ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ವರಿತಗತಿಯ ನ್ಯಾಯದಾನಕ್ಕೆ ಆದ್ಯತೆ ನೀಡಿ

Last Updated 9 ಜನವರಿ 2017, 10:11 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಜನಸಾಮಾನ್ಯರಿಗಿಂತಲೂ ಹೆಚ್ಚಿನ ಸಂವಿಧಾನಾತ್ಮಕ ಶಕ್ತಿ ಹೊಂದಿರುವ ನ್ಯಾಯಾಧೀಶರು, ವಕೀಲರು ಅದನ್ನು ಸದ್ವಿನಿಯೋಗಪಡಿಸಿಕೊಂಡು ಶೀಘ್ರ ನ್ಯಾಯದಾನ ಮಾಡುವ ಮೂಲಕ ನ್ಯಾಯಾಂಗ ವ್ಯವಸ್ಥೆ ಬಲಪಡಿಸಬೇಕು’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ರಾಘವೆಂದ್ರ ಎಸ್.ಚೌಹಾಣ್ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ನ್ಯಾಯಾಲಯದ ಮೊದಲ ಮತ್ತು ಎರಡನೇ ಮಹಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಆಧುನಿಕ ಕಾಲಕ್ಕೆ ತಕ್ಕಂತೆ ವಕೀಲರು ಬದಲಾಗಬೇಕಿದೆ. ತಂತ್ರಜ್ಞಾನದ ಬಳಕೆ ಮಾಡಿಕೊಳ್ಳುವ ಮೂಲಕ ನ್ಯಾಯದಾನದಲ್ಲಿ ಚುರುಕು ತರಬೇಕಾಗಿದೆ. ಸದ್ಯ ಈ ನ್ಯಾಯಾಲಯದಲ್ಲಿ ಕಟ್ಟಡ ಕೊರತೆ ನೀಗಿದಂತಾಗಿದೆ. ಇನ್ನಾದರೂ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಕೆಲಸ ನಡೆಯಬೇಕು’ ಎಂದು ಹೇಳಿದರು.
‘ಉತ್ತಮ ಸಮಾಜ ರೂಪಿಸುವಲ್ಲಿ ವಕೀಲರ ಪಾತ್ರ ತುಂಬಾ ಮುಖ್ಯವಾಗಿದೆ. ಸತ್ಯ ಮತ್ತು ನ್ಯಾಯವನ್ನು ಎತ್ತಿ ಹಿಡಿಯುವ ದೊಡ್ಡ ಜವಾಬ್ದಾರಿ ಅವರ ಮೇಲಿದೆ. ಹೀಗಾಗಿ

ವಕೀಲರು ಹಿರಿಯರ ಮಾರ್ಗದರ್ಶನ ಪಡೆಯುವ ಜತೆಗೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಅದರಿಂದಾಗಿ ವೃತ್ತಿಗೆ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

ಹೈಕೋರ್ಟ್ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮಾತನಾಡಿ, ‘ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ಉಳಿದಿರುವ ವ್ಯಾಜ್ಯಗಳನ್ನು ಪ್ರಮಾಣ ನೋಡಿ ಜನ ನ್ಯಾಯಾಂಗ ಇಲಾಖೆಯನ್ನು ದೂರುತ್ತಾರೆ. ಒಂದೊಮ್ಮೆ ಇತ್ಯರ್ಥವಾಗುವ ವ್ಯಾಜ್ಯಗಳನ್ನು ಗಮನಿಸಿದರೆ ನ್ಯಾಯಾಲಯದ ಕ್ರಿಯಾಶೀಲತೆ ಅರಿವಿಗೆ ಬರುತ್ತದೆ. ಈ ನಿಟ್ಟಿನಲ್ಲಿ ವಕೀಲರ ಪಾತ್ರ ಮಹತ್ವದ್ದು. ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ನಾವೆಲ್ಲ ಅಪರಾಧ ಮುಕ್ತ ಸಮಾಜ ನಿರ್ಮಿಸುವ ಪಣ ತೊಡಬೇಕಿದೆ’ ಎಂದು ಹೇಳಿದರು.

‘ಆಡಳಿತಾತ್ಮಕ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕಾದರೆ ಅದಕ್ಕೆ ಮೂಲಭೂತ ಸೌಕರ್ಯಗಳು ಮುಖ್ಯವಾಗುತ್ತವೆ. ನ್ಯಾಯಾಲಯಕ್ಕೆ ಬರುವ ಜನರಿಗೆ ತ್ವರಿತವಾಗಿ ನ್ಯಾಯ ದೊರಕಿಸಿ ಕೊಡುವ ಮೂಲಕ ನ್ಯಾಯಾಂಗ ವ್ಯವಸ್ಥೆ ಮೇಲೆ ಜನಸಾಮಾನ್ಯರಿಗೆ ನಂಬಿಕೆ ಬರುವಂತೆ ಮಾಡಬೇಕಿದೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಮಾತನಾಡಿ, ‘ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮಾಜಕ್ಕೆ ಮೂರು ಆಧಾರ ಸ್ತಂಭಗಳು. ಈ ಮೂರು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತಾ, ಶಕ್ತಿಯುತವಾಗಿ ನಿಂತಾಗ ಮಾತ್ರ ಸಮಾಜ ಆರೋಗ್ಯವಂತ ಸಮಾಜ ಸಾಧ್ಯ’ ಎಂದರು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎ.ಎಸ್. ಬೆಳ್ಳುಂಕೆ,  ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ವಿ.ತುರಮುರಿ, ಹಿರಿಯ ಸಿವಿಲ್ ನ್ಯಾಯಾಧೀಶೆ ಶೋಭಾ, ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್,  ಡಿವೈಎಸ್‌ಪಿ ಕೃಷ್ಣಮೂರ್ತಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT