ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಾಲಾಪದ ಗುಂಗು; ‘ವಿದ್ಯುತ್ ವೀಣೆ’ಯ ರಂಗು

ಕಲಾ ಧರೋಹರ್‌ ಸಂಗೀತ ಮಹೋತ್ಸವಕ್ಕೆ ಸಂಭ್ರಮದ ತೆರೆ; ಮುಂಜಾನೆ ರಾಗದ ಸೊಬಗು
Last Updated 9 ಜನವರಿ 2017, 9:10 IST
ಅಕ್ಷರ ಗಾತ್ರ
ಹುಬ್ಬಳ್ಳಿ: ಮೊದಲು ಪುತ್ರನ ‘ವಿದ್ಯುತ್ ವೀಣೆ’ಯ ಮೋಡಿಗೆ ಮನಸೋತ ಶ್ರೋತೃಗಳು ನಂತರ ತಂದೆಯ ಪ್ರಬುದ್ಧ ಗಾಯನದ ಗುಂಗಿನಲ್ಲಿ ಮೈಮರೆತರು. ಕೊನೆಗೆ ಇಬ್ಬರೂ ಜೊತೆಯಾಗಿ ಪ್ರಸ್ತುತಪಡಿಸಿದ ‘ಜುಗಲ್ ಬಂದಿ’ಯ ರಸಗಡಲಲ್ಲಿ ಮಿಂದೆದ್ದರು.  
 
ನಗರದ ಕಲಾ ಧರೋಹರ್‌ ಸಂಸ್ಥೆ ಕಾಟನ್‌ ಮಾರ್ಕೆಟ್‌ನಲ್ಲಿರುವ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಗಂಗೂಬಾಯಿ ಹಾನಗಲ್‌ ಸಂಗೀತ ಮಹೋತ್ಸವದ ಕೊನೆಯ ದಿನವಾದ ಭಾನುವಾರ ಸಂಜೆ ಇಂಥ ಮೋಹಕ ವಾತಾವರಣ ನಿರ್ಮಿಸಿದ್ದು ಮುಂಬೈನ ಪಂ.ಅಜಯ ಪೋಹಣಕರ್‌ ಮತ್ತು ಅವರ ಪುತ್ರ ಅಭಿಜಿತ್ ಪೋಹಣಕರ್‌.
 
ಸಂಗೀತಜ್ಞರು ವಿದ್ಯುತ್ ವೀಣೆ ಎಂದೇ ಬಣ್ಣಿಸಿರುವ ಕೀಬೋರ್ಡ್‌ನಲ್ಲಿ ಶಾಸ್ತ್ರೀಯ ಸಂಗೀತದ ಪ್ರಯೋಗ ಮಾಡಿ ವಿಶ್ವವಿಖ್ಯಾತರಾಗಿರುವ ಅಭಿಜಿತ್‌ ಹುಬ್ಬಳ್ಳಿಯ ಕಲಾರಸಿಕರಿಗೆ ಒಂದು ತಾಸು ವಿಶೇಷ ಅನುಭವ ನೀಡಿದರು. 
 
ನಂತರ ಅಜಯ್‌ ಅವರಿಗೆ ಗಂಗೂಬಾಯಿ ಹಾನಗಲ್‌ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಯಿತು. ಇದರ ಬೆನ್ನಲ್ಲೇ ಗಾಯನ ಪ್ರಸ್ತುತ­ಪಡಿಸಿದ ಪೋಹಣಕರ್‌ ಅವರು ಬೆಹಾಗ್‌ ಮತ್ತು ಮಿಶ್ರ ಬೈರವಿ ರಾಗ ಪ್ರಸ್ತುತಪಡಿಸಿದರು. 
 
ಶ್ರೋತೃಗಳ ಅಭಿಲಾಷೆಯ ಮೇರೆಗೆ ಪುತ್ರನ ಜೊತೆ ಗಾಯನ ನಡೆಸಿಕೊಟ್ಟರು. ಇಬ್ಬರೂ ಸೇರಿ ಠುಮ್ರಿ ಪ್ರಸ್ತುತಪಡಿಸಿ ಮುಗಿಸಿದಾಗ ಚಪ್ಪಾಳೆಯ ಮಳೆ ಸುರಿಯಿತು. ತಬಲಾದಲ್ಲಿ ರವೀಂದ್ರ ಯಾವಗಲ್ ಮತ್ತು ಹಾರ್ಮೋನಿಯಂ­ನಲ್ಲಿ ವ್ಯಾಸಮೂರ್ತಿ ಕಟ್ಟಿ ಮೆಚ್ಚುಗೆ ಗಳಿಸಿದರು.
 
ಸಮ್ಮೋಹಗೊಳಿಸಿದ ಮುಂಜಾನೆ ರಾಗಗಳು: ಮಹೋತ್ಸವದ ಸಂಪ್ರದಾ­ಯ­ದಂತೆ ಭಾನುವಾರ ಬೆಳಿಗ್ಗೆ ಗಾಯನ ಆಯೋಜಿಸಲಾಗಿತ್ತು. ಪುಣೆಯ ಆನಂದ ಭಾಟೆ ಅವರು ಮುಂಜಾನೆ ರಾಗಗಳ ಮೂಲಕ ಶ್ರೋತೃಗಳಿಗೆ ರಸದೌತಣ ನೀಡಿದರು.
 
ಎರಡೂವರೆ ತಾಸು ನಡೆದ ಕಛೇರಿಯಲ್ಲಿ ಮೋಹಕ ಆಲಾಪ್‌ಗಳು, ಮೈಮನ ಕುಣಿಸಿದ ತಾನ್‌ಗಳು ಮತ್ತು ರಂಜಿಸಿದ ಸ್ವರ ವಿಸ್ತಾರಗಳು ಸಭಾಂಗಣ­ದಲ್ಲಿ ತುಂಬಿದ್ದವರನ್ನು ಬೇರೊಂದು ಲೋಕಕ್ಕೆ ಕೊಂಡೊಯ್ದವು.
 
ಅವರ ಕಛೇರಿ ಆರಂಭಗೊಂಡಿದ್ದು ರಾಮ್‌ಕಲಿ ರಾಗದೊಂದಿಗೆ. ‘ದರ್‌ಬಾರ್ ದವಾ...’ವನ್ನು ವಿಳಂಬಿತ್‌ ಗತ್‌ನಲ್ಲಿ ಹಾಡಿದ ಅವರು ಮಧುರ ಆಲಾಪಗಳ ಮೂಲಕ ‘ಚೀಸ್‌’ ಸುಂದರಗೊಳಿಸಿದರು. 
 
ಧೃತ್‌ ಗತ್‌ನಲ್ಲಿ ‘ಸಗರಿ ರೆಹನ್‌ಕೆ ಜಾಗಿ...’ ಹಾಡಿ ಮುಗಿಸಿದಾಗ ಶ್ರೋತೃಗಳು ಚಪ್ಪಾಳೆ ಮೂಲಕ ಅಭಿನಂದನೆ ಸಲ್ಲಿಸಿದರು.
 
ನಂತರ ಪ್ರಸ್ತುತಪಡಿಸಿದ್ದು ಮಿಯಾ ಕಿ ತೋಡಿ ರಾಗ. ‘ಏರಿ ಮಾಯೆ ಆಜ್ ಶುಭ ಮಂಗಲ್‌ ಗಾವೋ...’ವನ್ನು ಧೃತ್‌ಗತ್‌, ಮಧ್ಯಲಯದಲ್ಲಿ ಹಾಡಿದರು. ಇದರ ಕೊನೆಯಲ್ಲಿ ‘ಭವಾನಿ ಜಗತ್ ಜನನಿ...ತಾರಿಣಿ ದುಃಖಹಾರಿಣಿ...’ಯನ್ನು ತಾರಕ ಸ್ವರದಲ್ಲಿ ಹಾಡಿದಾಗ ಭಕ್ತಿ ಭಾವ ಉಕ್ಕಿತು.
 
ಜೋನ್‌ಪುರಿ ರಾಗದಲ್ಲಿ ಮರಾಠಿ ಅಭಂಗ್ ‘ಇಂದ್ರಾಯಣಿ ರಾಟಿ...ದೇವಚಿ ಆಳಂದಿ...’ ಹಾಡಿದ ಆನಂದ ಭಾಟೆ ಇದರ ಕೊನೆಯಲ್ಲಿ ತಾನ್‌ಗಳು ಪ್ರಸ್ತುತಪಡಿಸುತ್ತಿದ್ದಂತೆ ಸಂಗೀತ ಪ್ರಿಯರು ಕುಳಿತಲ್ಲೇ ಕುಣಿದರು. ನಂತರ ಮಿಶ್ರ ಭಿಬಾಸ್‌ನಲ್ಲಿ ಪುರಂದರ ದಾಸರ ‘ಭಾಗ್ಯದ ಲಕ್ಷ್ಮಿ ಬಾರಮ್ಮ...’ ಪದದ ಮೂಲಕ ವಿಠ್ಠಲ ನಾಮದ ಕಂಪನ್ನು ಸಭಾಂಗಣದ ತುಂಬ ಹರಡಿದರು.
 
ತಬಲಾದಲ್ಲಿ ಶ್ರೀಧರ ಮಾಂಡ್ರೆ ‘ಮ್ಯಾಜಿಕ್‌’ ಮಾಡಿದರೆ ಗುರುಪ್ರಸಾದ ಹೆಗಡೆ ಅವರ ಹಾರ್ಮೋನಿಯಂ ವಾದನ, ಕಛೇರಿಯ ಇಂಪು ಹೆಚ್ಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT