ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷರಿಲ್ಲದ ವಿಜಯಪುರ ಪುರಸಭೆ: ಅಭಿವೃದ್ಧಿ ಕುಂಠಿತ

ಸದಸ್ಯರ ಧೋರಣೆಗೆ ನಾಗರಿಕರ ಅಸಮಾಧಾನ
Last Updated 9 ಜನವರಿ 2017, 10:08 IST
ಅಕ್ಷರ ಗಾತ್ರ
ವಿಜಯಪುರ: ‘ಶತಮಾನೋತ್ಸವದ ಅಂಚಿನಲ್ಲಿರುವ ವಿಜಯಪುರ ಪುರಸಭೆಗೆ ಅಧ್ಯಕ್ಷರಿಲ್ಲದ ಕಾರಣ ಪಟ್ಟಣದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿರುವುದರ ಜೊತೆಗೆ  ಸದಸ್ಯರನ್ನು ಆಯ್ಕೆ ಮಾಡಿಕಳುಹಿಸಿದ ತಪ್ಪಿಗಾಗಿ ನಾಗರಿಕರು ಪಶ್ಚಾತ್ತಾಪ ಪಡುವಂತಾಗಿದೆ’ ಎಂದು ನಾಗರಿಕರು ಸದಸ್ಯರ ವರ್ತನೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
 
ದೇವನಹಳ್ಳಿ ತಾಲ್ಲೂಕು ಕೇಂದ್ರಕ್ಕಿಂತಲೂ ವಾಣಿಜ್ಯ ಪಟ್ಟಣವಾಗಿ ಬೆಳೆಯುತ್ತಿರುವ ವಿಜಯಪುರ ಪಟ್ಟಣ, ದೇವಾಲಯಗಳ ನಗರಿಯೆಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.  ಇಂತಹ ಹಿನ್ನೆಲೆಯಿದ್ದರೂ ಪಟ್ಟಣದ ಹಿರಿಯರು 99 ವರ್ಷಗಳ ಕಾಲ ಉಳಿಸಿಕೊಂಡು ಬಂದಿದ್ದ ಪಟ್ಟಣದ ಹಿರಿಮೆಗೆ ಕಳಂಕ ಬರುವ ರೀತಿಯಲ್ಲಿ ಅಭಿವೃದ್ಧಿಗಿಂತ ಅಧಿಕಾರಕ್ಕಾಗಿ ಪುರಸಭಾ ಸದಸ್ಯರು ನ್ಯಾಯಾಲಯದ ಮೊರೆಹೋಗಿ ಪುರಸಭೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಮೂಲಕ ಜನರು ಸದಸ್ಯರ ಮೇಲೆ ಇಟ್ಟಿದ್ದ ನಂಬಿಕೆಯನ್ನು ಮಣ್ಣುಪಾಲು ಮಾಡಿದ್ದಾರೆ ಎಂದು ಪಟ್ಟಣದ  ಮುಖಂಡ ಕನಕರಾಜು ಬೇಸರ ವ್ಯಕ್ತಪಡಿಸಿದ್ದಾರೆ.
 
ಪುರಸಭಾ ವ್ಯಾಪ್ತಿಯಲ್ಲಿ 23 ವಾರ್ಡುಗಳಿವೆ. 40 ಸಾವಿರ ಜನಸಂಖ್ಯೆ ಇದೆ. ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಕಸವಿಲೇವಾರಿ ಮಾಡಲಾಗದೆ ಎಲ್ಲೆಂದರಲ್ಲಿ ಕಸದರಾಶಿಗಳ ದರ್ಶನವಾಗುತ್ತಿದೆ. ಇದರಿಂದ ಜನರು ಪದೇ ಪದೇ ಅನಾರೋಗ್ಯಗಳಿಗೆ ತುತ್ತಾಗುತ್ತಿದ್ದಾರೆ. ಮುಂದಿನ ಬೇಸಿಗೆಯಲ್ಲಿ ಈ ಸಮಸ್ಯೆಗಳು ಮತ್ತಷ್ಟು ಗಂಭೀರಸ್ವರೂಪ ಪಡೆದುಕೊಳ್ಳಲಿವೆ. ಪುರಸಭೆಯ ಆಡಳಿತಾಧಿಕಾರಿ ಅಧಿಕಾರ ಸ್ವೀಕಾರ ಮಾಡಿಕೊಂಡಿರುವ ತಹಶೀಲ್ದಾರರು ತಾಲ್ಲೂಕು ಕೇಂದ್ರದಲ್ಲಿರುವುದರಿಂದ ಪದೇ ಪದೇ ಇಲ್ಲಿಗೆ ಬರಲು ಸಾಧ್ಯವಾಗುತ್ತಿಲ್ಲ.  ಪುರಸಭೆಯ ಅಧಿಕಾರಿಗಳು ತೆಗೆದುಕೊಂಡು ಹೋಗುವ ಕಡತಗಳನ್ನು ತಾಲ್ಲೂಕು ಕಚೇರಿಯಲ್ಲಿಯೆ ವಿಲೇವಾರಿ ಮಾಡುತ್ತಿದ್ದಾರೆ. ಪುರಸಭೆಯಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿಯಿಲ್ಲದೆ ಕಚೇರಿಯಲ್ಲಿರುವ ಡಿ.ದರ್ಜೆ ನೌಕರರನ್ನು ಬಳಕೆ ಮಾಡಿಕೊಂಡು ಕಚೇರಿಯ ಕೆಲಸ ಕಾರ್ಯಗಳನ್ನು ಮಾಡಿಸಬೇಕಾದಂತಹ ದುಸ್ಥಿತಿ ಒದಗಿಬಂದಿದೆ. 
 
ಪುರಸಭಾ ಸದಸ್ಯರೆಲ್ಲರನ್ನು ಸಂಸದರ ಬಳಿಗೆ ಕರೆದುಕೊಂಡು ಹೋಗಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇವೆ ಎಂದು ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ ಹೇಳುತ್ತಾರೆ.
 
ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಮಾರ್ಚ್ ತಿಂಗಳಿನಲ್ಲಿ ಪುರಸಭೆಗೆ ಶತಮಾನೋತ್ಸವ ಆಚರಣೆ ಮಾಡಲು ಶಾಸಕರು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವುದರ ಜೊತೆಗೆ ಸುಮಾರು ₹ 7.5 ಕೋಟಿ ಅನುದಾನವನ್ನು ಪಟ್ಟಣದ ಅಭಿವೃದ್ಧಿಗೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈ ಅನುದಾನ ಸದ್ಬಳಕೆ ಮಾಡಿಕೊಂಡು ಪಟ್ಟಣದ ಅಭಿವೃದ್ಧಿಗೆ ಗಮನಹರಿಸುವವರು ಯಾರು? ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವವರು ಯಾರು? ಪುರಸಭೆಗೆ ಅಗತ್ಯವಾಗಿರುವ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಒತ್ತಾಯ ಮಾಡುವವರು ಯಾರು?  ಎಂದು ನಾಗರಿಕರಾದ ಕೃಷ್ಣಪ್ಪ, ಅಶೋಕ್ ಕುಮಾರ್, ಎಸ್. ಮಂಜುನಾಥ್, ರಾಮಕೃಷ್ಣಪ್ಪ ಆಕ್ರೋಶ ವ್ಯಕ್ತಡಿಸಿದ್ದಾರೆ.
 
ಕೊನೆಯ ಅವಧಿಯ ಅಧ್ಯಕ್ಷಗಾದಿಗಾಗಿ ಮೀಸಲಾತಿ ಬದಲಾವಣೆ ಕೋರಿ ನ್ಯಾಯಾಲಯದ ಮೊರೆ ಹೋಗಿರುವ ಸದಸ್ಯರನ್ನು ಸಮಾಧಾನಪಡಿಸಲು ಸಂಸದ ಎಂ.ವೀರಪ್ಪಮೊಯಿಲಿ, ಹಾಗೂ ಕೃಷ್ಣಬೈರೇಗೌಡ ಅವರು ಆಸಕ್ತಿ ತೋರಿಸಿದ್ದರು. ಆದರೆ ನ್ಯಾಯಾಲಯದಲ್ಲಿನ ಅರ್ಜಿಯನ್ನು ಹಿಂತೆಗೆದುಕೊಂಡು ಬಂದ ನಂತರ ಮಾತುಕತೆ ನಡೆಸೋಣವೆಂದು ಒಂದು ಗುಂಪು, ಮೊದಲು ಮಾತುಕತೆಯಾಗಲಿ ನಂತರ ವಾಪಸ್‌ ಪಡೆದುಕೊಳ್ಳುತ್ತೇವೆ ಎಂದು ಮತ್ತೊಂದು ಗುಂಪಿನ ಸದಸ್ಯರು ಪಟ್ಟುಹಿಡಿದಿದ್ದಾರೆ.  ಹೀಗಾಗಿ ಸಂಧಾನದ ರೂಪದಲ್ಲಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲವೆಂದು ಸಚಿವರ ಆಪ್ತಮೂಲಗಳಿಂದ ತಿಳಿದುಬಂದಿದೆ. ನಾಯಕರು ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
 
***
ಪುರಸಭಾ ಸದಸ್ಯರ ಅಧಿಕಾರ ದಾಹಕ್ಕೆ ಜನರು ಬಲಿಯಾಗುತ್ತಿದ್ದಾರೆ. ಎಂತಹ ಸದಸ್ಯರನ್ನು ಆರಿಸಿದ್ದೇವೆ ಎಂದು ಧರ್ಮಸಂಕಟ ಪಡುತ್ತಿದ್ದೇವೆ
-ಎಂ. ನಾರಾಯಣಸ್ವಾಮಿ 
ಎಸ್.ಸಿ. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ
 
***
ಪಟ್ಟಣದಲ್ಲಿ ಅಭಿವೃದ್ಧಿಗೆ ಪೂರಕವಾಗಿ ಯಾವ ಕೆಲಸಗಳೂ ನಡೆಯುತ್ತಿಲ್ಲ. ನಾವು ಗೆದ್ದು ಜನರಿಗೆ ನ್ಯಾಯಕೊಡಲು ಆಗುತ್ತಿಲ್ಲ ಎನ್ನುವ ಬೇಸರ ಕಾಡುತ್ತಿದೆ
-ಮಹೇಶ್ ಕುಮಾರ್,ಪುರಸಭಾ ಸದಸ್ಯ
 
 
*
ಎಂ. ಮುನಿನಾರಾಯಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT