ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರಕ ಭವನ : ಎಲ್ಲರ ಸಹಕಾರ ಅಗತ್ಯ

ಸಮಾಜ ಮಂದಿ­ರದ ಜಾಗದಲ್ಲಿ ನಿರ್ಮಾಣ; ಪೂರ್ವಭಾವಿ ಸಭೆಯಲ್ಲಿ ಶಾಸಕ ಕಾಗೇರಿ ಅಭಿಮತ
Last Updated 10 ಜನವರಿ 2017, 5:40 IST
ಅಕ್ಷರ ಗಾತ್ರ
ಸಿದ್ದಾಪುರ: ಪಟ್ಟಣದ ಸಮಾಜ ಮಂದಿ­ರದ ಸ್ಥಳದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ವಾತಂತ್ರ್ಯ ಸ್ಮಾರಕ ಭವನದ ವಿಷಯದಲ್ಲಿ ಯಾರೂ ಮೊಸ­ರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ­ಬಾರದು ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದರು.
 
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯ ಸ್ಮಾರಕ ಭವನದ ನಿರ್ಮಾಣದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
 
‘ಪಟ್ಟಣದ ಸಮಾಜ ಮಂದಿರದ ಸ್ಥಳವನ್ನು ಸ್ವಾತಂತ್ರ್ಯ ಸ್ಮಾರಕ ಭವನಕ್ಕೆ ಮೀಸಲಿಡಬೇಕು ಎಂದು ಜಿಲ್ಲಾಧಿಕಾ­ರಿಗಳಿಗೆ ಪತ್ರ ಬರೆದಿದ್ದೇನೆ. ಈ ಸ್ಥಳ ಪಟ್ಟಣ ಪಂಚಾಯ್ತಿ ಕಬ್ಜಾದಲ್ಲಿದೆ. ಈ ಭವನದ ನಿರ್ಮಾಣ ಕಾರ್ಯ ಪಕ್ಷಾತೀತ­ವಾಗಿ ನಡೆಯಬೇಕು ಎಂಬ ದೃಷ್ಟಿಯಿಂದ ಎಲ್ಲರ ಸಹಕಾರ ಕೇಳಿದ್ದೇನೆ. ಈ ನಿಟ್ಟಿನಲ್ಲಿ ಏನಾದರೂ ಸಣ್ಣ–ಪುಟ್ಟ ಸಮಸ್ಯೆ ಇದ್ದರೆ ಮಾತುಕತೆ ಮೂಲಕ ಬಗೆಹರಿಸಿ­ಕೊಳ್ಳೋಣ’ ಎಂದು ಹೇಳೀದರು.
 
ಈ ಕಟ್ಟಡ ನಿರ್ಮಾಣದ ಶಂಕು­ಸ್ಥಾಪನೆ ಬೇಗ ಆಗಬೇಕು ಎಂಬುದಕ್ಕೆ ಕಾರಣವಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಿಲ್ಲೆಯಲ್ಲಿ ಅಂಕೋಲಾ ಮತ್ತು ಸಿದ್ದಾಪುರ ತಾಲ್ಲೂಕಿನ ಕೊಡುಗೆ ದೊಡ್ಡ­ದಿದೆ.  ಈಗ  ನಮ್ಮ ತಾಲ್ಲೂಕಿನಲ್ಲಿ ಕೇವಲ ಇಬ್ಬರು ಸ್ವಾತಂತ್ರ್ಯಯೋಧರಿ­ದ್ದಾರೆ. ಈ ಇಬ್ಬರು ಹಿರಿಯ ಸ್ವಾತಂತ್ರ್ಯ­ಯೋಧರು ನಮ್ಮ ನಡುವೆ ಇರುವ ಸಂದರ್ಭ­ದಲ್ಲಿಯೇ ಸ್ವಾತಂತ್ರ್ಯ ಸ್ಮಾರಕ ಭವನ ಆಗಬೇಕು ಎಂಬುದು ನಮ್ಮ ಬಯಕೆ ಎಂದರು.
 
ಸ್ವಾತಂತ್ರ್ಯ ಸ್ಮಾರಕ ಭವನದ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವ ಬಗ್ಗೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ಮಾಡಿದ್ದೇನೆ. ಮನವಿಯನ್ನು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಗೆ ಅವರು ಕಳುಹಿಸಿದ್ದಾರೆ. ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಚಿವ­ರಿಗೂ ಈ ಬಗ್ಗೆ ಮನವಿ ಮಾಡಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಹೇಳಿ­ದ್ದೇನೆ ಎಂದರು.
 
ಸ್ವಾತಂತ್ರ್ಯ ಸ್ಮಾರಕ ಭವನ ಕಟ್ಟಡ ಹೇಗಿರಬೇಕು ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಬಂದಿಲ್ಲ. ಈ ಕಟ್ಟಡದಲ್ಲಿ ಗ್ರಂಥಾಲಯ, ಅಧ್ಯಯನ ಕೊಠಡಿ, ಇತರ ಕೊಠಡಿ­ಗಳು, ಆಡಿಟೋರಿಯಂ ಇರಬೇಕು.  2 ಅಥವಾ 3 ಮಹಡಿಗಳು ಇರಬೇಕು ಎಂಬುದು ನಮ್ಮ ಯೋಚನೆ ಎಂದು ಹೇಳಿದರು.
 
ಇದೇ 26ರಂದು (ಗಣ­ರಾಜ್ಯೋ­ತ್ಸವದ ದಿನ) ಈ ಕಟ್ಟಡದ ಶಂಕು­ಸ್ಥಾಪನೆ­ಯನ್ನು ತಾಲ್ಲೂಕಿನ ಹಿರಿಯ ಸ್ವಾತಂತ್ರ್ಯಯೋಧರಾದ ನರಸಿಂಹ ಹೆಗಡೆ ಮಗೇಗಾರ ಮತ್ತು ಬಂಗಾರ್ಯ ರಾಮ ನಾಯ್ಕ ಮನಮನೆ ಅವರಿಂದ ನೆರವೇರಿಸಲಾಗುವುದು. ತಾಲ್ಲೂಕಿನ ಎಲ್ಲ ಸ್ವಾತಂತ್ರ್ಯ ಯೋಧರ ಕುಟುಂಬಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಕಳುಹಿಸಬೇಕು ಎಂದರು. 
 
ಜಿಲ್ಲಾ ಪಂಚಾಯ್ತಿ ಸದಸ್ಯ ನಾಗರಾಜ ನಾಯ್ಕ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸುಮನಾ ಕಾಮತ್, ಉಪಾಧ್ಯಕ್ಷೆ ದೇವಮ್ಮ ಚಲವಾದಿ, ಸದಸ್ಯ ಕೆ.ಜಿ.­ನಾಯ್ಕ, ಗುರುರಾಜ ಶಾನಭಾಗ, ಮಾರುತಿ ನಾಯ್ಕ, ಸ್ಥಳೀಯ ಆಶಾಕಿರಣ ಟ್ರಸ್ಟ್ ಅಧ್ಯಕ್ಷ ರವಿ ಹೆಗಡೆ ಹೂವಿನಮನೆ, ತಹಶೀಲ್ದಾರ್ ವಿ.ಜಿ.ಲಾಂಜೇಕರ ಮತ್ತಿತರರು ಉಪಸ್ಥಿತರಿದ್ದರು.
 
***
ಸ್ವಾತಂತ್ರ್ಯ ಸ್ಮಾರಕ ಭವನದ ನಿರ್ಮಾಣ ಕಾರ್ಯ ವಿವಾ­ದ­ವಿಲ್ಲದೇ ಮಾಡಬೇಕು ಎಂಬುದು ನಮ್ಮ ಆಶಯ. ಈ ವಿಷಯದಲ್ಲಿ ಅನಗತ್ಯ ವಿವಾದ ಎಬ್ಬಿಸುವುದು ಸರಿಯಲ್ಲ.
-ವಿಶ್ವೇಶ್ವರ ಹೆಗಡೆ ಕಾಗೇರಿ
ಶಾಸಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT