ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಮಾಡಲು ಅಧಿಕಾರಿಗಳಿಂದ ಲಂಚ ಸ್ವೀಕಾರ

ಪುರಸಭೆ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸದಸ್ಯ ಹುಲ್ಮಾರ್‌ ಮಹೇಶ್‌
Last Updated 10 ಜನವರಿ 2017, 7:47 IST
ಅಕ್ಷರ ಗಾತ್ರ
ಶಿಕಾರಿಪುರ: ‘ಪುರಸಭೆ ಕಚೇರಿಯಲ್ಲಿ ಲಂಚ ತಾಂಡವ ಆಡುತ್ತಿದೆ. ಜನ ಸಾಮಾನ್ಯರು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಅಧಿಕಾರಿಗಳಿಗೆ ಲಂಚ ನೀಡುವ ಪರಿಸ್ಥಿತಿ ಕಚೇರಿಯಲ್ಲಿ ನಿರ್ಮಾಣವಾಗಿದೆ’ ಎಂದು ಪುರಸಭೆ ಸದಸ್ಯ ಹುಲ್ಮಾರ್‌ ಮಹೇಶ್‌ ಆರೋಪಿಸಿದರು. 
 
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ ‘ಪುರಸಭೆ ಕಚೇರಿಯಲ್ಲಿ ಸಮಯಕ್ಕೆ ಸರಿಯಾಗಿ ಜನಸಾಮಾನ್ಯರ ಕೆಲಸಗಳು ಆಗುತ್ತಿಲ್ಲ. ತಿಂಗಳುಗಳ ಕಾಲ ಕಚೇರಿಗೆ ದಾಖಲೆ ಪಡೆಯಲು ತಮ್ಮ ಕೆಲಸಗಳನ್ನು ಬಿಟ್ಟು ಜನರು ಅಲೆದಾಡುತ್ತಿದ್ದಾರೆ. ಲಂಚ ನೀಡಿದರೆ ಮಾತ್ರ ಕಚೇರಿಯಲ್ಲಿ ಜನರ ಕೆಲಸವನ್ನು ಅಧಿಕಾರಿಗಳು ಮಾಡುತ್ತಾರೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಸದಸ್ಯ ಎಂ.ಬಿ. ನಿಜಲಿಂಗಪ್ಪ ಮಾತನಾಡಿ, ‘ಶಿವಮೊಗ್ಗ ರಸ್ತೆಯಲ್ಲಿರುವ ನೀರು ಸರಬರಾಜು ಟ್ಯಾಂಕ್‌ ಸಮೀಪವಿರುವ ಪುರಸಭೆ ನಿವೇಶನವನ್ನು ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಖಾತೆ ಬದಲಾವಣೆ ಮಾಡಿಕೊಟ್ಟಿದ್ದು ಈ ಬಗ್ಗೆ  ಪರಿಶೀಲನೆ ನಡೆಸಬೇಕು’ ಎಂದು ಆರೋಪಿಸಿದರು.
 
ಸದಸ್ಯ ಮಧುಸೂಧನ್‌ ಮಾತನಾಡಿ, ‘ಪ್ರಸ್ತುತ ನಮ್ಮ ವಾರ್ಡ್‌ನಲ್ಲಿ ಕೊರೆಸಿರುವ ಬೋರ್‌ವೆಲ್‌ ಮೂಲಕ ಜನರಿಗೆ ನೀರಿನ ಸಂಪರ್ಕ ನೀಡಲು ಗಮನ ಹರಿಸಬೇಕು. ರಾಜ್ಯ ಸರ್ಕಾರ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲು ಆದೇಶ ನೀಡಿದ್ದು,ಅಧಿಕಾರಿಗಳು ಕುಡಿಯುವ ನೀರು ಒದಗಿಸಬೇಕು’ ಎಂದು ಸೂಚಿಸಿದರು.
 
ಮುಖ್ಯಾಧಿಕಾರಿ ಬಾಲಾಜಿರಾವ್‌ ಮಾತನಾಡಿ, ‘ಪಟ್ಟಣದ ಕೆಲವು ವಾರ್ಡ್‌ಗಳಲ್ಲಿರುವ ನೀರಿನ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಲಾಗುವುದು. ಪ್ರಸ್ತುತ ಎರಡು ದಿನಕ್ಕೊಮ್ಮೆ ಕುಡಿಯುವ ನೀರು ನೀಡುತ್ತಿದ್ದೇವೆ. ಅಂಜನಾಪುರ ಜಲಾಶಯದ ನೀರು ಇನ್ನು ಕೇವಲ ಎರಡು ತಿಂಗಳು ಮಾತ್ರ ನಮಗೆ ದೊರೆಯಲಿದೆ. ಎಲ್ಲಾ ಸದಸ್ಯರು ಜಲಾಶಯಕ್ಕೆ ಭೇಟಿ ನೀಡಿ ನೀರಿನ ಮಟ್ಟ ವೀಕ್ಷಿಸಿ ನೀರು ಸರಬರಾಜು ಬಗ್ಗೆ ಚರ್ಚೆ ನಡೆಸಬೇಕಾಗಿದೆ’ ಎಂದರು.
 
ಸದಸ್ಯ ಬಿ. ಯಲ್ಲಪ್ಪ ಮಾತನಾಡಿ, ‘ಮೇದಾರಕೇರಿಯಲ್ಲಿರುವ ಪುರಸಭೆ ಮಳಿಗೆ ಬಾಡಿಗೆಯನ್ನು ಸಾರ್ವಜನಿಕರು ಪಡೆಯುತ್ತಿದ್ದಾರೆ. ಆ ಬಾಡಿಗೆ ಪುರಸಭೆಗೆ ಬರುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
 
ಪುರಸಭೆ ಅಧ್ಯಕ್ಷೆ ರೂಪಕಲಾ ಅಧ್ಯಕ್ಷತೆ ವಹಿಸಿದ್ದರು.
 
ಪುರಸಭೆ ಉಪಾಧ್ಯಕ್ಷೆ ಫೈರೋಜಾಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌.ಪಿ. ನಾಗರಾಜಗೌಡ, ಸದಸ್ಯರಾದ ಗೋಣಿ ಮಾಲತೇಶ್‌, ಟಿ.ಎಸ್‌. ಮೋಹನ್‌, ಕೆ.ಜಿ. ವಸಂತಗೌಡ, ಪಾರಿವಾಳ ಶಿವರಾಮ್‌, ಚಾರಗಲ್ಲಿ ಪರಶುರಾಮ್‌, ಸೈಯದ್‌ಪೀರ್‌, ಎಚ್‌. ಫಾಲಾಕ್ಷ, ಎಂ.ಎಚ್‌. ರವೀಂದ್ರ, ಗೌರಮ್ಮ .ಪಿ. ರಾಮಯ್ಯ, ಪಾರ್ವತಮ್ಮ, ರತ್ನಮ್ಮ ಸೂರ್ಯಕಾಂತಪ್ಪ, ಜಬೀನಾ ರಹಮತ್‌ವುಲ್ಲಾ, ವೀಣಾ ವಿಜಯ ಕುಮಾರ್‌, ಪದ್ಮಾಗಜೇಂದ್ರ, ಶಬಾನಾ ಬಾನು, ನಾಮ ನಿರ್ದೇಶಿತ ಸದಸ್ಯರಾದ ಫಯಾಜ್‌ ಅಹಮದ್‌, ಜೈಸು ಸುರೇಶ್‌, ಗೋಣಿ ಮೂರ್ತಿ, ಬಡಗಿ ಫಾಲಾಕ್ಷ, ತಟ್ಟೀಹಳ್ಳಿ ಸಂಗಮೇಶ್‌, ಆರೋಗ್ಯ ನಿರೀಕ್ಷಕ ರಾಜ್‌ಕುಮಾರ್‌, ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT