ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಯೇ ಪ್ರಯೋಗಾಲಯ

Last Updated 9 ಜನವರಿ 2017, 19:30 IST
ಅಕ್ಷರ ಗಾತ್ರ

‘ನೋಡ್ರಿ 12 ವರ್ಷ ಆಗೇತ್ರಿ. ಹೊಲಕ್ಕ ಸರ್ಕಾರಿ ಗೊಬ್ಬರ ಹಾಕಿಲ್ಲ. 12 ವರ್ಷದ ಹಿಂದ ಬರ ಬಂದಿತ್ತು. ಆಗ ಖರೀದಿಸಿದ್ದ ಗೊಬ್ಬರದಲ್ಲಿ 7–8 ಟನ್‌ ಹಾಗೆಯೇ ಉಳಿಯಿತು. ಖರ್ಚು ಮಾಡಿದ ಅರ್ಧದಷ್ಟು ಉತ್ಪನ್ನ ಸಿಗಲಿಲ್ಲ. ಅಂದೇ ಗಟ್ಟಿ ನಿರ್ಧಾರ ಮಾಡಿ ಗೊಬ್ಬರ ಹಾಕೋದನ್ನ ನಿಲ್ಲಿಸೇನ್ರಿ...’ –ಹೀಗೆಂದು ಮಾತಿಗಿಳಿದರು ರೈತ ಶಿವಲಿಂಗಪ್ಪ ಕಂಚಿಗಿಡದ.

ಸತತ ಬರದಿಂದ ಪಾಠ ಕಲಿತು ಕೃಷಿಯಲ್ಲಿ ತಾವೇ ನಡೆಸಿದ ಹತ್ತಾರು ಪ್ರಯೋಗಗಳ ಅನುಭವಗಳ ಬುತ್ತಿಯನ್ನು ಬಿಚ್ಚಿಟ್ಟರು. ನಷ್ಟ–ಲಾಭಗಳ ಲೆಕ್ಕಾಚಾರವನ್ನೂ ವಿಶ್ಲೇಷಿಸಿದರು.

ರಾಸಾಯನಿಕ ಗೊಬ್ಬರ ಹಾಕುವುದನ್ನು ಸ್ಥಗಿತಗೊಳಿಸಿದಾಗ ಆರಂಭದಲ್ಲಿ ಹಿನ್ನಡೆಯಾಯಿತು. 3–4 ವರ್ಷಗಳ ಕಾಲ ಸರಿಯಾಗಿ ಬೆಳೆಯೇ ಬರಲಿಲ್ಲ. ಆದರೆ, ಎದೆಗುಂದಲಿಲ್ಲ.

ಯಾರ ಮಾರ್ಗದರ್ಶನವಿಲ್ಲದೆ ಸ್ವತಃ ವಿಭಿನ್ನ ಪ್ರಯೋಗಗಳನ್ನು ಕೈಗೊಂಡರು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಗರಜೂರ ಗ್ರಾಮದ ಶಿವಲಿಂಗಪ್ಪ ಅವರಿಗೆ ಭೂಮಿಯೇ ಪ್ರಯೋಗಾಲಯವಾಯಿತು. ಮೊದಲು ಮಣ್ಣಿನ ಫಲವತ್ತತೆ ಹೆಚ್ಚಿಸಲು ಗಮನಹರಿಸಿದರು.

ಜಮೀನಿನ ಸಮೀಪದಲ್ಲೇ ದೊಡ್ಡ ಕಂದಕ ತೋಡಿ ದಿನನಿತ್ಯದ ತ್ಯಾಜ್ಯ, ಸೆಗಣಿ, ಕೆರೆ–ನದಿ–ಹಳ್ಳಗಳಲ್ಲಿ ದೊರೆಯುವ ಮಣ್ಣು, ಕಚ್ಚಾ ಹುಲ್ಲು, ರವದಿ, ಗಂಜಲ ಹಾಗೂ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆದ ನಂತರ  ದೊರೆಯುವ ಉಪಉತ್ಪನ್ನ ಪ್ರೆಸ್‌ಮೆಡ್ (ಗೊಬ್ಬರ) ಹಾಕಿ ಮಿಶ್ರಣವಾಗುವಂತೆ ಮಾಡಿದರು.

ಕೆಲ ದಿನಗಳ ಬಳಿಕ  ಒಂದು ಎಕರೆಗೆ 5 ಟ್ರ್ಯಾಕ್ಟರ್‌ ಲೋಡ್ ಪ್ರಮಾಣದಷ್ಟು ಈ ಮಿಶ್ರಣವನ್ನು ಹಾಕಿದರು. ಇದರಿಂದ ಮಣ್ಣು ಜಿಗುಟಾಯಿತು. ಜತೆಗೆ ಪೋಷಕಾಂಶಗಳ ಕೊರತೆಯೂ ನೀಗಲು ಸಹಕಾರಿಯಾಯಿತು ಮತ್ತು ಬೆಳೆಗಳ ರೋಗನಿರೋಧಕ ಶಕ್ತಿಯೂ ಹೆಚ್ಚಲು ಸಹಕಾರಿಯಾಯಿತು. ಇವರ ಜಮೀನಿನಲ್ಲಿನ ಬೆಳೆಗಳಿಗೆ ರೋಗ ಬರುವುದೇ ಅತಿ ವಿರಳವಾಗಿರುವುದು ಇದಕ್ಕೆ ಸಾಕ್ಷಿ.

‘ಈ ಬಾರಿ ಹಲವು ಕಡೆ ಕಬ್ಬು ಬೆಳೆಗೆ ರೋಗ ಬಂದಿತ್ತು. ಆದರೆ, ನಮ್ಮ ಹೊಲದಲ್ಲಿ ಈ ರೋಗ ಕಾಣಿಸಲಿಲ್ಲ’ ಎನ್ನುತ್ತಾರೆ ಶಿವಲಿಂಗಪ್ಪ ಅವರ ಮಗ ಸುರೇಶ್‌.ರಾಸಾಯನಿಕಗಳನ್ನು ಕೈಬಿಟ್ಟು ಮಣ್ಣಿನ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಿದ್ದರಿಂದ ಭೂಮಿಯಲ್ಲಿ ತೇವಾಂಶವೂ ಹೆಚ್ಚುತ್ತಿದೆ. ಇದರಿಂದ ನೀರಿನ ಬಳಕೆಯ ಪ್ರಮಾಣದಲ್ಲೂ ಕಡಿಮೆಯಾಗಿದೆ.

ನೀರು ಸಂಗ್ರಹಕ್ಕಾಗಿ ಜಮೀನಿನಲ್ಲಿ 8 ಅಡಿ ಆಳ ಮತ್ತು 60 ಅಡಿ ಅಗಲದ ದೊಡ್ಡ ಹೊಂಡವನ್ನು ಸುಮಾರು 20 ಗುಂಟೆ ಪ್ರದೇಶದಲ್ಲಿ ನಿರ್ಮಿಸಿದ್ದಾರೆ. ಮಳೆ ನೀರಿನ ಜತೆಗೆ ಸಮೀಪದಲ್ಲೇ ಇರುವ ನದಿ ಹಾಗೂ ಕೊಳವೆಬಾವಿಗಳಿಂದ ನೀರು ಪಡೆದು ಅಗತ್ಯವಿದ್ದಷ್ಟು ಬೆಳೆಗಳಿಗೆ ನೀರು ಹಾಯಿಸುತ್ತಾರೆ. ಕೊಳವೆಬಾವಿಗಳಿಗೂ ಸೌರಶಕ್ತಿ ಅಳವಡಿಸಿದ್ದಾರೆ. ಇದರಿಂದ, ಬೆಳೆಗಳಿಗೆ ನೀರು ಹಾಯಿಸಲು ವಿದ್ಯುತ್‌ ಮೇಲೆ ಅವಲಂಬಿತರಾಗಿಲ್ಲ.

‘ಕಬ್ಬು ಬೆಳೆಯಲ್ಲಿ ಅಂತರ ಕಾಪಾಡುವುದು ಮುಖ್ಯ. ಎರಡು ಸಾಲುಗಳ ನಡುವೆ ಕನಿಷ್ಠ 3 ಅಡಿ ಅಂತರ ಇರಬೇಕು. ಈ ಸಾಲುಗಳ ನಡುವೆ ಬೇರೆ ಬೇರೆ ಬೆಳೆಗಳನ್ನು ಸಹ ಬೆಳೆಯಬಹುದು. ಈ ಬಾರಿ ನಾವು ಸೆಣಬು ಬೆಳೆಯುತ್ತೇವೆ. ಹೀಗಾಗಿಯೇ ನಮ್ಮ ಜಮೀನಿನಲ್ಲಿ ಒಂದು ಎಕರೆಗೆ 50 ಟನ್‌ ಇಳುವರಿ ದೊರೆಯುತ್ತಿದೆ. ಕಬ್ಬು ಕಟಾವು ಆದ ನಂತರ ರವದಿಯನ್ನು ಸಹ ಸುಡುವುದಿಲ್ಲ. ಅದನ್ನು ಗದ್ದೆಯಲ್ಲೇ ಕೊಳೆಯಲು ಬಿಡುತ್ತೇವೆ’ ಎಂದು ಸುರೇಶ್‌ ವಿವರಿಸಿದರು. ಇನ್ನು ಒಂದೇ ಬೆಳೆಗೆ ಇವರು ಜೋತುಬಿದ್ದಿಲ್ಲ.

ನಿರಂತರವಾಗಿ ಬೆಳೆಗಳನ್ನು ಬದಲಾಯಿಸುತ್ತಿದ್ದಾರೆ. ಮೆಕ್ಕೆಜೋಳ, ಕಬ್ಬು, ಹತ್ತಿ, ಕಡಲೆ, ಭತ್ತ, ಗೋಧಿ, ಸೋಯಾಬೀನ್‌ ಮುಂತಾದ ವೈವಿಧ್ಯದಿಂದ ಕೂಡಿದ ಬೆಳೆಗಳಿಂದ ಇಳುವರಿಯಲ್ಲೂ ಹೆಚ್ಚಳವಾಗಿದೆ.

ಈ ರೀತಿಯ ಪ್ರಯೋಗಗಳು ಉತ್ತಮ ಫಲ ನೀಡಿವೆ. ಈ ಬಾರಿ ಒಂದು ಎಕರೆ ಪ್ರದೇಶದಲ್ಲಿ ಬೆಳೆದ ಸೋಯಾಬೀನ್‌ನಿಂದ 10 ಕ್ವಿಂಟಲ್‌ ಇಳುವರಿ ದೊರೆತಿದೆ. ಇನ್ನು ಕೃಷಿ ಚಟುವಟಿಕೆಗಾಗಿ ಅತ್ಯಾಧುನಿಕ ವಿವಿಧ ಯಂತ್ರಗಳನ್ನು ಬಳಸುತ್ತಿದ್ದಾರೆ. ಈ ಮೂಲಕ ಕೂಲಿಕಾರ್ಮಿಕರ ಮೇಲೆ ಅವಲಂಬನೆ ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆಧುನಿಕತೆ ಮತ್ತು ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಮೇಳೈಸುವ ಮೂಲಕ ಪ್ರಗತಿ ಪಥದಲ್ಲಿ ಶಿವಲಿಂಗಪ್ಪ ಸಾಗುತ್ತಿದ್ದಾರೆ. ಸಂಪರ್ಕಕ್ಕೆ ಮೊಬೈಲ್‌ ದೂರವಾಣಿ ಸಂಖ್ಯೆ: 8747049412, 9448230572

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT