ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಕ್ಕೆ ಬೆಳಕು ನೀಡುವ ಜ್ಞಾನ ನೀಡಿ

ವಿದ್ಯಾ ಪ್ರಸಾರಕ ಸಮಿತಿಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಸಲಹೆ
Last Updated 10 ಜನವರಿ 2017, 5:48 IST
ಅಕ್ಷರ ಗಾತ್ರ
ರಾಮದುರ್ಗ: ವಿದ್ಯಾರ್ಥಿಗಳು ಸಮಾಜಕ್ಕೆ ಬೆಳಕು ನೀಡುವ ಜ್ಞಾನ ಪಡೆದುಕೊಳ್ಳಬೇಕು ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಸಲಹೆ ನೀಡಿದರು. 
 
ಇಲ್ಲಿನ ವಿದ್ಯಾ ಪ್ರಸಾರಕ ಸಮಿತಿಯ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಶಿಕ್ಷಣ ಹಣ ಗಳಿಕೆಯ ವಸ್ತುವಾಗಿ ಪರಿಣಮಿಸುತ್ತಿದೆ. ಶೈಕ್ಷಣಿಕ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿಕೊಳ್ಳುತ್ತಿವೆ ಎಂದು ಅವರು ವಿಷಾದಿಸಿದರು. 
 
ವಿದ್ಯಾಮಂದಿರಗಳಲ್ಲಿ ಪಡೆಯುವಂತಹ ಜ್ಞಾನ ಸ್ವಹಿತಕ್ಕೆ ಬಳಸಿಕೊಳ್ಳದೇ ತನ್ನ ಸುತ್ತಲಿನ ಅಸಹಾಯಕ ಜನರ ಕಲ್ಯಾಣಕ್ಕೆ ಉಪಯೋಗ ಆಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
 
ಇಂದಿನ ವಿದ್ಯಾರ್ಥಿಗಳು ಮತ್ತು ಹಿಂದಿನ ಶಿಷ್ಯರ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಅಂದಿನ ಶಿಷ್ಯರು ಆಶ್ರಮಗಳಲ್ಲಿ ನಡೆಯುವ ಎಲ್ಲ ಕಾರ್ಯಗಳನ್ನು ಗುರುವಿನ ಗಮನಕ್ಕೂ ಬರದೇ ನಿಭಾಯಿಸುತ್ತಿದ್ದರು. ಇಂದಿನ ವಿದ್ಯಾರ್ಥಿಗಳು ಗುರುಗಳು ಹೇಳಿದ ಮಾತಿಗೆ ಕವಡೆ ಕಿಮ್ಮತ್ತು ನೀಡುತ್ತಿಲ್ಲ. ಅಂದಿನ ಮಕ್ಕಳು ಗುರುವಿನ ಆಜ್ಞೆಯನ್ನು ಶಿರಸಾವಹಿಸಿ ಮಾಡುತ್ತಿದ್ದರು. ಆದರೆ ಇಂದಿನ ಮಕ್ಕಳ ಮಾತಿನಂತೆಯೇ ಶಿಕ್ಷಕರು ನಡೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು. 
 
ಪರಿಸತ ಶುಚಿತ್ವಗೊಳಿಸುವ ಮನೋ ಭಾವನೆ ಮತ್ತು ವಿದ್ಯಾದಾನ ಮಾಡುವ ಶಿಕ್ಷಣ ಸಂಸ್ಥೆಗಳು ಸಮಾಜದಲ್ಲಿ ಇದ್ದರೆ ಜ್ಞಾನದ ಬೆಳಕು ಪ್ರಜ್ವಲಿಸಲಿದೆ. ಶಿಕ್ಷಣ ಸಂಸ್ಥೆಗಳು ಜ್ಞಾನ ನೀಡುವ ಕಾರ್ಯವನ್ನು ಮತ್ತು ಉತ್ತಮ ಕಾರ್ಯ ಮಾಡುವ ಮನಸ್ಸುಗಳು ಇಂದಿನ ಸಮಾಜಕ್ಕೆ ಅಗತ್ಯವಾಗಿವೆ. ಸಮಾಜ ಈ ದಿಸೆಯಲ್ಲಿ ಯೋಚಿಸಬೇಕಿದೆ ಎಂದು ನುಡಿದರು. 
 
ಜೀವನದಲ್ಲಿ ವಿರೋಧಗಳು, ತೊಂದರೆಗಳು ಎದುರಾಗುದಾಗ ಧೈರ್ಯದಿಂದ ಎದುರಿಸುವ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ತುಳಿಯುವವರು ಇರುವಾಗಲೇ ಮೇಲೇಳುವ ಪ್ರಯತ್ನ ನಿರಂತರವಾಗಿರಬೇಕು. ಅಂದಾಗ ಮಾತ್ರ ಜೀವನದಲ್ಲಿ ಪ್ರತಿಫಲ ಲಭ್ಯವಾಗಲಿದೆ ಎಂಬುದನ್ನು ಅರಿಕೊಳ್ಳಬೇಕು ಎಂದು ತಿಳಿಸಿದರು. 
 
ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅಪಾರವಾದ ಗೌರವವಿದೆ. ಕನಿಷ್ಠ ಓದಿದವನಿಂದ ಅತ್ಯುನ್ನತ ಸ್ಥಾನಕ್ಕೆ ಏರಿದವರೂ ಗುರುವಿಗೆ ಗೌರವ ಸಲ್ಲಿಸುತ್ತಾರೆ. ಗುರುವಿನ ಸ್ಥಾನ ಹೊಂದಿರುವವರು ವೇತನಕ್ಕಾಗಿ ಕೆಲಸ ನಿರ್ವಹಿಸದೇ ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಮ್ಮ ಆಯುಷ್ಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಹೇಳಿದರು. 
 
ರಾಮದುರ್ಗ ಪಟ್ಟಣ ಎಲ್ಲ ಕ್ಷೇತ್ರಗಳಲ್ಲೂ ತನ್ನ ಕೊಡುಗೆ ನೀಡಿದೆ. ಉತ್ತಮ ಶಿಕ್ಷಕರು ಇರುವ ವಿದ್ಯಾ ಮಂದಿರಗಳು ಉತ್ತಮ ಶಿಕ್ಷಣ ನೀಡಿದರೆ ಮುಂದೊಂದು ದಿನ ರಾಮದುರ್ಗದ ಹೆಸರು ವಿದ್ಯಾದುರ್ಗವಾಗಿ ಬದಲಾಗಲಿದೆ ಎಂದು ತಿಳಿಸಿದರು. 
 
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ಬಿ. ಹೊಸಮನಿ ಮಾತನಾಡಿ, ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸ ಅನ್ನುವುದು ಬಹುಮುಖ್ಯ ಪಾತ್ರ ವಹಿಸಲಿದೆ. ಸ್ಪರ್ಧಾತ್ಮಕ ವಿದ್ಯಾಭ್ಯಾಸಕ್ಕೆ ಶಿಕ್ಷಣ ಸಂಸ್ಥೆಗಳು ಒತ್ತು ನೀಡಬೇಕು. ಸರ್ಕಾರದ ಜೊತೆಗೆ ಮಠಾಧೀಶರು, ಖಾಸಗಿ ಸಂಸ್ಥೆಗಳು ಮಕ್ಕಳ ವಿದ್ಯಾರ್ಜನೆಗೆ ನೀಡುತ್ತಿರುವ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. 
 
ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಮಾತನಾಡಿ, ತಾಲ್ಲೂಕಿನ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಮುಂದಿನ ವರ್ಷದಿಂದ ಪೊಲಿಟೆಕ್ನಿಕ್ ಕಾಲೇಜು ಮಂಜೂರಾಗಿದೆ. ಅದರಂತೆ 8 ಪ್ರೌಢಶಾಲೆಗಳು, 3 ಪಪೂ ಕಾಲೇಜುಮಂಜೂರಾಗಿವೆ ಎಂದು ಅವರು ತಿಳಿಸಿದರು. 
 
ವಿದ್ಯಾ ಪ್ರಸಾರಕ ಸಮಿತಿ ಅಧ್ಯಕ್ಷ ಪಿ. ಎಂ. ಜಗತಾಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎಸ್. ಎಸ್. ಕೊಡತೆ ಸ್ವಾಗತಿಸಿದರು. ವಿಶಾಲಾಕ್ಷಿ ಚಿಕ್ಕೋಡಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಪ್ರಕಾಶ ತೆಗ್ಗಿಹಳ್ಳಿ ವಂದಿಸಿದರು. 
 
***
ಶಿಕ್ಷಕರ ಭಾಗ್ಯ ಕಲ್ಪಿಸಲು ಒತ್ತಾಯ
ರಾಜ್ಯದ ಜನರಿಗೆ ಹಲವಾರು ಭಾಗ್ಯಗಳನ್ನು ಕಲ್ಪಿಸಿರುವ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಶಿಕ್ಷಣ ಇಲಾಖೆಯ ಸಬಲೀಕರಣಕ್ಕೆ ಶಿಕ್ಷಕರ ಭಾಗ್ಯ ಕಲ್ಪಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದರು.
 
ಪಟ್ಟಣದ ವಿದ್ಯಾ ಪ್ರಸಾರಕ ಸಮಿತಿಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಕಳೆದ ಹಲವು ವರ್ಷಗಳಿಂದ ಪದವಿ ಪೂರ್ವ ವಿದ್ಯಾಲಯಗಳಿಗೆ, ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಿಗೆ ನಿಗದಿತ ಶಿಕ್ಷಕರನ್ನು ನೇಮಕ ಮಾಡುವುದನ್ನು ಬಿಟ್ಟು ವಿವಿಧ ಭಾಗ್ಯ ಕಲ್ಪಿಸುತ್ತಿದೆ. ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಮುಖ್ಯಮಂತ್ರಿಗಳು ಮೊದಲಿಗೆ ಶಿಕ್ಷಕರ ನೇಮಕಾತಿಗೆ ಮುಂದಾಗಲಿ ಎಂದು ಹೇಳಿದರು. 
 
ಗುಣಮಟ್ಟದ ಶಿಕ್ಷಣ ನೀಡುತ್ತಿರುವ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃಧ್ಧಿಗೆ ಬೇರೆ ರಾಜ್ಯದಿಂದ ಆಗಮಿಸಿರುವ ಐಎಎಸ್ ಅಧಿಕಾರಿಗಳು ಶ್ರಮಿಸುವ ಬದಲು ಅವುಗಳ ನಿಯಂತ್ರಣಕ್ಕೆ ಮುಂದಾಗುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ ಅವರು ಒಂದು ವೇಳೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಯವಾದರೆ ಶಿಕ್ಷಣ ವ್ಯವಸ್ಥೆಯ ಮೇಲೆ ವ್ಯತಿರಿಕ್ತಪರಿಣಾಮ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
 
ಕನಿಷ್ಠ ಪ್ರಾಥಮಿಕ ಹಂತವನ್ನಾದರೂ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತದೆ. ಐಟಿಬಿಟಿ ಆರಂಭದ ನಂತರ ಬಹುತೇಕ ಪಾಲಕರಲ್ಲಿ ಇಂಗ್ಲೀಷ ವ್ಯಾಮೋಹ ಹೆಚ್ಚಾಗಿದೆ. ಆದರೆ ಎಂಟೆಕ್ ಮತ್ತು ಬಿಇ ಓದಿರುವ ಸುಮಾರು 7ಸಾವಿರ ವಿದ್ಯಾವಂತರ ನಿರುದ್ಯೋಗಿಗಳಾಗಿದ್ದಾರೆ. ಇಂದು ಕನ್ನಡ ಭಾಷೆಯೇ ಜೀವನ ನಿರ್ವಹಣೆಗೆ ಅಗತ್ಯವಾಗಿದೆ ಎಂದು ಅವರು ಹೇಳಿದರು.
 
**
ವಾಹನ ಸಂಚಾರ ದಟ್ಟಣೆ; ಜನರಿಗೆ ತೊಂದರೆ
ವಿದ್ಯಾಪ್ರಸಾರಕ ಸಮಿತಿಯ ಸುವರ್ಣ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಉಂಟಾದ ಜನದಟ್ಟಣೆ, ವಾಹನ ದಟ್ಟಣೆಯಿಂದ ರೈತರು, ಶಾಲಾ ಮಕ್ಕಳು, ನ್ಯಾಯಾಲಯಗಳಿಗೆ ಹೋಗುವವರಿಗೆ ಕಿರಿಕಿರಿಯಾಯಿತು. 
 
ಕೃಷಿ ಇಲಾಖೆ, ನ್ಯಾಯಾಲಯ, ಶಾಲೆ ಕಾಲೇಜಿಗೆ ಹೋಗುವವರಿಗೆ ಕೋರ್ಟ್‌ ರಸ್ತೆಯಲ್ಲಿ ಅಡೆತಡೆ ಹಾಕಿದ್ದ ಪೊಲೀಸರ ಕ್ರಮದಿಂದ ತೀವ್ರ ತೊಂದರೆಯಾಯಿತು. ಅರಮನೆ ಆವರಣದಲ್ಲಿ ನಡೆದ ಕಾರ್ಯಕ್ರಮ ಸಲುವಾಗಿ ಪೊಲೀಸರು ಮುಖ್ಯ ರಸ್ತೆಯಲ್ಲಿಯೇ ತಡೆದು ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್ ಕೂಡ ಆಗಿತ್ತು. 
 
ಸೋಮವಾರ ಕೋರ್ಟ್‌ನ ಕಲಾಪಗಳು ನಡೆಯಲು ಧ್ವನಿ ವರ್ಧಕದ ಕಿರಿಕಿರಿಯಾಗಿದ್ದರೂ ಪೊಲೀಸರು ಮತ್ತು ಕೋರ್ಟಿನವರು ಚಕಾರ ಎತ್ತದೇ ಮೌನವಹಿಸಿದ್ದರು. ನಿವೃತ್ತ ನ್ಯಾಯಾಧೀಶರೊಬ್ಬರನ್ನು ಮುಖ್ಯ ಸಮಾರಂಭಕ್ಕೆ ಆವ್ಹಾನಿಸಿದ್ದರಿಂದ ಸಾರ್ವಜನಿಕರ ತೊಂದರೆಗಳನ್ನು ಮೀರಿ ಎಲ್ಲವೂ ನಿರರ್ಗಳವಾಗಿ ನಡೆಯಿತು. ಕಿಲ್ಲಾ ಗಲ್ಲಿಯ ಜನ, ಶಾಲೆಗಳಿಗೆ ಹೋಗುವ ಮಕ್ಕಳ ಪಾಲಕರು, ಕೋರ್ಟ್‌ಗೆ ಹೋಗುವವರು ಸಾಕಷ್ಟು ತೊಂದರೆಗೆ ಸಿಲುಕಿಕೊಂಡರು. ಮುಖ್ಯ ಸಮಾರಂಭವೇ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ತಡವಾಗಿ ಆರಂಭಗೊಂಡದ್ದಕ್ಕೆ ಪ್ರೇಕ್ಷಕರೂ ಬೇಸರ ಪಟ್ಟರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT