ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಬ ಸಮಾಜದ ಮಹತ್ವ ಸಾರುವ ಮಾಸ್ತಿಕಲ್ಲು

ಗಮನ ಸೆಳೆಯುವ ದೇವರಹಳ್ಳಿಯ ದೊಡ್ಡಬೀರೇಶ್ವರ ದೇವಸ್ಥಾನ
Last Updated 9 ಜನವರಿ 2017, 10:00 IST
ಅಕ್ಷರ ಗಾತ್ರ
ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ದೇವರಹಳ್ಳಿಯ ಬಳಿ ಇರುವ ದೊಡ್ಡಬೀರೇಶ್ವರ ದೇವಸ್ಥಾನ. ಅದರ ಸಾಮಾಜಿಕ ಹಾಗೂ ಧಾರ್ಮಿಕತೆಗಳಿಂದ ವಿಶೇಷ ಗಮನ ಸೆಳೆಯುತ್ತಿದೆ. ಅದರಲ್ಲೂ ಕುರುಬ ಸಮುದಾಯದ ಮಹತ್ವ ಸಾರುವ ಕರ್ನಾಟಕದಲ್ಲೇ ಅಪರೂಪವೆನ್ನಬಹುದಾದ ಮಹಾಸತಿಕಲ್ಲು (ಮಾಸ್ತಿಕಲ್ಲು) ಇಲ್ಲಿದೆ. 
 
ಕುರಿಯ ಚಿತ್ರ, ಕುರಿ ತುಪ್ಪಟ ಕತ್ತರಿಸಲು ಬಳಸುವ ಕತ್ತರಿ, ನಾಲ್ಕು ಜನ ಒಂದೇ ಕುಟುಂಬಕ್ಕೆ ಸೇರಿದವರು ಆತ್ಮಾರ್ಪಣೆ ಮಾಡಿಕೊಂಡ ಐತಿಹ್ಯವನ್ನು ಈ ಮಾಸ್ತಿಕಲ್ಲು ಹೊಂದಿದೆ. ಇದು ವಿಜಯನಗರ ಅರಸರ ಕಾಲಕ್ಕೆ ಸೇರಿದ್ದಾಗಿದೆ.
 
‘ಒಂದು ಕುರುಬ ಸಮುದಾಯಕ್ಕೆ ಸೇರಿದ ಮನೆಯ ಕತೆಯನ್ನು ಇಲ್ಲಿನ ಮಹಾಸತಿ ಕಲ್ಲು ತಿಳಿಸುತ್ತದೆ. ಇದನ್ನು ಆಳವಾಗಿ ಅಧ್ಯಯನ ಮಾಡಿದರೆ ಕುರುಬ ಸಮುದಾಯದ ಬಗೆಗಿನ ಮಹತ್ವದ ಅಂಶಗಳು ಬೆಳಕಿಗೆ ಬರಲಿವೆ. ಸಂಶೋಧಕರು ಇದರ ಬಗ್ಗೆ ಗಮನ ಹರಿಸುವ ಅವಶ್ಯಕತೆ ಇದೆ’ ಎಂದು ಇತಿಹಾಸ ಸಂಶೋಧಕ ಡಾ. ಚಿಕ್ಕಚನ್ನಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
 
‘ದೊಡ್ಡಬೀರೇಶ್ವರ ದೇವಸ್ಥಾನದ ಆವರಣದಲ್ಲಿರುವ ಮಹಾಸತಿಕಲ್ಲನ್ನು (ಮಾಸ್ತಿಕಲ್ಲು) ಸಂಪೂರ್ಣವಾಗಿ ಅಧ್ಯಯನ ಮಾಡಬೇಕಾಗಿದೆ. ಇದರಿಂದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಂಶಗಳು ತಿಳಿದು ಬರುತ್ತವೆ. ಈ ಸ್ಥಳ ಹಿಂದೆ ಪ್ರಮುಖ ವ್ಯಾಪಾರೀಕರಣದ ಕೇಂದ್ರವಾಗಿತ್ತು ಎಂಬುದಕ್ಕೆ ಇಲ್ಲಿ ಹಲವಾರು ಕುರುಹುಗಳಿವೆ’ ಎಂದು ತಿಳಿಸಿದರು. 
 
‘ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧನಾಗಿದ್ದ ಮೈಲಾರ ಮಹದೇವ ಪಶ್ಚಿಮ ಘಟ್ಟಗಳನ್ನು ದಾಟಿ ಕರಾವಳಿಯೊಂದಿಗೆ ವ್ಯಾಪಾರ ಮಾಡುತಿದ್ದ ಕುರುಹುಗಳನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಅದೇ ರೀತಿಯಲ್ಲಿ ದಕ್ಷಿಣ ಕರ್ನಾಟಕದ ಮಳವಳ್ಳಿ, ಹಲಗೂರು, ಬೊಪ್ಪಣಪುರ ಮಂಠೇಸ್ವಾಮಿ ಚರಿತ್ರೆಯಲ್ಲಿಯೂ ಈ ಬಗ್ಗೆ ಮಾಹಿತಿ ಸಿಗುತ್ತದೆ’ ಎಂದರು. 
 
‘ವಿಜಯನಗರದ ಕಾಲದಲ್ಲಿ ವ್ಯಾಪಕವಾದ ವ್ಯಾಪಾರಿ ಚಟುವಟಿಕೆಗಳು ದಕ್ಷಿಣ ಕರ್ನಾಟಕದಾದ್ಯಂತ ಪಸರಿಸಿದ್ದ ಬಗ್ಗೆ ವಿದೇಶಿ ಬರಹಗಳಲ್ಲೂ ಉಲ್ಲೇಖಗಳಿವೆ. ತುಮಕೂರು, ಹಾಸನ, ಶಿವಮೊಗ್ಗ, ಮೈಸೂರು, ಚಿತ್ರದುರ್ಗ ಮತ್ತು ಬೆಂಗಳೂರನ್ನು ಸಂಪರ್ಕಿಸುವ ಮಾರ್ಗಗಳು ಕಂಚಿ, ಮಧುರೆವರೆಗೆ ವಿಸ್ತರಿಸಿತ್ತು. ಪೂರ್ವ ಘಟ್ಟಗಳನ್ನು ದಾಟಿ ಹೆಸರುಗತ್ತೆಗಳ ಮೂಲಕ ವ್ಯಾಪಾರ ವಹಿವಾಟನ್ನು ಮೈಸೂರು ಒಡೆಯರ್‌ ಕಾಲದವರೆಗೂ ಪ್ರಚಲಿತವಾಗಿತ್ತು’ ಎನ್ನುತ್ತಾರೆ ಅವರು.
 
ಇಲ್ಲಿನ ಬೀರೇಶ್ವರ ದೇವಸ್ಥಾನವನ್ನು ಮೈಸೂರು ಒಡೆಯರು ಜೀರ್ಣೋದ್ಧಾರ ಮಾಡಿದ್ದು, ದೇವಾಲಯದ ಸುತ್ತ ದೊಡ್ಡಗುಂಡು ತೋಪನ್ನು ನಿರ್ಮಿಸಿ ಜಾತ್ರೆ, ಮದುವೆ ಮುಂತಾದ ಚಟುವಟಿಕೆ ಹಾಗೂ ಕುರುಬ ಸಮುದಾಯದ 88 ಗಡಿಗಳ ಜನರು ಸೇರಿ ತಮ್ಮ ತಮ್ಮಲ್ಲಿನ ವಿವಾದ ಬಗೆಹರಿಸಿಕೊಳ್ಳಲು ಈ ತೋಪನ್ನು ಬಳಸುತ್ತಿದ್ದಾರೆ.
 
ಸೋಮವಾರ ಹಾಗೂ ಗುರುವಾರ ಗಡಿಗಳ ಕುರುಬ ಸಮುದಾಯದವರು ಪಾರಂಪರಿಕವಾಗಿ ಈ ದೇವಸ್ಥಾನದ ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
 
ಇತಿಹಾಸ ಹೇಳುವ ಕಲ್ಲುಗಳು: ವೀರನ ನೆನಪಿಗಾಗಿ ಇಡುತ್ತಿದ್ದ ಶಿಲ್ಪವನ್ನು ವೀರಗಲ್ಲು ಎಂದೂ, ಆತನ ಚಿತೆಯೊಂದಿಗೆ ಆತ್ಮಾಹುತಿ ಮಾಡಿಕೊಂಡ ಆತನ ಮಡದಿಯ ಶಿಲ್ಪವನ್ನು ಮಾಸ್ತಿಕಲ್ಲು ಎಂದೂ ಕರೆಯಲಾಗುತ್ತದೆ. ಅದರಲ್ಲಿ ಮರಣದ ವಿಷಯವನ್ನು ಕೆತ್ತಲಾಗುತ್ತದೆ. ಕಳ್ಳರಿಂದ ತನ್ನ ಊರ ಪಶುಗಳ ರಕ್ಷಣೆಗಾಗಿ ಕಾದಾಡಿದ್ದರೆ ವೀರನ ಪಕ್ಕ ದನಗಳ ಚಿತ್ರಣ, ಕಾಡು ಹಂದಿ ಅಥವಾ ಹುಲಿಯೊಂದಿಗೆ ಕಾದಾಡಿ ಸತ್ತಿದ್ದರೆ ಆತನ ಎದುರು ಆರ್ಭಟಿಸುತ್ತಿರುವ ಆಯಾ ಪ್ರಾಣಿಗಳ ಶಿಲ್ಪ ಕಾಣಬಹುದು.
 
 ಇಂಥ ಕೆಲವು ಕಲ್ಲುಗಳ ಮೇಲೆ ಆ ವೀರನ ಸಾಹಸಾದಿಗಳ ಮಾಹಿತಿಯನ್ನೂ ಕೆತ್ತಲಾಗಿದೆ. ಅಮೂಲ್ಯ ಐತಿಹಾಸಿಕ ದಾಖಲೆಗಳು, ಪುಸ್ತಕಗಳಲ್ಲಿ ಸಿಗದ ಚಾರಿತ್ರಿಕ ಸಂಗತಿಗಳು ಅಲ್ಲಿರುತ್ತವೆ. ಜಿಲ್ಲೆಯಲ್ಲಿರುವ ಇಂಥ ಅಪರೂಪದ ಸ್ಮಾರಕಗಳನ್ನು ಹಾಳಾಗದಂತೆ ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ನಾಗರಿಕರು ಹೇಳಿದ್ದಾರೆ.
 
***
 ಮೇವಿಗಾಗಿ ಕುರುಬರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರ ಹೊಂದುತ್ತಿದ್ದುದನ್ನು ಈ ನೆಲೆಯಲ್ಲಿ ಅಧ್ಯಯನ ನಡೆಸಿದರೆ ಮಹತ್ವದ ಕುರುಹುಗಳು ಬೆಳಕಿಗೆ ಬರುತ್ತವೆ.
-ಡಾ. ಚಿಕ್ಕಚನ್ನಯ್ಯ,
ಇತಿಹಾಸ ಸಂಶೋಧಕ
 
*
-ಎಸ್. ರುದ್ರೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT