ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿ ನೀರಲ್ಲಿ ಕ್ರಾಂತಿ

Last Updated 9 ಜನವರಿ 2017, 19:30 IST
ಅಕ್ಷರ ಗಾತ್ರ

ಇವರ ಹೆಸರು ವಿಜಯ ಕುಲಕರ್ಣಿ.  ನವಲಗುಂದ ತಾಲ್ಲೂಕಿನ ನಾಯ್ಕನೂರ ಗ್ರಾಮದಲ್ಲಿ ಇವರದ್ದು ಸುಮಾರು 150 ಎಕರೆ ಜಮೀನು ಇದೆ. ಮೇಲಿಂದ ಮೇಲೆ ತಲೆದೋರುತ್ತಿರುವ ಅತಿವೃಷ್ಟಿ, ಅನಾವೃಷ್ಟಿಯಿಂದ ಬೇರೆ ರೈತರ ಹಾಗೆ ಇವರೂ ಚಿಂತೆಗೆ ಒಳಗಾಗಿದ್ದರು.

ಹೊಲದ ಪಕ್ಕದಲ್ಲಿಯೇ ಹಾದು ಹೋಗಿದ್ದ ಹಂದಿಗನಹಳ್ಳದ ಬಳಿ ರೊಟ್ಟಿ ಬೋರ್‌ವೆಲ್‌ (ಯಂತ್ರದ ಸಹಾಯವಿಲ್ಲದೇ ರೊಟ್ಟಿ ಆಕಾರದಲ್ಲಿ ತೆಗೆಯುವ ಕೊಳವೆ ಬಾವಿ)  ಕೊರೆದರೆ ನೀರು ಸಿಗಬಹುದೆಂದು ಹಿರಿಯರೊಬ್ಬರು ಸಲಹೆ ನೀಡಿದರು. ಅದರಂತೆ ಕೊಳವೆಬಾವಿಯನ್ನೂ ತೆರೆಸಿದರು. ಆದರೆ ಅದರಲ್ಲಿ ನೀರು ಮಾತ್ರ ಬರಲಿಲ್ಲ.

ಮತ್ತೊಬ್ಬರು ಮತ್ತೊಂದು, ಮಗದೊಂದು ಸಲಹೆ ನೀಡಿದರು. ಅದರಂತೆ ವಿಜಯ ಅವರು ಬೋರ್‌ವೆಲ್‌ ಕೊರೆಸುತ್ತಲೇ ಹೋದರು. ನಾಲ್ಕೈದು ಬೋರ್ ಕೊರೆದರೂ ನೀರು ಸಿಗಲಿಲ್ಲ. ಹೀಗೆ ಎಲ್ಲೆಂದರಲ್ಲಿ ಕೊಳವೆಬಾವಿ ಕೊರೆಸಿದ್ದರಿಂದ ತಂದೆಯವರಿಂದ ಬೈಗುಳವನ್ನೂ ಕೇಳಬೇಕಾಯಿತು. ತಂದೆಯ ಮಾತನ್ನೂ ಲೆಕ್ಕಿಸದೇ ಬೋರ್‌ವೆಲ್‌ ಕೊರೆಸುವುದು ಹೆಚ್ಚಾಯಿತೇ ವಿನಾ ನೀರು ಮಾತ್ರ ಶೂನ್ಯ!

ಕೊನೆಗೆ ಇವರ ಸಹಾಯಕ್ಕೆ ನಿಂತವರು ಇವರ ಸಹೋದರರಾದ ಸಚಿವ ವಿನಯ ಕುಲಕರ್ಣಿ. ಜಮೀನನ್ನು ಸರಿಯಾಗಿ ಪರಿಶೀಲಿಸಿ ಕೊನೆಯ ಪ್ರಯತ್ನವಾಗಿ ಒಂದು ಕಡೆ ರೊಟ್ಟಿ ಬೋರ್‌ವೆಲ್‌ ಕೊರೆಸಿದಾಗ 3.5 ಇಂಚು ನೀರು ಸಿಕ್ಕೇ ಬಿಟ್ಟಿತು! ಗದ್ದೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಂದ ಹಿಡಿದು ಎಲ್ಲರ ಕಣ್ಣಲ್ಲೂ ಆನಂದಭಾಷ್ಪ. ಇದರಿಂದ ಅವರ ತಂದೆಯವರಿಗೆ ಖುಷಿಯಾದರೂ, ‘ಏನು ಮಾಡುತ್ತೀಯೋ ಮಾಡು, ಮನೆ ಹಾಳು ಮಾತ್ರ ಮಾಡಬೇಡ. ಈ ವರ್ಷ ನಿನಗೆ ಐದು ಎಕರೆ ಜಮೀನು ಮಾತ್ರ ಕೊಡುತ್ತೇನೆ. ಅದರಲ್ಲೇ ಏನಾದರೂ ಮಾಡಿಕೋ’ ಎಂದು ಹೇಳಿ ಹೋದರು.

ಒಂದೆಡೆ ಐದು ಎಕರೆ ಜಮೀನು. ಸಿಕ್ಕಿದ್ದು ಮೂರೂವರೆ ಇಂಚು ನೀರು. ಇನ್ನೊಂದೆಡೆ ತಂದೆಯ ಅಸಮಾಧಾನ. ಇಂಥ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ತೋಚದ ವಿಜಯ ಅವರಿಗೆ, ಏನಾದರೊಂದು ಸಾಧನೆ ಮಾಡಲೇಬೇಕು ಎಂಬ ಛಲ ಬಂತು. ಅದರಲ್ಲಿ ಕಬ್ಬು ಬೆಳೆಯುವ ನಿರ್ಧಾರಕ್ಕೆ ಬಂದರು. ಅದಕ್ಕಾಗಿ  ಮೊದಲು ಐದು ಎಕರೆ ಜಮೀನನ್ನು ಹದಗೊಳಿಸಿ ಬಿತ್ತನೆಗೆ ತಯಾರಿ ಮಾಡಿಕೊಂಡರು.

ವಿಜಯ ಅವರು ಈ ಜಮೀನಿನಲ್ಲಿ ಕಬ್ಬು ಬೆಳೆಯುತ್ತಿದ್ದಾರೆ ಎಂದಾಗ ಬಹಳ ಮಂದಿ ಅವರನ್ನು ‘ಹುಚ್ಚ’ ಎಂದೇ ಅಂದುಕೊಂಡರು. ಏಕೆಂದರೆ ಅದು ಮಸಾರಿ ಜಮೀನು (ಕೆಂಪುಮಣ್ಣಿನ ಕಡಿಮೆ ಫಲವತ್ತತೆಯ ಭೂಮಿ). ಅಂಥ ಜಮೀನಿನಲ್ಲಿ ಕಬ್ಬು ಬೆಳೆ ಅಸಾಧ್ಯ ಎಂದೇ ಎನ್ನಲಾಗುತ್ತದೆ. ‘ಸಣ್ಣ ಧಣಿಯಾರು ಕಬ್ಬು ಬೆಳಿತಾರಂತರ್ರಿ...’ ಎಂದು ಕೂಲಿಕಾರ್ಮಿಕರು ಅಚ್ಚರಿಯಿಂದ ಬೇರೆಯವರ ಬಳಿ ಹೇಳಿದಾಗ ಅವರೆಲ್ಲಾ, ‘ಈ ಭಾಗದಾಗ ಯಾರಾದರೂ ಕಬ್ಬು ಬೆಳೆದಿದ್ದನ್ನ ನೋಡಿರೇನಪಾ ನೀವು, ಅವನಿಗೆ ಹುಚ್ಚ ಹಿಡದೇತನೋ ನೋಡ್ರಪಾ, ಕಬ್ಬು ಬೇಡಾ, ಬೇರೆ ಏನಾದರೂ ಬೆಳ್ಯಾಕೆ ಹೇಳ್ರಪ್ಪ...’ ಎಂದು ಉಚಿತ ಸಲಹೆ ನೀಡಿ ಹೋದರು.

ತಂದೆಯಾದಿಯಾಗಿ ಕೆಲವರು ತಮ್ಮ ಬೆಂಬಲಕ್ಕೆ ನಿಲ್ಲಲಿಲ್ಲ ಎಂಬ ಕೊರಗಿನ ಮಧ್ಯೆಯೇ, ವಿಜಯ ಅವರು ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿದರು. ಅಲ್ಲಿ ಕಬ್ಬು ಬೆಳೆಯಬಹುದು ಎಂದು ತಜ್ಞರು ಸಲಹೆ ಇತ್ತರು. ಅದನ್ನೇ ನಂಬಿಕೊಂಡ ವಿಜಯ ಅವರು ಆದದ್ದಾಗಲಿ ಎಂದು  ಯಾರಿಗೂ ತಿಳಿಯದಂತೆ ಕಬ್ಬಿನ ನಾಟಿ ಶುರು ಮಾಡಿದರು.

ತಾವು ತೆರೆದ ರೊಟ್ಟಿ ಬೋರ್‌ವೆಲ್‌ ಮೂಲಕ ನೀರು ಹಾಯಿಸಿದರು. ಅಷ್ಟೇ... ಆರಂಭದ ವರ್ಷದಲ್ಲಿಯೇ ಬಂಪರ್ ಬೆಳೆ ಬಂದು 10 ಲಕ್ಷ ರೂಪಾಯಿ ಆದಾಯ ಗಿಟ್ಟಿಸಿಕೊಂಡರು! ಆದರೆ ಇವರ ಜೊತೆಗೇ ಸುಮಾರು 140 ಎಕರೆ ಜಮೀನಿನಲ್ಲಿ ಬೇರೆ ಬೇರೆ ಬೆಳೆ ಹಾಕಿದ್ದ ಅವರ ತಂದೆಯವರು ಮಾತ್ರ ಬರಗಾಲದಿಂದಾಗಿ ಸ್ವಲ್ಪವೂ ಆದಾಯ ಪಡೆಯಲಿಲ್ಲ.

ಆಳುಗಳ ಮೂಲಕ ಮಗನ ಸಾಧನೆ ಬಗ್ಗೆ ಕೇಳಿದ ತಂದೆಯವರು ಆಶ್ಚರ್ಯಚಕಿತರಾಗಿದ್ದು ಮಾತ್ರವಲ್ಲದೇ ಪ್ರತಿ ವರ್ಷ 10–20 ಎಕರೆ ಜಮೀನನ್ನು ಮಗನಿಗೇ ಕೊಡುತ್ತಾ ಸಂಪೂರ್ಣ ಜವಾಬ್ದಾರಿ ವಹಿಸಿಕೊಟ್ಟಿದ್ದಾರೆ! ಪ್ರತಿ ವರ್ಷವೂ ವಿಜಯ  ಅವರು ಒಂದೊಂದು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಾ ಲಾಭದ ಹಾದಿಯಲ್ಲಿದ್ದಾರೆ. ಏಳು ಕೆರೆಗಳನ್ನು ನಿರ್ಮಿಸಿ ನೀರು ಸಂಗ್ರಹಣೆ ಮಾಡಿಕೊಂಡಿದ್ದಾರೆ. 150 ಎಕರೆ ಜಮೀನಿನಲ್ಲಿಯೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.

‘ಸ್ಯಾಂಡ್ ಫಿಲ್ಟರ್’ ತಂತ್ರಜ್ಞಾನ ಅಳವಡಿಸಿಕೊಂಡಿರುವ ಅವರು ‘ಡೋಸಿಂಗ್ ಪಂಪ್’ ಮೂಲಕ ಒಂದು ತಾಸಿಗೆ 25 ಎಕರೆಗೆ ನೀರು ಉಣಿಸುತ್ತಿದ್ದಾರೆ. ಅದೇ ನೀರಿನ ಮೂಲಕವೇ ಗೊಬ್ಬರ ಕೊಡುತ್ತಿರುವುದರಿಂದ ಬೇರುಗಳಿಗೆ ನೇರವಾಗಿ ಇಂಜೆಕ್ಷನ್ ಕೊಟ್ಟಂತಾಗಿ ಹೆಚ್ಚಿನ ಇಳುವರಿ ಬರುವಂತಾಗಿದೆ. 150 ಎಕರೆ ಜಮೀನಿಗೆ ಕೇವಲ ಆರು ಜನ ಕೃಷಿ ಕೂಲಿ ಕಾರ್ಮಿಕರು ಮಾತ್ರ ಕೆಲಸ ನಿರ್ವಹಿಸುವುದರಿಂದ ಖರ್ಚು ಕಡಿಮೆಯಾಗಿದೆ ಎಂದು ಹೇಳುತ್ತಾರೆ.

100 ಎಕರೆ ಪ್ರದೇಶದಲ್ಲಿ ಕಬ್ಬು ನಾಟಿ ಮಾಡಿರುವ ಅವರು ಎಕರೆಗೆ 80 ಟನ್ ಬೆಳೆಯುತ್ತಿದ್ದಾರೆ. ಇದರಿಂದ ಸಾಕಷ್ಟು ಆದಾಯ ಬಂದಿದೆ. ನೀರು ಹೆಚ್ಚಾಗುತ್ತಿದ್ದಂತೆಯೇ ಮಿಶ್ರ ಬೇಸಾಯ ಪದ್ಧತಿಯನ್ನೂ ಅಳವಡಿಸಿಕೊಂಡು ಅವರು ಕಡಲೆ, ಜೋಳ, ಶೇಂಗಾ, ಹೆಸರು ಬಿತ್ತನೆ ಮಾಡಿದ್ದಾರೆ.

‘ಭೂಮಿ ಫಲವತ್ತತೆ ಹಾಳಾಗಬಾರದೆಂದು ಪ್ರತಿ ಮೂರು ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸುವೆ. ಬಾಗಲಕೋಟಿ ಜಿಲ್ಲೆಯ ಮಹಾಲಿಂಗಪುರದಲ್ಲಿರುವ ಮಣ್ಣು ಪರೀಕ್ಷಾ ಕೇಂದ್ರದಿಂದ ಮಣ್ಣು ತಂದು ಮಿಶ್ರಣ ಮಾಡಿ ಭೂಮಿ ಜವಳಾಗುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದೇನೆ’ ಎನ್ನುತ್ತಾರೆ.

ಬರದಲ್ಲೂ ಬಂಪರ್ ಮೆಣಸು: ಈ ವರ್ಷ 30 ಎಕರೆ ಪ್ರದೇಶದಲ್ಲಿ ಸಿಸಂಟ್ ಹಾಗೂ ಸರ್ಪನ್ ಎಂಬ ಹೊಸ ತಳಿಯ ಮೆಣಸಿನಕಾಯಿ ಬಿತ್ತನೆ ಮಾಡಿರುವ ಅವರಿಗೆ ಎಕರೆಗೆ 10 ಕ್ವಿಂಟಲ್ ಇಳುವರಿ ಬಂದಿದೆ. ಇವರ ಗುಣಮಟ್ಟದ ಮೆಣಸಿನಕಾಯಿ ಬೆಳೆಗೆ ಕ್ವಿಂಟಲ್‌ಗೆ ಈಗಿರುವ ದರ ₹18 ಸಾವಿರ.

ಇದರ ಜೊತೆ ಕುರಿ ಸಾಕಾಣಿಕೆಗೂ ಮುಂದಾಗಿದ್ದು, ವಿದೇಶಿ ತಂತ್ರಜ್ಞಾನದ ಸ್ಥಾವರ ನಿರ್ಮಿಸುತ್ತಿದ್ದಾರೆ. ಈ ತಂತ್ರಜ್ಞಾನದಲ್ಲಿ ಕುರಿಗಳನ್ನು ಮೇಯಿಸಲು ಹೊರಗಡೆಗೆ ಕಳುಹಿಸುವ ಅವಶ್ಯಕತೆಯಿಲ್ಲ. ಸ್ಟಾಲ್ ಫೀಡಿಂಗ್ (ಒಂದೇ ಕೊಟ್ಟಿಗೆಯಲ್ಲಿ ಆಹಾರ ಕೊಡುವುದು) ಪದ್ಧತಿ ಅಳವಡಿಸಿಕೊಂಡು ಸಾಕಾಣಿಕೆ ಮಾಡಲು ಯೋಜನೆ ರೂಪಿಸಿದ್ದಾರೆ.

ಸದ್ಯ ಅವರ ಬಳಿ ಈಗ ವಿವಿಧ ಜಾತಿಯ ಸುಮಾರು 700 ಕುರಿಗಳಿದ್ದು ತಾಲ್ಲೂಕಿನಲ್ಲಿಯೇ ಅತ್ಯಂತ ಹೆಚ್ಚಿನ ಕುರಿ ಹೊಂದಿರುವ ಕುರಿಗಾರ ಎಂದರೆ ತಪ್ಪಾಗಲಾರದು.ಈ ವರ್ಷ ಬರಗಾಲದಿಂದಾಗಿ ಮೇವಿನ ಕೊರತೆ ಕಂಡುಬಂದ ಕಾರಣ ನಾಯ್ಕನೂರ ಗ್ರಾಮದ ಸುತ್ತಮುತ್ತಲಿನ ರೈತರು ಇವರ ಹೊಲದಲ್ಲಿ ಕಟಾವು ಮಾಡುತ್ತಿರುವ ಕಬ್ಬಿನ ಸ್ವಾಗಿಯನ್ನು ತೆಗೆದುಕೊಂಡು ಹೈನುಗಾರಿಕೆ ಉಳಿಸಿಕೊಂಡಿದ್ದಾರೆ. ಇವರ ಸಂಪರ್ಕ ಸಂಖ್ಯೆ 9845501676.

***
ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಜಲಮೂಲ ಪತ್ತೆ ಹಚ್ಚಿ, ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಿ ಕೃಷಿ ಚಟುವಟಿಕೆ ಮಾಡಿದರೆ ಬರಗಾಲದಲ್ಲೂ ಬಂಗಾರದ ಬೆಳೆ ಬೆಳೆಯಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT