ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್‌ ಚಿಕಿತ್ಸೆ: ಶಂಕಾಸ್ಪದ ನಡೆ

ಅಕ್ಷರ ಗಾತ್ರ

ಪ್ರಜಾಸತ್ತೆಯಲ್ಲಿ ಜನರು ಆರಿಸಿದ ಸರ್ಕಾರ ಜನರಿಗಾಗಿ ಕೆಲಸ ಮಾಡಬೇಕು. ಜನಪ್ರತಿನಿಧಿಗಳು ಅನುಮೋದಿಸಿದ ಕಾಯ್ದೆ- ಕಾನೂನು- ನಿಯಮಗಳಿಗೆ ಅನುಗುಣವಾಗಿಯೇ ಆಡಳಿತ ನಡೆಸಬೇಕು. ಅಂತಹ ಸರ್ಕಾರವೇ ಕಾಯ್ದೆ-ಕಾನೂನುಗಳನ್ನು ಕಡೆಗಣಿಸಿ, ತಿರುಚಿ ಅಥವಾ ಮೊಟಕುಗೊಳಿಸಿ ಜನಹಿತಕ್ಕೆ ವಿರುದ್ಧವಾಗಿ, ತನಗಿಷ್ಟದ ಸ್ಥಾಪಿತ ಹಿತಾಸಕ್ತಿಗಳ ಬೆಂಬಲಕ್ಕೆ ನಿಂತರೆ ಹೇಗಾದೀತು? ರಾಜ್ಯದ ವೈದ್ಯಕೀಯ- ಆರೋಗ್ಯ ಇಲಾಖೆಗಳಲ್ಲಿ ಇತ್ತೀಚಿನ ಬೆಳವಣಿಗೆಗಳು ಅದೇ ಜಾಡಿನಲ್ಲಿ ಇದ್ದಂತಿವೆ.

ಇದೇ ಜನವರಿ 5ರಂದು ಆರೋಗ್ಯ ಇಲಾಖೆ  ಆಜ್ಞೆಯೊಂದನ್ನು ಹೊರಡಿಸಿ, ಆಯುಷ್ ಚಿಕಿತ್ಸಕರು 6 ತಿಂಗಳ ತರಬೇತಿಯ ಬಳಿಕ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ತುರ್ತು ಸಂದರ್ಭಗಳಲ್ಲಿ ಅಲೋಪಥಿ ಔಷಧಿಗಳನ್ನು ಬಳಸಲು ಅವಕಾಶವಿತ್ತಿದೆ.

ಗ್ರಾಮಾಂತರ ಪ್ರದೇಶದ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ, ಸಾಂಕ್ರಾಮಿಕ ಹಾಗೂ ಸಾಂಕ್ರಾಮಿಕವಲ್ಲದ ರೋಗಗಳನ್ನು ತಡೆಗಟ್ಟುವ ಹಿತದೃಷ್ಟಿಯಿಂದ, ನವಜಾತ ಶಿಶು ಸುರಕ್ಷಾ ಕಾರ್ಯಕ್ರಮಕ್ಕಾಗಿ, ತುರ್ತು ಸಂದರ್ಭಗಳಲ್ಲಿ ಅಲೋಪಥಿ ಔಷಧಗಳನ್ನು ರೋಗಿಗಳಿಗೆ ನೀಡಬೇಕಾಗಿರುವ ಅನಿವಾರ್ಯ ಒದಗಿ ಬಂದಿರುವುದರಿಂದ ಔಷಧ ಮತ್ತು ಕಾಂತಿವರ್ಧಕ ಅಧಿನಿಯಮದ 2ಇಇ(iii) ಅನುಸಾರ ಈ ಅನುಮತಿಯನ್ನು ನೀಡಲಾಗುತ್ತಿದೆ ಎಂದು ಆಜ್ಞೆಯಲ್ಲಿ ಹೇಳಲಾಗಿದೆ.

ವೈದ್ಯವೃತ್ತಿಯು ವೈದ್ಯಕೀಯ ಪರಿಷತ್ತುಗಳ ನಿಯಮಗಳಿಗೆ ಬದ್ಧವಾಗಿದೆಯೇ ಹೊರತು, ಔಷಧ ಮತ್ತು ಕಾಂತಿವರ್ಧಕ ಅಧಿನಿಯಮಕ್ಕಲ್ಲ ಎನ್ನುವ ಕನಿಷ್ಠ ಜ್ಞಾನವು ಸರ್ಕಾರಕ್ಕಿಲ್ಲವೇ? ಜನರ ಆರೋಗ್ಯ ರಕ್ಷಣೆಗೆ ಸೂಕ್ತ ಸೌಲಭ್ಯಗಳನ್ನೂ, ಸಾಕಷ್ಟು ಹಣವನ್ನೂ ಒದಗಿಸಲಾಗದ ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ಹೀಗೆ ಯಾವುದೋ ಕಾಯ್ದೆಯನ್ನು ತಿರುಚಲು ಯತ್ನಿಸಿರುವುದು ಅತ್ಯಂತ ಅಪಾಯಕಾರಿಯಾಗಿದೆ ಹಾಗೂ ಖಂಡನೀಯವಾಗಿದೆ.

ತುರ್ತು ಸ್ಥಿತಿಗಳಲ್ಲಿ ಔಷಧಗಳನ್ನು ಬಳಸುವ ಮೊದಲು ಆ ತುರ್ತು ಸ್ಥಿತಿಗಳು ಏನು, ಎಂಥವು ಎಂಬುದನ್ನು ಗುರುತಿಸಬೇಡವೇ? ಆಯುಷ್ ಪದ್ಧತಿಗಳಿಂದ ತುರ್ತು ಚಿಕಿತ್ಸೆ ಸಾಧ್ಯವಿಲ್ಲ ಎಂದು ಅವರೇ ಒಪ್ಪಿಕೊಂಡರೆಂದರೆ, ತುರ್ತು ಸ್ಥಿತಿಗಳನ್ನು ಗುರುತಿಸುವ ತರಬೇತಿಯಾಗಲೀ, ಸಾಮರ್ಥ್ಯವಾಗಲೀ ಅವರಿಗಿಲ್ಲ ಎಂದಾಯಿತು. ಅವೆಲ್ಲವನ್ನೂ 6 ತಿಂಗಳಲ್ಲಿ ಕಲಿಯಲು ಸಾಧ್ಯವೇ ಇಲ್ಲ. ಇನ್ನು ಆಯುಷ್ ಪದ್ಧತಿಗಳಲ್ಲಿ ಸಾಂಕ್ರಾಮಿಕ ರೋಗಗಳ ಪರಿಕಲ್ಪನೆಯೇ ಇಲ್ಲದಿರುವಾಗ ಅವನ್ನವರು ತಡೆಯುವುದು ಹೇಗೆ ಸಾಧ್ಯ? ನವಜಾತ ಶಿಶುಗಳ ಸುರಕ್ಷೆಯನ್ನು ಆಯುಷ್ ಚಿಕಿತ್ಸಕರ ಸುಪರ್ದಿಗೆ ಒಪ್ಪಿಸುವುದೆಂದರೆ ಏನರ್ಥ? ಹೀಗೆ ಗ್ರಾಮೀಣ ಜನರು, ಬಡವರು, ಶಿಶುಗಳು, ಮಹಿಳೆಯರ ಆರೋಗ್ಯ ರಕ್ಷಣೆಯನ್ನು ಬೇಕಾಬಿಟ್ಟಿಯಾಗಿ ಯಾರು ಯಾರಿಗೋ ವಹಿಸಿ, ಆ ಜನರ ಹಿತದೃಷ್ಟಿಯನ್ನೇ ಸರ್ಕಾರ ಅದಕ್ಕೆ ನೆಪವಾಗಿಸುತ್ತಿರುವುದು ಎಷ್ಟು ಸರಿ?
ಸರ್ಕಾರವು ಈ ನಿರ್ಧಾರವನ್ನು ಕೈಗೊಂಡ ರೀತಿಯೂ ಸಂಶಯಾಸ್ಪದವಾಗಿದೆ. ಅದಕ್ಕೆಂದು ಮೂರು ತಿಂಗಳ ಹಿಂದೆ ರಚಿಸಲಾಗಿದ್ದ ಆಂತರಿಕ ಇಲಾಖಾ ಸಮಿತಿಯಲ್ಲಿ 6 ಸರ್ಕಾರಿ ಅಧಿಕಾರಿಗಳು, 4 ಆಯುಷ್ ಪ್ರತಿನಿಧಿಗಳ ಜೊತೆಯಲ್ಲಿ, ಆಧುನಿಕ ವೈದ್ಯ ವಿಜ್ಞಾನದ ಏಕೈಕ ಪ್ರತಿನಿಧಿಯಾಗಿ ಕರ್ನಾಟಕ ವೈದ್ಯಕೀಯ ಪರಿಷತ್ತಿನ ಅಧ್ಯಕ್ಷರಷ್ಟೇ ಇದ್ದರು!

ಈ ಸಮಿತಿಯ ಮೊದಲ ಸಭೆಯು ನವೆಂಬರ್ 11ರಂದು ನಡೆಯಿತು, ಆಗ ಈ ಪ್ರಸ್ತಾವವನ್ನು ತಾವು ವಿರೋಧಿಸಿದ್ದೆವು, ಡಿಸೆಂಬರ್ 14ರಂದು ನಡೆದ ಎರಡನೇ ಸಭೆಯ ಬಗ್ಗೆ ತಮಗೆ ತಡವಾಗಿ, ಡಿಸೆಂಬರ್‌ 22ರಂದು ಮಾಹಿತಿ ದೊರೆಯಿತು, ತಮ್ಮ ಅಭಿಪ್ರಾಯವನ್ನು ತಿಳಿಸುವ ಅವಕಾಶವೇ ದೊರೆಯಲಿಲ್ಲ, ಆದ್ದರಿಂದ ಈ ಆಜ್ಞೆಯನ್ನು ತಡೆಹಿಡಿಯಬೇಕು ಎಂದು ವೈದ್ಯಕೀಯ ಪರಿಷತ್ತಿನ ಅಧ್ಯಕ್ಷರು ಆಕ್ಷೇಪಣೆ ಸಲ್ಲಿಸಿದ್ದಾರೆಂದರೆ, ಈ ತರಾತುರಿಯ ನಿರ್ಣಯದ ಹಿಂದೆ ಅದೇನೋ ಅಡಗಿದೆ ಎನ್ನುವುದು ಇನ್ನಷ್ಟು ಸ್ಪಷ್ಟವಾಗುತ್ತದೆ.

ಹೀಗೆ ಆಯುಷ್ ಚಿಕಿತ್ಸಕರಿಗೆ ನೆರವಾಗಲು ಯಾವ್ಯಾವುದೋ ನಿಯಮಗಳನ್ನು ತಿರುಚಿ, ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಬದಲು ಹೆಚ್ಚಿನ ಸಂಬಳ, ಸವಲತ್ತುಗಳನ್ನಿತ್ತು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಧುನಿಕ ವೈದ್ಯರನ್ನು ನಿಯೋಜಿಸಲು ರಾಜ್ಯ ಸರ್ಕಾರ ಈ ಕೂಡಲೇ ಮುಂದಾಗಬೇಕು. ಬಿಹಾರ, ಜಾರ್ಖಂಡ್‌ಗಳಂತಹ ರಾಜ್ಯಗಳಲ್ಲಿ ಅದು ಸಾಧ್ಯವಾಗಿರುವಾಗ ಇಲ್ಲೇಕಾಗದು?

ಉಡುಪಿಯ ಹಾಜಿ ಅಬ್ದುಲ್ಲ ಸ್ಮಾರಕ ಸರ್ಕಾರಿ ಮಹಿಳಾ ಆಸ್ಪತ್ರೆಯ ಭೂಮಿಯನ್ನು ಖಾಸಗಿ ಉದ್ಯಮಿಯೊಬ್ಬರಿಗೆ ಒಪ್ಪಿಸಿರುವುದರಲ್ಲೂ ನಿಯಮಗಳ ಪಾಲನೆಯಾದಂತಿಲ್ಲ. ಆ ಖಾಸಗಿ ಆಸ್ಪತ್ರೆಯ ನಿರ್ಮಾಣಕ್ಕೆ ಸ್ವತಃ ಮುಖ್ಯಮಂತ್ರಿಯೇ ಶಂಕುಸ್ಥಾಪನೆ ಮಾಡಿದ್ದರೂ, ಆ ಬಗ್ಗೆ ಯಾವ ಸರ್ಕಾರಿ ಕಚೇರಿಯಲ್ಲೂ ಯಾವ ದಾಖಲೆಯೂ ಇಲ್ಲವೆಂದರೆ, ನಮ್ಮ ರಾಜ್ಯದ ಪರಿಸ್ಥಿತಿಯ ಬಗ್ಗೆ ಸಹಜವಾಗಿಯೇ ಭಯ ಮೂಡುತ್ತದೆ.
ಯಾವುದೇ ಒಪ್ಪಂದಗಳಾಗಲೀ ಅಥವಾ ಪರವಾನಗಿಗಳಾಗಲೀ ಇಲ್ಲದೆ ಸರ್ಕಾರಿ ಆಸ್ತಿಯಲ್ಲಿ ಖಾಸಗಿ ಉದ್ಯಮಿಯು ಬೇಕಾದ್ದನ್ನು ಮಾಡಲು ಸಾಧ್ಯವೇ?

ರಾಜ್ಯ ಕಾಯ್ದೆಯಡಿ ಸ್ಥಾಪಿತವಾಗಿರುವ ಕರ್ನಾಟಕ ವೈದ್ಯಕೀಯ ಪರಿಷತ್ತು ಆ ಕಾಯ್ದೆಯನ್ನು ಮೀರಿ, ತನ್ನಷ್ಟಕ್ಕೇ ದಿನಕ್ಕೊಂದರಂತೆ ನಿಯಮಗಳನ್ನು ಮಾಡಿಕೊಂಡು, ವೈದ್ಯರ ಮರುನೋಂದಣಿಗಾಗಿ ಒತ್ತಾಯಿಸುತ್ತಿದ್ದಾಗ, ಆ ಕುರಿತು ಮುಖ್ಯಮಂತ್ರಿಯಾದಿಯಾಗಿ ಎಲ್ಲ ಸಂಬಂಧಿತರಿಗೂ ತಿಂಗಳುಗಟ್ಟಲೆ ದೂರು ನೀಡಿದರೂ ಪ್ರಯೋಜನವಾಗದೆ, ಕೊನೆಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ಪಡೆಯಬೇಕಾಗಿ ಬಂದುದು ಕೂಡ ವರ್ತಮಾನದ ದುಃಸ್ಥಿತಿಗೆ ಇನ್ನೊಂದು ಉದಾಹರಣೆಯಾಗಿದೆ.

ಸಜ್ಜನ, ಜ್ಞಾನಿ, ಸಮಾಜವಾದಿ, ಬಡವರ ಹಿತೈಷಿ ಎಂದೆಲ್ಲಾ ಕರೆಸಿಕೊಳ್ಳುವ ಮಂತ್ರಿ-ಮುಖ್ಯಮಂತ್ರಿಗಳೂ, ದಕ್ಷ, ಪ್ರಾಮಾಣಿಕ, ಇತ್ಯಾದಿ ಖ್ಯಾತಿಯುಳ್ಳ ಅಧಿಕಾರಿಗಳೂ ಇರುವಾಗಲೇ ಇಂಥವೆಲ್ಲವೂ ನಡೆಯುತ್ತವೆ ಎಂದಾದರೆ ಈ ರಾಜ್ಯದ ಜನಸಾಮಾನ್ಯರ ಗತಿಯೇನು?
ಸಂವಿಧಾನವನ್ನೂ ಹಾಗೂ ಕಾಯ್ದೆ- ಕಾನೂನುಗಳನ್ನೂ ರಕ್ಷಿಸಬೇಕಾದ ಸರ್ಕಾರಗಳೇ ಅವನ್ನು ಬುಡಮೇಲು ಮಾಡಲು ಹೊರಟರೆ ಆಗ ದೇಶದ ಭವಿಷ್ಯವೇನು? ಇವನ್ನೆಲ್ಲ ನೋಡುತ್ತಾ ನಾವು ಸುಮ್ಮನೆ ಇರಬೇಕೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT