ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಧಿಕಾರಕ್ಕೆ ಬಂದರೆ 7ನೇ ವೇತನ ಆಯೋಗ ಜಾರಿ

Last Updated 9 ಜನವರಿ 2017, 9:52 IST
ಅಕ್ಷರ ಗಾತ್ರ

ತುಮಕೂರು: ‘ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 5 ಮತ್ತು 6ನೇ ವೇತನ ಆಯೋಗ ಜಾರಿ ಮಾಡಿದೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 7ನೇ ವೇತನ ಆಯೋಗ ಜಾರಿ ಮಾಡಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ  ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಆರ್. ಬಸವರಾಜು ಪರ ನಗರದಲ್ಲಿ ಭಾನುವಾರ ಕರ್ನಾಟಕ ಮಾಧ್ಯಮಿಕ ಶಿಕ್ಷಕರ ಸಂಘವು ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ಈಗಿನ ಕಾಂಗ್ರೆಸ್ ಸರ್ಕಾರವು 7ನೇ ವೇತನ ಆಯೋಗ ಜಾರಿಗೊಳಿಸುವುದಾಗಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ತಕ್ಷಣ 7ನೇ ವೇತನ ಆಯೋಗ ಜಾರಿಗೊಳಿಸಲು ಬದ್ಧವಾಗಿದೆ’ ಎಂದರು.

‘ಈ ಹಿಂದೆ ಅಧಿಕಾರದಲ್ಲಿದ್ದಾಗ 8 ಸಾವಿರ ಸಹ ಶಿಕ್ಷಕರ ನೇಮಕ, 4 ಸಾವಿರ ಜೆಒಸಿ ಉಪನ್ಯಾಸಕರ ನೇಮಕ, 4 ಸಾವಿರ ಪಿಯುಸಿ ಉಪನ್ಯಾಸಕರ ನೇಮಕ, ಮೊರಾರ್ಜಿ ದೇಸಾಯಿ ಶಾಲೆಯ 434 ಶಿಕ್ಷಕರ ಕಾಯಂಗೊಳಿಸಿರುವುದು ಸೇರಿ ಅನೇಕ ಅನುಕೂಲತೆಗಳನ್ನು ಶಿಕ್ಷಕರಿಗೆ ಮಾಡಿಕೊಟ್ಟಿದೆ’ ಎಂದು ವಿವರಿಸಿದರು.

‘ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಶಿಕ್ಷಕ ಸಮುದಾಯಕ್ಕೆ ಮಾಡಿದ ಒಳ್ಳೆಯ ಕೆಲಸಗಳನ್ನು ಪದೇ ಪದೇ ಹೇಳುವುದು ಅಪರಾಧವಲ್ಲ. ಹೀಗಾಗಿ, ಶಿಕ್ಷಕರೇ  ಪರಸ್ಪರ ಮನವರಿಕೆ ಮಾಡಿಕೊಡಬೇಕು. ಆಗ್ನೇಯ ಶಿಕ್ಷಕರ ಕ್ಷೇತ್ರ ಬಿಜೆಪಿ ಕ್ಷೇತ್ರವಾಗಿದೆ. ಯಡಿಯೂರಪ್ಪ ಅವರೇ ಕಣದಲ್ಲಿದ್ದಾರೆ ಎಂದು ಭಾವಿಸಿ ಪಿ.ಆರ್. ಬಸವರಾಜು ಅವರನ್ನು ದೊಡ್ಡ ಅಂತರದಲ್ಲಿ ಗೆಲ್ಲುವಂತೆ ಶಿಕ್ಷಕರು ಬೆಂಬಲಿಸಬೇಕು’ ಎಂದು ಹೇಳಿದರು.

ಬರ  ಪರಿಹಾರ ಕಾರ್ಯ ನಿರ್ಲಕ್ಷ್ಯ: ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಜನ. ಜಾನುವಾರುಗಳು, ರೈತರ ಸ್ಥಿತಿ ನೋಡಿದರೆ ಕಣ್ಣೀರು ಬರುತ್ತದೆ. ರಾಜ್ಯ ಸರ್ಕಾರ ಬರ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸುವ ಪ್ರಯತ್ನ ಮಾಡಬೇಕು ಎಂದು ಒತ್ತಾಯ ಮಾಡಿದರು.

ಶಾಸಕ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಶಿಕ್ಷಕರ ಸಮುದಾಯವೆಂದರೆ ಲೆಕ್ಕಕ್ಕೆ ಇಲ್ಲ. ಆ ಪಕ್ಷಗಳು ಅಧಿಕಾರದಲ್ಲಿದ್ದಾಗ ಯಾವತ್ತೂ ಶಿಕ್ಷಕರ ಸಮಸ್ಯೆ ಹೋಗಲಾಡಿಸುವ ಪ್ರಯತ್ನ ಮಾಡಿಲ್ಲ. ಶಿಕ್ಷಕರಿಗೆ ಈಗ 3–4 ತಿಂಗಳಾದರೂ ವೇತನ ಸಿಗುತ್ತಿಲ್ಲ ಎಂದು ಟೀಕಿಸಿದರು.

ಅಭ್ಯರ್ಥಿ ಪಿ.ಆರ್. ಬಸವರಾಜು (ಪೆಪ್ಸಿ),ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಮಾಜಿ ಶಾಸಕ ಬಾಲಕೃಷ್ಣ ಭಟ್, ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ್, ಮಾಜಿ ಸಂಸದ ಜಿ.ಎಸ್. ಬಸವರಾಜ, ಆನಂದ್ ಮಾತನಾಡಿದರು. ಶಾಸಕ ಬಿ.ಸುರೇಶಗೌಡ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಜ್ಯೋತಿಗಣೇಶ್ ಮತ್ತಿತರರಿದ್ದರು.

ಕ್ಯಾಮೆರಾಕ್ಕೆ ಹೆದರಿದ ಶಿಕ್ಷಕರು
ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪಿ.ಆರ್.ಬಸವರಾಜು ಪರ ಪ್ರಚಾರ ಸಭೆಯಲ್ಲಿದ್ದ ಶಿಕ್ಷಕರು ಮಾಧ್ಯಮಗಳ  ಕ್ಯಾಮೆರಾ ಕಂಡು ಮುದುಡಿದರು!

ಈ ಅಭ್ಯರ್ಥಿ ಪರ ಪ್ರಚಾರ ಸಭೆಗೆ ತಾವು ಬಂದಿದ್ದು ಇನ್ನೊಬ್ಬ ಅಭ್ಯರ್ಥಿಗೆ ಗೊತ್ತಾದರೆ ಹೇಗೆ? ನಮ್ಮ ಮುಖಕ್ಕೆ ಯಾಕ್ರಿ ಕ್ಯಾಮೆರಾ ತರ್ತೀರಿ ಎಂದು ಮಾಧ್ಯಮದ ಕ್ಯಾಮೆರಾಮನ್‌ಗಳತ್ತ  ಫೋಟೋ ಬೇಡ ಎಂಬ ರೀತಿ ಕೈ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT