ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂನ್ಯದಿಂದ ಉತ್ತುಂಗದತ್ತ...

Last Updated 9 ಜನವರಿ 2017, 19:30 IST
ಅಕ್ಷರ ಗಾತ್ರ

-ಪ್ರಸನ್ನ ಹೆಗ್ಡೆ ಕಲ್ಲಬೆಟ್ಟು

ಮಹಿಳಾ ಸಬಲೀಕರಣಕ್ಕೆ ಸರ್ಕಾರ ಸಹಾಯ ಮಾಡುತ್ತದೋ ಇಲ್ಲವೋ ಎಂಬುದು ಬೇರೆ ಮಾತು. ಆದರೆ ಪರಿಸ್ಥಿತಿಯೇ ಎಷ್ಟೋ ಬಾರಿ ಮಹಿಳೆಯರನ್ನು ಪ್ರೇರೇಪಿಸಿ ಮುನ್ನಡೆಸುವುದುಂಟು.

‘ಹೆಚ್ಚು ಓದದೇ ಇದ್ದರೂ ಉದ್ಯಮ ನಡೆಸಲು ತೊಂದರೆಯಿಲ್ಲ. ಯಾಕೆಂದರೆ ಉದ್ಯಮಕ್ಕೆ ಬೇಕಾದ್ದು ಜನರ ಅಗತ್ಯ ಅರ್ಥ ಮಾಡಿಕೊಳ್ಳುವುದು ಹಾಗೂ ದುಡಿಯುವ ಹುಮ್ಮಸ್ಸು. ಸ್ವಂತ ಬಂಡವಾಳವಿಲ್ಲದಿದ್ದರೂ ಕಠಿಣ ಪರಿಶ್ರಮ ಹಾಗೂ ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಯಶಸ್ಸನ್ನು ಪಡೆಯಬಹುದು’ ಎನ್ನುವ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಕಡಂದಲೆ ಗ್ರಾಮದ ಜನತಾನಗರ ನಿವಾಸಿ ರಾಧಿಕಾ ಕೃಷ್ಣ ನಾಯಕ್‌ ಅದನ್ನೇ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.

ಬಡತನದಲ್ಲೇ ಬೆಳೆದ ರಾಧಿಕಾ ಅವರು ಅದನ್ನೇ ಹಳಿಯುತ್ತ ಕುಳಿತುಕೊಳ್ಳಲಿಲ್ಲ. ದುಡಿಮೆಗೆ ಟೊಂಕಕಟ್ಟಿ ನಿಂತರು. ಮೂಲತಃ ಚಿಕ್ಕಮಗಳೂರಿನವರಾದ ಅವರಿಗೆ 1992ರಲ್ಲಿ ಕಡಂದಲೆಯ ಕೃಷ್ಣ ನಾಯಕ್‌ ಜತೆ ವಿವಾಹವಾಗಿತ್ತು. ರಾಧಿಕಾ ಓದಿದ್ದು 8ನೇ ತರಗತಿ ಮಾತ್ರ.  ಸಂಸಾರದ ನೌಕೆ ಬಡತನದ ಸಾಗರದಲ್ಲಿ ಸಾಗುವುದಕ್ಕೆ ಪ್ರಯಾಸವಾಗಿತ್ತು.

ಸರಿಯಾದ ಉದ್ಯೋಗ ಸಿಗದಿದ್ದಾಗ ಅವರಿಗೆ ಆಲೋಚನೆ ಬಂದದ್ದು ಮನೆಯಲ್ಲೇ ಹಪ್ಪಳ, ಸಂಡಿಗೆ  ತಯಾರಿಸುವ ಸ್ವಂತ ಉದ್ಯೋಗ. ಉತ್ಪಾದನಾ ಕ್ಷೇತ್ರವಾಗಲೀ, ಸೇವಾ ಕ್ಷೇತ್ರವಾಗಲೀ, ಆಹಾರ ಉತ್ಪನ್ನಗಳ ಪೂರೈಕೆಗೆ ಸದಾ ಬೇಡಿಕೆ ಇದ್ದೇ ಇದೆ ಎನ್ನುವ ರಾಧಿಕಾ, ‘ಇದು ಅವಸರದ ಯುಗ. ಹಾಗಾಗಿ ಜನರಿಗೆ ಬೇಕಾದ ಆರೋಗ್ಯಕರ ತಿನಿಸುಗಳನ್ನು ಕೊಟ್ಟಲ್ಲಿ ಅದನ್ನು ಸ್ವೀಕರಿಸುತ್ತಾರೆ’ ಎಂದು ಇಂದಿಗೂ ನಂಬಿದ್ದಾರೆ.

ಹಾಗೆ ಉದ್ಯಮ ಆರಂಭಿಸಲು ಅವರಿಗೆ ನೆರವಾದುದು ಸ್ತ್ರೀ ಶಕ್ತಿ ಸಂಘ. ಸಂಘದ ಮುಖೇನ ಸುಮಾರು ₹5 ಸಾವಿರ ಸಾಲ ಪಡೆದರು. ತಮ್ಮ ಬಳಿಯಿದ್ದ ಸ್ವಲ್ಪ ಚಿನ್ನಾಭರಣವನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಹಣ ಪಡೆದು ಮನೆಯಲ್ಲೇ ಸ್ವಂತ ಉದ್ಯೋಗ ಆರಂಭಿಸಿದರು. ಹಪ್ಪಳ ಸಂಡಿಗೆಯ ಜೊತೆಗೆ ಬದುಕು ಸಾಗಲು ಶುರುವಾಯಿತು.

ಗೆಣಸು, ಹಲಸು, ಬಟಾಟೆ, ರಾಗಿ, ಬಟಾಟೆಯಿಂದ ಹಪ್ಪಳ ತಯಾರಿಸಿದರೆ, ಉದ್ದು, ನೀರುಳ್ಳಿ, ಬೆಳ್ಳುಳ್ಳಿ, ರಾಗಿ, ಸಾಬಕ್ಕಿ, ನುಗ್ಗೆ ಸೊಪ್ಪು, ತಿಮರೆಸೊಪ್ಪು ಬಳಸಿ ಸಂಡಿಗೆ ತಯಾರಿಸಲು ಆರಂಭಿಸಿದರು. ಮನೆಯವರೆಲ್ಲರೂ ರಾತ್ರಿ ಹಗಲೆನ್ನದೇ ದುಡಿದರು. ರಾಧಿಕಾ ಅವರ ಉದ್ಯಮ ಒಂದು ಹದಕ್ಕೆ ಬರುವಷ್ಟರಲ್ಲಿ ಅವರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಗೌರವ ದೊರೆತಿತ್ತು.

ವ್ಯವಹಾರದಲ್ಲಿ ಅಭಿವೃದ್ಧಿ ಹೊಂದಿದಾಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಣಕಾಸು ನೆರವು ಪಡೆದು  ಡ್ರೈಯರ್, ಪ್ರೆಸ್ಸಿಂಗ್‌ ಮತ್ತು ಹಿಟ್ಟು ಹದ ಮಾಡುವ ಯಂತ್ರಖರೀದಿಸಿದರು. ನವೆಂಬರ್‌ನಿಂದ ಮಾರ್ಚ್‌ವರೆಗೆ ಸಂಡಿಗೆ, ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಹಪ್ಪಳ ತಯಾರಿಸುವ ಯೋಜನೆ ಸಿದ್ಧಪಡಿಸಿಕೊಂಡು ಆ ಪ್ರಕಾರ ನಡೆಯತೊಡಗಿದರು.

ಈಗ ರಾಧಿಕಾ ಕೆಲಸ ಕೊಡುವ ಕೈ: ಪ್ರಾರಂಭದಲ್ಲಿ ರಾಧಿಕಾ ಅವರ ಗುಡಿ ಕೈಗಾರಿಕೆಯಲ್ಲಿ ಸುಮಾರು 50 ಮಂದಿ ಕೆಲಸಕ್ಕಿದ್ದು, ಈ ಪೈಕಿ ಹೆಚ್ಚಿನವರು ಮಹಿಳೆಯರು. ಇನ್ನು ಪಾರ್ಟ್‌ ಟೈಮ್‌ ಕೆಲಸಗಾರರಾಗಿ ಅನೇಕ ಸ್ಥಳೀಯ ವಿದ್ಯಾರ್ಥಿಗಳಿರುತ್ತಾರೆ. ಕಾಲಕ್ಕನುಗುಣವಾಗಿ ಈ ಸಂಖ್ಯೆಯಲ್ಲಿ ಏರುಪೇರುಗಳಾಗುತ್ತಿದ್ದು ಈಗ ಕಾರ್ಮಿಕರ ಸಂಖ್ಯೆಗನುಗುಣವಾಗಿ ಆಹಾರ ಉತ್ಪನ್ನಗಳನ್ನು ತಯಾರಾಗಿಸಲಾಗುತ್ತಿದೆ.

ಗುಣಮಟ್ಟದಲ್ಲಿ ಶ್ರದ್ಧೆ ಇಡುವ ರಾಧಿಕಾ ಅವರ ಪ್ರಕಾರ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ ಎಂಬ ಪರಿಸ್ಥಿತಿಯೇ ನಿರ್ಮಾಣವಾಗದು. ಅವರ ಗುಡಿ ಕೈಗಾರಿಕೆಯಲ್ಲಿ ತಯಾರಿಸುವ ಹಪ್ಪಳ ಮತ್ತು ಸಂಡಿಗೆಗಳಿಗೆ ಸಾಂಪ್ರದಾಯಿಕ ಕಚ್ಚಾ ಪದಾರ್ಥಗಳನ್ನು ಮಾತ್ರ ಬಳಸಲಾಗುತ್ತಿದ್ದು ಒಳ್ಳೆಯ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುತ್ತಿದೆ. ಹೀಗಾಗಿ  ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇದೆ. 

ಯಾವುದೇ ವೃತ್ತಿಯು ಲಕ್ಷೋಪಲಕ್ಷ ಹಣ ಸಂಪಾದಿಸಿದರೇನು... ತೃಪ್ತಿಯನ್ನು ಸಂಪಾದಿಸದೇ ಇದ್ದಲ್ಲಿ ಲಕ್ಷಗಳಿಗೆ ಲಕ್ಷ್ಯವಿಲ್ಲ ಎನ್ನುವುದನ್ನು ರಾಧಿಕಾ ನಂಬುತ್ತಾರೆ. ‘ನಾನು ಮಾಡುತ್ತಿರುವ ಸ್ವ ಉದ್ಯೋಗದಿಂದ ನನಗೆ ನೆಮ್ಮದಿ ಇದೆ, ಸಮಾಜದಲ್ಲಿ ಗೌರವ ತಂದುಕೊಟ್ಟಿದೆ. ಸೊನ್ನೆ ಬಂಡವಾಳದಿಂದ ಉದ್ಯೋಗ ಆರಂಭಿಸಿ ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ಬದುಕಿನಲ್ಲಿ ಅನೇಕ ಸಮಸ್ಯೆ, ಸವಾಲುಗಳನ್ನು ಎದುರಿಸಿ ಅದನ್ನು ಮೆಟ್ಟಿ ನಿಂತಿದ್ದೇನೆ. ಜಿಲ್ಲಾ ಪಂಚಾಯತಿ ಸದಸ್ಯ ಸುಚರಿತ ಶೆಟ್ಟಿ ಸಹಿತ ಅನೇಕರು ನನ್ನ ಯಶಸ್ವಿಗೆ ಸಹಕಾರ ನೀಡಿದ್ದಾರೆ’ ಎಂದು ರಾಧಿಕಾ ತನ್ನ ಉದ್ಯೋಗದ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ.

ರಾಧಿಕಾ ಅವರ ಉದ್ದಿಮೆ ವಿಸ್ತಾರವಾಗಿದೆ. ಆದರೆ ಆಹಾರೋತ್ಪನ್ನಗಳನ್ನು ಒಣಗಿಸಲು ಜಾಗದ ಸಮಸ್ಯೆ ಎದುರಾಗಿದೆ. ಮನೆ ಪಕ್ಕದ ಸರಕಾರಿ ಜಾಗವನ್ನು ನಿಯಮಾನುಸಾರ ನನ್ನ ಹೆಸರಿಗೆ ಮಾಡಿಸಿಕೊಡಿ ಅದಕ್ಕೆ ಬೇಕಾದ ಶುಲ್ಕವನ್ನು ಪಾವತಿಸುತ್ತೇನೆ ಎಂದು ರಾಧಿಕಾ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಗೆ ಮನವಿ ಸಲ್ಲಿಸುತ್ತಾ ಬಂದರೂ ಇನ್ನೂ ನ್ಯಾಯ ಸಿಕ್ಕಿಲ್ಲ ಎಂಬ ಕೊರಗು ಇದೆ.

ಹಾಗಂತ ಅವರು ಬೇಸರದ ಮೊರೆ ಹೋಗಿಲ್ಲ. ಎಲ್ಲವೂ ಸರಿಯಾಗುವ ದಿನಗಳು ಬರುತ್ತವೆ ಎಂದು ಕಾಯುತ್ತಾರೆ. ಸೊನ್ನೆ ಬಂಡವಾಳದೊಂದಿಗೆ ತಮ್ಮ ವೃತ್ತಿಯನ್ನು ಆರಂಭಿಸಿದ ರಾಧಿಕಾ ಅವರು ನಿರಂತರ ದುಡಿಮೆಯಲ್ಲಿ ತೊಡಗಿಕೊಂಡು ‘ಕಾಯಕವೇ ಕೈಲಾಸ’ ಎನ್ನುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT