ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಸ್ತು ವ್ಯವಸ್ಥೆಗೆ ಬಲ ತುಂಬಿದ ‘ಗರುಡ’

ಸಾರ್ವಜನಿಕರಲ್ಲಿ ಸಂಚಾರ ಜಾಗೃತಿ ಮೂಡಿಸಿದ ಜಾಥಾ; ಸಚಿವ ಮಹದೇವಪ್ಪ ಚಾಲನೆ
Last Updated 10 ಜನವರಿ 2017, 10:49 IST
ಅಕ್ಷರ ಗಾತ್ರ
ಮೈಸೂರು: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ, ಅಪರಾಧ ತಡೆ ಮಾಸಾಚರಣೆ ಹಾಗೂ 25 ನೂತನ ಪೊಲೀಸ್ ಗಸ್ತು ವಾಹನಗಳಿಗೆ (ಗರುಡ) ಇಲ್ಲಿನ ಅಂಬಾವಿಲಾಸ ಅರಮನೆಯ ಬಲರಾಮ ದ್ವಾರದಲ್ಲಿ ಸೋಮವಾರ ಚಾಲನೆ ನೀಡಲಾಯಿತು.
 
ಪೊಲೀಸ್‌ ಕಮಿಷನರೇಟ್‌ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಉದ್ಘಾಟಿಸಿದರು.
 
‘ಎಚ್ಚರವಿಲ್ಲದ ನಡೆ, ಅಪಘಾತಕ್ಕೆ ಎಡೆ’, ‘ಚಿನ್ನದ ಸರದ ಮೇಲೆ ಇರಲಿ ಸೆರೆಗು’, ‘ಮೌನದ ಚಾಲನೆ ಮನೆತನಕ, ಮೊಬೈಲ್‌ ಮಾತಿನ ಚಾಲನೆ ಸ್ಮಶಾನದತನಕ’ ಎಂಬ ಪ್ಲೆಕಾರ್ಡ್‌ಗಳನ್ನು ಹಿಡಿದ ವಿದ್ಯಾರ್ಥಿಗಳು ಪೊಲೀಸರಷ್ಟೇ ಶಿಸ್ತಿನಿಂದ ಜಾಥಾದಲ್ಲಿ ಹೆಜ್ಜೆ ಹಾಕಿದರು. ಪೊಲೀಸ್‌ ಬ್ಯಾಂಡ್‌, ಅಶ್ವರೋಹಿ ಪಡೆ, ನಗರ ಸಶಸ್ತ್ರ ಮೀಸಲು ಪೊಲೀಸ್‌ ಪಡೆ ತುಕಡಿ, ಗೃಹ ರಕ್ಷಕ ದಳ, ಟ್ರಾಫಿಕ್‌ ವಾರ್ಡನ್‌ ಸಿಬ್ಬಂದಿ ಮೆರವಣಿಗೆಯಲ್ಲಿ ಸಾಗಿದರು.
 
ಕೋಟೆ ಆಂಜನೇಯಸ್ವಾಮಿ ದೇಗುಲದಿಂದ ಹೊರಟ ಜಾಥಾ ದೊಡ್ಡಗಡಿಯಾರ, ಗಾಂಧಿಚೌಕ, ಒಲ್ಡ್‌ ಬ್ಯಾಂಕ್‌ ರಸ್ತೆ, ಸಯ್ಯಾಜಿರಾವ್‌ ರಸ್ತೆ, ಆಯುರ್ವೇದಿಕ್‌ ವೃತ್ತ, ನೆಹರೂ ವೃತ್ತ, ಅಶೋಕ ರಸ್ತೆಯ ಮೂಲಕ ಅರಮನೆಯ ಬಲರಾಮ ದ್ವಾರದ ಬಳಿ ಅಂತ್ಯವಾಯಿತು.
 
ಕರ್ಕಶ ಶಬ್ದದ ಹಾರ್ನ್‌ನಿಂದ ಉಂಟಾಗುವ ಮಾನಸಿಕ ಒತ್ತಡ, ಕಿವುಡುತನದ ಚಿತ್ರಣವನ್ನು ಸ್ತಬ್ಧಚಿತ್ರ ಕಟ್ಟಿಕೊಟ್ಟಿತು. ಪ್ರಖರ ದೀಪ ಬಳಕೆ ಬೇಡ, ಮದ್ಯಸೇವಿಸಿ ವಾಹನ ಚಾಲನೆ ಮಾಡುವುದರಿಂದ ಉಂಟಾಗುವ ಅವಘಡದ ಕುರಿತು ಚಿತ್ರಸಹಿತ ಸಾರ್ವಜನಿರಲ್ಲಿ ಅರಿವು ಮೂಡಿಸಲಾಯಿತು. ವಾಹನ ಚಾಲನೆ ಮಾಡುವಾಗ ಹೆಲ್ಮೆಟ್‌, ಸೀಟ್‌ ಬೆಲ್ಟ್‌ ಧರಿಸದಿರುವುದರಿಂದ ಎದುರಾಗುವ ತೊಂದರೆಯ ಕುರಿತು ಜಾಗೃತಿ ಮೂಡಿಸಲಾಯಿತು.
 
ಅಮೆರಿಕಕ್ಕಿಂತಲೂ ವೇಗ: ‘ಪೊಲೀಸ್‌ ನಿಯಂತ್ರಣಾ ಕೊಠಡಿ ಹಾಗೂ ಗಸ್ತು ವ್ಯವಸ್ಥೆ ಬಲಪಡಿಸುವ ಪ್ರಯತ್ನ ನಡೆಯುತ್ತಿದೆ. ಪಿಸಿಆರ್‌ ಹಾಗೂ ಗರುಡ ಸೇರಿ 32 ವಾಹನಗಳನ್ನು ನಗರದಲ್ಲಿ ಗಸ್ತಿಗೆ ನಿಯೋಜಿಸಲಾಗಿತ್ತು. ಹೆಚ್ಚುವರಿಯಾಗಿ 25 ವಾಹನಗಳನ್ನು ರಾಜ್ಯ ಸರ್ಕಾರ ನೀಡಿದ್ದು, ಪೊಲೀಸರ ಸಾಮರ್ಥ್ಯ ಮತ್ತಷ್ಟು ಹೆಚ್ಚಿದೆ’ ಎಂದು ಪೊಲೀಸ್‌ ಕಮಿಷನರ್‌ ಡಾ.ಎ.ಸುಬ್ರಮಣ್ಯೇಶ್ವರರಾವ್‌ ತಿಳಿಸಿದರು.
 
‘ನಿಯಂತ್ರಣಾ ಕೊಠಡಿ (100) ನೇರ ಸಂಪರ್ಕ ಹೊಂದಿದ 40 ಗರುಡ ವಾಹನಗಳನ್ನು ಸೇವೆಗೆ ಸಜ್ಜುಗೊಳಿಸಲಾಗಿದೆ. ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ 80 ಚದರ ಕಿ.ಮೀ ವ್ಯಾಪ್ತಿಯಲ್ಲಿ ಈ ವಾಹನಗಳು ಸಂಚರಿಸಲಿವೆ. ನಿಯಂತ್ರಣ ಕೊಠಡಿಗೆ ಮಾಹಿತಿ ಸಿಕ್ಕ 3 ನಿಮಿಷದಲ್ಲಿ ಗರುಡ ವಾಹನಕ್ಕೆ ತಲುಪುತ್ತದೆ. ಕನಿಷ್ಠ 5 ನಿಮಿಷದಲ್ಲಿ ಗಸ್ತು ವಾಹನ ಘಟನ ಸ್ಥಳಕ್ಕೆ ಧಾವಿಸುತ್ತದೆ. ಅಮೆರಿಕದಲ್ಲಿ ಪೊಲೀಸರು ಘಟನೆ ಸ್ಥಳಕ್ಕೆ ಧಾವಿಸಲು ಸರಾಸರಿ 10 ನಿಮಿಷ ಹಿಡಿಯುತ್ತದೆ. ಅವರಿಗಿಂತಲೂ ವೇಗವಾಗಿ ಸಾರ್ವಜನಿಕರಿಗೆ ಸೇವೆ ಒದಗಿಸಲು ಸಜ್ಜಾಗಿದ್ದೇವೆ’ ಎಂದರು.
 
‘ಗಸ್ತುವಾಹನಗಳಿಗೆ ಒಟ್ಟು 125 ಚಾಲಕರ ಅಗತ್ಯವಿದೆ. ವಾಹನ ಚಾಲನೆ ಮಾಡುವ ಪೊಲೀಸ್‌ ಸಿಬ್ಬಂದಿಯ ಕೊರತೆ ಎದುರಾಗಿದೆ. ಹೀಗಾಗಿ, ಈ ಕೆಲಸಕ್ಕೆ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಘಟನೆ ಸ್ಥಳಕ್ಕೆ ಧಾವಿಸುವ ಸಿಬ್ಬಂದಿ ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕು ಎಂಬ ಕುರಿತು ತರಬೇತಿ ನೀಡಲಾಗಿದೆ’ ಎಂದರು.
 
ಅಪಘಾತಕ್ಕೆ ಹೆಚ್ಚು ಬಲಿ: ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, ‘ಕಾನೂನು ಅರಿವು ಮತ್ತು ಪರಿಪಾಲನೆ ಉತ್ತಮವಾಗಿರುವುದರಿಂದ ವಿದೇಶದಲ್ಲಿ ಅಪರಾಧ ಪ್ರಕರಣಗಳೂ ವಿರಳ. ಏಷ್ಯದಲ್ಲಿ ಅತಿ ಹೆಚ್ಚು ಮಂದಿ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ರಸ್ತೆ ಸುರಕ್ಷತೆಯ ಅರಿವಿನ ಕೊರತೆಯಿಂದಾಗಿ ಅವಘಡಗಳು ಸಂಭವಿಸುತ್ತಿವೆ.  ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಮೈಸೂರನ್ನು ಸುರಕ್ಷಿತ ನಗರವನ್ನಾಗಿ ರೂಪಿಸಲು ಪೊಲೀಸರೊಂದಿಗೆ ಸಾರ್ವಜನಿಕರೂ ಸಹಕರಿಸಬೇಕು’ ಮನವಿಯನ್ನು ಮಾಡಿದರು.
 
ಶಾಸಕ ಎಂ.ಕೆ.ಸೋಮಶೇಖರ್‌, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ.ಎಚ್‌.ಟಿ.ಶೇಖರ್‌, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎನ್‌.ರುದ್ರಮುನಿ, ನಗರ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಡಿಸಿಪಿ ಬಿ.ಎನ್‌.ಕಿತ್ತೂರು, ಅಶ್ವರೋಹಿ ಪಡೆಯ ಕಮಾಂಡೆಂಟ್‌ ಸಿದ್ದರಾಜು, ಎಂಜಿನಿಯರ್‌ ಸತ್ಯನಾರಾಯಣ, ಇತರರು  ಇದ್ದರು.
 
**
ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳನ್ನು ಮರೆಯಲ್ಲಿ ನಿಂತು ಹಿಡಿಯುವುದನ್ನು ಬಿಡಿ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಅಂಥ ವಾಹನದ ಮಾಲೀಕರಿಗೆ ನೋಟಿಸ್ ಕಳುಹಿಸಿ
–ಎಂ.ಜೆ.ರವಿಕುಮಾರ್,
ಮೇಯರ್

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT