ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ಅಮಾನ್ಯ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ನಗರ ಮಧ್ಯದಲ್ಲಿ ಮೆರವಣಿಗೆ; ತಹಶೀಲ್ದಾರ್‌ ಕಚೇರಿಗೆ ತೆರಳಿ ಮನವಿ ಸಲ್ಲಿಕೆ
Last Updated 10 ಜನವರಿ 2017, 6:47 IST
ಅಕ್ಷರ ಗಾತ್ರ
ಹುಬ್ಬಳ್ಳಿ: ಗರಿಷ್ಠ ಮುಖಬೆಲೆಯ ನೋಟು­ಗಳನ್ನು ಕೇಂದ್ರ ಸರ್ಕಾರ ಅಮಾನ್ಯಗೊಳಿಸಿದ್ದರಿಂದ ಜನರಿಗೆ ಅನಾನುಕೂಲವಾಗಿದೆ ಎಂದು ಆರೋ­ಪಿಸಿ ಧಾರವಾಡ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. 
 
ನಗರದ ಇಂದಿರಾ ಗಾಜಿನ ಮನೆಯಿಂದ ಹೊರಟ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಾಗಿ, ಚೆನ್ನಮ್ಮ ವೃತ್ತ ಹಾದು ಮಿನಿ ವಿಧಾನಸೌಧದ ತಹ­ಶೀಲ್ದಾರ್‌ ಕಚೇರಿ ತಲುಪಿತು. ‘ಮೋದಿ ಹಟಾವೊ, ದೇಶ್‌ ಬಚಾವೊ’, ‘ನೋಟು ಅಮಾನ್ಯ ಖಂಡನೀಯ’ ಎಂಬಿತ್ಯಾದಿ ಘೋಷಣೆಗಳು ಮೊಳಗಿದವು. 
 
₹ 2 ಸಾವಿರ ಮುಖಬೆಲೆಯ ನೋಟು­ಗಳನ್ನು ಹಿಡಿದು ತರಕಾರಿ, ಅಗತ್ಯ ವಸ್ತುಗಳನ್ನು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಚಿಲ್ಲರೆ ಅಭಾವ ತಲೆದೋರಿದೆ. ಹೀಗಾಗಿ, ₹2 ಸಾವಿರ ನೋಟಿನಿಂದ ಸಮಸ್ಯೆ ಸುಳಿಯಲ್ಲಿ ಸಿಲುಕಿ ಜನಸಾಮಾನ್ಯರು ನರಳುತ್ತಿದ್ದಾರೆ ಎಂದು ಆರೋಪಿಸಿದ ಕಾರ್ಯಕರ್ತೆಯರು ತರಕಾರಿಯಿಂದ ಮಾಡಿದ ಹಾರಗಳನ್ನು ಕೊರಳಿಗೆ ಹಾಕಿಕೊಂಡು ಘೋಷಣೆಗಳನ್ನು ಕೂಗಿದರು. 
 
ಧಾರವಾಡ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷೆ ಜಿ. ದೇವಕಿ ಮಾತನಾಡಿ, ‘ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಅವರ ತಪ್ಪು ನಿರ್ಧಾರದಿಂದ ದೇಶದ ಜನಸಾಮಾನ್ಯರು ಪ್ರತಿನಿತ್ಯ ಯಾತನೆ ಅನುಭವಿಸುವಂತಾಗಿದೆ. ನೋಟು ರದ್ದತಿ ಕೂಲಿ ಕಾರ್ಮಿಕರು ಮತ್ತು ಸಣ್ಣಪುಟ್ಟ ವ್ಯಾಪಾರಿಗಳಿಗೆ ಭಾರಿ ಒಡೆತ ಬಿದ್ದಿದೆ. ಶ್ರೀಮಂತರು ಸುಲಭವಾಗಿ ಬ್ಯಾಂಕುಗಳಿಂದ ನೋಟುಗಳನ್ನು ಪಡೆದರು. ಆದರೆ, ಜನಸಾಮಾನ್ಯರು ಬಿಸಿಲಿನಲ್ಲಿ ನಿಂತು ಪಡಿಪಾಟಲು ಅನುಭವಿಸಿದರು. ಕೆಲವರು ಜೀವವನ್ನೇ ಕಳೆದುಕೊಂಡರು’ ಎಂದು ತಿಳಿಸಿದರು.
 
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ‘ಕೇಂದ್ರ ಸರ್ಕಾರ ನೋಟು ರದ್ದತಿ ಮಾಡಿ 60 ದಿನಗಳೇ ಕಳೆದಿವೆ. ಆದರೆ, ಜನಸಾಮಾನ್ಯರ ಪರದಾಟ ಇನ್ನೂ ತಪ್ಪಿಲ್ಲ. ಪ್ರಧಾನಿ ಮೋದಿ ಕೇವಲ 50 ದಿನಗಳನ್ನು ನೀಡುವಂತೆ ಕೋರಿ­ದ್ದರು. ಆದರೆ, ಸಮಸ್ಯೆಗಳು ಪರಿಹಾರ ಆಗುವ ಬದಲು ಜಟಿಲ­ವಾಗಿದೆ. ದೇಶದ ಆರ್ಥಿಕ ಸ್ಥಿತಿಯನ್ನು ಸರಿಮಾಡುವ ನೆಪದಲ್ಲಿ ನೋಟುಗಳನ್ನು ರದ್ದು ಮಾಡಿದ್ದರಿಂದ ಬಡ ಜನತೆಯೇ ಸಾಕಷ್ಟು ತೊಂದರೆ ಅನುಭವಿಸು­ವಂತಾಗಿದೆ’ ಎಂದು ಹೇಳಿದರು.
 
ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಕಾಂಗ್ರೆಸ್‌ ಹಿರಿಯ ಮುಖಂಡ ವೀರಣ್ಣ ಮತ್ತಿಕಟ್ಟಿ, ವಿಧಾನ ಪರಿಷತ್‌ ಸದಸ್ಯ ನಾಗರಾಜ ಛಬ್ಬಿ, ಮುಖಂಡರಾದ ಸತೀಶ ಮೆಹರವಾಡೆ, ಪ್ರಕಾಶ ಕ್ಯಾರಕಟ್ಟಿ, ಬಾಬಾಜಾನ ಮುಧೋಳ, ಸರೋಜಾ ಹೂಗಾರ, ಶ್ರೀನಿವಾಸ ಕ್ಯಾರಕಟ್ಟಿ, ಮೋಹನ ಹಿರೇಮನಿ, ಶೈಲಾ ಕಾಮರಡ್ಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT