ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಕ್ಕುರುಳಿದ ರಸ್ತೆಬದಿ ಮರಗಳು

Last Updated 9 ಜನವರಿ 2017, 9:02 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಉದ್ಯಾನಗಳ ಸಂಖ್ಯೆ ತೀರಾ ಕಡಿಮೆ. ಇದರಿಂದ ಮರಗಳ ಸಂಖ್ಯೆಯೂ ಕಡಿಮೆ ಇದೆ. ಇತ್ತೀಚೆಗೆ ರಸ್ತೆಬದಿಯಲ್ಲಿ ಮರಗಳು ಕಣ್ಮರೆಯಾಗುತ್ತಿರುವುದು ಸದ್ದಿಲ್ಲದೆ ನಡೆದಿದೆ.

ಬಿ. ರಾಚಯ್ಯ ಜೋಡಿರಸ್ತೆ ಬದಿ ಯಲ್ಲಿದ್ದ ಹಲವು ಮರಗಳು ವ್ಯಾಪಾರದ ಸಂಚಿನಿಂದ ನೆಲಕ್ಕುರುಳಿ ಹಲವು ವರ್ಷಗಳೇ ಸಂದಿವೆ. ಇನ್ನೊಂದೆಡೆ ನಗರಸಭೆಯಿಂದ ರಸ್ತೆಬದಿ ಸಸಿ ನೆಟ್ಟು ಬೆಳೆಸುವ ಪ್ರಯತ್ನವೂ ಸಾಗಿಲ್ಲ.

ನಗರಸಭೆ ವ್ಯಾಪ್ತಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ₹ 50 ಕೋಟಿ ಅನುದಾನ ಘೋಷಿಸಿತ್ತು. ಈ ಅನುದಾನ ದಡಿ ವಿವಿಧೆಡೆ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗುತ್ತಿದೆ. ಇದರಲ್ಲಿ ನ್ಯಾಯಾಲಯ ರಸ್ತೆಯೂ ಸೇರಿದೆ.

ಡಿವೈಎಸ್‌ಪಿ ಕಚೇರಿಯಿಂದ ಕರಿನಂಜನಪುರ ರಸ್ತೆವರೆಗೂ ನ್ಯಾಯಾ ಲಯ ರಸ್ತೆಯು ಸಂಪರ್ಕ ಬೆಸೆಯುತ್ತದೆ. ಈ ರಸ್ತೆಬದಿಯಲ್ಲಿದ್ದ ಮರಗಳು ಈಗ ಧರೆಗುರುಳಿವೆ. ಇದು ಪರಿಸರ ಪ್ರಿಯರಿಗೆ ಆತಂಕ ತರಿಸಿದೆ.

ನ್ಯಾಯಾಲಯ ರಸ್ತೆಯಲ್ಲಿ ಹೆಚ್ಚಿನ ಮರಗಳಿದ್ದವು. ಈಗ ಅವುಗಳು ಕೂಡ ಧರೆಗುರುಳಿದ್ದು, ಅವುಗಳನ್ನು ಅವಲಂಬಿಸಿರುವ ಪ್ರಾಣಿ, ಪಕ್ಷಿಗಳ ಬದುಕಿಗೂ ಸಂಚಕಾರ ಬಂದಿದೆ.
ರಾಷ್ಟ್ರೀಯ ಹೆದ್ದಾರಿ 209ರ ವಿಸ್ತರಣೆಗೂ ಜಿಲ್ಲಾ ಕೇಂದ್ರದಲ್ಲಿ ಚಾಲನೆ ಸಿಕ್ಕಿದೆ. ಸರ್ಕಾರಿ ಉಪ್ಪಾರ ಪ್ರಾಥಮಿಕ ಶಾಲೆಯಿಂದ ಸೋಮವಾರ ಪೇಟೆವರೆಗೂ ರಸ್ತೆ ವಿಸ್ತರಿಸಲಾಗುತ್ತದೆ. ಇದಕ್ಕಾಗಿ ಈಗಾಗಲೇ ನೂರಾರು ಮರಗಳು ಜೀವತೆತ್ತಿವೆ.

ಈ ನಡುವೆ ಕೆಲವು ಮಾಲೀಕರು ಮನೆಯ ಸೌಂದರ್ಯ ಹಾಳಾಗುತ್ತ ದೆಂದು ಭಾವಿಸಿ ಮರಗಳ ಬುಡಕ್ಕೆ ಕೊಡಲಿಪೆಟ್ಟು ಹಾಕುವುದು ನಡೆದಿದೆ. ಪ್ರತಿಯೊಂದು ವಾರ್ಡ್‌ನಲ್ಲೂ ಮಾಲೀಕರ ದುರಾಸೆಗೆ ಮರಗಳು ಬಲಿ ಯಾಗುತ್ತಿವೆ. ಆದರೆ, ನಗರ ಸ್ಥಳೀಯ ಆಡಳಿತ ಮಾತ್ರ ಇದಕ್ಕೆ ಕಡಿವಾಣ ಹಾಕುತ್ತಿಲ್ಲ. ನಗರಸಭೆ ವ್ಯಾಪ್ತಿ ಇರುವ ಬೆರಳೆಣಿಕೆ ಯಷ್ಟು ಉದ್ಯಾನದಲ್ಲೂ ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ನಗರವನ್ನು ಹಸಿರಿನಿಂದ ಕಂಗೊಳಿಸು ವಂತೆ ಮಾಡಲು ಮರ ಬೆಳೆಸಲು ನಗರಸಭೆ ಆಡಳಿತ ಮುಂದಾಗಬೇಕಿದೆ ಎನ್ನುವುದು ನಾಗರಿಕರ ಒತ್ತಾಯ.

‘ಪ್ರತಿದಿನ ನಗರಸಭೆ ವ್ಯಾಪ್ತಿ ಮರ ಗಳ ಸಂಖ್ಯೆ ಕ್ಷೀಣಿಸುತ್ತಿವೆ. ರಸ್ತೆ ವಿಸ್ತರಣೆ ಸೇರಿದಂತೆ ಅಭಿವೃದ್ಧಿ ನೆಪದಲ್ಲಿ ಮರಗಳು ನೆಲಕ್ಕುರುಳುತ್ತಿವೆ. ಇದರಿಂದ ಪರಿಸರಕ್ಕೆ ಹಾನಿಯಾಗಲಿದೆ. ಇದಕ್ಕೆ ಕಡಿವಾಣ ಹಾಕಬೇಕು. ಜತೆಗೆ, ರಸ್ತೆಬದಿ ಮರ ನೆಡಲು ನಗರಸಭೆ ಆಡಳಿತ ಕ್ರಮವಹಿಸಬೇಕು’ ಎಂಬುದು ನಾಗರಿಕ ನಂಜಪ್ಪ ಅವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT