ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮಕ ಕಲೆ ಅಕಾಡೆಮಿ ಸ್ಥಾಪನೆಗೆ ನಿರ್ಧಾರ

Last Updated 9 ಜನವರಿ 2017, 9:16 IST
ಅಕ್ಷರ ಗಾತ್ರ
ವಿಜಯಪುರ: ಗಮಕ ಕಲೆ ಅಭಿವೃದ್ಧಿ ಗಾಗಿ ಹಾಗೂ ಗಮಕ ಕಲೆ, ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವ ದೃಷ್ಟಿಯಿಂದ ಗಮಕ ಕಲಾ ಅಕಾಡೆಮಿಯನ್ನು ಸ್ಥಾಪನೆ ಮಾಡಬೇಕು ಎಂದು ನಗರದಲ್ಲಿ ಭಾನುವಾರ ನಡೆದ 11ನೇ ಗಮಕ ಕಲೆಯ ರಾಜ್ಯ ಮಟ್ಟದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ನಿರ್ಣಯಿಸಲಾಯಿತು.
 
ಇದಲ್ಲದೆ ನಗರದಲ್ಲಿ ತೊರವೆ ನರಹರಿ ಗಮಕ ಭವನ ನಿರ್ಮಾಣ, ಬೆಂಗಳೂರಿನಲ್ಲಿ ಗಮಕ ಕಲಾ ಪರಿಷತ್ತಿಗೆ ಸ್ವತಃ ಕಟ್ಟಡ ಒದಗಸುವುದು, ಬಿ.ಎ,ಬಿ.ಇಡಿ ಯಲ್ಲಿ ಗಮಕ ಸಾಹಿತ್ಯವನ್ನು ಕಡ್ಡಾಯಗೊಳಿಸುವುದು ಹಾಗೂ  ಗಮಕ ಕಲಾ ಪರಿಷತ್‌ಗೆ ಪ್ರತಿ ವರ್ಷ ವಾರ್ಷಿಕ ಅನುದಾನ ನೀಡುವ ನಿರ್ಣಯವನ್ನು ಕೈಗೊಳ್ಳಲಾಯಿತು.
ಸಮಾರೋಪ ಭಾಷಣ ಮಾಡಿದ ಚಿಂತಕ ಡಾ.ಜಿ.ಬಿ. ಹರೀಶ ಮಾತನಾಡಿ, ಕನ್ನಡ ಕಾವ್ಯ ಶ್ರೀಮಂತಿಕೆಯನ್ನು ಪ್ರಸ್ತುತ ಪಡಿಸುವ ಶಕ್ತಿ ಗಮಕ ಕಲೆಗೆ ಇದೆ. ಜೀವನದ ಎಲ್ಲ ಸಾಹಿತ್ಯವೂ ಕಾವ್ಯದಲ್ಲಿದೆ. ಗಮಕ ಕಲೆ ಎಲ್ಲ ಕಲೆಗಳಲ್ಲಿ ತನ್ನದೆಯಾದ ಒಂದು ಚಾಪನ್ನು ಒಳ ಗೊಂಡಿದೆ. ಗಮಕ ಸಾಹಿತ್ಯ ಕನ್ನಡ ಕಾವ್ಯದ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ ಎಂದರು.  
 
ಜಲಸಂಪನ್ಮೂಲ ಸಚಿವ ಡಾ. ಎಂ.ಬಿ. ಪಾಟೀಲ ಮಾತನಾಡಿ, ‘ಗಮಕ ಕಲೆಯ ಬಗ್ಗೆ ಜನರು ಒಲವು ಬೆಳೆಸಿಕೊಳ್ಳಬೇಕು. ಜನರಿಗೆ ಗಮಕ ಕಲೆಯ ಬಗ್ಗೆ ಒಲವು ಮೂಡಿಸುವ ನಿಟ್ಟಿನಲ್ಲಿ ವಿಶೇಷವಾದ ಕಾರ್ಯ ಚಟುವಟಿಕೆಗಳು ನಡೆಯಬೇಕು’ ಎಂದರು.
 
ಅಲ್ಲದೇ, ‘ಗಮಕ ಸಾಹಿತಿಗಳ ಕನಸನ್ನು ನನಸು ಮಾಡುವಲ್ಲಿ ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ .ಗಮಕ ಕಲಾವಿದರ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದೆ ಇರಿಸುತ್ತೇನೆ’ ಎಂದೂ ಅವರು ಭರವಸೆ ನೀಡಿದರು.
 
ಇದೇ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಕಬ್ಬಿನಾಲೆ ವಸಂತ ಭಾರಧ್ವಾಜ ಅವರನ್ನು  ಸನ್ಮಾನಿಸಲಾಯಿತು.
 
ಸಿಂದಗಿ ಸಾರಂಗಮಠದ ಶ್ರೀ ಪ್ರಭುಸಾರಂಗದೇವ ಶಿವಚಾರ್ಯರು ಸಾನಿಧ್ಯ ವಹಿಸಿದ್ದರು. ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಬಿ.ಎಂ. ಪಾಟೀಲ, ಕಲ್ಯಾಣರಾವ ದೇಶಪಾಂಡೆ, ಜಂಬುನಾಥ ಕಂಚ್ಯಾಣಿ, ವಿ.ಸಿ. ನಾಗಠಾಣ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮ.ಗು.ಯಾದವಾಡ ಹಾಗೂ ಇತರರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT