ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಯೋಜನೆಯಲ್ಲೇ ಶೋಷಣೆ

ಬಿಸಿಯೂಟ ತಯಾರಕರ ಫೆಡರೇಷನ್‌ನ 2ನೇ ರಾಜ್ಯ ಸಮ್ಮೇಳನ: ಪ್ರತಿನಿಧಿಗಳ ಸಮಾವೇಶ
Last Updated 10 ಜನವರಿ 2017, 6:13 IST
ಅಕ್ಷರ ಗಾತ್ರ
ಹಾವೇರಿ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿಷ್ಠೆಗಾಗಿ ಜಾರಿಗೆ ತಂದ ಯೋಜನೆಗಳಲ್ಲೇ ಮಹಿಳೆಯರ ಶೋಷಣೆ ನಡೆಯುತ್ತಿದೆ’ ಎಂದು ಎಐಟಿಯುಸಿಯ ರಾಜ್ಯ ಸಮಿತಿಯ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್ ಹೇಳಿದರು.
 
ನಗರದ ಜಿಲ್ಲಾ ಗುರುಭವನದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ನ ‘2ನೇ ರಾಜ್ಯ ಸಮ್ಮೇಳನದ ಪ್ರತಿನಿಧಿಗಳ ಸಮಾವೇಶ’ವನ್ನು ಉದ್ಘಾಟಿಸಿ ಮಾತನಾಡಿದರು.
 
‘ದೇಶದ 1.2 ಲಕ್ಷ ಬಿಸಿಯೂಟ ಕಾರ್ಯಕರ್ತೆಯರಿಗೆ ಕನಿಷ್ಠ ಕೂಲಿ ನೀಡದ ಸರ್ಕಾರಗಳು ಶೋಷಣೆ ಮಾಡುತ್ತಿವೆ. ಅದರ ವಿರುದ್ಧ ನಾವೆಲ್ಲ ರಾಷ್ಟ್ರಮಟ್ಟದಲ್ಲಿ ಸಂಘಟಿತರಾಗಿ ಸರ್ಕಾರಗಳ ವಿರುದ್ಧ ಹೋರಾಡಬೇಕಾಗಿದೆ. ಕೇಂದ್ರ ಸರ್ಕಾರದ ನೀತಿ ಕೇವಲ ಬಂಡವಾಳಶಾಹಿ ಹಾಗೂ ವಿದೇಶಿ ಕಂಪನಿಗಳಿಗೆ ಪೂರಕವಾಗಿವೆ. ದೇಶದ ಕಾರ್ಮಿಕರು ಹಾಗೂ ಬಡವರ ಪರವಾಗಿಲ್ಲ’ ಎಂದರು. 
 
‘ಬಿಸಿಯೂಟ ತಯಾರಕರಿಗೆ ತಿಂಗಳಿಗೆ ಕೇವಲ ₹1,900 ಸಹಾಯಧನ ನೀಡುತ್ತಿದ್ದಾರೆ. ಅವರ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ  ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಅವರ ಬದುಕು ದುಸ್ತರವಾಗಿದೆ. ಹೀಗಾಗಿ ಶೋಷಣೆ ಮಾಡುವ  ಸರ್ಕಾರಗಳ ವಿರುದ್ಧ ಸಂಘಟಿತರಾಗಿ ಹೋರಾಡುವುದು ಅನಿವಾರ್ಯ’ ಎಂದರು. 
 
‘ಹಣದ ಬಲದಿಂದ ಸಂಸತ್ತಿಗೆ ಹೋಗುವ ಶಕ್ತಿಗಳು ಮಹಿಳೆಯ ಸಮಸ್ಯೆಗಳ ಬಗ್ಗೆ ಸ್ಪಂದಿಸುವುದಿಲ್ಲ’ ಎಂದ ಅವರು, ‘ಕೇವಲ ವಿದೇಶ ಪ್ರವಾಸ ಮಾಡುವ ಪ್ರಧಾನಿ ಮೋದಿಯವರು, ನಮ್ಮ ದೇಶದ ಬಡಜನರ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ‘ನೋಟು ರದ್ದತಿ’ ಹೆಸರಿನಲ್ಲಿ ಜನರ ಹಣವನ್ನು ಕಸಿದು  ಹೀನಾಯ ಸ್ಥಿತಿಗೆ ತರುತ್ತಿದ್ದಾರೆ. ‘ಕಾಳಧನಿಕ’ರ ಹೆಸರಲ್ಲಿ ದೇಶದ ಬಡವರ, ಕೂಲಿ ಕಾರ್ಮಿಕರ, ಮಧ್ಯಮ ವರ್ಗದವರನ್ನು ಶೋಷಣೆ ಮಾಡುತ್ತಿದ್ದಾರೆ. ಮೋದಿ ಆಡಳಿತವು ಹಿಟ್ಲರ್ ಆಡಳಿತವನ್ನು ನೆನಪಿಸುತ್ತಿದೆ’ ಎಂದರು. 
 
‘ನೋಟು ರದ್ದುಗೊಂಡರೂ ಮಾಜಿ ಸಚಿವ ಜನಾರ್ದನ ರೆಡ್ಡಿ ₹500 ಕೋಟಿ ಖರ್ಚು ಮಾಡಿ ಮಗಳ ಮದುವೆ ಮಾಡಿದರು. ಆ ಹಣ ಎಲ್ಲಿಂದ ಬಂತು? ಎಂದು ಯಾವ ಸರ್ಕಾರಗಳೂ ಪ್ರಶ್ನಿಸಲಿಲ್ಲ. ಮದುವೆ ಮುಗಿದ ಒಂದು ವಾರದ ಬಳಿಕ ಆದಾಯ ತೆರಿಗೆಯವರು ನೋಟಿಸ್‌ ನೀಡಿದ್ದಾರೆ’ ಎಂದರು. 
 
‘ಸರ್ಕಾರದ ಯೋಜನೆಗಳ ಮೂಲಕವೇ ಮಹಿಳೆಯರ ಶೋಷಣೆ ಹೆಚ್ಚುತ್ತಿವೆ. ಕೇಂದ್ರ ಸರ್ಕಾರ ಜಾರಿ ಮಾಡಿರುವ ಕನಿಷ್ಠ ಕೂಲಿಯನ್ನು ಬಿಸಿಯೂಟ ತಯಾರಕರಿಗೆ ನೀಡಬೇಕು, ಇಲ್ಲವೇ, ರಾಜ್ಯ ಸರ್ಕಾರ ನಿಗದಿ ಮಾಡಿದ  ₹10,500 ಕನಿಷ್ಠ ಕೂಲಿಯನ್ನಾದರೂ ನೀಡಲಿ’ ಎಂದು ಒತ್ತಾಯಿಸಿದರು.
 
ಫೆಡರೇಶನ್‌ ಅಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ,  ಪ್ರಧಾನ ಕಾರ್ಯದರ್ಶಿ ಎನ್.ಶಿವಣ್ಣ, ಕಾರ್ಯದರ್ಶಿ ಆವಗೆರೆ ಚಂದ್ರು, ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಕಾರ್ಯದರ್ಶಿ ಡಿ.ಜಿ.ಪೂಜಾರ, ಪರಮೇಶಪ್ಪ ಜಡತಡಿ, ಗುರುನಾಥ ಲಕಮಾಪುರ,  ರೇಣುಕಾ ಶಿವಾಜಿ, ಇಂದಿರಾ ಮಾಗಳದ, ಸರೋಜಮ್ಮ ಹಿರೇಮಠ, ರೇಣಮ್ಮ ದನ್ನೂರ, ಲತಾ ಕೋರಿ, ಫಾತಿಮಾ ಭೂಗಾವಿ, ಶಾಂತಮ್ಮ ಕಲ್ಲೇಗೌಡ್ರ, ಸುಮಿತ್ರಮ್ಮ ಕಿರವಾಡಿ, ಲತಾ ಹಿರೇಮಠ, ಸುವರ್ಣಮ್ಮ ಮೇವುಂಡಿ, ಲಲಿತಾ ಕಾಯ್ಕದ, ಶಾರದಮ್ಮ ಹಿರೇಮಠ, ಲಲಿತಾ ಬುಶಟ್ಟಿ ಮತ್ತಿತರರು ಇದ್ದರು.
 
**
ಮಹಿಳೆಯರನ್ನು ಕೇವಲ ಓಟ್‌ಬ್ಯಾಂಕ್ ಮಾಡಿಕೊಂಡ ರಾಜಕೀಯ ಪಕ್ಷಗಳಿಗೆ ನಿಮ್ಮ ಶಕ್ತಿಯನ್ನು ಪ್ರತಿಭಟನೆಯ ಮೂಲಕ ತೋರಿಸುವುದು ಅನಿವಾರ್ಯವಾಗಿದೆ
-ಎಚ್.ವಿ.ಅನಂತಸುಬ್ಬರಾವ್,
ಎಐಟಿಯುಸಿಯ ರಾಜ್ಯ ಸಮಿತಿ, ಅಧ್ಯಕ್ಷ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT