ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆದರ್ಶ’ವಾಗಲಿಲ್ಲ ಗ್ರಾಮ

Last Updated 9 ಜನವರಿ 2017, 19:30 IST
ಅಕ್ಷರ ಗಾತ್ರ

‘ಸರ್ ನಮ್ಮೂರನ್ನು ನಿಜವಾಗಿಯೂ ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆಯೇ ಇಲ್ಲವೇ ತಿಳಿಸಿಬಿಡಿ! ಯಾಕಂದ್ರೆ ಆದರ್ಶ ಎನಿಸುವಂಥ ಕೆಲಸಗಳು ಇಲ್ಲೇನೂ ನಡೆಯುತ್ತಿಲ್ಲ. ಎರಡು ವರ್ಷಗಳಿಂದಲೂ  ಏನೇನೋ ಆಗುತ್ತದೆ ಎಂದು ಕಾಯುತ್ತಿದ್ದೇವೆ. ಸಮಸ್ಯೆಗಳು ಹಾಗೆಯೇ ಉಳಿದಿವೆ! ನಿಮಗೇನಾದರೂ ಅಭಿವೃದ್ಧಿ ಕಾರ್ಯವಾಗಿರುವುದು ಕಾಣುತ್ತಿದೆಯೇ!?’

 ಆ ಗ್ರಾಮ ಪ್ರವೇಶಿಸುತ್ತಿದ್ದಂತೆಯೇ ಎದುರಾದ ಯುವಕ ಪ್ರಶ್ನಿಸಿದ್ದು ಹೀಗೆ. ಅವರ ಆ ಹೇಳಿಕೆ ಗ್ರಾಮದಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯ ಅನುಷ್ಠಾನ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಕಟ್ಟಿಕೊಡುವಂತಿತ್ತು. ಇಂಥದೊಂದು ಅಭಿಪ್ರಾಯ ಈ ಗ್ರಾಮದ ಬಹುತೇಕರಲ್ಲಿದೆ. ಅಲ್ಲಿ ಆದರ್ಶ ಎನಿಸಿಕೊಳ್ಳುವಂಥ ಕೆಲಸಗಳೇನೂ ನಡೆಯದಿರುವುದು ಇದಕ್ಕೆ ಕಾರಣ. ಗ್ರಾಮವನ್ನು ಸುತ್ತುಹಾಕಿದಾಗ ಗ್ರಾಮಸ್ಥರ ಹೇಳಿಕೆ ಅಕ್ಷರಶಃ ನಿಜ ಎನಿಸಿತು.

ಆ ಗ್ರಾಮದ ಹೆಸರು ಮುತ್ನಾಳ. ಬೆಳಗಾವಿ ತಾಲ್ಲೂಕು ಹಾಗೂ ಬೈಲಹೊಂಗಲ ತಾಲ್ಲೂಕಿನ ಗಡಿಯಲ್ಲಿರುವ ಈ ಗ್ರಾಮವನ್ನು ಬಿಜೆಪಿಯ ಸಂಸದ ಸುರೇಶ ಅಂಗಡಿ ಅವರು ‘ಸಂಸದರ ಆದರ್ಶ ಗ್ರಾಮ ಯೋಜನೆ’ಯಲ್ಲಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಿಕೊಂಡಿದ್ದಾರೆ. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–4ರ ಸಮೀಪದಲ್ಲಿಯೇ ಇರುವ ಈ ಗ್ರಾಮದ ಆಯ್ಕೆಯನ್ನು 2014–15ನೇ ಸಾಲಿನಲ್ಲಿಯೇ ಘೋಷಿಸಲಾಗಿದೆ.

ಗ್ರಾಮದಲ್ಲಿ ಹಿಂದೂಗಳು, ಮುಸ್ಲಿಮರು, ಜೈನ ಧರ್ಮದವರು ಸೌಹಾರ್ದಯುತವಾಗಿ ಇಲ್ಲಿ ಜೀವನ ನಡೆಸುತ್ತಿದ್ದಾರೆ. ಇದರಿಂದಾಗಿಯೇ ರಾಜಕೀಯ ಲೆಕ್ಕಾಚಾರದ ಆಧಾರದ ಮೇಲೂ ಈ ಗ್ರಾಮ ಆಯ್ಕೆ ಮಾಡಿಕೊಳ್ಳಲಾಗಿದೆ. ಬರೋಬ್ಬರಿ ಎರಡು ವರ್ಷ ಕಳೆದಿದ್ದರೂ ಗ್ರಾಮದ ರೂಪವೇನೂ ಬದಲಾಗಿಲ್ಲ. ನಮ್ಮೂರು ಆದರ್ಶ ಗ್ರಾಮವೆನಿಸಿಕೊಳ್ಳುತ್ತದೆ ಎಂದು ಎಣಿಸಿದ್ದ ಜನರಿಗೆ ನಿರಾಸೆಯಾಗಿದೆ.

ಇಂತಿಷ್ಟು ವರ್ಷಗಳಲ್ಲಾದರೂ ಗ್ರಾಮವನ್ನು ಆದರ್ಶವನ್ನಾಗಿ ಮಾಡಲಾಗುವುದು ಎಂದು ಸಂಸದರಾಗಲಿ, ಸಂಬಂಧಿಸಿದ ಅಧಿಕಾರಿಗಳಾಗಲಿ ಹೇಳಿಲ್ಲ! ಹೀಗಾಗಿ, ಯೋಜನೆಯು ಹೆಸರಿಗಷ್ಟೇ ಉಳಿದಿದೆ. ಘೋಷಣೆಗಷ್ಟೇ ಸೀಮಿತವಾಗಿದೆ. ಕೇಂದ್ರ ಪುರಸ್ಕೃತ ಯೋಜನೆಯ ಪ್ರಗತಿ ಪರಿಶೀಲನೆ ನಡೆಸುವ ಸಂದರ್ಭ ಸಂಸದರ ಆದರ್ಶ ಗ್ರಾಮ ಯೋಜನೆಯ ಪ್ರಗತಿಯನ್ನೂ ಸಂಸದರು ಪರಿಶೀಲಿಸುತ್ತಾರೆ. ಆಗ, ಅಧಿಕಾರಿಗಳು ಹೇಳುವುದಕ್ಕೂ ಗ್ರಾಮದಲ್ಲಿ ಕಾಣುವ ಚಿತ್ರಣಕ್ಕೂ ದೊಡ್ಡ ವ್ಯತ್ಯಾಸವಿದೆ.

ಇಲ್ಲ ಇಲ್ಲಗಳ ನಡುವೆ...
ಗ್ರಾಮದ ಪರಿಶಿಷ್ಟರ ಕಾಲೊನಿಯಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. ಬೇರೆಯವರ ಓಣಿಯಲ್ಲಿ ಕಿರು ನೀರು ಸರಬರಾಜು ಯೋಜನೆಯಲ್ಲಿ ನೀರಿನ ತೊಂಬೆ ಅಳವಡಿಸಲಾಗಿದೆ. ಅಲ್ಲಿಗೆ ಹೋಗಿ ಕಾಲೊನಿ ಜನರು ನೀರು ತರಬೇಕು. ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಈ ತೊಂದರೆ ನಿವಾರಣೆಯಾಗುತ್ತದೆ ಎಂಬ ಭಾಷಣವನ್ನೇ ನಂಬಿ ಕುಳಿತ ಮಂದಿ ನಿರಾಶರಾಗಿದ್ದಾರೆ.

‘ಚರಂಡಿಗಳು ಇಲ್ಲ, ಸರಿಯಾದ ರಸ್ತೆಗಳಿಲ್ಲ, ಚರಂಡಿ ನೀರು ರಸ್ತೆ ಮೇಲೆಲ್ಲಾ ಹರಿಯುತ್ತದೆ. ಮಳೆ ಬಂದಾಗಲಂತೂ ಕೆಂಪುಮಣ್ಣಿನ ಈ ರಸ್ತೆಗಳು ಕೆಸರುಗದ್ದೆಯಂತೆ ಆಗುತ್ತವೆ.

ಸಂಸದರು ಏನಾದರೂ ಕಾರ್ಯಕ್ರಮ ಇದ್ದಾಗ ಬರುತ್ತಾರೆ. ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎಂದು ಹೇಳುತ್ತಾರೆ. ಮನೆ ಮನೆಗೆ ನೀರಿನ ಸಂಪರ್ಕ ಕೊಟ್ಟರೆ ದೊಡ್ಡ ಉಪಕಾರವಾಗುತ್ತದೆ’ ಎನ್ನುತ್ತಾರೆ ಗ್ರಾಮಸ್ಥ ಎಂ.ಬಿ. ಪೂಜಾರಿ. ಬೇಸಿಗೆಯಲ್ಲಂತೂ ತಮ್ಮ ಪಾಡು ಹೇಳತೀರದು ಎನ್ನುತ್ತಾರೆ ಮಹಾಂತೇಶ ಕುಡಚಿ.

ಈ ಊರು ಸಂಸದರ ಆದರ್ಶ ಗ್ರಾಮದಲ್ಲಿ ಆಯ್ಕೆಯಾಗದೇ ಇದ್ದಿದ್ದರೇ ಚೆನ್ನಾಗಿರುತ್ತಿತ್ತು ಎನ್ನುವುದು ಇಲ್ಲಿಯವರ ಅನಿಸಿಕೆ. ಏಕೆಂದರೆ ಕುಂದುಕೊರತೆ ನಿವಾರಿಸುವಂತೆ ಯಾವುದೇ ಅಧಿಕಾರಿಗಳ ಬಳಿ ಹೋದರೆ ಅವರು ‘ನಿಮ್ಮೂರು ಆದರ್ಶ ಗ್ರಾಮ ಯೋಜನೆಯಲ್ಲಿ ಆಯ್ಕೆಯಾಗಿದೆಯಲ್ಲಾ... ಅದರಲ್ಲಿಯೇ  ಕೆಲಸ ಮಾಡಿಕೊಳ್ಳಿ’ ಎನ್ನುತ್ತಿದ್ದಾರೆ.

ಹೀಗಾಗಿ, ಸಾಮಾನ್ಯ  ಅನುದಾನದ ಕಾಮಗಾರಿಗಳೂ ಸಿಗುತ್ತಿಲ್ಲ; ಸಂಸದರ ಯೋಜನೆಯಲ್ಲೂ ಅಭಿವೃದ್ಧಿಯಾಗುತ್ತಿಲ್ಲ. ‘ಕೇಂದ್ರ ಹಾಗೂ ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರದಲ್ಲಿವೆ. ಇದರಿಂದ ಸಮನ್ವಯದ ಕೊರತೆ ಕಂಡುಬರುತ್ತಿದೆ. ಜನರಿಗೆ ಅನುಕೂಲವಾಗಲೆಂದು ನಾವೇ ಸ್ವಂತ ಹಣ ಖರ್ಚು ಮಾಡಿ ಬೋರ್‌ವೆಲ್‌ ಕೊರೆಸಿದೆವು.

ಜಿಲ್ಲಾ ಪಂಚಾಯ್ತಿಯಿಂದ ನಂತರ ಹಣ ತೆಗೆದುಕೊಂಡೆವು’ ಎನ್ನುತ್ತಾರೆ ಮಹಾಂತೇಶ ಕುಡಚಿ. ಗ್ರಾಮದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಮುಖಂಡರು ಹಾಗೂ ಯುವಕರು ಈಗಾಗಲೇ 2–3 ಬಾರಿ ಸಂಸದರನ್ನು ಭೇಟಿಯಾಗಿದ್ದೂ ಇದೆ. ಆದರೆ ಅವರು ಕೆಲಸ ಮಾಡಿಕೊಡುವುದು ಬಿಟ್ಟು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿಸಿಕೊಳ್ಳಿ ಎಂದಿದ್ದು ಇದು ಗ್ರಾಮಸ್ಥರಲ್ಲಿ ತುಂಬಾ ಬೇಸರ ಮೂಡಿಸಿದೆ.

‘ಇಲ್ಲಿ ಪಂಚಾಯ್ತಿಗೆ ಸೇರಿದ ಆಸ್ತಿಯನ್ನು ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ. ರಸ್ತೆಗೆ ಡಾಂಬರು ಹಾಕುತ್ತೇವೆ ಎಂದು ಕೆಂಪು ಮಣ್ಣು ಹಾಕಿದ್ದಾರೆ. ಮೇಲೆ ಜಲ್ಲಿ ಕಲ್ಲು ತುಂಬಲಾಗಿದೆ. 3–4 ಅಡಿಗಳಷ್ಟು ರಸ್ತೆಯನ್ನು ಎತ್ತರಿಸಲಾಗಿದೆ. ಇದರಿಂದ, ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುವ ಭೀತಿ ಕಾಡುತ್ತಿದೆ.

ಅವೈಜ್ಞಾನಿಕವಾಗಿ ಈ ಕೆಲಸ ಮಾಡಲಾಗುತ್ತಿದೆ. ಜನರೊಂದಿಗೆ ಸಮಾಲೋಚನೆ ಮಾಡದಿದ್ದರೆ ಈ ರೀತಿಯ ಅವಾಂತರಗಳಾಗುತ್ತವೆ. ಮಳೆಗಾಲದಲ್ಲಿ ಏನು ಕಾದಿದೆಯೋ’ ಎಂದು ಆತಂಕದಿಂದ ಹೇಳುತ್ತಾರೆ ಗ್ರಾಮಸ್ಥ ದಿಲಾವರ ಮಕಂದರ್‌.

ಗ್ರಾಮಸ್ಥರು ಈ ರೀತಿಯಾಗಿ ಗೋಳು ತೋಡಿಕೊಳ್ಳುತ್ತಿದ್ದರೆ, ಇಲ್ಲಿ ಆಗಿರುವ ‘ಅಭಿವೃದ್ಧಿ ಕಾರ್ಯ’ಗಳ ಬಗ್ಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಐ.ಎಂ. ವಡಗಾಂವಕರ ಹೇಳುವುದು ಹೀಗೆ: ‘ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಬ್ಯಾಂಕ್‌ ಶಾಖೆ ತೆರೆಯಲಾಗಿದೆ. ಕೆಲ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಲಾಗಿದೆ. ರೈತರಿಗೆ ಕೃಷಿ ತರಬೇತಿ ಕೊಡಲಾಗಿದೆ.

ಕುಡಿಯುವ ನೀರಿನ ಯೋಜನೆಗೆ ₹50 ಲಕ್ಷ ಇಡಲಾಗಿದೆ. ಹೆಚ್ಚುವರಿ ಪೈಪ್‌ಲೈನ್‌, 2 ಹೊಸ ಬೋರ್‌ವೆಲ್‌ಗಳನ್ನು ಕೊರೆಸಲಾಗುವುದು, ಒಂದು ನೀರಿನ ಟ್ಯಾಂಕ್‌ ನಿರ್ಮಿಸಲಾಗುವುದು. ಮನೆ ಮನೆಗೆ ನೀರಿನ ಸಂಪರ್ಕ ವ್ಯವಸ್ಥೆ ಮಾಡುವುದಕ್ಕೂ ಯೋಜಿಸಲಾಗಿದೆ. ಗ್ರಾಮದಲ್ಲಿ 586 ಕುಟುಂಬಗಳಿವೆ.

561 ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಟ್ಟಿದ್ದೇವೆ. ಶೀಘ್ರವೇ ಗ್ರಾಮವನ್ನು ‘ಬಯಲು ಶೌಚ ಮುಕ್ತ ಗ್ರಾಮ’ ಎಂದು ಘೋಷಿಸುವ ಗುರಿ ಹೊಂದಲಾಗಿದೆ’ ಗ್ರಾಮ ಪಂಚಾಯ್ತಿ ಕಚೇರಿ ಇಲ್ಲಿದೆ. ಗ್ರಾಮ ಪಂಚಾಯ್ತಿ ಅನುದಾನದಲ್ಲಿ ಒಂದಷ್ಟು ಕೆಲಸಗಳಾಗಿವೆ. ಶಾಸಕ ಸಂಜಯ ಪಾಟೀಲ ಅವರ ಶಾಸಕರ ನಿಧಿಯಲ್ಲಿ ಈಚೆಗಷ್ಟೇ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದನ್ನು ಸಂಸದರ ಆದರ್ಶ ಗ್ರಾಮದ ಯೋಜನೆ ಬಿಂಬಿಸುವ ಪ್ರಯತ್ನವೂ ಇಲ್ಲಿ ನಡೆದಿದೆ!

ಈ ಊರಿನಲ್ಲಿ ಕುಡಿಯುವ ನೀರಿಗೂ ತತ್ವಾರವಿದೆ. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿಯೇ ಈ ಗ್ರಾಮವಿದ್ದರೂ ಮೂಲಸೌಲಭ್ಯಗಳಿಂದ ನಲುಗುತ್ತಿದೆ. 586 ಕುಟುಂಬಗಳು, 3,150 ಜನಸಂಖ್ಯೆ ಇದೆ. ಇಲ್ಲಿ ಏಳು ಮಂದಿ ಗ್ರಾಮ ಪಂಚಾಯ್ತಿ ಸದಸ್ಯರಿದ್ದಾರೆ. 

‘ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಪ್ರತ್ಯೇಕ ಅನುದಾನದ ಕೊರತೆ ಇದೆ. ಹೀಗಾಗಿ, ಯಾವುದೇ ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಆಗುತ್ತಿಲ್ಲ’ ಎನ್ನುವುದು ಅಧಿಕಾರಿಗಳ ಹೇಳಿಕೆ. ‘ಅಭಿವೃದ್ಧಿ ಮಾಡಬೇಕು ಎನ್ನುವ ಉತ್ಸಾಹವಿದೆ. ಯೋಜನೆಯನ್ನೂ ಸಿದ್ಧಪಡಿಸಿದ್ದೇವೆ. ಆದರೆ, ಇದಕ್ಕೆ ತಕ್ಕಂತೆ ಹಣ ದೊರೆಯುತ್ತಿಲ್ಲ’ ಎನ್ನುವುದು ಸಂಸದ ಸುರೇಶ ಅಂಗಡಿ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರ ಸಮಜಾಯಿಷಿ.

ಕುಡಿಯುವ ನೀರು ಪೂರೈಕೆ ಯೋಜನೆ, ಮನೆ ಮನೆಗೆ ನಲ್ಲಿ ಅಳವಡಿಸಿ ನೀರಿನ ಸಂಪರ್ಕ ಕಲ್ಪಿಸುವುದು, ಪೈಪ್‌ಲೈನ್‌ ನವೀಕರಣ, 2 ಹೊಸ ಬೋರ್‌ವೆಲ್‌ ಕೊರೆಸುವುದು, ಒಂದು ನೀರಿನ ಟ್ಯಾಂಕ್‌ ನಿರ್ಮಾಣ ಸೇರಿದಂತೆ ₹50 ಲಕ್ಷ ವೆಚ್ಚದ ಯೋಜನೆ ರೂಪಿಸಲಾಗಿದ್ದು, ಕಾಗದದಲ್ಲಿಯೇ ಉಳಿದಿದೆ.

ಈ ಕೊರತೆಗಳ ನಡುವೆ ಗ್ರಾಮದಲ್ಲಿ 2016ರ ಮಾರ್ಚ್‌ನಲ್ಲಿ ತೆರೆದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಶಾಖೆ ಮಾತ್ರ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ಬ್ಯಾಂಕ್‌ ಕೆಲಸಗಳಿಗಾಗಿ 5 ಕಿ.ಮೀ. ದೂರದಲ್ಲಿರುವ ಹಿರೇಬಾಗೇವಾಡಿಗೆ ಹೋಗಬೇಕಾಗಿತ್ತು. ಈಗ ಗ್ರಾಮದಲ್ಲಿಯೇ ಬ್ಯಾಂಕ್‌ ಆರಂಭವಾಗಿರುವುದರಿಂದ, ಬಹಳ ಅನುಕೂಲವಾಗಿದೆ ಎನ್ನುತ್ತಾರೆ ಅವರು. ಇದನ್ನು ಸಂಸದರ ಆದರ್ಶ ಗ್ರಾಮ ಯೋಜನೆಯಡಿ ತೆರೆಯಲಾಗಿದೆ ಎನ್ನುವುದು ಸಂಸದರು ಹಾಗೂ ಅಧಿಕಾರಿಗಳ ಸಮರ್ಥನೆ. ಈ ಬ್ಯಾಂಕ್‌ನಲ್ಲಿ 1,500 ಮಂದಿ ಖಾತೆ ತೆರೆದಿದ್ದಾರೆ. ಈವರೆಗೆ ₹1 ಕೋಟಿ ಸಾಲ ಸೌಲಭ್ಯ ನೀಡಲಾಗಿದೆ.

ರಾಜ್ಯ ಸರ್ಕಾರದ ನಿರ್ಲಕ್ಷ್ಯ: ‘ಸಂಸದರ ಆದರ್ಶ ಗ್ರಾಮ ಯೋಜನೆಯು ಕೇಂದ್ರ ಸರ್ಕಾರದ ಯೋಜನೆ. ಆದ್ದರಿಂದ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಇಲ್ಲಿಯ ಸಹಕಾರ ಸಿಗದ ಕಾರಣ ಯೋಜನೆ ನೆನೆಗುದಿಗೆ ಬೀಳುವಂತಾಗಿದೆ. ಇದರ ಜೊತೆಗೆ, ಜಿಲ್ಲಾ ಪಂಚಾಯ್ತಿಯಲ್ಲಿ ಪದೇ ಪದೇ ಸಿಇಒ ಬದಲಾವಣೆ ಮಾಡಲಾಗುತ್ತಿದೆ. ಇದರಿಂದ ಯೋಜನೆಯ ಅನುಷ್ಠಾನಕ್ಕೆ ತೊಡಕಾಗಿದೆ.

ಗ್ರಾಮೀಣಾಭಿವೃದ್ಧಿ ಸಚಿವರು ಇಲ್ಲಿಗೆ ಭೇಟಿ ಕೊಡುತ್ತಿದ್ದರೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ. ಆದರೆ ಸಮನ್ವಯದ ಕೊರತೆ ಇದೆ. ಸಂಸದರ ಆದರ್ಶ ಗ್ರಾಮಕ್ಕೆಂದೇ ಪ್ರತ್ಯೇಕ ಅನುದಾನವಿರುವುದಿಲ್ಲ. ಆದರೂ ಬ್ಯಾಂಕ್‌ ಶಾಖೆ ಆರಂಭಿಸಲಾಗಿದೆ. ರಸ್ತೆ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲಿನವರೆಗೆ ನೀರಾವರಿ ಸೌಲಭ್ಯ ಒದಗಿಸಲೆಂದು ಕೆರೆ  ನಿರ್ಮಿಸಲು ಯೋಜಿಸಲಾಗಿದೆ’ ಎನ್ನುತ್ತಾರೆ ಸಂಸದ ಸುರೇಶ ಅಂಗಡಿ.

ಪ್ರಧಾನಿ ಹೇಳಿದ್ದು...
‘ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಕಲ್ಪನೆಯಡಿ ಇಡೀ ಗ್ರಾಮವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವ ಗುರಿ ಹಮ್ಮಿಕೊಳ್ಳಲಾಗಿದೆ. ಸಂಸತ್ ಸದಸ್ಯರು ಗ್ರಾಮ ದತ್ತು ಪಡೆದು ಸಂಪೂರ್ಣವಾಗಿ ಅಭಿವೃದ್ಧಿ ಮಾಡಬೇಕಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಜೊತೆಗೆ ಸಾಮಾಜಿಕ ಅಭಿವೃದ್ಧಿಯನ್ನೂ ಸಾಧಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಆದರ್ಶ ಗ್ರಾಮಗಳು ಸ್ಥಳೀಯ ಅಭಿವೃದ್ಧಿ ಮತ್ತು ಆಡಳಿತದ ಶಾಲೆಗಳಾಗಿ ಉಳಿದ ಗ್ರಾಮ ಪಂಚಾಯ್ತಿಗಳಿಗೆ ಸ್ಫೂರ್ತಿ ಆಗಬೇಕಾಗಿದೆ.

ಗ್ರಾಮದವರ ಸಹಭಾಗಿತ್ವದಲ್ಲಿ ವೈಜ್ಞಾನಿಕ ಸಾಮರ್ಥ್ಯ ಬಳಸಿಕೊಂಡು ಸಂಸದರ ನೇತೃತ್ವದಲ್ಲಿ ಗ್ರಾಮ ಅಭಿವೃದ್ಧಿ ಯೋಜನೆಯನ್ನು ತಯಾರಿಸಲಾಗುತ್ತದೆ. ಅದಾದ ಬಳಿಕ ವಿಸ್ತ್ರೃತ ಯೋಜನಾ ವರದಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಪ್ರತಿ ಸಂಸದರೂ 2016ರಲ್ಲಿ ಒಂದು ಗ್ರಾಮ ಪಂಚಾಯತ್ ಅನ್ನು ಮಾದರಿಯಾಗಿ ರೂಪಿಸುತ್ತಾರೆ’ ಎಂದು ಪ್ರಧಾನಿ ಘೋಷಿಸಿದ್ದರು. ಆದರೆ, ಅವರ ಆಶಯ ಬೆಳಗಾವಿಯ ಮುತ್ನಾಳದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ.


ಏನಿದು ಯೋಜನೆ?
ಮಹಾತ್ಮ ಗಾಂಧಿ ಅವರ ‘ಸ್ವರಾಜ್‌’ ಅನ್ನು ‘ಸುರಾಜ್‌’ (ಉತ್ತಮ ಆಡಳಿತ) ಆಗಿ ಪರಿವರ್ತಿಸುವ ಆಶಯ ಆಧರಿಸಿ ಕೇಂದ್ರ ಸರ್ಕಾರದಿಂದ ಈ ಯೋಜನೆ ರೂಪಿಸಲಾಗಿದೆ. ಯಾವುದೇ ಸಂಸದ ತನ್ನದೇ ಗ್ರಾಮವನ್ನು ಅಥವಾ ತನ್ನ ಪತ್ನಿಯ ತವರು ಗ್ರಾಮ ಆಯ್ದುಕೊಳ್ಳಬಾರದು. 543 ಲೋಕಸಭಾ ಸದಸ್ಯರು, 250 ರಾಜ್ಯಸಭಾ ಸದಸ್ಯರು ಸೇರಿ ಒಟ್ಟು 793 ಸಂಸದರು ಒಂದೊಂದು ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು.

ಗ್ರಾಮಸ್ಥರ ವೈಯಕ್ತಿಕ ಅಭಿವೃದ್ಧಿ, ಗ್ರಾಮಗಳಲ್ಲಿನ ಮಾನವ ಸಂಪನ್ಮೂಲ, ಸಾಮಾಜಿಕ ಮತ್ತು ಪರಿಸರ ಅಭಿವೃದ್ಧಿಗೆ ಒತ್ತು ನೀಡಬೇಕು, ಪ್ರತಿ ಗ್ರಾಮಕ್ಕೂ ಪ್ರತ್ಯೇಕ ಅಭಿವೃದ್ಧಿ ಯೋಜನೆ ರೂಪಿಸಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಜತೆಗೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯ ಹಣದ ಬಳಕೆ ಮಾಡಬೇಕು, 2016ರ ವೇಳೆಗೆ ಪ್ರತಿ ಸಂಸದರಿಂದ ತಲಾ ಒಂದರಂತೆ 800 ಗ್ರಾಮಗಳ ಅಭಿವೃದ್ಧಿ ಗುರಿ, 2019ರ ವೇಳೆಗೆ 2,400 ಗ್ರಾಮಗಳ ಅಭಿವೃದ್ಧಿ ಗುರಿ ಹೊಂದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದರು.

ಗ್ರಾಮಸ್ಥರು ಕೇಳುವುದೇನು?
* ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ
* ರಸ್ತೆ, ಚರಂಡಿ ಅಭಿವೃದ್ಧಿ
* ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಾಣ
* ಕೆರೆ ಅಭಿವೃದ್ಧಿ
* ಸರ್ಕಾರಿ ಶಾಲೆಯ ನವೀಕರಣ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT