ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗವಿಮಠದ ಅಜ್ಜನ ಜಾತ್ರೆ: ಭರದ ಸಿದ್ಧತೆ

ಮಠದತ್ತ ಭಕ್ತರ ಹೆಜ್ಜೆ – ಎಲ್ಲೆಡೆ ರಸ್ತೆ ದುರಸ್ತಿ ಕಾರ್ಯ ಆರಂಭ; ಜಾತ್ರೆಗೆ ರೊಟ್ಟಿ, ದವಸ ಧಾನ್ಯ ಸೇವೆ
Last Updated 10 ಜನವರಿ 2017, 9:04 IST
ಅಕ್ಷರ ಗಾತ್ರ
ಕೊಪ್ಪಳ: ನಗರದ ಗವಿಮಠದ ಜಾತ್ರೆಗೆ ಸಿದ್ಧತೆ ದಿನದಿಂದ ದಿನಕ್ಕೆ ವೇಗವಾಗಿ ನಡೆದಿದೆ. ಜಾತ್ರೆಗೆ ಇನ್ನು ಕೇವಲ 3 ದಿನಗಳು ಬಾಕಿ ಉಳಿದಿವೆ. ಈಗಾಗಲೇ ಗವಿಮಠದ ಸುತ್ತಮುತ್ತಲಿನ ರಸ್ತೆಗಳನ್ನು ದುರಸ್ತಿಗೊಳಿಸುವ ಕಾರ್ಯ ನಡೆದಿದೆ. ರಥ ಸ್ವಚ್ಛಗೊಳಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಿಂದ ರೊಟ್ಟಿ, ದವಸ ಧಾನ್ಯಗಳು ಕಾಣಿಕೆ ರೂಪದಲ್ಲಿ ಬರುತ್ತಿವೆ. ಸೋಮವಾರ ಚೌಡಾಪುರ, ಕಾಸನಕಂಡಿ. ಮರಕುಂಬಿ. ಇಂಗಾಳದಾಳ, ನೆಲೋಗಿಪುರ, ಹಿರೆಬೊಮ್ಮನಾಳ ಹಾಗೂ ನಿಲೋಗಲ್ ಗ್ರಾಮಗಳ ಭಕ್ತರು ರೊಟ್ಟಿ, ಧಾನ್ಯ ಕಾಣಿಕೆ ಅರ್ಪಿಸಿದರು.
 
ಆ್ಯಪ್‌ನಲ್ಲಿ ಮಾಹಿತಿ: ಈ ಬಾರಿ ಜಾತ್ರೆಯ ಮಾಹಿತಿ ಮೊಬೈಲ್‌ ಆ್ಯಪ್‌ ಮೂಲಕ ಹೆಚ್ಚು ಜನರಿಗೆ ತಲುಪಲಿದೆ.  www.gavimathkoppal.com ತಾಣದಲ್ಲಿ ಗವಿಶ್ರೀ ಸಂಪದ ಆ್ಯಪನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಗವಿಸಿದ್ದೇಶ್ವರ ಭಕ್ತಿಗೀತೆಗಳೂ ಕೂಡಾ ಇದೇ ತಾಣದಲ್ಲಿ ಲಭ್ಯ ಇವೆ. ಈ ತಾಣವನ್ನು ಫೇಸ್‌ಬುಕ್‌ ಜತೆ ಜೋಡಿಸಲಾಗಿದ್ದು, ಮಠದ ಕಾರ್ಯಕ್ರಮಗಳ ಅಪರೂಪದ ಛಾಯಾಚಿತ್ರಗಳು ಲಭ್ಯ ಇವೆ ಎಂದು ವಕ್ತಾರರು ತಿಳಿಸಿದ್ದಾರೆ. 
 
ಪಾರ್ಕಿಂಗ್‌ ವ್ಯವಸ್ಥೆ– ಸೂಚನೆ: ಜಾತ್ರೆಗೆ ಬಂದು ಹೋಗುವ ವಾಹನ ಹಾಗೂ ಚಕ್ಕಡಿಗಳಿಗಾಗಿ ಜ.14ರಿಂದ 16ರವರೆಗೆ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಹೊಸಪೇಟೆ/ ಗಂಗಾವತಿ ಮಾರ್ಗದಿಂದ ಬರುವ ವಾಹನಗಳಿಗೆ ಕಾರ್ಗಿಲ್ ಪೆಟ್ರೋಲ್ ಬಂಕ್ ಮತ್ತು ಕುಟೀರ ಫ್ಯಾಮಿಲಿ ರೆಸ್ಟೋರೆಂಟ್ ಪಕ್ಕದ ರಸ್ತೆಯ ಮೂಲಕ ಗವಿಶ್ರೀ ನಗರದ ಹಿಂಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಯಿದೆ.
 
ಕುಷ್ಟಗಿ ರಸ್ತೆಯಿಂದ ಬರುವ ವಾಹನಗಳಿಗಾಗಿ ರೈಲ್ವೆ ಗೇಟ್ ಮತ್ತು ಹೊಂಡಾ ಷೋರೂಮ್ ಎದುರು ಪಾರ್ಕಿಂಗ್ ವ್ಯವಸ್ಥೆ ಇದೆ. ಗದಗ ರಸ್ತೆಯಿಂದ ಬರುವ ವಾಹನಗಳಿಗಾಗಿ ಸಾರ್ವಜನಿಕ ಮೈದಾನ ಮತ್ತು ಎಪಿಎಂಸಿ ಯಾರ್ಡ್‌ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕುಣಿಕೇರಿ ಮತ್ತು ಹಾಲವರ್ತಿ ರಸ್ತೆಗಳಿಂದ ಬರುವ ವಾಹನಗಳಿಗಾಗಿ ಮಠದ ಹಿಂಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 
 
ಮಾಹಿತಿಗೆ ವಿರೇಶ ಭಾವಿಕಟ್ಟಿ ಮೊಬೈಲ್ ಸಂಖ್ಯೆ: 88849 42666ಗೆ ಸಂಪರ್ಕಿಸಬಹುದು ಎಂದು ಮಠದ ಪ್ರಕಟಣೆ ತಿಳಿಸಿದೆ.
 
**
ಸ್ವಚ್ಛತೆಗಾಗಿ ವಾಟ್ಸ್‌ ಆ್ಯಪ್‌
ಜಾತ್ರೆಯ ಆವರಣದಲ್ಲಿ ಸ್ವಚ್ಛತೆ ಇಲ್ಲದಿರುವುದು, ಟ್ರಾಫಿಕ್, ಶೌಚಾಲಯ ಸಮಸ್ಯೆ ಇದ್ದಲ್ಲಿ ಭಕ್ತರು ಅವುಗಳ ಚಿತ್ರ ತೆಗೆದು ಸ್ಥಳದ ಮಾಹಿತಿಯನ್ನು ಮೊ. 97017 58838 ಈ ಸಂಖ್ಯೆಗೆ ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಬೇಕು. ಮಠದ ಸಿವಿಲ್ ಎಂಜನಿಯರಿಂಗ್ ವಿಭಾಗದವರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದು ಗವಿಮಠದ ಪ್ರಕಟಣೆ ತಿಳಿಸಿದೆ.
 
ಜಲದೀಕ್ಷೆಗೆ ಪಾಲ್ಗೊಳ್ಳಲು ಮನವಿ: ಜಾತ್ರೆ ಅಂಗವಾಗಿ ಜ. 11ರಂದು ನಡೆಯಲಿರುವ ‘ಜಲದೀಕ್ಷೆ’ ಅಭಿಯಾನದಲ್ಲಿ ಎಲ್ಲ ಸರ್ಕಾರಿ ನೌಕರರು ಬೆಳಿಗ್ಗೆ 8 ಗಂಟೆಗೆ ಪಾಲ್ಗೊಳ್ಳಬೇಕು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಆರ್.ಜುಮ್ಮನ್ನವರ ಕೋರಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT