ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ವಂಚಿತ ವಾಗಣಗೇರಿ ಗ್ರಾಮ

ಸ್ವಚ್ಛತೆ ಕೊರತೆ *ಸಾಂಕ್ರಾಮಿಕ ಕಾಯಿಲೆಗಳಿಂದ ಜನ ತತ್ತರ *ಶೌಚಾಲಯ, ಸುಸಜ್ಜಿತ ರಸ್ತೆ ಇಲ್ಲ
Last Updated 10 ಜನವರಿ 2017, 9:27 IST
ಅಕ್ಷರ ಗಾತ್ರ
ಸುರಪುರ: ವಾಗಣಗೇರಿ ಐತಿಹಾಸಿಕ ಗ್ರಾಮ ಸುರಪುರದಿಂದ 10 ಕಿ.ಮೀ ದೂರದಲ್ಲಿದೆ. ಗ್ರಾಮದಲ್ಲಿ 5 ಸಾವಿರ ಜನಸಂಖ್ಯೆ ಇದೆ. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿರುವ ಈ ಗ್ರಾಮದಲ್ಲಿ 9 ಜನ ಗ್ರಾ.ಪಂ ಸದಸ್ಯರಿದ್ದಾರೆ. ಆದರೆ, ಗ್ರಾಮ ಅಗತ್ಯ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.
 
ಗ್ರಾಮದ ಬಹುತೇಕ ಜನರು ಬಡವರಾಗಿದ್ದು, ಜೀವ ನೋಪಾಯಕ್ಕೆ ಕೂಲಿಯನ್ನು ಅವಲಂಬಿಸಿದ್ದಾರೆ. ಬಹಳಷ್ಟು ಜನ ಕೂಲಿ ಅರಸಿ ಗುಳೆ ಹೋಗುತ್ತಾರೆ. ಇದು ಅನಕ್ಷರತೆಗೆ ಮುಖ್ಯ ಕಾರಣವಾಗಿದೆ. 
 
ಗ್ರಾಮದಲ್ಲಿ 8ನೇ ತರಗತಿವರೆಗೆ ಮಾತ್ರ ಶಾಲೆ ಇದೆ. ಪ್ರೌಢಶಾಲೆ ಇಲ್ಲ. ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕತೆ ತೊಂದರೆಯಾಗುತ್ತಿದೆ. ಅಲ್ಲದೇ, ಶಾಲೆಯಲ್ಲಿ ಬಿಸಿಯೂಟ ಕೋಣೆ ಇಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.
 
ಗುಡ್ಡದಲ್ಲಿರುವ ಕಲ್ಲುಕುಟಿಗೇರ ಓಣಿಯಲ್ಲಿ ವಿದ್ಯುತ್‌ ವ್ಯವಸ್ಥೆ ಇಲ್ಲ. ಅಲ್ಲದೇ, ನೀರಿಗೆ ಹಾಹಾಕಾರ ಇದೆ. ಒಂದು ಕಿ.ಮೀ  ದೂರದಲ್ಲಿರುವ ಕೆಂಚಮ್ಮ ಗುಡಿಯ ಹತ್ತಿರ ಇರುವ ನೀರಿನ ಗುಮ್ಮಿಯಿಂದ ನೀರು ತರಬೇಕು. ಈ ಗುಮ್ಮಿಯೂ ಕೊಳಚೆ ನೀರಿನಲ್ಲಿ ಇದೆ. ಇದರಿಂದ ನೀರು ಕಲುಷಿತಗೊಂಡು ಕಾಯಿಲೆ ಹರಡುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಸಮಸ್ಯೆಗಳನ್ನು ಬಿಚ್ಚಿಟ್ಟರು.
 
ಗ್ರಾಮವು ಸುಸಜ್ಜಿತ ರಸ್ತೆ, ಚರಂಡಿ ವ್ಯವಸ್ಥೆಯಿಂದ ವಂಚಿತವಾಗಿದೆ. ಸೂಕ್ತ ಬಸ್‌ ನಿಲ್ದಾಣ ಇಲ್ಲ. ಸ್ವಚ್ಛತೆ ಕೊರತೆಯಿಂದಾಗಿ ಊರು ಪ್ರವೇಶಿಸುತ್ತಲೇ ಗಬ್ಬು ವಾಸನೆ ಮೂಗಿಗೆ ರಾಚುತ್ತದೆ. ಎಲ್ಲೆಡೆ ಕೆಸರು ಕಾಣಿಸುತ್ತದೆ. ಸಾರ್ವಜನಿಕ ಶೌಚಾಲಯ ಇಲ್ಲ. ಎರಡು ಅಂಗನವಾಡಿಗಳು ಇವೆ. ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ ಇಲ್ಲ. ಗ್ರಾಮದ ರಸ್ತೆಗಳೆಲ್ಲ ಮುಳ್ಳು ಕಂಟಿಗಳಿಂದ ತುಂಬಿ ಹೋಗಿವೆ. 
 
ಗ್ರಾಮದಲ್ಲಿರುವ 3 ಕೊಳವೆ ಬಾವಿಗಳಲ್ಲಿ ಉಪ್ಪು ನೀರು ಇದೆ. ಅರ್ಸೆನಿಕ್ ಅಂಶ ಹೇರಳವಾಗಿದೆ. ಕುಡಿಯುವ ನೀರಿನ ಘಟಕ ಪೂರ್ಣಗೊಂಡರೂ ಅದಕ್ಕೆ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ. ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಜಾರಿಗೆ ತರುತ್ತಿರವ ಯಾವದೇ ಯೋಜನೆಗಳು ಸಮರ್ಪಕವಾಗಿ ಜನರನ್ನು ತಲುಪುತ್ತಿಲ್ಲ. 
ಗ್ರಾಮದಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಅಲ್ಲದೇ, ತಗ್ಗು ಪ್ರದೇಶದಲ್ಲಿ ನೀರು ನಿಂತು ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿವೆ. ಸೊಳ್ಳೆಗಳ ಹಾವಳಿ ಅತಿಯಾಗಿದೆ. ಜನರಿಗೆ ಆರೋಗ್ಯದ ಬಗ್ಗೆ ಅರಿವು ಇಲ್ಲ.
 
ಎರಡು ತಿಂಗಳ ಹಿಂದೆ 10 ಜನರಿಗೆ ಡೆಂಗಿ ಜ್ವರ ಬಂದಿತ್ತು. ಅದರಲ್ಲಿ ಇಬ್ಬರು ಮೃತಪಟ್ಟಿದ್ದು, ವಾಂತಿಭೇದಿ ಸೇರಿದಂತೆ ಇತರ ಕಾಯಿಲೆಗಳು ಗ್ರಾಮದಲ್ಲಿ ಸಾಮಾನ್ಯ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
 
‘ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಕೂಡಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಸಮಸ್ಯೆ ಪರಿಹರಿಸಬೇಕು ಎಂದು ಗ್್ರಾಮಸ್ಥರು ಒತ್ತಾಯಿಸುತ್ತಾರೆ.
 
**
ಐತಿಹಾಸಿಕ ವಾಗಣಗೇರಿ ಕೋಟೆಯ ದುಸ್ಥಿತಿ
ಸುರಪುರ:
ಸುರಪುರದ ಗೋಸಲ ದೊರೆಗಳ ರಾಜ ಧಾನಿಯಾಗಿದ್ದ ವಾಗಣಗೇರಿ ಗ್ರಾಮ ತನ್ನ ಒಡಲಲ್ಲಿ ಕೋಟೆ, ಕೊತ್ತಲುಗಳನ್ನು ಹುದುಗಿಸಿಕೊಂಡಿದೆ. ಗ್ರಾಮ ವನ್ನು ಗುಡ್ಡಗಳು ಸುತ್ತುವರಿದಿವೆ.

ಬೆಟ್ಟಗುಡ್ಡಗಳು ಇರುವುದರಿಂದ ವಾಗಿನಗಿರಿ ಎಂಬ ಉಲ್ಲೇಖವಿದೆ. ಇದಕ್ಕೆ ನಿದರ್ಶನ ಎಂಬಂತೆ ಗ್ರಾಮದ ಬೆಟ್ಟಪ್ರದೇಶದಲ್ಲಿ ಬ್ರಹ್ಮ ದೇವರ ಗುಡಿ ಇದೆ. ಕ್ರಮೇಣ ಈ ಹೆಸರು ವಾಗಣಗೇರಿ ಎಂದು ರೂಪಾಂತರಗೊಂಡಿದೆ.

ಮೊಗಲ ದೊರೆ ಔರಂಗಜೇಬ ಇದೇ ವಾಗಣಗೇರಿ ಕೋಟೆ ಯಲ್ಲಿ ನಡೆದ ಯುದ್ಧದಲ್ಲಿ ಗೋಸಲ ದೊರೆ ಗಳಿಂದ ಸೋಲನುಭವಿಸಿದ್ದ. ಇಲ್ಲಿನ ದೊರೆಗಳ ಶೌರ್ಯ ದ ಬಗ್ಗೆ ಆತ ನೀಡಿದ ಸನ್ನದು ಇಂದಿಗೂ ಸುರಪುರದ ಅರಮನೆಯಲ್ಲಿ ಕಾಣಸಿಗುತ್ತದೆ.

ಗ್ರಾಮದ ಇನ್ನೊಂದು ಬದಿ ಪಡುಕೋಟೆಯಲ್ಲಿ ಅರಸರ ನಂಬಿಕಸ್ಥ ಮರಾಠಾ ಪಡೆ ನೆಲೆಸಿತ್ತು. ಪಡು ಕೋಟೆಯ ಮಹಾದ್ವಾರ ಅವಸಾನದ ಹಂತ ತಲುಪಿದೆ. ದ್ವಾರದ ಸುತ್ತ ಹೊಲಸು, ಕಸ ಕಡ್ಡಿ ತುಂಬಿದೆ. ವಾಗ ಣಗೇರಿ ಐತಿಹಾಸಿಕ ಕೋಟೆ ಅಲ್ಲಲ್ಲಿ ಬಿದ್ದಿದೆ. ನಿರ್ವ ಹಣೆಯಿಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ.
 
**
ವಾಗಣಗೇರಿ ಗ್ರಾಮದ ಕಲ್ಲುಕುಟಿಗೇರ ಓಣಿಯಲ್ಲಿ ನೀರಿಗೆ ಹಾಹಾಕಾರ ಇದೆ. ನೀರಿನ ಸೌಲಭ್ಯ ಕಲ್ಪಿಸುವಂತೆ ಹಲವು ಬಾರಿ ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
-ಹಣಮಂತ್ರಾಯ ಗೌಡಗೇರಿ,
ಗ್ರಾಮಸ್ಥ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT