ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿ ಭಾವದಿಂದ ವೈಕುಂಠ ಏಕಾದಶಿ ಆಚರಣೆ

ಜಿಲ್ಲೆಯ ವಿವಿಧ ವೆಂಕಟರಮಣ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಸರತಿ ಸಾಲು
Last Updated 9 ಜನವರಿ 2017, 10:12 IST
ಅಕ್ಷರ ಗಾತ್ರ
ರಾಮನಗರ: ವೈಕುಂಠ ಏಕಾದಶಿಯನ್ನು ಜಿಲ್ಲೆಯಲ್ಲಿ ಭಾನುವಾರ ಭಕ್ತಿ–ಭಾವದಿಂದ ಆಚರಿಸಲಾಯಿತು. ವೈಕುಂಠ ಏಕಾದಶಿಯ ಪ್ರಯುಕ್ತ ನಗರದಲ್ಲಿರುವ ವೆಂಕಟರಮಣ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯಿತು. 
 
ಮುಂಜಾನೆಯಿಂದ ದೇವಸ್ಥಾನಗಳ ಮುಂದೆ ವೆಂಕಟೇಶ್ವರನ ದರ್ಶನ ಪಡೆಯಲು ಭಕ್ತರು ಭಾರಿ ಸಂಖ್ಯೆಯಲ್ಲಿ ಸರದಿ ಸಾಲಿನಲ್ಲಿ ನಿಂತ ದೃಶ್ಯ ಸಾಮಾನ್ಯವಾಗಿತ್ತು.
ಏಕಾದಶಿಯಂದು ದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ. ಅದರಲ್ಲಿಯೂ ಶ್ರೀವೆಂಕಟೇಶ್ವರ ಸ್ವಾಮಿ ದರ್ಶನ ಪಡೆದು ಸ್ವರ್ಗದ ಬಾಗಿಲಲ್ಲಿ ಪ್ರವೇಶಿಸಿ ಉತ್ಸವ ಮೂರ್ತಿ ದರ್ಶನ ಪಡೆದರೆ ಮಾಡಿನ ಪಾಪಗಳು ನಶಿಸಿ ಪುಣ್ಯ ದೊರೆಯುತ್ತದೆ ಎಂಬ ಪ್ರತೀತಿಯಿದೆ. ಇದರಿಂದಾಗಿ ವೆಂಕಟೇಶ್ವರ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. 
 
ನಗರದ ಕೆಂಪೇಗೌಡ ವೃತ್ತದಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಮತ್ತು ಲಕ್ಷ್ಮಿ ವೆಂಕಟೇಶ್ವರ ಸಮೇತ ಆಂಜನೇಯ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ಬೆಳಗಿನ ಜಾವ ಸುಮಾರು 2ಗಂಟೆಯಿಂದ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. 
 
ಕೋದಂಡ ರಾಮ ದೇವಾಲಯದಲ್ಲಿ ವಿಶೇಷ ಪೂಜೆ: ಬಿಡದಿಯ ಪುರಾಣ ಪ್ರಸಿದ್ಧ ಕೋದಂಡ ರಾಮಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ 
ಪ್ರಯುಕ್ತ ದೇವರಿಗೆ ವಿಶೇಷ ಪೂಜೆ ಮತ್ತು ಅಲಂಕಾರ ಆಯೋಜಿಸಲಾಗಿತ್ತು. ದೇವಾಲಯದ ಹೊರಾಂಗಣ ಮತ್ತು ಒಳ ಆವರಣಗಳಲ್ಲಿ ತಿರುಪತಿ ತಿರುಮಲ ದೇವಸ್ಥಾನ ಒಳ ಆವರಣದಲ್ಲಿ ಮಾಡುವ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. 
 
ಬೆಳಗಿನ ಜಾವ 2.30 ರಿಂದ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದುಕೊಂಡರು. ಎಲ್ಲಾ ಭಕ್ತಾದಿಗಳಿಗೆ ವಿಶೇಷ ಪ್ರಸಾದ ಮತ್ತು ಕ್ಯಾಲೆಂಡರ್‌ಗಳನ್ನು ನೀಡಲಾಯಿತು. 
 
ಕೆಪಿಸಿಸಿ ಸದಸ್ಯ ಎ.ಮಂಜು ಮತ್ತು ಸಂಗಡಿಗರು ತಮ್ಮ ನೇತೃತ್ವದಲ್ಲಿ ಆರನೇ ವರ್ಷದ ವಿಶೇಷ ಪೂಜೆಯ ಅಂಗವಾಗಿ 25 ಸಾವಿರ ಲಡ್ಡು ಮತ್ತು 25 ಸಾವಿರ ತಿಮ್ಮಪ್ಪನ ಕ್ಯಾಲೆಂಡರ್‌ಗಳನ್ನು ಭಕ್ತಾದಿಗಳಿಗೆ ವಿತರಿಸಿದರು. ಇಡಿ ಕೋದಂಡ ರಾಮಸ್ವಾಮಿ ದೇವಾಲಯ ಹೂವಿನಿಂದ ಸಿಂಗರಿಸಿದ್ದು ಭಕ್ತಾದಿಗಳ ಗಮನ ಸೆಳೆಯಿತು.
 
ಬಿಡದಿ ಪಟ್ಟಣದ ಹೃದಯ ಭಾಗದಲ್ಲಿರುವ ಕೋದಂಡ ರಾಮಸ್ವಾಮಿ ದೇವಾಲಯ ಪೌರಾಣಿಕ ಹಿನ್ನಲೆ ಹೊಂದಿದೆ. 1935ರಲ್ಲಿ ಮೈಸೂರು ದೀವಾನರಾಗಿದ್ದ ಕನ್ನಡ ಪ್ರೇವಿ ಸರ್ ಮಿರ್ಜಾ ಇಸ್ಮಾಯಿಲ್ ಅವರು ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವ ಸಂದರ್ಭದಲ್ಲಿ ಬಿಡದಿಯಲ್ಲಿ ತಂಗುತ್ತಿದ್ದರು. ಈ ಸಂದರ್ಭದಲ್ಲಿ ತಿರುಪತಿ ದೇವಾಲಯದಲ್ಲಿ ಅರ್ಚಕರಾಗಿದ್ದ ಅಣ್ಣಯ್ಯಾಚಾರ್ ಅವರಿಂದ ಇಲ್ಲಿ ಕೋದಂಡ ರಾಮಸ್ವಾಮಿ ದೇವಾಲ ಪ್ರತಿಸ್ಥಾಪನೆ ಮಾಡಿದರು. ನಂತರದ ದಿನಗಳಲ್ಲಿ ಅವರ ಪುತ್ರ ವೆಂಕಟ ನರಸಿಂಹಚಾರ್ ಅವರು ದೇವಾಲಯದಲ್ಲಿ ಪೂಜೆ  ನೇರವೇರಿಸಿಕೊಂಡು ಬಂದಿದ್ದು, ಇದೀಗ ಇವರ ಪುತ್ರ ಶ್ರೀನಿವಾಸಚಾರಿ ಅವರು ಪ್ರಧಾನ ಅರ್ಚಕರಾಗಿ ದೇವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 
 
ಹಾರೋಹಳ್ಳಿ(ಕನಕಪುರ ವರದಿ): ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿನ ದೊಡ್ಡಗುಡಿ (ಅರುಣಾಚಲೇಶ್ವರ) ದೇವಾಲದಲ್ಲಿರುವ ಶ್ರೀ ವೆಂಕಟೇಶ್ವರನ ವೈಕುಂಠ ಏಕಾದಶಿ ಕಾರ್ಯಕ್ರಮ ಭಾನುವಾರ ವಿಜೃಂಭಣೆಯಿಂದ ನೆರವೇರಿತು. 
 
ದೊಡ್ಡಗುಡಿ ದೇವಾಲಯದಲ್ಲಿ ಈಶ್ವರ, ರಾಮ, ಆಂಜನೇಯ, ವೆಂಕಟೇಶ್ವರ, ಕಾಶಿ ವಿಶ್ವನಾಥ, ಮಲೇ ಮಹದೇಶ್ವರ, ಅನಂತ ಪದ್ಮನಾಭ ಮೊದಲಾದ 73 ದೇವರನ್ನು ಪ್ರತಿಷ್ಠಾಪನೆ ಮಾಡಿರುವ ದೇವಾಲಯದ ಅಭಿವೃದ್ಧಿ ಸಮಿತಿ ಉತ್ಸುಕತೆಯಿಂದ ದೇವಾಲಯ ಶೃಂಗಾರಗೊಳಿಸಿದ್ದರು. 
 
ಸಂಜೆಯವರೆಗೂ ಭಕ್ತರು ನಿರಂತರವಾಗಿ ದೇವಾಲಯಕ್ಕೆ ಬರುತ್ತಿದ್ದು 30 ಸಾವಿರಕ್ಕೂ ಹೆಚ್ಚಿನ ಭಕ್ತರು ಬಂದು ವೆಂಕಟೇಶ್ವರ ವೈಕುಂಠ ದರ್ಶನ ಮಾಡಿದ್ದಾರೆ ಎಂದು ಅಭಿವೃದ್ಧಿ ಸಮಿತಿ ತಿಳಿಸಿದೆ. 
 
ಚಿಕ್ಕಮುದುವಾಡಿ: ತಾಲ್ಲೂಕಿನ ಚಿಕ್ಕಮುದುವಾಡಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ನರಸಿಂಹಸ್ವಾಮಿಯನ್ನು ವಿಶೇಷ ವಾಗಿ ಅಲಂಕಾರಗೊಳಿಸಲಾಗಿತ್ತು. ಭಕ್ತರು ವೈಕುಂಠ ದ್ವಾರವನ್ನು ಪ್ರವೇಶಿಸಿ ವೈಕುಂಠ ದರ್ಶನ ಪಡೆದರು. 
 
ಲಲಿತ ಸಹಸ್ರನಾಮ ಸ್ತೋತ್ರಸಂಘ ಕೋಡಿಹಳ್ಳಿಯವರು ಭಕ್ತಗೀತೆ ಲಹರಿ ಹಾಗೂ ವಿಷ್ಣು ಸಹಸ್ರನಾಮವನ್ನು ಬೆಳಿಗ್ಗೆಯಿಂದ ಸಂಜೆವರೆಗೂ ನಡೆಸಿಕೊಟ್ಟರು. 
 
ಕಲ್ಲಹಳ್ಳಿ ಚಿಕ್ಕತಿರುಪತಿ: ಚಿಕ್ಕತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಕಲ್ಲಹಳ್ಳಿ ಚಿಕ್ಕತಿರುಪತಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸಹಸ್ರಾರು ಭಕ್ತರು ವೈಕುಂಠ ದರ್ಶನ ಪಡೆದು ಪುನೀತರಾದರು. 
 
ದೇವಸ್ಥಾನ ಸಮಿತಿ ಮತ್ತು ಮುಜರಾಯಿ ಇಲಾಖೆಯವರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ದೇವಾಲಯ ವಿವಿಧ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಿದ್ದರು.
 
ಸಂಜೆವರೆಗೂ ಭಕ್ತರು ಬರುತ್ತಿದ್ದರು. ಪೊಲೀಸರು ವಾಹನಗಳನ್ನು ಗ್ರಾಮದ ಒಳಗೆ ಬಿಡದೆ ಪೈಪ್‌ಲೈನ್‌ ಬಳಿಯೇ ತಡೆದು ಒಳಗಡೆ ನಡೆದುಕೊಂಡು ಹೋಗುವಂತೆ ಮಾಡಿದ್ದರಿಂದ ಎಲ್ಲಾ ಭಕ್ತರು ದೇವಾಲಯಕ್ಕೆ ಹೋಗಿ ದರ್ಶನ ಪಡೆಯಲು ಸಾಧ್ಯವಾಯಿತು. 
 
ಪ್ರತಿವರ್ಷ ಭಕ್ತರಿಗೆ ಲಾಡು ಹಂಚುವ ಕುಟುಂಬದವರು ಈ ಬಾರಿಯೂ ಲಾಡು ತಯಾರಿಸಿ ದೇವರ ದರ್ಶನ ಪಡೆದು ಹೊರಬರುತ್ತಿದ್ದ ಭಕ್ತರಿಗೆ ಹಂಚಿಕೆ ಮಾಡಿದರು. ದೇವಾಲಯದ ಹೊರಗಡೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. 
 
ಶ್ರೀನಿವಾಸ ಸ್ವಾಮಿಗೆ ವಿಶೇಷ ಅಲಂಕಾರ (ಮಾಗಡಿ ವರದಿ): ಮಾಗಡಿ ಪಟ್ಟಣದ ತಿರುಮಲೆಯ ಪುರಾಣ ಪ್ರಸಿದ್ಧ ತಿರುಮಲೆ ಶ್ರೀನಿವಾಸ ಸ್ವಾಮಿ ದೇವಾಲಯದಲ್ಲಿ ಭಾನುವಾರ ಬೆಳಿಗ್ಗೆ 5 ಗಂಟೆಯಿಂದ ಶ್ರದ್ಧಾಭಕ್ತಿಯಿಂದ ವೈಕುಂಠ ಏಕಾದಶಿ ಆಚರಿಸಲಾಯಿತು.
 
ವೈಕುಂಠ ದ್ವಾರ ನಿರ್ಮಿಸಿ ಅದರ ಮೇಲೆ ಉತ್ಸವ ಮೂರ್ತಿಗಳನ್ನು ಇಟ್ಟು ಪೂಜಿಸಲಾಯಿತು. ಸಹಸ್ರಾರು ಭಕ್ತಾದಿಗಳು ದೇವರ ದರ್ಶನ ಪಡೆದರು. ಪ್ರಧಾನ ಅರ್ಚಕ ಶ್ರೀಕೃಷ್ಣ ಅಯ್ಯಂಗಾರ್‌, ಕೀರ್ತಿ ಅಯ್ಯಂಗಾರ್‌ ದೇವರ ಪೂಜಾದಿ ನೆರವೇರಿಸಿದರು. ಹಿರಿಯ ಸಂಗೀತಗಾರರಾದ ವತ್ಸಲಾ ಗೋವಿಂದರಾಜನ್‌ ದೇವರ ನಾಮ ಹಾಡಿದರು. 
 
ನಿಶ್ಕಲ್ಮಷ ಮನಸ್ಸಿನಿಂದ  ದೇವರ ಪೂಜಿಸಿ: ಮಾನವ ಜನ್ಮ ದೇವನ ಅನುಪಮ ಕಾಣಿಕೆ. ಆರೋಗ್ಯ ಭಾಗ್ಯ ಪಡೆದು ಮಾನವಂತರಾಗಿ ಬಾಳಲು ನಿಶ್ಕಲ್ಮಷ ಮನಸ್ಸಿನಿಂದ  ದೇವರ ಮೇಲಿನ ಭಕ್ತಿ ಅಗತ್ಯ’ ಎಂದು ಪಟ್ಟದ ಪೂಜಾರಿ ನಾರಾಯಣಪ್ಪ ತಿಳಿಸಿದರು.
 
ವೈಕುಂಠ ಏಕಾದಶಿ ಅಂಗವಾಗಿ ಶ್ರೀಪತಿಹಳ್ಳಿ ದಾಖಲೆ ದೇವರ ಹಟ್ಟಿ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಭಾನುವಾರ ನಡೆದ ವೈಕುಂಠ ಪೂಜಾ ಸಮಾರಂಭದಲ್ಲಿ ಅವರು ಮಾತನಾಡಿದರು.
 
‘ಸಾರ್ಥಕ ಬದುಕಿಗೆ ದೇವರು ಸಾರಥಿ ಇದ್ದಂತೆ. ದೇಹ ಎಷ್ಟೇ ಸುಂದರವಾಗಿದ್ದರೂ ಅದಕ್ಕೆ ಬೆಲೆ ಕಡಿಮೆ, ದೇಹದ ಒಳಗಿನ ಚೈತನ್ಯ, ಆಂತರಿಕ ಅರಿವು ಅಮೂಲ್ಯವಾದವು. ದೇವರಲ್ಲಿ ನಂಬಿಕೆ ಇಟ್ಟು, ಭಕ್ತಿಯಿಂದ ಪೂಜಿಸಿ, ಕೆಲಸಗಳನ್ನು ಮಾಡಬೇಕಿದೆ,  ಸರ್ವರ ಒಳಿತಿಗೆ  ದೇವರನ್ನು ಸ್ಮರಿಸೋಣ’ ಎಂದು ಅವರು 
ತಿಳಿಸಿದರು.
 
ಜೀವನದ ಉದ್ದೇಶ ಮೋಕ್ಷ ಪ್ರಾಪ್ತಿ. ಮೋಕ್ಷಕ್ಕೆ ಜ್ಞಾನ ಬೇಕು. ಜ್ಞಾನ ಸಿಗಲು ಸಮರ್ಪಕ ಗುರು ಮತ್ತು ದೇವರ ಆಶೀರ್ವಾದ ಬೇಕು ಎಂದು ಹಿರಿಯರಾದ ಪೂಜಾರಿ ನಾಗಣ್ಣ ವಿವರಿಸಿದರು.
 
ನಾಮಕರಣಗೊಂಡ ಬಿಬಿಎಂಪಿ ಸದಸ್ಯ ಜಯರಾಮು ಮಾತನಾಡಿ, ಜೀವನದಲ್ಲಿ ಮಾಡುವ ಒಳ್ಳೆಯ ಕಾರ್ಯಗಳೇ ನಾವು ಆನಂದದಿಂದ ಇರುವಂತೆ ಮಾಡುತ್ತದೆ ಎಂದರು.
 
ಶ್ರೀಪತಿಹಳ್ಳಿ ನರಸಿಂಹ ಮೂರ್ತಿ ಮಾತನಾಡಿದರು. ಪುಟ್ಟಸ್ವಾಮಿ, ಸುರೇಶ್‌, ಅನಂತ ಸ್ವಾಮಿ, ಹೋರಪ್ಪ, ಯಧುನಂದನ್‌, ಕಾಮಾಕ್ಷಿಪಾಳ್ಯದ ನರಸಿಂಹ ಮೂರ್ತಿ, ದೇವರಾಜು, ಅಮ್ಮನಹಟ್ಟಿ ಹರೀಶ್‌, ರಾಜಣ್ಣ ಹಾಗೂ ಬೆಂಗಳೂರಿನ ವಿವಿಧ ಗ್ರಾಮಸ್ಥರು ಭಾಗವಹಿಸಿದ್ದರು. 
 
ರಥಬೀದಿಯಲ್ಲಿ ಅಲಂಕೃತ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT