ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳಿಗೆ ಭಾರತೀಯ ಸಂಸ್ಕಾರ ಕಲಿಸಿ’

ಕಡೂರು: ಕೇಶವ ನೃತ್ಯ ಶಾಲೆಯ 2ನೇ ವಾರ್ಷಿಕೋತ್ಸವ
Last Updated 10 ಜನವರಿ 2017, 7:17 IST
ಅಕ್ಷರ ಗಾತ್ರ
ಕಡೂರು: ನಮ್ಮ ಭಾರತೀಯ ಸಂಸ್ಕೃತಿ ಯನ್ನು ಮಕ್ಕಳಿಗೆ ಕಲಿಸಿ ಅವರನ್ನು ಸಂಸ್ಕಾರಯುತರನ್ನಾಗಿ ಮಾಡಬೇಕು. ಆದರೆ ದುರದೃಷ್ಟವಶಾತ್ ಆರ್ಕೆಸ್ಟ್ರಾ ಸಂಸ್ಕೃತಿ ನಮ್ಮನ್ನು ಪರಕೀಯರನ್ನಾಗಿ ಮಾಡಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ವಿಷಾದ ವ್ಯಕ್ತಪಡಿಸಿದರು.
 
ಕಡೂರಿನ ಎಂ.ಆರ್.ಎಂ.ಬಯಲು ರಂಗಮಂದಿರದಲ್ಲಿ  ಕೇಶವ ನೃತ್ಯ ಕಲಾ ಚಾರಿಟಬಲ್ ಟ್ರಸ್ಟ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕೇಶವ ನೃತ್ಯ ಶಾಲೆಯ 2ನೇ ವಾರ್ಷಿ ಕೋತ್ಸವದ ಪ್ರಯುಕ್ತ  ನಾಟ್ಯ ಕಲಾವಿದೆ ಡಾ.ಕೆ.ವೆಂಕಟಲಕ್ಷ್ಮಮ್ಮ ಸ್ಮರಣಾರ್ಥ ಭಾನುವಾರ ಏರ್ಪಡಿಸಿದ್ದ ನೃತ್ಯ ಸೌರಭ ವನ್ನು ಉದ್ಘಾಟಿಸಿ ಅವರು ಮಾತನಾ ಡಿದರು.
 
ಕಡೂರಿನ ಕುಗ್ರಾಮವೊಂದರಲ್ಲಿ ಹುಟ್ಟಿ ವಿಶ್ವಸಂಸ್ಥೆಯವರೆಗೂ ನಮ್ಮ ಹೆಮ್ಮೆಯ ಕರ್ನಾಟಕ ಶೈಲಿಯ ಭರತ ನಾಟ್ಯವನ್ನು ಕೊಂಡೊಯ್ದ ಹಿರಿಮೆ ಡಾ.ವೆಂಕಟಲಕ್ಷ್ಮಮ್ಮ ಅವರದು. ಅಂತಹ ಪುಣ್ಯಭೂಮಿ ಕಡೂರಿನಲ್ಲಿ ನೃತ್ಯ ಶಾಲೆ ನಡೆಸುತ್ತಿರುವ ಕೇಶವಪಿಳೈ ಅವರ ಶ್ರಮ ಅಭಿನಂದನೀಯ ಎಂದರು.
 
ಇಂದಿನ ದಿನಮಾನದಲ್ಲಿ ನಮ್ಮ ಸಂಸ್ಕೃತಿ ಮರೆಯಾಗುತ್ತಿದ್ದು, ಸದಭಿರು ಚಿಯ, ನಮ್ಮ ಸಂಸ್ಕೃತಿಯನ್ನು ಬಿಂಬಿ ಸುವ ನೃತ್ಯ ಪ್ರಾಕಾರಗಳು ತೆರೆಮರೆಗೆ ಸರಿಯುತ್ತಿವೆ. ಅಸಭ್ಯ, ಅಸಹ್ಯಕರವಾದ ಆರ್ಕೆಸ್ಟ್ರಾಗಳು ಆ ಜಾಗವನ್ನು ತುಂಬಿವೆ. ಆದರೂ ಅದರತ್ತ ಆಕರ್ಷಿತರಾಗಿ ತಮ್ಮ ಮಕ್ಕಳನ್ನೂ ಅದರತ್ತ ನೂಕುತ್ತಿರುವುದು ವಿಪರ್ಯಾಸ. ಅರೆಬೆತ್ತಲೆಯಾಗಿ ಕುಣಿ ಯುವ ಯುವತಿಯರನ್ನು ನಿದ್ದೆಗೆಟ್ಟು ನೋಡುವುದು ನಿಜಕ್ಕೂ ನಮ್ಮ ಸಂಸ್ಕೃತಿ ಯಲ್ಲ. ಅದರ ಬದಲಿಗೆ ನಮ್ಮ ದೇಸಿ ಸಂಸ್ಕೃತಿಯ ಹೆಮ್ಮೆ ಕಲೆಯನ್ನು ಮಕ್ಕಳಿಗೆ ಕಲಿಸಬೇಕು. ಅದರಿಂದ ನಮ್ಮತನವೂ ಉಳಿಯುತ್ತದೆ. ಗೌರವಯುತವಾದ ಕಲಾ ಪ್ರೇಮ ಅನಾವರಣಗೊಳ್ಳುತ್ತದೆ ಎಂದರು.
 
ಬೀರೂರು ಪುರಸಭಾಧ್ಯಕ್ಷೆ ಸವಿತಾರ ಮೇಶ್ ಮಾತನಾಡಿ, ಪ್ರಪಂಚದ ಎಲ್ಲಾ ದೇಶಗಳಿಗಿಂತ ನಮ್ಮ ಭಾರತಿಯ ಸಂಸ್ಕೃತಿಯ ಪರಿಚಯ ಮಾಡಿಸುವ ಭರತನಾಟ್ಯ ಕಲೆಯನ್ನು ಕಡೂರಿನಲ್ಲಿ ನೀಡುತ್ತಿರುವುದು ಅಭಿನಂದನೀಯ ಎಂದರು.
 
ನೃತ್ಯ ಶಾಲೆಯ ಗುರು ಕೇಶವ ಪಿಳೈ ಮಾತನಾಡಿ, ನೃತ್ಯ ಕಲೆ ಸುಲಭವಲ್ಲ. ಅದಕ್ಕೆ ಸತತ ಪರಿಶ್ರಮ ಮತ್ತು ಏಕಾಗ್ರತೆ ಬೇಕು. ಕಡೂರಿನಲ್ಲಿ ಅಂತಹ ಅಧ್ಭುತ ಪ್ರತಿಭೆಯ ಮಕ್ಕಳನ್ನು ಕಂಡಿದ್ದೇನೆ. ನೃತ್ಯ ಶಾರದೆಯ ಊರಿನಲ್ಲಿ ಅವರಂತಹದೇ ಪ್ರತಿಭೆ ಅರಳಬೇಕು ಎಂಬುದು ನನ್ನ ಉದ್ದೇಶ ಎಂದರು.
 
ಶಾಸಕರ ಮಾದರಿ ಪಾಠಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್, ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರೂಪಿಸಿದರು.
 
**
ಕಾರ್ಯಕ್ರಮದಲ್ಲಿ ಆಕರ್ಷಕ ನೃತ್ಯ
ಶಿವಮೊಗ್ಗದ ನೃತ್ಯ ಗುರು ಕೇಶವ ಪಿಳೈ ಅವರು  ಎರಡು ವರ್ಷದ ಹಿಂದೆ ಕಡೂರಿನಲ್ಲಿ  ನೃತ್ಯ ಶಾಲೆ ಆರಂಭಿಸಿದ್ದು, ಸುಮಾರು100ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಸಾಂಪ್ರದಾಯಿಕ ಭರತನಾಟ್ಯ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಭಾನುವಾರ ನಡೆದ ಎರಡನೇ ವಾರ್ಷಿಕೋತ್ಸವದಲ್ಲಿ ಶಾಲೆಯ ಮಕ್ಕಳೂ ಸೇರಿದಂತೆ ವಿಶಾಖಪಟ್ಟಣದಿಂದ ಬಂದಿದ್ದ  ಅಂತರರಾಷ್ಟ್ರೀಯ ಖ್ಯಾತಿಯ ಬಾಲ ಕಲಾವಿದೆ ನೇಹಾ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಅಸ್ಸಾಂನ ಜಾನಪದ ನೃತ್ಯ, ರಾಜಸ್ತಾನದ ಸಾಂಪ್ರದಾಯಿಕ ಜಾನಪದ ನೃತ್ಯ, ಒರಿಸ್ಸಾದ ಮಹಾಕಾಳಿ ನೃತ್ಯ, ಕರ್ನಾಟಕದ ಪುಷ್ಪಾಂಜಲಿ  ನಾಟ್ಯ ಜೊತೆಯಲ್ಲಿ ಸ್ವತಃ ಕೇಶವ ಪಿಳೈ ಪ್ರಸ್ತುತ ಪಡಿಸಿದ ಶಿವತಾಂಡವ ನೃತ್ಯ ಪ್ರೇಕ್ಷಕರ ಮನಗೆದ್ದಿತು. ಮೈಸೂರಿನ ಪಕ್ಕವಾದ್ಯ ಕಲಾವಿದರು ಗಾಯನಕ್ಕೆ ಮೆರುಗು ನೀಡಿದರು. 
 
**
ನಮ್ಮ ಸ್ಥಳೀಯ ಪ್ರತಿಭೆಗಳ ಪ್ರದರ್ಶನಕ್ಕೆ ಕಡೂರಿನಲ್ಲಿ ವೇದಿಕೆ ಕಲ್ಪಿಸಿದ್ದು, ಕೇಶವ ನೃತ್ಯಶಾಲೆಯ ಸರ್ವಾಂಗೀಣ ಬೆಳವಣಿಗೆಗೆ ತಮ್ಮ ಪೂರ್ಣ ಸಹಕಾರ ನೀಡುತ್ತೇನೆ.
-ರೇಣುಕಾ ಉಮೇಶ್
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT