ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆಯಲ್ಲಿ ತೆರಿಗೆ ವಂಚನೆ: ಆರೋಪ

ಅಧಿಕಾರಗಳ ವಿರುದ್ಧ ಪಕ್ಷಭೇದ ಮರೆತು ಮುಗಿಬಿದ್ದ ಸದಸ್ಯರು
Last Updated 10 ಜನವರಿ 2017, 8:55 IST
ಅಕ್ಷರ ಗಾತ್ರ
ಗಂಗಾವತಿ: ನಗರಸಭೆಯ ವಾರ್ಷಿಕ ತೆರಿಗೆ ಸಂಗ್ರಹದಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ತೆರಿಗೆ ಸೋರಿಕೆಯಾಗುತ್ತಿದ್ದು, ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ನಗರಸಭೆ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆಯಿತು.
 
ಪೌರಾಡಳಿತ ಸಚಿವಾಲಯದ ಆದೇಶದ ಮೇರೆಗೆ ಆಸ್ತಿತೆರಿಗೆ ಪರಿಷ್ಕರಣೆ  ಸಂಬಂಧ  ನಗರಸಭೆಯ ಸಭಾಂಗಣದಲ್ಲಿ ಸೋಮವಾರ ಅಧ್ಯಕ್ಷೆ ಸಣ್ಣ ಹುಲಿಗೆಮ್ಮ ಕಾಮದೊಡ್ಡಿ ದೇವಪ್ಪ ನೇತೃತ್ವದಲ್ಲಿ ನಡೆದ ಸರ್ವ ಸದಸ್ಯರ ತುರ್ತುಸಭೆಯಲ್ಲಿ ಸದಸ್ಯರು ಪಕ್ಷಭೇದ ಮರೆತು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. 
 
ನಗರಸಭೆಯ ವಾರ್ಷಿಕ ತೆರಿಗೆಯ ಬಗ್ಗೆ ಸದಸ್ಯರು ಮಾಹಿತಿ ಕೇಳಿದರು. ವಾರ್ಷಿಕ ₹ 3  ಕೋಟಿ ರೂಪಾಯಿ ಬೇಡಿಕೆ ಇದ್ದು, ಇದುವರೆಗೂ ₹1.75 ಕೋಟಿ ತೆರಿಗೆ ಸಂಗ್ರಹಿಸಲಾಗಿದೆ ಎಂದು ಪೌರಾಯುಕ್ತ ಖಾಜಾಮೋಹಿನುದ್ದೀನ್ ಸಭೆಗೆ ಮಾಹಿತಿ ನೀಡಿದರು. 
 
ಕಾರಟಗಿ ಪಟ್ಟಣ ಪಂಚಾಯಿತಿಯಲ್ಲಿ ವಾರ್ಷಿಕ ₹ 4ಕೋಟಿ ಬೇಡಿಕೆ ಇದೆ. ನಗರಸಭೆಯಲ್ಲಿ ಕನಿಷ್ಠ ₹ 8ಕೋಟಿ ಆದಾಯವಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಾರ್ಷಿಕ  ₹ 4– ₹5ಕೋಟಿ ತೆರಿಗೆ ಸೋರಿಕೆಯಾಗುತ್ತಿದೆ ಎಂದು ಸದಸ್ಯ ರಾಮಕೃಷ್ಣ ಆರೋಪಿಸಿದರು. 
 
ಈಗಾಗಲೆ ಬರಗಾಲವಿದ್ದು, ಮತ್ತೆ ನೀರು, ಆಸ್ತಿಯ ತೆರಿಗೆಯಲ್ಲಿ ಹೆಚ್ಚಳ ಮಾಡಿದರೆ ಜನರಿಂದ ಪ್ರತಿಭಟನೆ ಎದುರಿಸಬೇಕಾದೀತು. ವಾಣಿಜ್ಯ ನೀರಿನ ಸಂಪರ್ಕ ಮತ್ತು ಆಸ್ತಿಯ ಮೇಲೆ ಬೇಕಿದ್ದರೆ ತೆರಿಗೆ ಹೆಚ್ಚಳ ಮಾಡುವಂತೆ ಸದಸ್ಯ ಶಾಮೀದ ಮನಿಯಾರ ಸಲಹೆ ನೀಡಿದರು. 
 
ಹಿರಿಯ ಸದಸ್ಯ ರಾಘವೇಂದ್ರ ಶೆಟ್ಟಿ ಮಾತನಾಡಿ, ನಗರದಲ್ಲಿ 3 ಸಾವಿರಕ್ಕೂ ಅಧಿಕ ಅನಧಿಕೃತ ನೀರಿನ ಸಂಪರ್ಕ ಇವೆ. ಗರಿಷ್ಠ ₹1 ಸಾವಿರವರೆಗೆ ದಂಡ ಹಾಕಿ ಅವುಗಳನ್ನು ಅಧಿಕೃತ ಮಾಡಿದರೆ ವಾರ್ಷಿಕ ₹40 ಲಕ್ಷ ಹೆಚ್ಚುವರಿ ಹಣ ಸಂಗ್ರಹವಾಗುತ್ತದೆ ಎಂದು ಸಲಹೆ ನೀಡಿದರು. 
 
ನಗರದಲ್ಲಿ 27,300ಕ್ಕೂ ಹೆಚ್ಚು ಅಧಿಕೃತ, 5,200ಕ್ಕೂ ಹೆಚ್ಚು ಅನಧಿಕೃತ ಆಸ್ತಿಗಳಿವೆ. ಇದರಲ್ಲಿ 3,548 ವಾಣಿಜ್ಯ ಆಸ್ತಿಗಳಿವೆ. ಆದರೆ ಕೇವಲ 1,700 ಆಸ್ತಿಗಳ ಮಾಲೀಕರು ಮಾತ್ರ ಪರವಾನಗಿ ಹಾಗೂ ನವೀಕರಣ ಮಾಡಿಕೊಂಡಿದ್ದಾರೆ. ಮಿಕ್ಕವರಿಗೆ ನೋಟೀಸ್ ನೀಡಲಾಗಿದೆ ಎಂದು ಕಂದಾಯ ವಿಭಾಗದ ಕಿಷನ್ ರಾವ್ ಮಾಹಿತಿ ನೀಡಿದರು. 
 
ಪೌರನೌಕರರಿಗೆ ವೇತನ ನೀಡಲು ಹಣವಿಲ್ಲ. ಆದರೆ ಮಾಸಿಕ ಲಕ್ಷಾಂತರ ರೂಪಾಯಿ ಮೊತ್ತದ ಡಿಸೇಲ್ ಕಳವಾಗುತ್ತಿದ್ದರೂ ಅಧ್ಯಕ್ಷೆ, ಪೌರಾಯುಕ್ತರು ಕ್ರಮಕ್ಕೆ ಮುಂದಾಗುತ್ತಿಲ್ಲ. ಒಂದು ಸಮಿತಿ ರಚಿಸಿ ಸೋರಿಕೆ ತಡೆಗಟ್ಟುವಂತೆ ಸದಸ್ಯ ಹುಸೇನಪ್ಪ ಒತ್ತಾಯಿಸಿದರು. 
 
ವಿಷಯವಾರು ಮಂಡನೆಗೆ ಸಂಬಂಧ ಸದಸ್ಯರ ಮಧ್ಯೆ ವಾಗ್ವಾದ ಆರಂಭವಾಗುತ್ತಿದ್ದಂತೆಯೆ ಆಡಳಿತ ಮಂಡಳಿಯ ಕೆಲ ಸದಸ್ಯರು ಸಭೆಯ ಮಧ್ಯದಲ್ಲಿಯೇ ಎದ್ದು ಹೋದರು. ಬಳಿಕ ಅಧ್ಯಕ್ಷೆ, ಉಪಾಧ್ಯಕ್ಷ ಕಮಲಿಬಾಬಾ ಸಭೆಯಿಂದ ಹೊರ ನಡೆದರು. 
 
**
ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ತೆರಿಗೆ ಪರಿಷ್ಕರಣೆ ಮಾಡುವಂತೆ ಸರ್ಕಾರ ಆದೇಶಿಸಿದೆ. ಪೌರಾಡಳಿತ ನಿರ್ದೇಶನಾಲಯದ ಆದೇಶ ಪಾಲನೆ ಮಾಡದಿದ್ದ ಪಕ್ಷದಲ್ಲಿ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ
-ಖಾಜಾಮೋಹಿನುದ್ದೀನ್
ಪೌರಾಯುಕ್ತ , ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT