ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಸಾಮಾನ್ಯನ ಬದುಕು ಬರ್ಬರ: ಟೀಕೆ

ನೋಟು ರದ್ದತಿ: ಕಾಂಗ್ರೆಸ್ ಮಹಿಳಾ ಘಟಕದಿಂದ ಪ್ರತಿಭಟನೆ; ತಟ್ಟೆ ಬಾರಿಸಿ ಆಕ್ರೋಶ
Last Updated 10 ಜನವರಿ 2017, 6:28 IST
ಅಕ್ಷರ ಗಾತ್ರ
ಹಾವೇರಿ: ಗರಿಷ್ಠ ಮುಖಬೆಲೆ ನೋಟು ರದ್ದತಿ ಬಳಿಕ ಉಂಟಾದ ಸಮಸ್ಯೆಗಳನ್ನು ಖಂಡಿಸಿ ನಗರದ ಹೊಸಮನಿ  ಸಿದ್ದಪ್ಪ ವೃತ್ತದಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕದ ನೇತೃತ್ವದಲ್ಲಿ ಮಹಿಳೆಯರು ತಟ್ಟೆ ಬಡಿದು (ಜಾಗಟೆಯಂತೆ), ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. 
 
ಪ್ರತಿಭಟನೆಯ ನೇತೃತ್ವದ ವಹಿಸಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ರುಕ್ಮುಣಿ ಪಿ. ಸಾವುಕಾರ ಮಾತನಾಡಿ, ‘ಜಿಲ್ಲೆಯಲ್ಲಿ ಸತತ ಬರದ ಪರಿಣಾಮ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆಯೇ ಕೇಂದ್ರ ಸರ್ಕಾರವು ‘ಗರಿಷ್ಠ ಮುಖಬೆಲೆ ನೋಟು ರದ್ದತಿ’ ಮಾಡಿದೆ. ಆದರೆ, ಆ ಬಳಿಕ ಉಂಟಾದ  ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಬಗೆಹರಿಸುತ್ತಿಲ್ಲ. ಇದರಿಂದ ಕೂಲಿಕಾರ್ಮಿಕರು, ರೈತರು, ಬಡವರು, ಸ್ವಸಹಾಯ ಸಂಘದ ಸದಸ್ಯರು ಸೇರಿದಂತೆ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ’ ಎಂದರು. 
 
‘ನೋಟು ರದ್ದತಿಯ ಬಳಿಕ ಒಂದೆಡೆ ಕೂಲಿ, ಬೀಡಿ, ಸ್ವಉದ್ಯೋಗಗಳು ದಿನೇ ದಿನೇ ಕಡಿಮೆಯಾಗುತ್ತಿವೆ. ಬಡವರಿಗೆ ಕೆಲಸ ಸಿಗುವುದೇ ಕಷ್ಟವಾಗಿದೆ. ದುಡಿಮೆ ಹಾಗೂ ಕೂಲಿ ಇಲ್ಲದ ಕಾರಣ ಬದುಕು ದಿನೇ ದಿನೇ ಹದಗೆಡುತ್ತಿದೆ. ಈ ಪೈಕಿ ಬಡ ಮಹಿಳೆಯರೇ ಸಮಸ್ಯೆಗೆ ಸಿಲುಕಿದ್ದಾರೆ. ಆದರೆ, ಕೇಂದ್ರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು. 
 
‘ಜಿಲ್ಲೆಯ ರಾಣೆಬೆನ್ನೂರು, ಶಿಗ್ಗಾವಿ, ಸವಣೂರು, ಹಾವೇರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕೆಲಸ ಇಲ್ಲದ ಕಾರಣ ಮಹಿಳೆಯರಿಗೆ ಸ್ವಸಹಾಯ ಸಂಘಗಳು, ಮೈಕ್ರೋಫೈನಾನ್ಸ್‌ಗಳ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ, ಈ ಮೈಕ್ರೋಫೈನಾನ್ಸ್‌ಗಳು ಸಾಲ ಮರುಪಾವತಿಸುವಂತೆ ಕಿರುಕುಳ ನೀಡುತ್ತಿದ್ದು, ಮಹಿಳೆಯರ ಬದುಕು ದಯನೀಯ ಸ್ಥಿತಿಗೆ ತಲುಪುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ತಾವೇ ಸೃಷ್ಟಿಸಿದ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಮಹಿಳೆಯರು ಎಂದಿಗೂ ಬಿಜೆಪಿಯನ್ನು ಕ್ಷಮಿಸುವುದಿಲ್ಲ’ ಎಂದು ವಾಗ್ದಾಳಿ ನಡೆಸಿದರು. 
 
‘ದುಡಿದು ಜೀವನ ಸಾಗಿಸುತ್ತಿದ್ದ ಮಹಿಳೆಯರ ಸಮಸ್ಯೆಗಳು ನೋಟು ರದ್ದತಿ ಬಳಿಕ ಇನ್ನಷ್ಟು ಹೆಚ್ಚಿದೆ. ಈ ಸಮಸ್ಯೆಯ ಸೃಷ್ಟಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ನೇರ ಕಾರಣ. ಬಡವರು, ಕೂಲಿಕಾರರು, ರೈತಾಪಿ ವರ್ಗದ ಮಹಿಳೆಯರ ರಕ್ಷಣೆ ಮಾಡಬೇಕು. ಇಲ್ಲದಿದ್ದರೆ, ತಕ್ಕ ಪಾಠ ಕಲಿಯಬೇಕಾಗುತ್ತದೆ’ ಎಂದು ಕಾಂಗ್ರೆಸ್‌ ಮುಖಂಡರಾದ ಮಂಜುಳಾ ಬಾಳಿಕಾಯಿ, ರತ್ನಾ ಭಿಮಕ್ಕನವರ, ಪಾರ್ವತೆವ್ವ ಹಲಗಣ್ಣನವರ ಮತ್ತಿತರರು ಖಂಡಿಸಿದರು. 
 
ಬಳಿಕ ಉಪವಿಭಾಗಾಧಿಕಾರಿ ಬಸವರಾಜ ಸೋಮಣ್ಣನವರ ಮೂಲಕ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. 
 
ವೀಣಾ ಹಲಗಣ್ಣನವರ, ಶಾಂತಾ ಶಿರೂರ, ಜಯಶ್ರೀ ಶಿವಪುರ ಸೇರಿದಂತೆ ಪಕ್ಷದ ವಿವಿಧ ಮಹಿಳಾ ಘಟಕದ ಪದಾಧಿಕಾರಿಗಳು ಇದ್ದರು.
 
***
‘ಶ್ರೀಮಂತರು ಆರಾಮ, ಬಡವರು ಹೈರಾಣ’
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್‌.ಎಫ್.ಎನ್. ಗಾಜೀಗೌಡ್ರ, ‘ನೋಟು ರದ್ದತಿ ಬಳಿಕ ಅತಿ ಶ್ರೀಮಂತರು ನೆಮ್ಮದಿಯಿಂದ ಇದ್ದಾರೆ. ಬಡವರು ಹೈರಾಣ ಆಗುತ್ತಿದ್ದಾರೆ. ಅತಿ ಶ್ರೀಮಂತರು ಹಾಗೂ ಕಾಳಧನಿಕರ ರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ‘ನೋಟು ರದ್ದತಿ’ ನಿರ್ಧಾರ ಕೈಗೊಂಡಿರಬೇಕು’ ಎಂದರು.
 
**
ಬೀಡಿ, ಕೂಲಿ, ಮನೆಗೆಲಸ ಮಾಡುವ ಬಡ ಮಹಿಳೆಯರ ಬದುಕು ನೋಟು ರದ್ದತಿ ಬಳಿಕ ಬರ್ಬರವಾಗಿದೆ. ಸಾಲ ಮರುಪಾವತಿ, ಒಪ್ಪೊತ್ತಿನ ಊಟಕ್ಕೂ ದುಸ್ತರವಾಗಿದೆ
-ರುಕ್ಮಿಣಿ ಪಿ. ಸಾವುಕಾರ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT