ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಕ್ತಿಸೇವೆ ಆಚರಣೆ ನಿಲ್ಲುವುದಿಲ್ಲ: ಇಂದ್ವಾಡಿ

‘ಚಿಕ್ಕಲ್ಲೂರು ಜಾತ್ರೆ ಪರಂಪರೆ ಉಳಿಸಿ’ ಜಾಗೃತಿ ಪಾದಯಾತ್ರೆಗೆ ತೆರೆ
Last Updated 9 ಜನವರಿ 2017, 9:15 IST
ಅಕ್ಷರ ಗಾತ್ರ

ಚಾಮರಾಜನಗರ:  ‘ಸಾಂಸ್ಕೃತಿಕ ಉತ್ಸವವಾದ ಚಿಕ್ಕಲ್ಲೂರು ಜಾತ್ರಾ ಮಹೋತ್ಸವದ 4ನೇ ದಿನ ನಡೆಯುವ ಪಂಕ್ತಿಸೇವೆ ಆಚರಣೆಯನ್ನು ಈ ಬಾರಿ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ’ ಎಂದು ಸಾಹಿತಿ ಡಾ.ವೆಂಕಟೇಶ್ ಇಂದ್ವಾಡಿ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಭಾನುವಾರ ಮಂಟೇಸ್ವಾಮಿ ಪ್ರತಿಷ್ಠಾನ ಟ್ರಸ್ಟ್‌, ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಪರಂಪರೆ ರಕ್ಷಣಾ ಹೋರಾಟ ಸಮಿತಿಯಿಂದ 3 ದಿನಗಳ ಕಾಲ ಹಮ್ಮಿಕೊಂಡಿದ್ದ ಪರಂಪರೆ ಉಳಿಸಿ ಜಾಗೃತಿ ಪಾದ ಯಾತ್ರೆಯ ಸಮಾರೋಪದಲ್ಲಿ ಅವರು ಮಾತನಾಡಿದರು.

ನಮ್ಮ ಸಂಸ್ಕೃತಿ, ಆಚರಣೆ, ದೈವತ್ವ ಮತ್ತು ನಂಬಿಕೆಗೆ ಅಡ್ಡಿಯುಂಟು ಮಾಡು ವುದು ಸರಿಯಲ್ಲ. 5 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಪ್ರಾಣಿಬಲಿ ಮಾಡಲಾಗುತ್ತದೆ ಎಂದು ಪ್ರತಿಬಿಂಬಿಸ ಲಾಗುತ್ತಿದೆ ಎಂದು ದೂರಿದರು.

ಜಿಲ್ಲೆಯು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಸಸ್ಯ ಸಂಪತ್ತು, ಸಾಂಸ್ಕೃತಿಕ ಸಂಪತ್ತು ಇದೆ. ಇಲ್ಲಿನ ಜನರ ಜೀವನ ಕ್ರಮ ಹಾಗೂ ಇಲ್ಲಿನ ಬಹು ದೊಡ್ಡ ಆಚರಣೆಗಳು ವಿಶಿಷ್ಟವಾಗಿವೆ. ಮಲೆಮಹದೇಶ್ವರ, ಮಂಟೇಸ್ವಾಮಿ ಮಹಾಕಾವ್ಯ ರಚನೆಯಾಗಿರುವ ಜಿಲ್ಲೆಯಲ್ಲಿ ಸಂಪ್ರದಾಯದ ಆಚರಣೆಗೆ ಅಡ್ಡಿಯುಂಟು ಮಾಡುವುದು ಸರಿಯಲ್ಲ ಎಂದರು.

ಗ್ರಾಮೀಣ ಜನರು ವರ್ಷಕ್ಕೊಮ್ಮೆ ಬಂಧು ಬಳಗದವರೊಡನೆ ಜಾತ್ರೆಯಲ್ಲಿ ಪಾಲ್ಗೊಂಡು ಇಷ್ಟದ ಆಹಾರ ಸೇವನೆ ಮಾಡುತ್ತಾರೆ. ಇದನ್ನು ನಿರ್ಬಂಧಿಸು ವುದು ಸರಿಯಲ್ಲ. ಪಟ್ಟಣ ಪ್ರದೇಶದಲ್ಲಿ ದಿನನಿತ್ಯ ಮಾಂಸ ಆಹಾರ ಸೇವನೆ ಹಾಗೂ ಮಾರಾಟ ಮಾಡುವುದನ್ನು ಮೊದಲು ನಿಲ್ಲಿಸಬೇಕು ಎಂದು ತಿಳಿಸಿದರು.

ಸಾಹಿತಿ ಶಂಕನಪುರ ಮಹಾದೇವ ಮಾತನಾಡಿ, ಜಿಲ್ಲೆಯಲ್ಲಿ ಚಿಕ್ಕಲ್ಲೂರು ಜಾತ್ರೆ ಸಾಂಸ್ಕೃತಿಕ ಪರಂಪರೆಯ ಜಾತ್ರೆ ಯೆಂದೇ ಪ್ರಸಿದ್ಧಿಯಾಗಿದೆ. ಇಲ್ಲಿನ ಪರಂಪರೆ, ಆಚರಣೆಯನ್ನು ಉಳಿಸುವ ಉದ್ದೇಶದಿಂದ ಈ ಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಚಿಕ್ಕಲ್ಲೂರು ಜಾತ್ರೆ ಕೇವಲ ಜನಪದ ಕಾವ್ಯವಲ್ಲ. ದಂತ ಕಥೆಯೂ ಅಲ್ಲ. ಕಟ್ಟು ಕಥೆಯಲ್ಲ. ಮಂಟೇಸ್ವಾಮಿ, ಸಿದ್ದ ಪ್ಪಾಜಿಯ ಶಿಷ್ಯರು 15 ಮತ್ತು 16ನೇ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ಸಾಮಾಜಿಕ, ಧಾರ್ಮಿಕ ಆಂದೋಲನ ನಡೆಸಿದ ಪರಂಪರೆಯಾಗಿದೆ ಎಂದು ಸಂಶೋಧನೆಯಿಂದ ದೃಢಪಡಿಸಲಾಗಿದೆ ಎಂದರು.

ಹಲವು ಶತಮಾನದಿಂದ ನಡೆದು ಬಂದಿರುವ ಚಿಕ್ಕಲ್ಲೂರು ಜಾತ್ರೆಯು ಜಾತಿ, ಧರ್ಮದ ಭೇದವಿಲ್ಲದೆ ಆಚರಣೆ ಮಾಡಲಾಗುತ್ತಿದೆ. ಐತಿಹಾಸಿಕ ಪರಂಪರೆ ಹೊಂದಿದೆ ಎಂದರು.
ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಪರಂಪರೆ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎನ್. ಮಹೇಶ್ ಮಾತನಾಡಿ, ‘ಚಿಕ್ಕಲ್ಲೂರಿನಲ್ಲಿ ಜ. 12ರಿಂದ 16ರವರೆಗೆ ನಡೆಯುವ ಜಾತ್ರೆ ಯಲ್ಲಿ ಪಂಕ್ತಿಸೇವೆ ಸುಗಮವಾಗಿ ನಡೆಯಲು ಅವಕಾಶ ಕಲ್ಪಿಸಬೇಕು. ಈ ಹಿನ್ನೆಲೆಯಲ್ಲಿ ಚಿಕ್ಕಲ್ಲೂರಿನಿಂದ ಜಿಲ್ಲಾಡಳಿತ ಭವನದವರಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಚಿಕ್ಕಲ್ಲೂರು ಜಾತ್ರೆಯು ಸಮಾನತೆ, ಏಕತೆ, ಸೌಹಾರ್ದ ಬಿಂಬಿಸುತ್ತದೆ. ಸಂಗೀತ ಜಾತ್ರೆ, ಸಾಹಿತ್ಯ ಜಾತ್ರೆ ಎಂದು ಹೆಸರಾಗಿದೆ. ಧರೆಗೆ ದೊಡ್ಡವರ ಈ ಸಾಂಸ್ಕೃತಿಕ ಮಹತ್ವವನ್ನು ಪ್ರಚಾರ ಪಡಿಸುವುದಕ್ಕಾಗಿಯೇ ರೂಪು ಗೊಂಡಿದೆ ಎಂದರು.

ನಾಡಿನಾದ್ಯಂತ ನಡೆಯುವ ಇಂಥಹ ಸಾಂಸ್ಕೃತಿಕ ಮಹತ್ವದ ನೂರಾರು ಜಾತ್ಯತೀತ ಜಾತ್ರೆಗಳನ್ನು ರಕ್ಷಿಸಿ ಪ್ರೋತ್ಸಾಹಿಸುವುದು ಸರ್ಕಾರದ ಹೊಣೆ ಎಂದು ಹೇಳಿದರು.
ಭಕ್ತರು ತಮ್ಮ ಆಹಾರ ಪದ್ಧತಿಗೆ ಅನುಗುಣವಾಗಿ ಸಸ್ಯಾಹಾರ ಅಥವಾ ಮಾಂಸಾಹಾರದ ಅಡುಗೆ ತಯಾರಿಸಿ ಜಾತಿ-ಮತ ಮೀರಿ ಒಟ್ಟಿಗೆ ಕುಳಿತು ಸಹಪಂಕ್ತಿಭೋಜನ ಮಾಡುತ್ತಾರೆ. ಈ ಪಂಕ್ತಿಸೇವೆಯು ಸಿದ್ಧರ ಸೇವೆ ಎಂದೂ ಹೆಸರುವಾಸಿಯಾಗಿದೆ ಎಂದರು.

ಕಳೆದ 3 ವರ್ಷಗಳಿಂದ ಪಂಕ್ತಿಸೇವೆಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ. ಇದರಿಂದಾಗಿ ಜಾತ್ಯತೀತ ಭಾರತೀಯ ಪರಂಪರೆಗೆ ಧಕ್ಕೆಯಾಗುತ್ತಿದೆ. ಬಹು ಜನರ ಆಹಾರದ ಹಕ್ಕಿಗೂ ಧಕ್ಕೆಯಾಗಿದೆ. ಈ ಬಾರಿ ಜಾತ್ರೆಯಲ್ಲಿ ಪಂಕ್ತಿಸೇವೆ ಆಚರಣೆಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ  ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ, ಮಂಟೇಸ್ವಾಮಿ ಪ್ರತಿಷ್ಠಾನ ಟ್ರಸ್ಟ್‌ನ ಪ್ರೊ.ಎಚ್. ಗೋವಿಂದಯ್ಯ, ನಗರಸಭೆ ಸದಸ್ಯ ಸಿ.ಎಸ್.ಸೈಯದ್‌ ಆರೀಫ್‌, ಮುಖಂಡ ರಾದ ಡಾ.ದತ್ತೇಶ್‌ಕುಮಾರ್, ಎ.ಎಂ. ಮಹದೇವಪ್ರಸಾದ್, ಬಸವರಾಜು, ಉಗ್ರ ನರಸಿಂಹಗೌಡ, ಯೋಗೇಶ್‌, ಸಿ.ಎಂ.ಕೃಷ್ಣಮೂರ್ತಿ, ಸಿ.ಎಂ. ನರಸಿಂಹ ಮೂರ್ತಿ, ಅರಕಲವಾಡಿ ನಾಗೇಂದ್ರ, ಮಳವಳ್ಳಿ ಮಹದೇವ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT