ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಯಲ್ಲಿ ನಾಯಿ; ತಾರಸಿಯಲ್ಲಿ ಕೋತಿ ಕ್ವಾಟ್ಲೆ

ಪ್ರಾಣಿದಯಾ ಸಂಘದಿಂದ ಅಡ್ಡಿ: ಪಾಲಿಕೆ ಅಧಿಕಾರಿಗಳ ಅಸಹಾಯಕತೆ
Last Updated 9 ಜನವರಿ 2017, 10:01 IST
ಅಕ್ಷರ ಗಾತ್ರ

ತುಮಕೂರು: ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಗಿರುವ ನಗರದಲ್ಲಿ ದಿನೇ ದಿನೇ ಬೀದಿ ನಾಯಿಗಳು, ಹಂದಿಗಳು ಹಾಗೂ ಕೋತಿಗಳ ಕೀಟಳೆ ಹೆಚ್ಚುತ್ತಿದೆ. ಬೀದಿನಾಯಿ ಮತ್ತು ಹಂದಿಗಳ ಕಾಟದಿಂದ ವಾಹನ ಸವಾರರು ಮತ್ತು ನಾಗರಿಕರು ಬೇಸ್ತು ಬಿದ್ದರೆ, ಕೋತಿಗಳ ಕಾಟದಿಂದ ಮಕ್ಕಳು ಬೆದರಿದ್ದಾರೆ.

ಬೀದಿ ನಾಯಿಗಳ ಉಪಟಳ ಮಿತಿ ಮೀರಿದ್ದರೂ ಪಾಲಿಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರೆ ನಗರದಲ್ಲಿ ನಾಯಿಗಳ ಹಾವಳಿ ಇರುತ್ತಿರಲಿಲ್ಲ. ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಪಾಲಿಕೆ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದೆ. ಆದರೂ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿದೆ.
ಈ ಬಗ್ಗೆ ಪಾಲಿಕೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ‘ಪ್ರಾಣಿದಯಾ ಸಂಘದವರು ಎಲ್ಲದಕ್ಕೂ ಅಡ್ಡಿ ಮಾಡುವರು. ನಾವು ಏನು ಮಾಡಲು ಸಾಧ್ಯವಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸುವರು.


‘ಕೋಳಿ ಮತ್ತು ಮಾಂಸದ ಅಂಗಡಿ ಮತ್ತು ಮಾಂಸದ ಹೋಟೆಲ್‌ಗಳ ತ್ಯಾಜ್ಯ ಬೀದಿ ನಾಯಿಗಳಿಗೆ ಸುಲಭವಾಗಿ ಸಿಗುತ್ತಿದೆ. ಮನೆ ಆಹಾರವನ್ನು ನಾಯಿಗಳು ತಿನ್ನುವುದೇ ಇಲ್ಲ. ಕೆಲವು ನಾಯಿಗಳಿಗೆ ಬೇಕರಿ ತಿಂಡಿಯೇ ಬೇಕು’ ಎಂದು ತಾವು ಕಂಡ ಸನ್ನಿವೇಶಗಳನ್ನು ತಿಳಿಸುವರು ಅಶೋಕನಗರದ ಸುರೇಂದ್ರ.

ಬಗೆಹರಿಯದ ಹಂದಿ ಸಮಸ್ಯೆ: ಹಂದಿಗಳ ಸಮಸ್ಯೆಯೂ ಇದೇ ತೆರೆನಾದುದು. ಹಂದಿಗಳನ್ನು ಹಿಡಿಯದಂತೆ ಹಿಂದಿನ ಜಿಲ್ಲಾಧಿಕಾರಿ ಸತ್ಯಮೂರ್ತಿ ಆದೇಶಿಸಿದ್ದರು. ಈಗಲೂ ಆ ಆದೇಶ ಮುಂದುವರಿದಿದೆ. ಈಗಿನ ಜಿಲ್ಲಾಧಿಕಾರಿ ಆದೇಶಕ್ಕಾಗಿ ಕಾಯುತ್ತಿದ್ದೇವೆ’ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ನಗರದಲ್ಲಿ 150ರಿಂದ 200 ಕುಟುಂಬಗಳು ಹಂದಿ ಸಾಕಾಣಿಕೆ ನಡೆಸುತ್ತವೆ. ಈ ಕುಟುಂಬಗಳಿಗೆ ಹಂದಿ ಸಾಕಾಣಿಕೆಯೇ ಜೀವನಾಧಾರ. ‘ಹಂದಿಗಳು ನಮ್ಮ ಬದುಕು. ನಗರದ ಹೊರ ವಲಯದಲ್ಲಿ ಹಂದಿ ಸಾಕಾಣಿಕೆಗೆ ಸರ್ಕಾರ ಜಾಗ ನೀಡಿದರೆ ಅಲ್ಲಿಗೆ ನಾವು ಸ್ಥಳಾಂತರ ಮಾಡುತ್ತೇವೆ’   ಎಂದು ಹಂದಿ ಸಾಕಣೆದಾರರೊಬ್ಬರು ತಿಳಿಸಿದರು.

ಈ ಹಿಂದಿನ ಜಿಲ್ಲಾಧಿಕಾರಿ ಆದೇಶಗಳನ್ನು ಬಗ್ಗೆ ಪಾಲಿಗೆ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿಲ್ಲವೇ? ಸ್ಮಾರ್ಟ್ ಸಿಟಿ ಯೋಜನೆ ಅಡೆತಡೆ ನಿವಾರಣೆ ಉದ್ದೇಶಕ್ಕಾದರೂ ಹಂದಿ ಸಾಕುವವರ ಬೇಡಿಕೆ ಬಗ್ಗೆ ಪಾಲಿಕೆ ಗಮನಹರಿಸಬೇಕಿತ್ತು ಅಲ್ಲವೇ? ಎನ್ನುವ ಹಲವು ಪ್ರಶ್ನೆಗಳು ಉದ್ಬವಿಸುತ್ತವೆ. 

ಹಂದಿ ಮತ್ತು ನಾಯಿಗಳು ರಾಜಾರೋಷವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತವೆ.  ಕೆಲವು ಕಡೆಗಳಲ್ಲಿ  ದ್ವಿಚಕ್ರವಾಹನ ಸವಾರರು ನೆಲಕ್ಕೆ ಬಿದ್ದಿರುವ ನಿದರ್ಶನಗಳು ಸಾಕಷ್ಟಿವೆ.

ಕ್ವಾಟ್ಲೆ ಕೋತಿ: ಬೀದಿ ನಾಯಿ ಹಾಗೂ ಹಂದಿ ಸಮಸ್ಯೆ ಪುರುಷರನ್ನು ಹೆಚ್ಚು ತಟ್ಟಿದರೆ ಕೋತಿಗಳ ಕಾಟ ಮಹಿಳೆಯರನ್ನು ಬಾಧಿಸಿದೆ.
ಈ ಮೊದಲು ನಗರದ ಹೊರ ವಲಯದ ಮತ್ತು ಗಿಡಮರಗಳು ಹೆಚ್ಚಿರುವ ಕೆಲವೇ ಬಡಾವಣೆಗಳಿಗೆ ಸೀಮಿತವಾಗಿದ್ದ ಕೋತಿಗಳ ಹಾವಳಿ ಈಗ ಎಲ್ಲೆಡೆ ಪಸರಿಸಿದೆ.
ಮನೆ ವರಾಂಡದಲ್ಲಿ ಚಿಕ್ಕ ಮಕ್ಕಳು ಅನ್ನಾಹಾರವನ್ನು ತಿನ್ನುವಂತಿಲ್ಲ. ಹಿಂಡು–ಹಿಂಡು ಕೋತಿಗಳು ಲಗ್ಗೆ ಇಡುತ್ತಿರುವುದು ದೊಡ್ಡವರಲ್ಲಿಯೂ ಭಯಕ್ಕೆ ಕಾರಣವಾಗಿದೆ.

‘ಮಕ್ಕಳು ಕೋತಿಗಳಿಂದ ಭಯ ಭೀತರಾಗಿದ್ದಾರೆ. ಎಲ್ಲಿ ನಮ್ಮ ಮೇಲೆ ದಾಳಿ ನಡೆಸುತ್ತವೆ ಎನ್ನುವ ಭಯ ನಮ್ಮನ್ನೂ ಕಾಡುತ್ತದೆ’ ಎನ್ನುವರು ಬಡವಾಡಿ ನಿವಾಸಿ ಉಮಾ.
‘ಮನೆ ಪಕ್ಕದ ಖಾಲಿ ಜಾಗದಲ್ಲಿ ತರಕಾರಿ ಬೆಳೆದಿದ್ದೆ. ಒಂದೇ ಒಂದು ಸೋರೆಕಾಯಿಯನ್ನೂ ಕೋತಿಗಳು ಬಿಡಲಿಲ್ಲ. ಇನ್ನು ತರಕಾರಿ ಬೆಳೆಯುವುದು ಬೇಡ ಎಂದು ತೀರ್ಮಾನಿಸಿದ್ದೇನೆ’ ಎಂದು ಅಸಹಾಯಕರಾಗಿ ಹೇಳಿದರು.

ತಾರಸಿ ತೋಟಗಾರಿಕೆಗೆ ಹಿನ್ನಡೆ
ತಾರಸಿಯಲ್ಲಿ ತರಕಾರಿ ಬೆಳೆಯುವುದನ್ನು ಪ್ರೋತ್ಸಾಹಿಸಲು ತೋಟಗಾರಿಕಾ ಇಲಾಖೆ ನಗರದ ಸಾವಿರಾರು ಜನರಿಗೆ ತರಬೇತಿ ನೀಡಿದೆ. ಉಚಿತವಾಗಿ ಹಲವು ಬಗೆಯ ತರಕಾರಿ ಬೀಜಗಳ ಪೊಟ್ಟಣಗಳನ್ನು ವಿತರಿಸಿದೆ. ಆದರೆ ಕೋತಿಗಳ ಹಾವಳಿ ಕಾರಣ ತಾರಸಿ ತೋಟಗಾರಿಕೆಗೆ ಹಿನ್ನಡೆಯಾಗಿದೆ.  

‘ತಾರಸಿಯಲ್ಲಿ ಕೈ ತೋಟ ಮಾಡಬೇಕಾದರೆ ಕೋತಿಗಳು ಬಾರದಂತೆ ಕಬ್ಬಿಣದ ಸರಳು, ಜಾಲರಿ ಹಾಕಿಸಬೇಕು. ಇದು ದುಬಾರಿ ಕೆಲಸವಾದ್ದರಿಂದ ತಾರಸಿ ತೋಟಗಾರಿಕೆ ಕನಸು ಬಿಟ್ಟಿದ್ದೇವೆ’ ಎನ್ನುತ್ತಾರೆ ಜಯನಗರ ನಿವಾಸಿ ರಾಜೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT