ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದತಿ ವಿರುದ್ಧ ಕಾಂಗ್ರೆಸ್ ಕಹಳೆ

ಮೋದಿ ಪ್ರಶ್ನಿಸಿದರೆ ದೇಶದ್ರೋಹಿ ಪಟ್ಟ; ಆರೋಪ; ಬೃಹತ್‌ ಪ್ರತಿಭಟನಾ ರ್‌್ಯಾಲಿ
Last Updated 10 ಜನವರಿ 2017, 10:46 IST
ಅಕ್ಷರ ಗಾತ್ರ
ಮೈಸೂರು: ಗರಿಷ್ಠ ಮುಖಬೆಲೆಯ ನೋಟು ಚಲಾವಣೆ ರದ್ದುಪಡಿಸುವ ಮೂಲಕ ಕೇಂದ್ರ ಸರ್ಕಾರವು ದೇಶದಲ್ಲಿ ಅರಾಜಕತೆ ಸೃಷ್ಟಿಸಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿ ಸೋಮವಾರ ಬೃಹತ್‌ ಪ್ರತಿಭಟನಾ ರ್‌್ಯಾಲಿ ನಡೆಸಿದರು.
 
ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ರೈಲು ನಿಲ್ದಾಣದ ಬಳಿ ರ್‌್ಯಾಲಿಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಮೆರವಣಿಗೆ ಜೆಎಲ್‌ಬಿ ರಸ್ತೆ, ದಾಸಪ್ಪ ವೃತ್ತ, ಧನ್ವಂತ್ರಿ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ದೇವರಾಜ ಅರಸು ರಸ್ತೆ, ಮೆಟ್ರೊಪೋಲ್‌ ವೃತ್ತ, ಹುಣಸೂರು ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಬಹಿರಂಗ ಸಭೆ ನಡೆಸಿದರು.
 
ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಇದೊಂದು ಹಗರಣವಾಗಿದ್ದು, ಕಪ್ಪುಹಣದ ನೆಪದಲ್ಲಿ ವಂಚನೆ ಮಾಡಲಾಗಿದೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕೂಡಲೇ ಮಧ್ಯಪ್ರವೇಶ ಮಾಡಿ ಸಂಕಷ್ಟಕ್ಕೆ ಸಿಲುಕಿದ ಜನತೆಗೆ ನೆರವಾಗಬೇಕು ಎಂದು ಮನವಿ ಮಾಡಿದರು.
 
ದೇಶದ್ರೋಹದ ಕೆಲಸ: ಕಾಂಗ್ರೆಸ್‌ ಮುಖಂಡ ಅಡಗೂರು ಎಚ್‌.ವಿಶ್ವನಾಥ್‌ ಮಾತನಾಡಿ, ‘ಭಾರತೀಯ ಆರ್ಥಿಕ ವ್ಯವಸ್ಥೆ, ನಾಣ್ಯ, ನೋಟು ಹಾಗೂ ಧರ್ಮದ ಮೇಲೆ ಮೋದಿ ಅವರಿಗೆ ನಂಬಿಕೆ ಇಲ್ಲ. ನೋಟು ರದ್ದು ಮಾಡುವ ಮೂಲಕ ದೇಶದ ಜನತೆಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇದೊಂದು ಲೂಟಿ ಎಂದವರನ್ನು ದೇಶದ್ರೋಹಿಗಳಂತೆ ಟೀಕಿಸಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್‌ ಪಕ್ಷವೇ ಹೊರತು ನೀವಲ್ಲ. ನೀವು ಮಾಡಿದ್ದು ದೇಶದ್ರೋಹದ ಕೆಲಸ’ ಎಂದು ಕಿಡಿಕಾರಿದರು.
 
‘ಸುಳ್ಳು ಮಾಹಿತಿ ಹರಿಬಿಡುವ ಮೂಲಕ ಬಿಜೆಪಿಯು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕೇಂದ್ರ ಸರ್ಕಾರದ ನೀತಿ ವಿರೋಧಿಸುವವರನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಸರ್ಕಾರದ ತಪ್ಪನ್ನು ಮುಚ್ಚಿಕೊಳ್ಳಲು ಜನತೆಯ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ 1ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ’ ಎಂದು ಕಳವಳ ವ್ಯಕ್ತಪಡಿಸಿದರು.
 
‘ಸ್ವಿಸ್‌ ಬ್ಯಾಂಕಿನಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ಈವರೆಗೆ ಈ ಕೆಲಸ ಮಾಡಿಲ್ಲ. ಬದಲಿಗೆ ಸ್ವಿಸ್‌ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಭಾರತೀಯರ ಕಪ್ಪು ಹಣದ ಮಾಹಿತಿ ಸದ್ಯಕ್ಕೆ ಅಗತ್ಯವಿಲ್ಲವೆಂಬ ಸಂದೇಶ ನೀಡಿದ್ದಾರೆ. ಈ ಒಪ್ಪಂದದ ಕುರಿತು ಪ್ರಧಾನಿ ದೇಶದ ಜನತೆಗೆ ಮಾಹಿತಿ ನೀಡಬೇಕು’ ಎಂದು ಆಗ್ರಹಿಸಿದರು.
 
ಉದ್ಯಮಿಗಳಿಗೆ ಲಾಭ: ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಮಾತನಾಡಿ, ‘ದೇಶದ ಉದ್ಯಮಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಗರಿಷ್ಠ ಮುಖಬೆಲೆ ನೋಟು ಚಲಾವಣೆ ರದ್ದುಪಡಿಸಲಾಗಿದೆ. ಉದ್ಯಮಿಗಳ ಸಾಲವನ್ನು ಮನ್ನಾ ಮಾಡುವ ಹುನ್ನಾರವೂ ಇದರ ಹಿಂದೆ ಅಡಗಿದೆ. ಅಲ್ಲದೆ, ಹೊಸ ನೋಟುಗಳಲ್ಲಿ ಸಾಕಷ್ಟು ಲೋಪಗಳಿವೆ. ಕೇಂದ್ರ ಸರ್ಕಾರದಿಂದ ದೇಶದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಮುಂದಿನ ಚುನಾವಣೆಯಲ್ಲಿ ಮತದಾರರು ಇದಕ್ಕೆ ಪಾಠ ಕಲಿಸಲಿದ್ದಾರೆ’ ಎಂದರು.
 
ಎಐಸಿಸಿ ವೀಕ್ಷಕ ಜತ್ತಿ ಕುಸಮ್‌ ಕುಮಾರ್‌, ಶಾಸಕ ಎಂ.ಕೆ.ಸೋಮಶೇಖರ್‌, ಎಚ್‌.ಪಿ.ಮಂಜುನಾಥ, ವಿಧಾನ ಪರಿಷತ್‌ ಸದಸ್ಯರಾದ ಆರ್‌.ಧರ್ಮಸೇನ, ನಾರಾಯಣಸ್ವಾಮಿ, ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಉಪಾಧ್ಯಕ್ಷೆ ಡಾ.ನಾಗಲಕ್ಷ್ಮಿ, ಕೆಪಿಸಿಸಿ ಸದಸ್ಯ ಶಫೀವುಲ್ಲಾ, ಗ್ರಾಮಾಂತರ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಘಟಕದ ಅಧ್ಯಕ್ಷ ಟಿ.ಎಸ್. ರವಿಶಂಕರ್ ಇದ್ದರು.
 
**
ಸಂಚಾರ ದಟ್ಟಣೆ; ಪರದಾಡಿದ ಜನ
ಮೈಸೂರು: ಕಾಂಗ್ರೆಸ್‌ ಪ್ರತಿಭಟನಾ ರ್‌್ಯಾಲಿಯು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಪರಿಣಾಮ ಸಂಚಾರ ದಟ್ಟಣೆ ಹೆಚ್ಚಾಗಿ, ಸಾರ್ವಜನಿಕರು ಸಮಸ್ಯೆಗೆ ಸಿಲುಕಿದರು.
 
ದಿವಾನ್ಸ್‌ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ವಾಹನಗಳು ರೈಲು ನಿಲ್ದಾಣದ ಮುಂಭಾಗ ಸಂಚರಿಸಬೇಕು. ಆದರೆ, ಜೆಎಲ್‌ಬಿ ರಸ್ತೆಯಲ್ಲಿ ಮೆರವಣಿಗೆ ಸಾಗಿದ ಪರಿಣಾಮ ಇರ್ವಿನ್‌ ರಸ್ತೆಯಲ್ಲಿ ಬಹುದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.ಅನೇಕರು ಬಸ್‌ ಇಳಿದು ಕಾಲ್ನಡಿಗೆಯಲ್ಲಿ ಸಾಗಿದರು. ಆಂಬುಲೆನ್ಸ್‌ ಸಂಚಾರಕ್ಕೂ ಅಡಚಣೆ ಉಂಟಾಯಿತು.
 
**
ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುತ್ತಿದ್ದಾರೆ. ನೋಟು ಚಲಾವಣೆ ರದ್ದು ವಿಚಾರದಲ್ಲಿ ಆಡಿದ ಸುಳ್ಳು ಜನತೆಯ ಅರಿವಿಗೆ ಬರುತ್ತಿದೆ
–ವಾಸು, ಶಾಸಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT