ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಪಕ್ಷಗಳಿಗೂ ಪ್ರತಿಷ್ಠೆಯಾದ ಕಣ

Last Updated 9 ಜನವರಿ 2017, 9:49 IST
ಅಕ್ಷರ ಗಾತ್ರ

ಪಾವಗಡ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಬೆಂಬಲಿತರ ಸ್ಪರ್ಧೆಗಳ ನಡುವೆ ಹಣಾಹಣಿ ಇದೆ.
ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಿದ ಪಕ್ಷಕ್ಕೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅನುಕೂಲವಾಗಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ. ಹೀಗಾಗಿ ಮೂರು ಪಕ್ಷಗಳು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಕಳೆದ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್‌ ಬೆಂಬಲಿತರಿಗೆ ಮತ್ತೆ ಅವಕಾಶ ನೀಡದೆ ಸಮಿತಿಯನ್ನು ವಶಕ್ಕೆ ಪಡೆಯಬೇಕು ಎಂದು ಜೆಡಿಎಸ್  ಶಾಸಕ ಕೆ.ಎಂ.ತಿಮ್ಮರಾಯಪ್ಪ ಅವರು ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ.

ಮಾರುಕಟ್ಟೆ ಸಮಿತಿಯ ಆಡಳಿತವನ್ನು ಈ ಬಾರಿಯೂ ತನ್ನದಾಗಿಸಿಕೊಳ್ಳಲು ಮಾಜಿ ಸಚಿವ ವೆಂಕಟರವಣಪ್ಪ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಿಜೆಪಿಯ ಮೂವರು ಬೆಂಬಲಿಗರು ಚುನಾಯಿತರಾಗಿ ಒಬ್ಬರು ಜೆಡಿಎಸ್‌ಗೆ, ಮತ್ತಿಬ್ಬರು ಕಾಂಗ್ರೆಸ್‌ಗೆ ವಲಸೆ ಹೋಗಿದ್ದರು. ಹೇಗಾದರೂ ಬಹುಮತ ಪಡೆದು ತಾಲ್ಲೂಕಿನಲ್ಲಿ ಪಕ್ಷದ ವರ್ಚಸ್ಸನ್ನು ಪ್ರದರ್ಶಿಸಬೇಕು ಎಂದು ಬಿಜೆಪಿ ಪಕ್ಷದ ಮುಖಂಡರು ಹವಣಿಸುತ್ತಿದ್ದಾರೆ.

ವರ್ತಕರ ಕ್ಷೇತ್ರದಿಂದ ಎನ್.ಕೆ.ವಿಜಯಕುಮಾರ್, ಟಿಎಪಿಸಿಎಂಎಸ್‌ ನಿಂದ  ಕೆ.ಎಸ್.ಶ್ರೀನಿವಾಸ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇಬ್ಬರೂ ಕಾಂಗ್ರೆಸ್ ಬೆಂಬಲಿತರು.
11 ಕ್ಷೇತ್ರಗಳಲ್ಲಿ 33 ಮಂದಿ ಕಣದಲ್ಲಿದ್ದಾರೆ: ಎರಡು ಪಕ್ಷಗಳು 11 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಬಿಜೆಪಿ 9 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿದೆ.

ಪಳವಳ್ಳಿ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರಲ್ಲಿ ಒಮ್ಮತ ಮೂಡದ ಕಾರಣ ಆಂಜನೇಯ, ಮಲ್ಲಾರೆಡ್ಡಿ ಇಬ್ಬರೂ ಕಣದಲ್ಲಿ ಉಳಿದಿದ್ದಾರೆ. ಕಾಂಗ್ರೆಸ್ ಬೆಂಬಲಿತರ ನಡುವಿನ ಬಂಡಾಯ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸೂರ್ಯನಾರಾಯಣ ಅವರಿಗೆ ಅನುಕೂಲವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇಬ್ಬರು ಅಭ್ಯರ್ಥಿಗಳಲ್ಲಿ ಯಾರು ಗೆದ್ದರೂ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಕಾಂಗ್ರೆಸ್ ಮುಖಂಡರದ್ದು.

ಸೋಲಾರ್ ಪಾರ್ಕ್‌ ಆರಂಭವಾದಾಗಿನಿಂದ ತಿರುಮಣಿ ಕ್ಷೇತ್ರ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಜಾತಿ ಲೆಕ್ಕಾಚಾರದ ಆಧಾರದಲ್ಲಿ ಮೂರು ಪಕ್ಷಗಳೂ ಒಂದೇ ಸಮುದಾಯದ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿವೆ.  ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ವಿ.ಸಿ.ಚನ್ನಕೇಶವರೆಡ್ಡಿ ಅವರನ್ನು ಜೆಡಿಎಸ್ ಕಣಕ್ಕಿಳಿಸಿದೆ. ಕೆ.ವಿ.ವೆಂಕಟಸುಬ್ಬಯ್ಯ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಡುವೆ ನೇರ ಸ್ಪರ್ಧೆ ಇದೆ.

ಶಾಸಕರ ಸ್ವಕ್ಷೇತ್ರ ಮಂಗಳವಾಡ ಪ್ರತಿಷ್ಠೆಯ ಕಣವೆನಿಸಿದೆ. ಜೆಡಿಎಸ್ ಬೆಂಬಲಿತ ನಾಗಮ್ಮ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಮಾ ಅವರ ನಡುವೆ ತೀವ್ರ ಪೈಪೋಟಿಯಿದೆ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಮಾಜಿ ಶಾಸಕರ ಪುತ್ರ ಎಚ್.ವಿ.ವೆಂಕಟೇಶ್ ಸದಸ್ಯರಾಗಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅವರು ಅಭ್ಯರ್ಥಿಯ ಪರ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.  ಕ್ಷೇತ್ರದ ಎಪಿಎಂಸಿ ನಿರ್ದೇಶಕ ಸ್ಥಾನವನ್ನು ತಮ್ಮದಾಗಿಸಿಕೊಳ್ಳಲು ಶಾಸಕ ತಿಮ್ಮರಾಯಪ್ಪ ಅವರೂ ಕಾರ್ಯೋನ್ಮುಖರಾಗಿದ್ದಾರೆ. ಪರಿಶಿಷ್ಠ ಜಾತಿ, ಪಂಗಡದ ಮತಗಳು ಗೆಲುವಿಗೆ ನಿರ್ಣಾಯಕ.

ಮಾಜಿ ಸಚಿವರ ಕ್ಷೇತ್ರ ಎನಿಸಿಕೊಂಡಿರುವ ವೈ.ಎನ್.ಹೊಸಕೋಟೆಯ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಎ.ವರದಪ್ಪ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವೈ.ಸಿ.ಹನುಮಂತರಾಯ ನಡುವೆ ಸ್ಪರ್ಧೆಯಿದೆ. ವರದಪ್ಪ ಅವರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವವಿದೆ. ಹನುಮಂತರಾಯ ಅವರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ರಂಗಸಮುದ್ರ ಕ್ಷೇತ್ರದಲ್ಲಿ ನಿವೃತ್ತ ಉಪ ತಹಶೀಲ್ದಾರ್ ಮಾರಣ್ಣ ಎ.ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಗಿಳಿದಿದ್ದಾರೆ. ಗುತ್ತಿಗೆದಾರ ಪಿ.ಯುವರಾಜು ಜೆಡಿಎಸ್ ಬೆಂಬಲಿತ ಅಭ್ಯರ್ಥಿ. ಇಬ್ಬರ ನಡುವೆ ತೀವ್ರ ಪೈಪೋಟಿಯಿದೆ. ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗದ ಮತಗಳು ನಿರ್ಣಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT