ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಟ್ಟೆ, ಚಮಚ ಹಿಡಿದು ಪ್ರತಿಭಟನೆ

ನೋಟು ರದ್ದು: ಶ್ವೇತಪತ್ರಕ್ಕೆ ಮಹಿಳಾ ಕಾಂಗ್ರೆಸ್ ಆಗ್ರಹ
Last Updated 10 ಜನವರಿ 2017, 7:10 IST
ಅಕ್ಷರ ಗಾತ್ರ
ಮಂಗಳೂರು: ದೊಡ್ಡ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವ ವಿಚಾರದಲ್ಲಿ ಶ್ವೇತಪತ್ರ ಹೊರಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿ ಸದಸ್ಯೆಯರು, ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ತಟ್ಟೆ ಮತ್ತು ಚಮಚಗಳನ್ನು ಪ್ರದರ್ಶಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ ನಡೆಸಿದರು.
 
ನೋಟು ರದ್ಧತಿಯನ್ನು ವಿರೋಧಿಸಿ ಪ್ರತಿಭಟನಾ ಸ್ಥಳದಲ್ಲಿ ವಿವಿಧ ಬಗೆಯ ತರಕಾರಿಗಳನ್ನು ಪ್ರದರ್ಶಿಸಲಾಗಿತ್ತು. ‘ಕಪ್ಪು ಹಣ ಪತ್ತೆ ಮಾಡುವುದಾಗಿ ನೋಟು ಚಲಾವಣೆಯನ್ನು ರದ್ದು ಮಾಡಿ ರುವ ಪ್ರಧಾನಿ, ದೇಶದಲ್ಲಿ ಆರ್ಥಿಕ ಅರಾಜಕತೆ ಸೃಷ್ಟಿಸಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.
 
ಪ್ರತಿಭಟನಾ ಸಭೆಯಲ್ಲಿ ಮಾತನಾ ಡಿದ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಶಾಲೆಟ್ ಪಿಂಟೊ, ‘₹ 500 ಮತ್ತು ₹ 1,000ದ ನೋಟುಗಳ ರದ್ದತಿಯಿಂದ ಮಹಿಳೆಯರಿಗೆ ಹೆಚ್ಚಿನ ತೊಂದರೆ ಯಾಗಿದೆ. ಕೇಂದ್ರ ಸರ್ಕಾರವು ಈ ನಿರ್ಧಾರದ ಮೂಲಕ ಬಡವರ ದುಡಿ ಮೆಯ ಹಣವನ್ನು ಕಸಿದುಕೊಂಡಿದೆ. ಸಮಾಜದ ಎಲ್ಲಾ ವರ್ಗಗಳ ಜನರು ಈ ಕ್ರಮದಿಂದ ತತ್ತರಿಸಿ ಹೋಗಿದ್ದಾರೆ. ಇದರಿಂದ ದೇಶದ ಅಭಿವೃದ್ಧಿಗೆ ಅಡ್ಡಿಯಾಗಿದೆ’ ಎಂದು ದೂರಿದರು.
 
ಜನಸಾಮಾನ್ಯರ ಕಷ್ಟಗಳ ಕುರಿತು ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಉದ್ದೇಶದಿಂದ ಮಹಿಳಾ ಕಾಂಗ್ರೆಸ್‌ ಪ್ರತಿಭಟನೆ ಹಮ್ಮಿಕೊಂಡಿದೆ. ನೋಟುಗಳ ರದ್ದತಿಯಿಂದ ಕಪ್ಪುಹಣ ಪತ್ತೆಮಾಡಲು ಸಾಧ್ಯವಾಗಿಲ್ಲ. ಕೆಲವೇ ಮಂದಿ ಶ್ರೀಮಂತರಿಗೆ ಇದರಿಂದ ಅನುಕೂಲವಾಗಿದೆ ಎಂದು ಟೀಕಿಸಿದರು.
 
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೆರೋನಿಕಾ ಕಾರ್ನೆಲಿಯೋ ಮಾತನಾಡಿ, ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಕಪ್ಪುಹಣವನ್ನು ದೇಶಕ್ಕೆ ತರುವುದಾಗಿ ಪ್ರಧಾನಿ ಮೋದಿ ಚುನಾವಣೆ ಸಮಯದಲ್ಲಿ ಭರವಸೆ ನೀಡಿದ್ದರು. ಈ ವಿಚಾರದಲ್ಲಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವುದಕ್ಕಾಗಿ ನೋಟು ರದ್ದತಿಯಂತಹ ಕ್ರಮ ಕೈಗೊಂ ಡರು. ಅದರಿಂದ ದೇಶಕ್ಕೆ ಅನುಕೂಲ ವಾಗುವ ಬದಲಿಗೆ ಇಡೀ ದೇಶದ ಅರ್ಥ ವ್ಯವ್ಯವಸ್ಥೆ ಹಳಿತಪ್ಪುವ ಅಪಾಯ ಎದು ರಾಗಿದೆ ಎಂದು ವಾಗ್ದಾಳಿ ನಡೆಸಿದರು.
 
ಮಹಿಳಾ ಕಾಂಗ್ರೆಸ್ ಸಮಿತಿ ಮುಖಂಡರಾದ ಜ್ಯೋತಿ ಹೆಬ್ಬಾರ್, ಶ್ಯಾಮಲಾ ಭಂಡಾರಿ, ಲಕ್ಷ್ಮಿ ಭಟ್, ಚಂದ್ರಿಕಾ ಶೆಟ್ಟಿ, ಗೀತಾ ವಾಗ್ಲೆ, ಮಮತಾ ಗಟ್ಟಿ, ಮೀನಾಕ್ಷಿ ಮಾಧವ, ಕಾಂಗ್ರೆಸ್ ಮುಖಂಡರಾದ ಎಂ.ಎ.ಗಫೂರ್, ದಿನೇಶ್ ಪುತ್ರನ್, ಅಮೃತ್ ಶೆಣೈ, ಪ್ರಶಾಂತ್ ಪೂಜಾರಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 
**
ನೋಟು ರದ್ದತಿಯಿಂದ 50 ದಿನಗಳ ಬಳಿಕವೂ ಪರಿಸ್ಥಿತಿ ಸುಧಾರಿಸಿಲ್ಲ. ತನ್ನ ವೈಫಲ್ಯವನ್ನು ಅರಿತಿರುವ ಕೇಂದ್ರ ಸರ್ಕಾರ, ನಗದು ರಹಿತ ವಹಿವಾಟಿನ ನಾಟಕವಾಡುತ್ತಿದೆ.
-ಶಾಲೆಟ್ ಪಿಂಟೊ, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT