ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪತ್ತು ಮುಟ್ಟುಗೋಲಿಗೆ ಆಗ್ರಹ

ಚಿಕ್ಕರಾಯಪ್ಪ, ಜಯಚಂದ್ರ ಅಕ್ರಮ; ಎಸ್‌.ಆರ್‌. ಹಿರೇಮಠ ಸುದ್ದಿಗೋಷ್ಠಿ
Last Updated 10 ಜನವರಿ 2017, 6:40 IST
ಅಕ್ಷರ ಗಾತ್ರ
ಧಾರವಾಡ: ‘ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಟಿ.ಎನ್‌.ಚಿಕ್ಕರಾಯಪ್ಪ ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಮುಖ್ಯ ಯೋಜನಾಧಿಕಾರಿಯಾಗಿದ್ದ ಎಸ್‌.ಸಿ.­ಜಯಚಂದ್ರ ಅಕ್ರಮವಾಗಿ ಗಳಿಸಿದ ಸಂಪತ್ತನ್ನು ಸರ್ಕಾರ ಕೂಡಲೇ ಮುಟ್ಟು­ಗೋಲು ಹಾಕಿಕೊಳ್ಳಬೇಕು’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ಆಗ್ರಹಿಸಿದರು.
 
‘ಈ ಇಬ್ಬರೂ ಅಧಿಕಾರಿಗಳ ಅಕ್ರಮ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿ­ದಂತೆ 2013ರಲ್ಲೇ ಸರ್ಕಾರಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು. ಹೀಗಿರುವಾಗಲೂ ಚಿಕ್ಕರಾಯಪ್ಪ ಅವರನ್ನು ಸರ್ಕಾರ ಮತ್ತೊಂದು ಇಲಾ­ಖೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದು, ಸಂಶಯಕ್ಕೆ ಎಡೆಮಾಡಿ­ಕೊಟ್ಟಿದೆ. ಈ ಇಬ್ಬರೂ ಅಧಿಕಾರಿಗಳು ಅಕ್ರಮ ಆಸ್ತಿ ಗಳಿಕೆಯಲ್ಲಿ ಭಾಗಿಯಾಗಿ­ದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದು, ಈ ಕುರಿತು ತನಿಖೆ ನಡೆಸಿ ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಜತೆಗೆ ಇವರು ಅಕ್ರಮ­ವಾಗಿ ಸಂಪಾ­ದಿಸಿರುವ ಹಣ­ವನ್ನು ಸರ್ಕಾರ ತಕ್ಷಣವೇ ತನ್ನ ಬೊಕ್ಕಸಕ್ಕೆ ಪಡೆ­ಯಬೇಕು’ ಎಂದು ಸೋಮ­ವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ ಅವರು ಇದಕ್ಕೆ ಸಂಬಂಧಿಸಿದ ದಾಖಲೆ ಬಿಡುಗಡೆ ಮಾಡಿದರು.
 
‘ಸರ್ಕಾರಕ್ಕೆ ಸಲ್ಲಬೇಕಾದ ಕೋಟಿ­ಗಟ್ಟಲೇ ಹಣವನ್ನು ಇಬ್ಬರೂ ಅಧಿಕಾರಿ­ಗಳು ಲಪಟಾಯಿಸಿದ್ದಾರೆ ಎಂದು 2013ರಲ್ಲಿ ಇಂದಿರಾ ನಗರದ ಕೆ. ಲಕ್ಷ್ಮೀಕಾಂತಮ್ಮ ಎಂಬುವರು ದೂರು ಸಲ್ಲಿಸಿದ್ದರು. ಚಿಕ್ಕರಾಯಪ್ಪ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿದ್ದ ಸಂದರ್ಭ­ದಲ್ಲಿ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ಬಿ.ಡಿ.ಎ ಆಯುಕ್ತರಿಗೆ ಪತ್ರ ಬರೆದು, ಚಿಕ್ಕರಾಯಪ್ಪ ವಿರುದ್ಧ ಆರೋಪಗಳಿದ್ದು ಅವು ಇತ್ಯರ್ಥವಾಗುವವರೆಗೂ ಆಡಳಿತಾತ್ಮಕ ಮತ್ತು ಯಾವುದೇ ಕಡತಗಳನ್ನು ಅವರಿಗೆ ನಿಭಾಯಿಸಲು ನೀಡದೆ, ಸ್ವತಃ ತಾವೇ ನೋಡಿಕೊಳ್ಳಬೇಕು’ ಎಂದು ತಿಳಿಸಿದ್ದರು’ ಎಂಬ ಸಂಗತಿಯನ್ನು ಹೇಳಿದರು.
 
‘ಕೆ.ಪಿ.ಎಸ್‌.ಸಿ ಅಧ್ಯಕ್ಷರಾಗಿ ನೇಮಕ­ಗೊಂಡ ಶ್ಯಾಂ ಭಟ್‌ ಅವರು ಕಾನೂನು ಬಾಹಿರ ಹಾಗೂ ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಕೂಡಲೇ ಅವರನ್ನು ಆ ಸ್ಥಾನದಿಂದ ಕೆಳಗಿಳಿಸ­ಬೇಕು. ಅವರು ಬಿ.ಡಿ.ಎ ಆಯುಕ್ತ­ರಾಗಿದ್ದಾಗ ಮಾಡಿರುವ ಗಂಭೀರ ಅವ್ಯವಹಾರಗಳ ಕುರಿತು ಸರ್ಕಾರ ತನಿಖೆ ನಡೆಸಬೇಕು. ಈ ಎಲ್ಲ ಗಂಭೀರ ವಿಷಯಗಳ ಕುರಿತು ನಮ್ಮ ಸಂಘಟನೆಯ ವತಿಯಿಂದ ಶೀಘ್ರವೇ ಹೋರಾಟ ಪ್ರಾರಂಭಿಸ­ಲಿದ್ದೇವೆ ಮತ್ತು ಶ್ಯಾಂ ಭಟ್‌ ಅವರ ಅಕ್ರಮಗಳ ಕುರಿತಂತೆ ಶೀಘ್ರವೇ ದಾಖಲೆ ಬಿಡುಗಡೆ ಮಾಡಲಾಗುವುದು’ ಎಂದರು.
 
‘ಇನ್ನು ಸರ್ಕಾರ ಕಪ್ಪತಗುಡ್ಡವನ್ನು ಸಂರಕ್ಷಿತ ಪ್ರದೇಶ ಎಂಬುದನ್ನು ಕೈಬಿಟ್ಟು ಅಲ್ಲಿ ಗಣಿಗಾರಿಕೆಗೆ ಅವಕಾಶ ಕಲ್ಪಿಸಲು ಹೊರಟಿದೆ. ಜೀವ ವೈವಿಧ್ಯ ಹಾಗೂ ಔಷಧಿ ಸಸ್ಯರಾಶಿ ಇರುವ ಕಪ್ಪತಗುಡ್ಡ ಈ ನಾಡಿದ ಹೃದಯ. ಅದರ ಉಳಿವಿಗಾಗಿ ಗದಗ ತೋಂಟದಾರ್ಯ ಸ್ವಾಮೀಜಿಗಳು ಕೈಗೊಂಡಿರುವ ಹೋರಾಟಕ್ಕೆ ಎನ್‌ಸಿಪಿಎನ್‌ಆರ್‌, ಜನಸಂಗ್ರಾಮ ಪರಿಷತ್‌ ಹಾಗೂ ಸಮಾಜ ಪರಿವರ್ತನಾ ಸಮುದಾಯದ ಬೆಂಬಲವಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಬಳ್ಳಾರಿ, ತುಮಕೂರು, ಗದಗ ಜಿಲ್ಲೆಗಳಲ್ಲಿ ಹೋರಾಟ ನಡೆಸಿದ ಮಾದರಿಯಲ್ಲೇ ಕಪ್ಪತಗುಡ್ಡದ ಉಳಿವಿಗಾಗಿ  ಶಿರಹಟ್ಟಿ, ಮುಂಡರಗಿ ಹಾಗೂ ಗದಗ ತಾಲ್ಲೂಕುಗಳಲ್ಲಿ ಹೋರಾಟ ಮಾಡಲು ನಿರ್ಧರಿಸಲಾಗಿದೆ’ ಎಂದರು.
 
‘ಸರ್ಕಾರ ಕಪ್ಪತಗುಡ್ಡದ ವಿಚಾರ­ವಾಗಿ 2016ರಲ್ಲಿ ಹೊರಡಿಸಿರುವ ಆದೇಶವನ್ನು ತಕ್ಷಣ ವಾಪಸ್‌ ಪಡೆಯ­ಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಕಪ್ಪತಗುಡ್ಡದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದರೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಇರುವುದು ಅಚ್ಚರಿ ಮೂಡಿಸಿದೆ. ಕಪ್ಪತಗುಡ್ಡದ ವಿಚಾರವಾಗಿ ಅವರು ಮೌನ ಮುರಿಯಬೇಕು’ ಎಂದು ಹಿರೇಮಠ ಆಗ್ರಹಿಸಿದರು.
ಐ.ಜಿ. ಪುಲ್ಲಿ, ಎಸ್‌.ಮಕ್ಕಾಬಿ, ಪ್ರಭುಗೌಡ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT