ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಡಳಿತ ವಿರುದ್ಧ ತಿರುಗಿಬಿದ್ದ ‘ಟ್ಯಾಂಕರ್‌ ಮಾಫಿಯಾ’

ನಗರದಲ್ಲಿ ಹೆಚ್ಚುವರಿ ಟ್ಯಾಂಕರ್‌ ನೀರು ಪೂರೈಕೆ ಕಡಿತ: ಜನ ಜೀವನಕ್ಕೆ ತಟ್ಟಿದ ಬಿಸಿ
Last Updated 9 ಜನವರಿ 2017, 9:46 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿ ಜ.1ರಿಂದ ಅನ್ವಯವಾಗುವಂತೆ ಹೆಚ್ಚುವರಿ ಟ್ಯಾಂಕರ್‌ ನೀರು ಪೂರೈಕೆಯನ್ನು ಕಡಿತಗೊಳಿಸಿದ ಬೆನ್ನಲ್ಲೇ ‘ಟ್ಯಾಂಕರ್‌ ಮಾಫಿಯಾ’ ದರ ಪರಿಷ್ಕರಣೆಯ ನೆಪದಲ್ಲಿ ನೀರು ಸರಬರಾಜು ಸ್ಥಗಿತಗೊಳಿಸಿ ಜಿಲ್ಲಾಡಳಿತದ ವಿರುದ್ಧ ತಿರುಗಿ ಬಿದ್ದಿದೆ.

ಹೊಸ ಕಾರ್ಯಾದೇಶ ಕೊಡಬೇಕು ಮತ್ತು ಪ್ರತಿ ಲೋಡ್‌ ನೀರಿಗೆ ₹ 500 ದರ ನಿಗದಿಪಡಿಸಬೇಕೆಂದು ಪಟ್ಟು ಹಿಡಿದಿರುವ ಟ್ಯಾಂಕರ್‌ ಮಾಲೀಕರು ನಗರಕ್ಕೆ ಕಳೆದ 9 ದಿನಗಳಿಂದ ನೀರು ಪೂರೈಕೆ ಮಾಡದೆ ಮುಷ್ಕರ ಹಾದಿ ಹಿಡಿದಿದ್ದಾರೆ. ಇದರಿಂದ ನಗರದಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾಗಿದ್ದು, ಜನಜೀವನಕ್ಕೆ ಮುಷ್ಕರದ ಬಿಸಿ ತಟ್ಟಲಾರಂಭಿಸಿದೆ.

ಜಿಲ್ಲಾಡಳಿತವು ಇ–ಟೆಂಡರ್‌ನ ಜತೆಗೆ ನಗರಕ್ಕೆ ಹೆಚ್ಚುವರಿಯಾಗಿ ಪ್ರತಿನಿತ್ಯ ಸುಮಾರು 425 ಲೋಡ್‌ ನೀರು ಪೂರೈಸಲು ಅನುಮತಿ ನೀಡಿತ್ತು. ಇದರ ಅನ್ವಯ ನಗರಸಭೆಯು 68 ಖಾಸಗಿ ಟ್ಯಾಂಕರ್‌ಗಳ ಮಾಲೀಕರಿಗೆ ಪ್ರತಿ ಲೋಡ್‌ಗೆ ₹ 369.30ರ ದರದಲ್ಲಿ ನೀರು ಸರಬರಾಜು ಮಾಡಲು ಕಾರ್ಯಾದೇಶ ನೀಡಿತ್ತು.

ಈ ಕಾರ್ಯಾದೇಶದ ಅವಧಿ 2016ರ ಡಿ.31ಕ್ಕೆ ಕೊನೆಗೊಂಡ ಕಾರಣ ಹಾಗೂ ನೀರು ಪೂರೈಕೆಯಲ್ಲಿ ಅಕ್ರಮದ ಆರೋಪ ಕೇಳಿ ಬಂದಿದ್ದರಿಂದ ನಗರಸಭೆ ಮತ್ತು ಜಿಲ್ಲಾಡಳಿತವು ಈ ತಿಂಗಳ ಆರಂಭದಲ್ಲಿ 300 ಟ್ಯಾಂಕರ್‌ ಲೋಡ್‌ ಹೆಚ್ಚುವರಿ ನೀರಿನ ಸೇವೆಯನ್ನು ಕಡಿತಗೊಳಿಸಿತು.

ಈ ಕಠಿಣ ನಿರ್ಧಾರದಿಂದ ದೈನಂದಿನ ಸಂಪಾದನೆಗೆ ಹೊಡೆತ ಬಿದ್ದ ಕಾರಣ ಖಾಸಗಿ ಟ್ಯಾಂಕರ್‌ಗಳ ಮಾಲೀಕರು ಜ.1ರಿಂದ ನೀರು ಪೂರೈಕೆ ಸ್ಥಗಿತಗೊಳಿಸಿ ನಗರಸಭೆ ಮತ್ತು ಜಿಲ್ಲಾಡಳಿತದ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದ್ದಾರೆ. ಬಾಕಿ ಬಿಲ್‌ ಬಿಡುಗಡೆಗೆ ಒತ್ತಾಯಿಸಿ ತಿಂಗಳ ಹಿಂದೆಯಷ್ಟೇ ನೀರು ಪೂರೈಕೆ ಸ್ಥಗಿತಗೊಳಿಸಿದ್ದ ಟ್ಯಾಂಕರ್‌ ಮಾಲೀಕರು ಈಗ ಹೊಸ ಕಾರ್ಯಾದೇಶ ಮತ್ತು ದರ ಪರಿಷ್ಕರಣೆ ಬೇಡಿಕೆ ಮುಂದಿಟ್ಟುಕೊಂಡು ಪುನಃ ಮುಷ್ಕರ ಮಾಡುತ್ತಿರುವುದಕ್ಕೆ ನಗರವಾಸಿಗಳಿಂದ ಆಕ್ರೋಶ ವ್ಯಕ್ತವಾಗಿದೆ.

ಸಂಧಾನ ವಿಫಲ: ನೀರು ಪೂರೈಕೆ ಸ್ಥಗಿತದಿಂದ ಜನಜೀವನಕ್ಕೆ ಆಗಿರುವ ಸಮಸ್ಯೆ ನಿವಾರಿಸಲು ನಗರಸಭೆ ಆಡಳಿತ ಯಂತ್ರವು ಟ್ಯಾಂಕರ್‌ ಮಾಲೀಕರ ಮನವೊಲಿಸುವ ಪ್ರಯತ್ನ ಮಾಡಿದೆ. ನಗರಸಭೆ ಅಧ್ಯಕ್ಷರು ಟ್ಯಾಂಕರ್‌ ಮಾಲೀಕರೊಂದಿಗೆ ನಡೆಸಿದ ಸಂಧಾನ ಮಾತುಕತೆ ವಿಫಲವಾಗಿದೆ. ಈ ಬೆಳವಣಿಗೆ ಮಧ್ಯೆ ಕೆಲ ಟ್ಯಾಂಕರ್‌ಗಳ ಮಾಲೀಕರು ಹಳೆ ದರದಲ್ಲೇ ನೀರು ಪೂರೈಸಲು ಒಪ್ಪಿದ್ದಾರೆ. ಆದರೆ, ಮತ್ತೆ ಕೆಲ ಟ್ಯಾಂಕರ್‌ಗಳ ಮಾಲೀಕರು ದರ ಪರಿಷ್ಕರಣೆಯ ಪಟ್ಟು ಸಡಿಲಿಸಿಲ್ಲ. ಹೀಗಾಗಿ ಸಮಸ್ಯೆ ಕಗ್ಗಂಟಾಗಿದೆ.

ಬೇಡಿಕೆ ಅತಾರ್ಕಿಕ: ನಗರವಾಸಿಗಳಿಗೆ ಖಾಸಗಿಯಾಗಿ ನೀರು ಪೂರೈಕೆ ಮಾಡುವ ಟ್ಯಾಂಕರ್‌ ಮಾಲೀಕರು ಪ್ರತಿ ಲೋಡ್‌ಗೆ ಸುಮಾರು ₹ 400 ಪಡೆಯುತ್ತಿದ್ದಾರೆ. ಆದರೆ, ನಗರಸಭೆ ಮೂಲಕ ನೀರು ಸರಬರಾಜು ಮಾಡಲು ಪ್ರತಿ ಲೋಡ್‌ಗೆ ₹ 500 ದರ ನಿಗದಿಪಡಿಸಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ. ಹೀಗಾಗಿ ಟ್ಯಾಂಕರ್‌ ಮಾಲೀಕರ ಬೇಡಿಕೆ ಅತಾರ್ಕಿಕ ಎನ್ನುತ್ತಿರುವ ನಗರಸಭೆ ಆಡಳಿತ ಯಂತ್ರಯಾವುದೇ ಕಾರಣಕ್ಕೂ ದರ ಪರಿಷ್ಕರಣೆ ಮಾಡದಿರುವ ನಿರ್ಧಾರಕ್ಕೆ ಬಂದಿದೆ.

ಆದರೆ, ತಮ್ಮ ಬೇಡಿಕೆ ನ್ಯಾಯಸಮ್ಮತ ಎನ್ನುವ ಟ್ಯಾಂಕರ್‌ ಮಾಲೀಕರು ಖಾಸಗಿಯಾಗಿ ನೀರು ಪೂರೈಕೆ ಮಾಡಿದರೆ ಆ ಕ್ಷಣವೇ ಹಣ ಬರುತ್ತದೆ. ನಗರಸಭೆ ಮೂಲಕ ನೀರು ಸರಬರಾಜು ಮಾಡಿದರೆ ವರ್ಷವಾದರೂ ಬಿಲ್‌ ಪಾವತಿಸುವುದಿಲ್ಲ. ಅಲ್ಲದೇ, ಕಳೆದೊಂದು ವರ್ಷದಿಂದ ದರ ಪರಿಷ್ಕರಣೆ ಮಾಡಿಲ್ಲ. ಡೀಸೆಲ್‌ ಬೆಲೆ, ಟ್ಯಾಂಕರ್‌ ಚಾಲಕರು ಮತ್ತು ಕೆಲಸಗಾರರ ಕೂಲಿ ಹೆಚ್ಚಳದಿಂದ ಹಳೆ ದರದಲ್ಲಿ ನೀರು ಸರಬರಾಜು ಮಾಡಲು ಕಷ್ಟವಾಗುತ್ತಿದೆ ಎಂಬ ವಾದ ಮುಂದಿಡುತ್ತಾರೆ.
ಒಟ್ಟಾರೆ ನಗರಸಭೆ ಆಡಳಿತ ಯಂತ್ರ ಹಾಗೂ ಟ್ಯಾಂಕರ್‌ ಮಾಲೀಕರು ನಡುವಿನ ಹಗ್ಗ ಜಗ್ಗಾಟದಿಂದ ನಗರವಾಸಿಗಳು ಬವಣೆ ಪಡುವಂತಾಗಿದೆ.

ಬೆಳಗಾದರೆ ಮುಷ್ಕರ
ಟ್ಯಾಂಕರ್‌ ಮಾಲೀಕರು ದಿನ ಬೆಳಗಾದರೆ ನೀರು ಪೂರೈಕೆ ಸ್ಥಗಿತಗೊಳಿಸಿ ಮುಷ್ಕರ ಮಾಡುತ್ತಾರೆ. ಕಳೆದ ತಿಂಗಳು ಬಾಕಿ ಬಿಲ್‌ನ ಬೇಡಿಕೆ ಮುಂದಿಟ್ಟುಕೊಂಡು ಮುಷ್ಕರ ಮಾಡಿದ್ದರು. ಈಗ ದರ ಪರಿಷ್ಕರಣೆಯ ನೆಪದಲ್ಲಿ ನೀರು ಸರಬರಾಜು ಮಾಡದೆ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಜಿಲ್ಲಾಡಳಿತ ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಬೇಕು.
–ಮಂಜಮ್ಮ, ಗಾಂಧಿನಗರ ನಿವಾಸಿ


ಮುಷ್ಕರ ನಿಲ್ಲಿಸಲ್ಲ
ಕಳೆದೊಂದು ವರ್ಷದಿಂದ ನೀರಿನ ದರ ಪರಿಷ್ಕರಣೆ ಮಾಡಿಲ್ಲ. ಹಳೆ ದರದಲ್ಲಿ ನೀರು ಸರಬರಾಜು ಮಾಡಿದರೆ ನಷ್ಟವಾಗುತ್ತದೆ. ಹೀಗಾಗಿ ದರ ಪರಿಷ್ಕರಣೆ ಮಾಡಿ ಹೊಸದಾಗಿ ಕಾರ್ಯಾದೇಶ ನೀಡಬೇಕು. ಆವರೆಗೂ ಮುಷ್ಕರ ನಿಲ್ಲಿಸಲ್ಲ. ಮುಷ್ಕರದಿಂದ ಜನರಿಗೆ ಸಮಸ್ಯೆಯಾಗಿದೆ ನಿಜ. ಆದರೆ, ಟ್ಯಾಂಕರ್‌ ಮಾಲೀಕರ ಸಮಸ್ಯೆಯನ್ನು ಯಾರೂ ಕೇಳುತ್ತಿಲ್ಲ.
–ನಾರಾಯಣಸ್ವಾಮಿ, ಟ್ಯಾಂಕರ್‌ ನೀರು ಸರಬರಾಜುದಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ


ಪರಿಷ್ಕರಣೆ ಮಾಡಲ್ಲ
ಮುಷ್ಕರನಿರತ ಖಾಸಗಿ ಟ್ಯಾಂಕರ್‌ ಮಾಲೀಕರ ಜತೆ ಸಂಧಾನ ಮಾತುಕತೆ ನಡೆಸಲಾಗಿದ್ದು, ಬಹುಪಾಲು ಮಾಲೀಕರು ಹಳೆ ದರದಲ್ಲೇ ನೀರು ಪೂರೈಸಲು ಒಪ್ಪಿದ್ದಾರೆ. ಆದರೆ, ಕೆಲ ಮಾಲೀಕರು ಅನಗತ್ಯ ಗೊಂದಲ ಸೃಷ್ಟಿಸಿ ಸಮಸ್ಯೆ ಗಂಭೀರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಹೆಚ್ಚುವರಿ ಟ್ಯಾಂಕರ್‌ ನೀರಿನ ದರ ಪರಿಷ್ಕರಣೆ ಮಾಡಲ್ಲ.
–ಮಹಾಲಕ್ಷ್ಮಿ, ನಗರಸಭೆ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT