ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಕ್ಕಟ್ಟಾದ ರಸ್ತೆ, ಚರಂಡಿ ಇಲ್ಲದೆ ಸಂಕಟ

ಬಸವಕಲ್ಯಾಣ: ತಾಲ್ಲೂಕಿನ ಐತಿಹಾಸಿಕ ಗಡಿಗೌಡಗಾಂವ ಗ್ರಾಮದಲ್ಲಿ ಅವ್ಯವಸ್ಥೆ
Last Updated 10 ಜನವರಿ 2017, 10:04 IST
ಅಕ್ಷರ ಗಾತ್ರ
ಬಸವಕಲ್ಯಾಣ: ತಾಲ್ಲೂಕಿನ ಗಡಿಗೌಡಗಾಂವದಲ್ಲಿ ಇಕ್ಕಟ್ಟಾದ ರಸ್ತೆ ಇದ್ದು, ಚರಂಡಿ ವ್ಯವಸ್ಥೆ ಇಲ್ಲದೆ ಜನರು ಸಂಕಟ ಅನುಭವಿಸುತ್ತಿದ್ದಾರೆ.
 
ಇದು ಐತಿಹಾಸಿಕ ಊರು. ಸಂಸ್ಥಾನಿಕರ ಕಾಲದಲ್ಲಿ ನಿರ್ಮಿಸಿದ ಈ ಭಾಗದಲ್ಲಿಯೇ ದೊಡ್ಡದಾಗಿರುವ ಕಾವಲುಗೋಪುರವಾದ ಹುಡೆ ಇದೆ. ಗ್ರಾಮದ ಸುತ್ತಲಿನಲ್ಲಿ ಕೋಟೆಗೆ ಇರುವಂಥ ರಕ್ಷಣಾ ಗೋಡೆ ಇದ್ದ ಕುರುಹುಗಳಿವೆ. ಅಗಸೆಬಾಗಿಲು, ಕೆತ್ತನೆ ಕಲ್ಲುಗಳಿಂದ ನಿರ್ಮಿಸಿದ ಬಾವಿಗಳು ಸುಸ್ಥಿತಿಯಲ್ಲಿವೆ. ಹುಡೆಯ ಮೇಲಿದ್ದ ನಾಲ್ಕು ಅಡಿ ಉದ್ದದ ತೋಪು ರಕ್ಷಣೆ ಇಲ್ಲದೆ ಹನುಮಾನ ದೇವಸ್ಥಾನದ ಎದುರಿಗೆ ಬಿದ್ದಿದೆ. ಸಂಬಂಧಿತ ಇಲಾಖೆಯವರು ಈ ಐತಿಹಾಸಿಕ ಕುರುಹುಗಳನ್ನು ಸಂರಕ್ಷಿಸಬೇಕು ಎಂದು ಗ್ರಾಮಸ್ಥರು ಅನೇಕ ಸಲ ಒತ್ತಾಯಿಸಿದ್ದರೂ ಪ್ರಯೋಜನ ಆಗಿಲ್ಲ.
 
ಹಿಂದಿನ ಕಾಲದಲ್ಲಿ ಮಹತ್ವದ ಸ್ಥಾನ ಪಡೆದಿದ್ದ ಊರು ಈಗ ಸಮಸ್ಯೆಗಳ ಆಗರವಾಗಿದೆ. ಅರಸರ ಕಾಲದಲ್ಲಿ ಇಲ್ಲಿ ಆಡಳಿತದ ಕಚೇರಿಗಳಿದ್ದವು. ತೆರಿಗೆ ವಸೂಲಿ ಕೇಂದ್ರ ಮತ್ತು ಸೈನಿಕರ ಠಾಣೆ ಇತ್ತೆಂದು ಹೇಳಲಾಗುತ್ತದೆ. ಸುತ್ತಲಿನ ಗ್ರಾಮಗಳಿಗೆ ಪ್ರಮುಖ ಕೇಂದ್ರವಾಗಿದ್ದ ಈ ಸ್ಥಳದಲ್ಲಿ ಈಗ ಮೂಲಸೌಕರ್ಯಗಳ ಕೊರತೆ ಇದೆ.
 
ಕೆಲ ವರ್ಷಗಳ ಹಿಂದೆ ಸುವರ್ಣ ಗ್ರಾಮ ಯೋಜನೆ ಹಾಗೂ ವಿಶ್ವಬ್ಯಾಂಕ್ ನೆರವಿನ ಯೋಜನೆಯಲ್ಲಿ ಗ್ರಾಮವನ್ನು ಆಯ್ಕೆ ಮಾಡಲಾಗಿದ್ದರೂ ನಿಗದಿತ ಕಾಮಗಾರಿಗಳು ನಡೆದಿಲ್ಲ. ಪಿಕೆಪಿಎಸ್ ಬ್ಯಾಂಕ್ ಎದುರಿನಿಂದ ಪೂರ್ವಭಾಗದಲ್ಲಿರುವ ಹನುಮಾನ ದೇವಸ್ಥಾನದ ವರೆಗೆ ಹೋಗುವ ದಾರಿ ಹಾಗೂ ಇತರೆ ರಸ್ತೆಗಳು ಕಿರಿದಾಗಿವೆ. ಇದರಿಂದ ಎತ್ತಿನ ಬಂಡಿ ಮತ್ತು ವಾಹನಗಳು ಹೋಗಲು ತೊಂದರೆಯಾಗಿದೆ. ಇಲ್ಲಿ ರಸ್ತೆ ತೆರವು ಕಾರ್ಯ ಕೈಗೊಂಡು ಸಿಮೆಂಟ್ ರಸ್ತೆ ನಿರ್ಮಿಸಬೇಕೆಂದರೆ ಹಣದ ಅವಶ್ಯಕತೆ ಇದೆ. ಇದಕ್ಕಾಗಿ ಅನುದಾನ ಒದಗಿಸಲು ಜನಪ್ರತಿನಿಧಿಗಳಿಗೆ ಕೇಳಿಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ದತ್ತಾತ್ರಿ ರಾಘೋ ಹೇಳಿದ್ದಾರೆ.
 
ನೀರಿನ ಸಮಸ್ಯೆ ಇರುವುದರಿಂದ ದೂರದ ಕೊಳವೆ ಬಾವಿಯಿಂದ ಗ್ರಾಮದಲ್ಲಿನ ನೀರಿನ ದೊಡ್ಡ ಟ್ಯಾಂಕ್‌ನಲ್ಲಿ ನೀರು ತುಂಬಲು ಎಚ್.ಕೆ.ಅರ್.ಡಿ.ಬಿ ಯೋಜನೆಯಲ್ಲಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಹಣ ಮಂಜೂರು ಮಾಡಿಸಿದ್ದಾರೆ. ಗ್ರಾಮದಿಂದ ಬೇಲೂರಗೆ ಹೊಸ ರಸ್ತೆ ನಿರ್ಮಾಣಕ್ಕೂ ₹1 ಕೋಟಿ ಅನುದಾನ ಒದಗಿಸಿದ್ದಾರೆ. ಮನೆಗಳಿಗೆ ನಳದ ವ್ಯವಸ್ಥೆ ಮಾಡಬೇಕಾಗಿದ್ದು ಇದಕ್ಕಾಗಿ ಅನುದಾನ ಒದಗಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
 
ಗ್ರಾಮದ ಕೆಲ ಭಾಗದಲ್ಲಿ ಮಾತ್ರ ಚರಂಡಿಗಳು ಮತ್ತು ಸಿಮೆಂಟ್ ರಸ್ತೆಗಳಿವೆ. ಎಲ್ಲ ಓಣಿಗಳಲ್ಲಿ ಚರಂಡಿ ವ್ಯವಸ್ಥೆ ಆಗಬೇಕು. ಸಿಮೆಂಟ್ ರಸ್ತೆ ನಿರ್ಮಿಸಬೇಕು ಎಂದು ಪಿಕೆಪಿಎಸ್ ಅಧ್ಯಕ್ಷ ಸತೀಶ ಹಿರೇಮಠ ಒತ್ತಾಯಿಸಿದ್ದಾರೆ. ಗ್ರಾಮದಲ್ಲಿ ರಸ್ತೆ ವಿಸ್ತರಣಾ ಕಾರ್ಯ ಕೈಗೊಳ್ಳುವುದು ಅತ್ಯಂತ ಅವಶ್ಯಕವಾಗಿದೆ ಎಂದು ಅರವಿಂದ ಪಾಟೀಲ, ಸತೀಶ ಪಾಟೀಲ, ಮೋಹನ ಬಿರಾದಾರ ಹೇಳಿದ್ದಾರೆ.
 
ಚರಂಡಿಗಳ ನೀರು ಮುಂದಕ್ಕೆ ಸಾಗದೆ ನಿಂತಲ್ಲೆ ನಿಲ್ಲುತ್ತಿದೆ. ಇದರಿಂದ ದುರ್ವಾಸನೆ ಬರುತ್ತಿದೆ. ಸೊಳ್ಳೆ ಕಾಟ ಹೆಚ್ಚಿದೆ. ಆದ್ದರಿಂದ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅನೇಕ ಸಲ ವಿನಂತಿಸಿದರೂ ಕೆಲಸ ಮಾಡಲಾಗಿಲ್ಲ ಎಂದು ಪಾರ್ವತಿಬಾಯಿ ದೂರಿದರು.
 
ಕೆಲ ವಿದ್ಯುತ್ ಕಂಬಗಳು ಶಿಥಿಲಗೊಂಡಿದ್ದು ಅವುಗಳನ್ನು ಬದಲಾಯಿಸಬೇಕು. ಕೆಲವೆಡೆ ವಿದ್ಯುತ್ ತಂತಿ ನೆಲಕ್ಕೆ ತಾಗಿದ್ದು ಅದನ್ನು ಸರಿಪಡಿಸಬೇಕು. ಬಸವಕಲ್ಯಾಣದಿಂದ ಹುಲಸೂರಗೆ ಹೋಗುವ ರಸ್ತೆ ಸುಧಾರಣಾ ಕಾರ್ಯ ಶೀಘ್ರ ಕೈಗೊಳ್ಳಬೇಕು ಎಂದು ಬಸವರಾಜಪ್ಪ ಆಗ್ರಹಿಸಿದ್ದಾರೆ.
 
**
ಕೊಳವೆ ಬಾವಿಯಿಂದ ನೀರಿನ ಟ್ಯಾಂಕ್ ವರೆಗೆ ಪೈಪ್ ಲೈನ್ ಕೈಗೊಳ್ಳಲು ₹ 15 ಲಕ್ಷ ಮಂಜೂರಾಗಿದೆ. ಮನೆಗಳಿಗೆ ನಳದ ವ್ಯವಸ್ಥೆಗೆ ಪ್ರಯತ್ನಿಸಲಾಗುತ್ತಿದೆ.
-ದತ್ತಾತ್ರಿ ರಾಘೋ, ಅಧ್ಯಕ್ಷ ಗ್ರಾಮ ಪಂಚಾಯಿತಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT