರು. ಇದಕ್ಕೂ ಮೊದಲು ಗುರುಭವನದಿಂದ ಸಮ್ಮೇಳನದ ವೇದಿಕೆ ತನಕ ಮೆರವಣಿಗೆ ನಡೆಯಿತು. 
 
**
‘ಮೋಡಿ’ ಮಾಡಿದ ಮೋದಿ: ಲಮಾಣಿ 
‘ಅಧಿಕಾರಕ್ಕೆ ಬಂದರೆ ನಿಮ್ಮ ಖಾತೆ ₹15 ಲಕ್ಷ ಹಾಕುತ್ತೇನೆ ಎಂದು ಜನರಿಗೆ ‘ಮೋಡಿ’ ಮಾಡಿದ ಮೋದಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗಿದೆ. ಆದರೆ, ಇನ್ನೂ ಎರಡೂವರೆ ಪೈಸೆಯೂ ಹಾಕಿಲ್ಲ. ಬದಲಾಗಿ ಮಲ್ಯ ಮತ್ತಿತರ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಿದರು. ಈಗ ಖಾತೆಗೆ ಹಾಕಿದ ಬಡವರು, ರೈತರ ಹಣವನ್ನೇ ತೆಗೆಯಲು ಬಿಡುತ್ತಿಲ್ಲ’ ಎಂದು ಸಚಿವ ರುದ್ರಪ್ಪ ಲಮಾಣಿ ವಾಗ್ದಾಳಿ ನಡೆಸಿದರು. 
 
‘ಜನಧನಕ್ಕೆ ಬಂದ ಹಣದ ಕುರಿತು ನೋಟಿಸ್ ನೀಡುವುದಾಗಿ ಹೆದರಿಸುತ್ತಿದ್ದಾರೆ. ಬಡಜನ ಹಣ ಸಿಗದೇ ಪರದಾಡುತ್ತಿದ್ದಾರೆ. ಅಂದು, ‘ಚಹಾ ಮಾರುವವ’ ಎಂದು ಹೇಳಿಕೊಂಡರು. ಆದರೆ, ಈಗ ₹2 ಸಾವಿರ ನೋಟು ಹಿಡಿದುಕೊಂಡು ಹೋದರೆ ಚಹಾ, ಉಪಹಾರ, ಊಟ ಯಾವುದೂ ಸಿಗುವುದಿಲ್ಲ’ ಎಂದು ಅವರು ನುಡಿದರು. 
 
***
‘ಮೇರೇ ಪ್ಯಾರೇ ದೇಶ್ ವಾಸಿಯೋ...’ ಎಂದು ರಾತ್ರಿ ನಿದ್ದೆ ಯಲ್ಲಿ ಕೇಳಿದರೂ ಜನ ಭಯ ಪಡುತ್ತಾರೆ. ಹೀಗೆ ಹೇಳಿ ಹೇಳಿ ಮೋದಿ ಜನರಿಗೆ ಮೋಸ ಮಾಡುತ್ತಲೇ ಇದ್ದಾರೆ
-ಪಿ.ವಿ. ಲೋಕೇಶ್, ಸಿಪಿಐ 
ರಾಜ್ಯ ಮಂಡಳಿಯ ಪ್ರಧಾನ ಕಾರ್ಯದರ್ಶಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT