ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

64 ಮಂದಿಯ ಮಾದರಿ ಕುಟುಂಬ

Last Updated 9 ಜನವರಿ 2017, 19:30 IST
ಅಕ್ಷರ ಗಾತ್ರ

ಗಂಡ–ಹೆಂಡತಿ ಜೊತೆಗೆ ಅತ್ತೆ ಮಾವ ಇದ್ದರೆ ಅದೇ ಅವಿಭಕ್ತ ಕುಟುಂಬ ಎನ್ನುವಷ್ಟರ ಮಟ್ಟಿಗೆ ಇಂದಿನ ಸ್ಥಿತಿ ಇದೆ. ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೇ ಗ್ರಾಮೀಣ ಪ್ರದೇಶಗಳಲ್ಲೂ ಇಂಥದ್ದೇ ಪರಿಸ್ಥಿತಿ. ಇದರ ನಡುವೆ ಒಂದೇ ಮನೆಯಲ್ಲಿ 64 ಜನ ಸದಸ್ಯರು ಒಟ್ಟಾಗಿ ವಾಸಿಸುತ್ತಿದ್ದಾರೆ ಎಂದರೆ ಅಚ್ಚರಿಪಡಲೇಬೇಕು.

ಅಂಥ ಆಶ್ಚರ್ಯ ಹುಟ್ಟಿಸುವ ಕುಟುಂಬ ಇರುವುದು ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಹಳಗುಣಕಿ ಗ್ರಾಮದ ಕುಂಬಾರರ ಮನೆಯಲ್ಲಿ. ಹಾಜಪ್ಪ ಕುಂಬಾರ ಈ ಅವಿಭಕ್ತ ಕುಟುಂಬದ ಮೂಲ ಪುರುಷರು.

ಇವರು ಕುಂಬಾರ ರಾಮಚಂದ್ರ– ಸಿದ್ದವ್ವ ದಂಪತಿಯ ಮೂವರು ಮಕ್ಕಳಲ್ಲಿ ಮಧ್ಯದವರಾಗಿದ್ದರು. ಹಾಜಪ್ಪ ಹಾಗೂ ರೇವಮ್ಮ ದಂಪತಿಗೆ ಗುರುಶಾಂತಪ್ಪ, ಮಹಾದೇವ, ಬಸವಾನಂದ, ಶಿವಾನಂದ, ಸಿದ್ದರಾಯ, ಪರಮಾನಂದ ಆರು ಗಂಡು ಮಕ್ಕಳು ಹಾಗೂ ಸಿದ್ದವ್ವ, ಸರೋಜಿನಿ, ಶಾಂತಾಬಾಯಿ ಹಾಗೂ ರುಕುಮಾಬಾಯಿ ಎಂಬ ನಾಲ್ಕು ಹೆಣ್ಣು ಮಕ್ಕಳು ಸೇರಿ ಒಟ್ಟು 10 ಜನ ಮಕ್ಕಳು.

ಸದ್ಯ, ಹಾಜಪ್ಪ ದಂಪತಿ ಮತ್ತು ಅವರ ದೊಡ್ಡ ಮಗ ಗುರುಶಾಂತಪ್ಪ ಇಲ್ಲ. ಗಂಡು ಮಕ್ಕಳ ಪತ್ನಿಯರು, ಮಕ್ಕಳು, ಮೊಮ್ಮಕ್ಕಳು ಎಲ್ಲ ಸೇರಿ 64 ಜನ ಸದಸ್ಯರಿದ್ದಾರೆ. ಹೆಣ್ಣುಮಕ್ಕಳ ಗಂಡ ಹಾಗೂ ಮಕ್ಕಳನ್ನು ಸೇರಿಸಿದರೆ ಈ ಕುಟುಂಬ ಸದಸ್ಯರ ಸಂಖ್ಯೆ 130 ದಾಟುತ್ತದೆ.

50 ವರ್ಷಗಳಿಂದ ಈ ಸಂಸಾರ, ಹೊಲದಲ್ಲಿಯೇ ಮನೆ ಕಟ್ಟಿಕೊಂಡು ಒಗ್ಗಟ್ಟಿನಿಂದ ಜೀವನ ನಡೆಸುತ್ತಿದೆ. ಮನೆಯಲ್ಲಿ 25 ಬೃಹತ್ ಕೋಣೆಗಳಿವೆ. ಈ ಕುಟುಂಬದಲ್ಲಿ ಹಿರಿಯರೇ ಪೊಲೀಸರು, ಅವರೇ ಕೋರ್ಟ್‌ ಕೂಡ! ಏಕೆಂದರೆ ಮನೆಯಲ್ಲಿ ಏನೇ ಕಲಹ ಬಂದರೂ ಹಿರಿಯರೇ ಪರಿಹರಿಸುತ್ತಾರೆ. ಹಿಂದೆ 25 ಎಕರೆ ಮಾತ್ರ ಇದ್ದ ಜಮೀನು ಇದೀಗ 100 ಎಕರೆ ಆಗಿದೆ, ಇದರಲ್ಲಿ ಸುಮಾರು 70 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯೇ ಪ್ರಧಾನ ಕೃಷಿ.

ದ್ರಾಕ್ಷಿ ಬೆಳೆಗೆ ನೀರು ಹೊಂದಿಸಿಕೊಳ್ಳಲು ಇವರು ಸರ್ಕಾರದ ನೆರವಿಲ್ಲದೇ ದೊಡ್ಡ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. 100 ಎಕರೆ ಜಮೀನು 10 ಕಡೆ ಹಂಚಿ ಹೋಗಿದೆ.ಆದರೆ ಒಂದು ಜಮೀನಿನಲ್ಲಿ ನಿರ್ಮಿಸಿರುವ ದೊಡ್ಡ ಕೃಷಿ ಹೊಂಡದಿಂದಲೇ ಎಲ್ಲ ಜಮೀನಿಗೂ ಪೈಪ್‌ಲೈನ್ ಸಂಪರ್ಕ ಕಲ್ಪಿಸಿಕೊಂಡು ನೀರು ಹರಿಸಲಾಗುತ್ತದೆ. 3 ಟ್ರ್ಯಾಕ್ಟರ್, 4 ದ್ವಿಚಕ್ರ ವಾಹನ ಹೊಂದಿರುವ ಈ ಕುಟುಂಬ ಒಣ ದ್ರಾಕ್ಷಿ ಮಾಡುವ ಘಟಕಗಳನ್ನು ತೋಟದಲ್ಲಿಯೇ ಮಾಡಿಕೊಂಡಿದೆ. ಒಬ್ಬ ಕಾರ್ಮಿಕನನ್ನು ನೇಮಿಸಿಕೊಳ್ಳಲಾಗಿದೆ. ದಿನವಿಡೀ ಕೃಷಿಯಲ್ಲಿ  ತೊಡಗಿ ರಾತ್ರಿ ಊಟದ ಸಮಯದಲ್ಲಿ ಒಟ್ಟಾಗಿ  ಸೇರುತ್ತಾರೆ.

ಜೋಳ, ತೊಗರಿ, ಕಡಲೆ, ಶೇಂಗಾ ಹೀಗೆ ಕುಟುಂಬಕ್ಕೆ ಬೇಕಾಗುವಷ್ಟು ಆಹಾರ ಧಾನ್ಯಗಳನ್ನು ಜಮೀನಿನಲ್ಲಿಯೇ ಬೆಳೆಯಲಾಗುತ್ತದೆ. ಆದರೂ ಅಡುಗೆ ಎಣ್ಣೆ ಸೇರಿ ಇತರೆ ವಸ್ತುಗಳ ಖರೀದಿಗೆ ಮಾಸಿಕ 50 ಸಾವಿರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಕುಟುಂಬದ ಒಟ್ಟು ಒಂದು ವರ್ಷದ ಆದಾಯ ಸರಿಸುಮಾರು 60 ಲಕ್ಷ ರೂಪಾಯಿಗಿಂತಲೂ ಅಧಿಕ. 12 ಎಮ್ಮೆ ಹಾಗೂ ನಾಲ್ಕು ಆಕಳುಗಳಿದ್ದು ಮನೆ ಮಂದಿಗೆಲ್ಲಾ ಇವುಗಳದ್ದೇ ಹಾಲು.

ಶಿಕ್ಷಣದಿಂದ ದೂರ ಇರುವ ಈ ಕುಟುಂಬದಲ್ಲಿ ಹಾಜಪ್ಪ ಅವರ ಕೊನೆ ಮಗ ಪರಮಾನಂದ ಮಾತ್ರ ಕಾಲೇಜು ಶಿಕ್ಷಣ ಪೊರೈಸಿದ್ದಾರೆ. ಹೀಗಾಗಿ ಪರಮಾನಂದ ಈ ಕುಟುಂಬದ ಅರ್ಥ ವ್ಯವಸ್ಥೆಯ ನಿರ್ವಹಣೆ ಮಾಡುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಕುಟುಂಬದ ಮಕ್ಕಳು, ಮೊಮ್ಮಕ್ಕಳು ಶಾಲೆಗಳಿಗೆ ಹೋಗುತ್ತಿದ್ದಾರೆ.

ಕೃಷಿ ಹೊರತಾಗಿ ಈ ಕುಟುಂಬದವರಿಗೆ ಅಷ್ಟಾಗಿ ಹೊರಪ್ರಪಂಚದ ಅರಿವೇ ಇಲ್ಲ. ಚಹಾ, ಸಾರಾಯಿ, ಗುಟಕಾ ವ್ಯಸನಗಳು ಈ ಕುಟುಂಬದ ಯಾವೊಬ್ಬ ಸದಸ್ಯರನ್ನು ಆವರಿಸಿಲ್ಲ. ಹಿರಿಯರಲ್ಲಿ ಬಹುತೇಕರಿಗೆ ಚಿತ್ರಮಂದಿರಗಳ ದರ್ಶನವೇ ಆಗಿಲ್ಲ. ಇಡೀ ಕುಟುಂಬಕ್ಕೆ ಒಂದೇ ಟಿ.ವಿ. ಇದೆ. ಅದೂ ಹುಡುಗರು ವೀಕ್ಷಿಸುತ್ತಾರೆ.

ಇಷ್ಟು ಮಂದಿಗೆ ಆಹಾರ ತಯಾರು ಮಾಡುವ ವಿಷಯದಲ್ಲಿ ಗೃಹಿಣಿಯರು ಸೋತಿಲ್ಲ. ಅವರವರ ಅಭಿರುಚಿಗೆ ತಕ್ಕಂತೆ ಆಹಾರ ಸೇವನೆಗೆ ತಯಾರು ಇರುತ್ತದೆ. ಅಡುಗೆ ಕಾರ್ಯವನ್ನು ಮಹಿಳೆಯರು ನಿತ್ಯದ ಸರದಿಯಂತೆ ರೊಟ್ಟಿ ಮಾಡಿದರೆ, ಉಳಿದವರು ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಹಾಲು ಹಿಂಡುವಂತಹ ಕೆಲಸ ಮಾಡುತ್ತಾರೆ. ಕೃಷಿ ಕೆಲಸಕ್ಕೆ ಹೋಗುವುದಿಲ್ಲ. ಈ ಮನೆಯಲ್ಲಿ ಈಗಲೂ ಕಟ್ಟಿಗೆಯಿಂದಲೇ ಅಡುಗೆ ಮಾಡಲಾಗುತ್ತದೆ.

‘ಒಂದೇ ಸೂರಿನಡಿ ನಾವಿರುವುದರಿಂದ ಹಣಕಾಸಿನ ಅಡಚಣೆಯಾಗದು, ಕೃಷಿ ಚಟುವಟಿಕೆಯ ಆರ್ಥಿಕ ನಿರ್ವಹಣೆಗೆ ಧಕ್ಕೆಯಾಗದು. ಕುಟುಂಬದಲ್ಲಿ ಮೊದಲು ಹೊಂದಾಣಿಕೆಯ ಮನೋಭಾವ ಸೇರಿದ್ದರಿಂದ ಸಮೃದ್ಧಿ ಜೀವನಕ್ಕೆ ಸಾಕ್ಷಿಯಾಗಿದೆ. ನಮ್ಮಲ್ಲಿ ಯಾರಿಗೂ ಪ್ರತ್ಯೇಕವಾಗಿ ಬಾಳಬೇಕು ಎಂಬ ಭಾವನೆ ಮೂಡದಂತೆ ಎಲ್ಲರೂ ಪರಸ್ಪರ ಹೊಂದಾಣಿಕೆ ಜೀವನ ನಡೆಸಿದ್ದೇವೆ. ಶಿಕ್ಷಣಕ್ಕಿಂತ ನಮ್ಮ ಕುಟುಂಬಕ್ಕೆ ಕೃಷಿಯೇ ಉಸಿರು ಆಸರೆ’ ಎಂದು ಮನೆತನದ ಹಿರಿಯ ಬಸವಾನಂದ ಕುಂಬಾರ ಹೇಳುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT