ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ಕಾಣದ ಒಳಚರಂಡಿ ಅವ್ಯವಸ್ಥೆ

ಹಣದ ಕೊರತೆ; ಚರಂಡಿಯಲ್ಲಿ ಕಸ, ತ್ಯಾಜ್ಯದ ರಾಶಿ, ಸರಾಗವಾಗಿ ಹರಿಯದ ನೀರು, ದುರ್ವಾಸನೆ
Last Updated 10 ಜನವರಿ 2017, 5:38 IST
ಅಕ್ಷರ ಗಾತ್ರ
ಭಟ್ಕಳ: ಪಟ್ಟಣದಲ್ಲಿನ ಒಳಚರಂಡಿ ಅವ್ಯವಸ್ಥೆಗೆ ಪರಿಹಾರವೇ ಇಲ್ಲವೇ ಎಂಬ ಪ್ರಶ್ನೆ ದಶಕಗಳಿಂದಲೂ ಜನರನ್ನು ಕಾಡುತ್ತಿದೆ.
 
ಇನ್ನೇನು ಬೇಸಿಗೆ ಆರಂಭವಾಗು­ತ್ತಿದೆ, ನಂತರ ಬರುವ ಮಳೆಗಾಲದಲ್ಲಿ ಒಳಚರಂಡಿ ವ್ಯವಸ್ಥೆ ಬಹುವಾಗಿ ಕಾಡುತ್ತದೆ. ದಿನದಿಂದ ದಿನಕ್ಕೆ ಬೆಳೆ­ಯುತ್ತಿರುವ  ಪಟ್ಟಣದಲ್ಲಿ, ಅದರಲ್ಲೂ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸರಿಯಾದ ಒಳ­ಚರಂಡಿ ಇಲ್ಲದಿರುವುದು ದುರದೃಷ್ಟಕರ.
 
ಇರುವ ಚರಂಡಿಗಳಲ್ಲಿ ಕಸಕಡ್ಡಿ, ತ್ಯಾಜ್ಯಗಳು ತುಂಬಿಕೊಂಡು ನೀರು ಹರಿಯಲು ಜಾಗವೇ ಇಲ್ಲದಂತಾಗಿದೆ. ಎಲ್ಲೆಂದರಲ್ಲಿ ಚರಂಡಿ ಕಟ್ಟಿಕೊಂಡು ಹುಳು ಹುಪ್ಪಟೆ, ಸೊಳ್ಳೆಗಳ ಉತ್ಪತ್ತಿ ಕೇಂದ್ರಗಳಾಗಿವೆ. ಪಟ್ಟಣದಲ್ಲಿ ಇರುವ ಬಾವಿಗಳಿಗೂ ಒಳಚರಂಡಿ ನೀರು ನುಗ್ಗುತ್ತಿದ್ದು ಉಪಯೋಗಿಸಲು ಬಾರದಂತಾಗಿದೆ.
 
‘ಮಳೆಗಾಲದಂತೂ ಪಟ್ಟಣವಾಸಿಗಳ ಗೋಳು ಕೇಳುವರಿಲ್ಲವಾಗಿದೆ. ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಮಳೆಯ ನೀರು ರಸ್ತೆಗಳ ಮೇಲೆ ಹರಿಯುತ್ತದೆ. ಜತೆಗೆ ಮನೆಗಳಿಗೂ ನೀರು ನುಗ್ಗುತ್ತದೆ. ಇದು ಮಳೆಯ ನೀರೋ, ಒಳಚರಂಡಿಯ ನೀರೋ, ತ್ಯಾಜ್ಯದ ನೀರೋ ಎಂಬುದೇ ತಿಳಿಯುವುದಿಲ್ಲ’ ಎಂದು ಪಟ್ಟಣದ ಗೌಸಿಯಾ ಸ್ಟ್ರೀಟ್‌ನ ಜುಲ್ಫಿಕರ್ ಹೇಳುತ್ತಾರೆ.
 
ಚರಂಡಿ ವ್ಯವಸ್ಥೆ ಸರಿ ಇಲ್ಲದ ಪರಿಣಾಮ ಮಳೆಗಾಲದಲ್ಲಿ ಪಟ್ಟಣದ ಹೃದಯ ಭಾಗವಾದ ಶಂಸುದ್ದೀನ್‌ ವೃತ್ತ, ರಂಗೀಕಟ್ಟೆ ಸೇರಿ ಹಲವೆಡೆ ಮಳೆಯ ನೀರು ಹೊಳೆಯಂತೆ ಹರಿಯುತ್ತದೆ. ಅಂಗಡಿಗಳಿಗೂ ನೀರು ನುಗ್ಗಿ ಹಾನಿ­ಯಾಗುತ್ತದೆ. ಈ ಸಮಸ್ಯೆಗೆ ಈವರೆಗೆ ಇಲ್ಲಿನ ಪುರಸಭೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದು  ಭಾಗದ ಅಂಗಡಿಕಾರರು ದೂರುತ್ತಾರೆ.
 
ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಸುಸ್ತಾದ ಪುರಸಭೆ: ಎಸ್‌. ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಎಡಿಬಿ ಯೋಜನೆಯಡಿ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಂಡು ಅರ್ಧದಷ್ಟು ಕಾಮಗಾರಿಯನ್ನೂ ಮಾಡಲಾಗಿತ್ತು. ಆ ಬಳಿಕ ಕಾಮಗಾರಿ ಪೂರ್ಣಗೊಳಿಸಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಗೆ ಸಲ್ಲಿಸಿದ್ದ ₹ 250 ಕೋಟಿ ವೆಚ್ಚದ ಒಳಚರಂಡಿ ಯೋಜನೆಯ ಪ್ರಸ್ತಾವದ ಕಡತ ದೂಳು ತಿನ್ನುತ್ತಿದೆ. ‘ಅನುದಾನ ಮಂಜೂರಾತಿ­ಗಾಗಿ ಪುರಸಭೆ ಆಡಳಿತದಿಂದ 10 ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ಆದರೆ ಇನ್ನೂ ಮಂಜೂರಾಗಿಲ್ಲ’ ಎಂದು ಪುರಸಭೆಯ ಅಧ್ಯಕ್ಷ ಸಾಧಿಕ್‌ ಮಟ್ಟಾ ಹೇಳುತ್ತಾರೆ.
 
ತಂಝೀಮ್‌ನ ಕಾರ್ಯಕ್ರಮಕ್ಕೆ 2014ರಲ್ಲಿ ಭಟ್ಕಳಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಂಝೀಮ್ ಸಂಸ್ಥೆಯ ಪದಾಧಿಕಾರಿಗಳು ಭಟ್ಕಳದಲ್ಲಿನ ಒಳಚರಂಡಿ ಅವ್ಯವಸ್ಥೆ ಬಗ್ಗೆ ಗಮನ ಸೆಳೆದು ಹಣ ಮಂಜೂ­ರಾತಿಗೆ ಮನವಿ ಮಾಡಿದ್ದರು. ಮುಖ್ಯ­ಮಂತ್ರಿಗಳು ವೇದಿಕೆಯಲ್ಲೇ ಒಳಚರಂಡಿ ಕಾಮಗಾರಿಗೆ ಮಂಜೂ­ರಾತಿ ನೀಡಿದ್ದರು. ಶಾಸಕ ಮಂಕಾಳ ವೈದ್ಯರೂ ಇದೇ ವೇದಿಕೆಯಲ್ಲಿದ್ದರು. ಆದರೆ ಇದೂವರೆಗೆ ಅನುಷ್ಠಾನ ಗೊಂಡಿಲ್ಲ.  
 
‘ಪಟ್ಟಣದಲ್ಲೆಡೆ ಹೊಸದಾಗಿ ಒಳಚರಂಡಿ ಕಾಮಗಾರಿಗಾಗಿ ₹250 ಕೋಟಿ ವೆಚ್ಚದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ₹ 240 ಕೋಟಿ ಮಂಜೂರಾಗುವ ಭರವಸೆ ಇದೆ. ಹಣ ಮಂಜೂರಾದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು’ ಎಂದು ಪುರಸಭೆ ಅಧ್ಯಕ್ಷ ಸಾಧಿಕ್‌ ಮಟ್ಟಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT