ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಲ್ಲಿ ಹೈ.ಕ ಹಿಂದೆ: ಖರ್ಗೆ ಕಳವಳ

ಕಲಬುರ್ಗಿ: ಸಾವಳಗಿ(ಬಿ) ಸರ್ಕಾರಿ ಮುಸ್ಲಿಂ ವಸತಿ ಶಾಲೆಯ ಕಟ್ಟಡ ಉದ್ಘಾಟನೆ
Last Updated 10 ಜನವರಿ 2017, 10:07 IST
ಅಕ್ಷರ ಗಾತ್ರ
ಕಲಬುರ್ಗಿ: ರಾಜ್ಯದ ಶೈಕ್ಷಣಿಕ ನಕ್ಷೆಯಲ್ಲಿ ಹೈದರಾಬಾದ್‌ ಕರ್ನಾಟಕದ ಎಲ್ಲ ಜಿಲ್ಲೆಗಳು ಅತ್ಯಂತ ಕೆಳಮಟ್ಟದಲ್ಲಿವೆ. ಈ ಭಾಗದ ಮಹಿಳೆಯರು, ದಲಿತರು, ಮುಸ್ಲಿಮರು, ಹಿಂದುಳಿದವರು, ರೈತ ಹಾಗೂ ಕುಲಿಕಾರರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದರು.
 
ಸೋಮವಾರ ನಡೆದ ತಾಲ್ಲೂಕಿನ ಸಾವಳಗಿ (ಬಿ) ಗ್ರಾಮದಲ್ಲಿ ₹11 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಮೊರಾರ್ಜಿ ದೇಸಾಯಿ ಸರ್ಕಾರಿ ಮುಸ್ಲಿಂ ವಸತಿ ಶಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
 
ಶೈಕ್ಷಣಿಕ ಅಭಿವೃದ್ಧಿ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ವಸತಿ ಶಾಲೆಗಳು ಮಾದರಿಯಾಗಿದ್ದು, ಈ ಭಾಗದಲ್ಲಿ ಹೆಚ್ಚು ಹೆಚ್ಚು ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದರು.
 
ಪ್ರಪಂಚದಲ್ಲಿ ನಮ್ಮ ದೇಶ ಹಿಂದೆ ಬೀಳಲು ಜಾತಿ ಪದ್ಧತಿ ಕಾರಣವಾಗಿದೆ. ವರ್ಣಭೇದ ಮರೆತು ಎಲ್ಲರೂ ಸಮಾನರಾಗಿ ಅಭಿವೃದ್ಧಿಗೆ ಅವಕಾಶ ನೀಡಬೇಕು.
 
ಅಂಬೇಡ್ಕರ್ ಅವರಿಗೆ ಎಷ್ಟೇ ಅಪಮಾನವಾದರೂ ದೇಶ ಒಂದು ಎಂಬ ಭಾವನೆಯಿಂದ ದೇಶದ ಸಂವಿಧಾನ ರಚಿಸಿದರು. ದೇಶದ ಐಕ್ಯತೆ ಒಗ್ಗಟ್ಟಿಗಾಗಿ ಶ್ರಮಿಸಿದರು. ಅವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಉನ್ನತ ಶಿಕ್ಷಣ ಪಡೆದು ಸಂಘಟಿತರಾಗಿ ಹೋರಾಡುವಂತೆ ಸಂದೇಶ ನೀಡಿದ್ದಾರೆ ಎಂದರು.
 
ಮೊರಾರ್ಜಿ ದೇಸಾಯಿ ಸರ್ಕಾರಿ ಮುಸ್ಲಿಂ ವಸತಿ ಶಾಲೆ ಉದ್ಘಾಟಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಸಾರ್ಕಾರವು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಹೋಬಳಿಗೆ ಒಂದು ಮೊರಾರ್ಜಿ  ದೇಸಾಯಿ ಶಾಲೆ ಪ್ರಾರಂಭಿಸಲು ಸರ್ಕಾರ ಘೋಷಿಸಿದೆ. ಅದರಂತೆ ಈಗಾಗಲೇ ಶಾಲೆಗಳನ್ನು ಪ್ರಾರಂಭಿಸಲಾಗಿದೆ ಎಂದರು. 
 
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.
 
ಜಿಲ್ಲಾ ಪಂಚಾಯಿತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕರಾದ ಖಮರುಲ್ ಇಸ್ಲಾಂ, ಇಕ್ಬಾಲ್ ಅಹ್ಮದ್ ಸರಡಗಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಪಾಟೀಲ ಸಂಕನೂರ, ಪಟ್ಟಣ ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ ವಿ.ಪಾಟೀಲ ದಣ್ಣೂರ, ಕಲಬುರ್ಗಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಿವರಾಜ್ ಕಲ್ಲಪ್ಪ ಸಜ್ಜನ್, ಸಾವಳಗಿ(ಬಿ) ತಾಲ್ಲೂಕು ಪಂಚಾಯಿತಿ ಸದಸ್ಯ ಚನ್ನಬಸಯ್ಯ ಜಿ. ಸ್ಥಾವರಮಠ, ಗ್ರಾಮ ಪಂಚಾಯಿತಿ ಅಧ್ಯಕ್ಷ ಈರಣ್ಣ ಎನ್. ಡಬಕಿ ಪಾಲ್ಗೊಂಡಿದ್ದರು.
 
ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮಹಿಬೂಬಸಾಬ ಕಾರಟಗಿ ಸ್ವಾಗತಿಸಿದರು. ಔರಾದ್‌ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಅಣವೀರ ಹರಸೂರ ನಿರೂಪಿಸಿದರು. ಸರ್ಕಾರಿ ಮುಸ್ಲಿಂ ವಸತಿ ಶಾಲೆಯ ಸಿಬ್ಬಂದಿ ವಜೀದಾ ವಂದಿಸಿದರು. 
 
ವಿದ್ಯಾರ್ಥಿನಿ ನಿಧಾ ಖಿರಾತ ಮತ್ತು ಮೆಮಾಂಜ್ ನಾಥ ಹಾಡಿದರು.
 
**
ಶಾಲೆಗಳು ಅದಲು– ಬದಲು
ಕಲಬುರ್ಗಿ ನಗರದ ಹತ್ತಿರದಲ್ಲಿರುವ ಹಾಗರಗಾ ಗ್ರಾಮದ ಹತ್ತಿರ ಮೊರಾರ್ಜಿ ದೇಸಾಯಿ ಶಾಲೆ ಪ್ರಾರಂಭಿಸಲು ಸರ್ಕಾರ ಮಂಜೂರಾತಿ ನೀಡಿದೆ. ಇದಕ್ಕಾಗಿ ಈಗಾಗಲೇ ₹15 ಕೋಟಿ ವೆಚ್ಚದ ಟೆಂಡರ್  ಕರೆಯಲಾಗಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಕಟ್ಟಡ ಪೂರ್ಣಗೊಳ್ಳಲಿದೆ.
 
ಸಾವಳಗಿ ಗ್ರಾಮದ ನಾಗರಿಕರ ಕೋರಿಕೆಯಂತೆ  ಸಾವಳಗಿಯ ಉರ್ದು ವಸತಿ ಶಾಲೆಯನ್ನು ಹಾಗರಗಾಕ್ಕೆ ಹಾಗೂ ಹಾಗರಗಾ ಇಂಗ್ಲಿಷ್‌ ಮಾಧ್ಯಮ ವಸತಿ ಶಾಲೆಯನ್ನು ಸಾವಳಗಿಗೆ ಸ್ಥಳಾಂತರಿಸಲಾಗುವುದು. ಹಾಗರಾದಲ್ಲಿ ಪ್ರಾರಂಭಗೊಳ್ಳುವ ಉರ್ದು ವಸತಿ ಶಾಲೆ ಮಕ್ಕಳಿಗೆ ಹೆಚ್ಚಿನ ಭದ್ರತೆ ಸಿಕ್ಕಂತಾಗಲಿದೆ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
 
**
ಜಿಲ್ಲೆಯಲ್ಲಿ ₹260 ಕೋಟಿ ವೆಚ್ಚದಲ್ಲಿ  ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಕ್ರೈಸ್ಟ್ ಸಂಸ್ಥೆಗೆ ನಿರ್ಮಾಣದ ಕಾರ್ಯ ವಹಿಸಲಾಗಿದೆ. ಕಲಂ 371(ಜೆ) ರೂಪಿಸಿದ್ದು ಈ ಭಾಗದ ಸುದೈವ. 
-ಡಾ.ಶರಣಪ್ರಕಾಶ ಪಾಟೀಲ,  ಸಚಿವ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT