ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀವ್ರಗತಿಯಲ್ಲಿ ಸಾಗಿರುವ ಭಾಷಾ ಮಿಶ್ರಣ

ತಿ.ನರಸೀಪುರ ತಾಲ್ಲೂಕುಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಟಿ.ಸಿ. ಪೂರ್ಣಿಮಾ
Last Updated 10 ಜನವರಿ 2017, 10:30 IST
ಅಕ್ಷರ ಗಾತ್ರ
ತಿ.ನರಸೀಪುರ: ‘ತೀವ್ರಗತಿಯಲ್ಲಿ ಬದ ಲಾಗುತ್ತಿರುವ ವ್ಯವಸ್ಥೆಗೆ ಹೊಂದುವಂತೆ ಕನ್ನಡ ಭಾಷೆಗೆ ತ್ವರಿತವಾಗಿ ಕಾಯಕಲ್ಪ ನೀಡಬೇಕಿದೆ’ ಎಂದು ತಾಲ್ಲೂಕಿನ 4ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ.ಟಿ.ಸಿ. ಪೂರ್ಣಿಮಾ ಅಭಿಪ್ರಾಯಪಟ್ಟರು. 
 
ತಿರಮಕೂಡಲಿನ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸೋಮವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ 4ನೇ ಕನ್ನಡ ಸಾಹಿತ್ಯ  ಸಮ್ಮೇಳನದಲ್ಲಿ ಅವರು ಅಧ್ಯಕ್ಷರ ನುಡಿಗಳನ್ನಾಡಿದರು.
 
ಜಾಗತಿಕರಣ, ಉದಾರಿಕರಣ, ಆಧುನಿಕರಣಗಳಿಂದ ಹೊಸ ಹೊಸ ಪರಿಭಾಷೆಗಳು ಹುಟ್ಟಿಕೊಂಡು ಭಾಷಾ ಮಿಶ್ರಣ ತೀವ್ರಗತಿಯಲ್ಲಿ ಸಾಗಿದೆ. ಈ ದಿಸೆಯಲ್ಲಿ ಭಾಷಾ ಮಿಶ್ರಣ, ಮೂಲ ಹಾಗೂ ಎರವಲು ಶಬ್ದಗಳ ಬಳಕೆ, ಭಾಷೆಯ ಪ್ರಮಾಣೀಕರಣದ ಅಗತ್ಯತೆ ವಿಚಾರಗಳ ಬಗ್ಗೆ ವೈಜ್ಞಾನಿಕ ತಳಹದಿಯ ಅಧ್ಯಯನ ಅನಿವಾರ್ಯವಾಗಿದೆ. ಶಾಸ್ತ್ರೀಯ ಭಾಷೆ ಕನ್ನಡದಲ್ಲಿ ಇಂತಹ ಶಿಸ್ತುಬದ್ಧ ಆಯಾಮಗಳ ಅಧ್ಯಯನ ಮಾಡಬೇಕಿದೆ ಎಂದರು.
 
ಕನ್ನಡ ಶಾಸ್ತ್ರೀಯ ಭಾಷೆ ಎನಿಸುವುದು ಎಷ್ಟು ಮುಖ್ಯವೋ ಅದರ ಅಭಿವೃದ್ಧಿಯ ಪ್ರಯೋಗ ಪ್ರಯತ್ನಗಳು ಆಗಬೇಕಿರುವುದು ಅಷ್ಟೇ ಮುಖ್ಯ ಎಂದ ಅವರು ಈವರೆಗೂ ಕನ್ನಡದ ಭಾಷೆಯ ಅಭಿವೃದ್ಧಿಯಲ್ಲಿ ಆಗುತ್ತಿರುವ ಮಾಹಿತಿ ಕನ್ನಡಿಗರಿಗೆ  ಲಭ್ಯವಾಗದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. 
 
ಇದೇ ವೇಳೆ ಕನ್ನಡ ನೆಲ ಜಲ ಬಳಸಿಕೊಳ್ಳುವ ಖಾಸಗಿ ಸಂಸ್ಥೆಗಳು ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸ ಲಾತಿ ನೀಡಬೇಕು ಎಂಬ ಕಟ್ಟು ನಿಟ್ಟಿನ ಆದೇಶವನ್ನು ಸರ್ಕಾರ ಜಾರಿಗೊಳಿಸ ಬೇಕು. ಆಗ ಮಾತ್ರ ನಮ್ಮ ನೆಲದ ಜನರ ಭವಿಷ್ಯ ಹಾಗೂ ಸ್ವಾಭಿಮಾನ ಕಾಪಾಡಿಕೊಳ್ಳಲು ಸಾಧ್ಯ. ಇಂತಹ ನೀತಿ ರೂಪಿಸಿ ಅನುಷ್ಠಾನಗೊಳಿಸುವ ಬದ್ಧತೆ ತೋರಿದರೆ ಸರ್ಕಾರ ಹಾಗೂ ಆಡಳಿತ ನಡೆಸುವವರ ಹೆಸರು ಕನ್ನಡಿಗರ ಮನಸ್ಸಿನಲ್ಲಿ ನೆಲಸುತ್ತದೆ ಎಂದು ಅಭಿಪ್ರಾಯಪಟ್ಟರು. 
 
ಮೂಲತಹ ತಿ.ನರಸೀಪುರ ತಿರಮ ಕೂಡಲಿನವರಾದ ಡಾ. ಪೂರ್ಣಿಮಾ ಅವರು ತಮ್ಮ ಕುಟುಂಬದ ಹಿರಿಯ ರಾದ, ಸಂಗೀತ ಕ್ಷೇತ್ರದ ಮೇರು ಸಾಧಕ ವಿದ್ವಾನ್ ಟಿ.ಚೌಡಯ್ಯ ಅವರ ಹೆಸರಿನಲ್ಲಿ ತಾಲ್ಲೂಕು ಕೇಂದ್ರದಲ್ಲಿ ಸ್ಮಾರಕ ಭವನ ನಿರ್ಮಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಅಲ್ಲದೇ, ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದರು.
 
ಹಿರಿಯ ಸಾಹಿತಿ ಹಾಗೂ ಪ್ರಾಧ್ಯಾ ಪಕ ಡಾ.ಸಿ. ನಾಗಣ್ಣ ಪ್ರಧಾನ ಭಾಷಣ ಮಾಡಿ, ಸಾಹಿತ್ಯದ ಒಡನಾಟ ನಮ್ಮಲ್ಲಿ  ನೈತಿಕ ಪ್ರಜ್ಞೆ  ಬೆಳೆಸುತ್ತಿದೆ. ನಾಗರಿಕತೆ ಯನ್ನು ಊರ್ಜಿತಗೊಳಿಸಲು ಕಾವ್ಯ, ಸಾಹಿತ್ಯ, ಕಾದಂಬರಿಗಳು ಪ್ರಸ್ತುತವಾಗಿ ಮಾನವ ಸಮಾಜದ ಸಂಬಂಧಗೊಳಿ ಸುವ ಕೆಲಸ ಸಾಹಿತಿಗಳಿಂದಾಗುತ್ತಿದೆ. ಸಾಹಿತ್ಯ ಕ್ಷೇತ್ರಕ್ಕೆ ಸುಗಂಧಯುಕ್ತ ಪರಿಮಳ ಬೀರುವ ಆಯಾಮ ದೊರಕಿಸಬೇಕಿದೆ ಎಂದು ಹೇಳಿದರು.
 
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೈ.ಡಿ.ರಾಜಣ್ಣ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಸಿಗಬೇಕೆಂಬ ಹೋರಾಟಕ್ಕೆ ನ್ಯಾಯಾಲಯದ ತೀರ್ಪುಗಳು ಅಡ್ಡಗೋಡೆಯಾಗುತ್ತಿವೆ. ಶಿಕ್ಷಣದಲ್ಲಿ ಕನ್ನಡ, ಜಲವಿವಾದಗಳು, ಕನ್ನಡ ಭಾಷೆಯ ಕುಂಠಿತ ಬೆಳವಣಿಗೆ ನಮ್ಮನ್ನು ಆತಂಕಕ್ಕೀಡುಮಾಡುತ್ತಿವೆ. ಕನ್ನಡ ಅಭಿಮಾನದ ಭಾಷೆಯಾಗದೇ ಸ್ವಾಭಿಮಾನದ ಭಾಷೆಯಾಗಬೇಕು ಎಂದರು.
 
ಕನ್ನಡ ಭಾಷೆ ಸಮ್ಮೇಳನ, ಸಂವ ಹನ, ಸಂವೇದನೆಗೆ  ಬದುಕುವ ಭಾಷೆ ಯಾಗದೇ ಜೀವನದ ವಿಧಾನ ವಾಗ ಬೇಕು. ಕನ್ನಡ ಸ್ಥಾನ ಮಾನದ ಬಗ್ಗೆ ಕನ್ನ ಡಿಗರು ಆತ್ಮಾವಲೋಕನ ಮಾಡಿಕೊಂಡು ಭಾಷೆಯನ್ನು ಜ್ಞಾನೋಪಯೋಗಿಯಾಗಿ ಬಳಸಬೇಕು ಎಂದು ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ  ಡಾ.ಸಿ.ಜಿ ಉಷಾದೇವಿ ಹೇಳಿದರು.
 
ವಾಟಾಳು ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ  ಸಾನ್ನಿಧ್ಯ ವಹಿಸಿ ಮಾತನಾಡಿದರು.
 
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಜಿ.ನಟರಾಜು,  ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್‌, ಎಂ.ಚಂದ್ರಶೇಖರ್‌, ಮೂಗೂರು ನಂಜುಂಡಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಾಮೇಗೌಡ,  ಪುರಸಭಾಧ್ಯಕ್ಷೆ ಸುಧಾ ಗುರುಮಲ್ಲಪ್ಪ, ಉಪಾಧ್ಯಕ್ಷೆ ರತ್ನಮ್ಮ,  ಬನ್ನೂರು ಪುರಸಭಾಧ್ಯಕ್ಷೆ ಮಂಜುಳಾ, ತಾ.ಪಂ ಸದಸ್ಯರಾದ ಕೆ.ಎಸ್‌. ಗಣೇಶ್‌, ಶಿವಮ್ಮ, ರಂಗಭೂಮಿ ಕಲಾವಿದ ರಾಜ ಶೇಖರ್‌ ಕದಂಬ, ಕಸಾಪ ಪದಾಧಿ ಕಾರಿಗಳಾದ ಮಹಾದೇವಶೆಟ್ಟಿ, ಕೆ.ಆರ್‌. ಷಣ್ಮುಖಸ್ವಾಮಿ, ಟಿ.ಜಿ. ಪುಟ್ಟಸ್ವಾಮಿ, ಮೂಗೂರು ಕುಮಾರ ಸ್ವಾಮಿ, ಕೆ. ಎಂ.ಮಹಾದೇವಮ್ಮ, ಮಹೇಂದ್ರಸಿಂಗ್‌ ಕಾಳಪ್ಪ ಮಹಿಳಾ ಘಟಕದ ಮಹಾ ದೇವಮ್ಮ, ನಾಗರತ್ನಮ್ನ, ಜಾನಕಿ, ಜಯಲಕ್ಷ್ಮಿ ಸೇರಿದಂತೆ ಅನೇಕರು ಹಾಜರಿದ್ದರು.
 
**
ಸಮ್ಮೇಳನಾಧ್ಯಕ್ಷರ ಮೆರವಣಿಗೆ 
ತಿ.ನರಸೀಪುರ: ಕನ್ನಡ ಸಾಹಿತ್ಯ ಪರಿಷತ್ ಸೋಮವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಕಲಾ ತಂಡಗಳ ಹಾಗೂ ಸಮ್ಮೇಳಾನಾಧ್ಯಕ್ಷರ ಮೆರವಣಿಗೆಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸಿ. ಚಾಮೇಗೌಡ ಹಾಗೂ  ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ ಚಾಲನೆ ನೀಡಿದರು. 
 
ಪಟ್ಟಣದ ಶ್ರೀಗುಂಜಾನರಸಿಂಹಸ್ವಾಮಿ ದೇವಾಲಯದ ಮುಂಭಾಗದಲ್ಲಿ ಸಮ್ಮೇಳಾಧ್ಯಕ್ಷರ ರಥಯಾತ್ರೆ ವಾಹನಕ್ಕೆ ಪೂಜೆ ಸಲ್ಲಿಸಿದ ಬಳಿಕ ಕಲಾ ತಂಡಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. 
 
ಪೂಜಾ ಕುಣಿತ, ಬೊಂಬೆಗಳು ಹಾಗೂ ಕಂಸಾಳೆ ತಂಡಗಳು ಹಾಗೂ ಪಟ್ಟಣದ ವಿವಿಧ ಶಾಲೆಯ ನೂರಾರು ವಿದ್ಯಾರ್ಥಿಗಳು  ಹಾಗೂ ಸ್ತ್ರೀಶಕ್ತಿ ಸಂಘಟನೆಯ ಸದಸ್ಯರು ಪೂರ್ಣ ಕುಂಭ ಹೊತ್ತು ಸಾಗಿದರು. 
 
ದೇವಾಲಯದಿಂದ ಆರಂಭಗೊಂಡ ಮೆರವಣಿಗೆ ತೇರಿನ ಬೀದಿ ಮೂಲಕ ಭಗವಾನ್ ವೃತ್ತ, ಲಿಂಕ್ ರಸ್ತೆ, ಜೋಡಿ ರಸ್ತೆ, ತಿರಮ ಕೂಡಲು ವೃತ್ತದ ಮೂಲಕ ಕಪಿಲಾ ಸೇತುವೆಯ ಮೇಲೆ ಹಾದು ಹೋಗಿ ಸಮ್ಮೇಳನದ ವೇದಿಕೆ ತಲುಪಿತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT