ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಯೆಗೆ ಇರಲಿ ತಾಳ್ಮೆಯ ಪ್ರತಿಕ್ರಿಯೆ

Last Updated 10 ಜನವರಿ 2017, 19:30 IST
ಅಕ್ಷರ ಗಾತ್ರ

ಪ್ರಸಿದ್ಧ ವಿಜ್ಞಾನಿ ನ್ಯೂಟನ್‌ನ ಚಲನೆಯ ನಿಯಮಗಳು ನಮಗೆ ತಿಳಿದಿವೆ. ಅವುಗಳಲ್ಲಿಯ ಮೂರನೇ ನಿಯಮದ ಪ್ರಕಾರ ‘ಕ್ರಿಯೆ ಮತ್ತು ಪ್ರತಿಕ್ರಿಯೆ ಯಾವಾಗಲೂ ಸಮಾನ ಹಾಗೂ ವಿರುದ್ಧವಾಗಿರುತ್ತವೆ’.

ಕೈಗೆ ಬಿಸಿ ತಾಕಿದ ತಕ್ಷಣ ಕೈಯನ್ನು ಹಿಂದಕ್ಕೆ ತೆಗೆದುಕೊಳ್ಳುವುದು ನಮ್ಮ ಅರಿವಿಗೆ ಬರುವ ಮೊದಲೇ ನಡೆದಿರುತ್ತದೆ. ಇಲ್ಲಿ ಬಿಸಿ ತಾಕುವ ಕ್ರಿಯೆಗೆ, ಕೈಯನ್ನು ಹಿಂದಕ್ಕೆ ತೆಗೆದುಕೊಳ್ಳುವುದು ನಮ್ಮ ಪ್ರತಿಕ್ರಿಯೆ. ಕ್ರಿಯೆ ಹಾಗೂ ಪ್ರತಿಕ್ರಿಯೆಗಳಿಗೆ ನಮ್ಮ ದೇಹವೆಂಬ ಯಂತ್ರ ಸದಾ ಕಾಲ ಸಿದ್ಧವಾಗಿರುತ್ತದೆ. ನಮ್ಮ ಭಾವನೆಗಳು ನಮ್ಮಿಂದ ಮಾಡಿಸುವ ಕ್ರಿಯೆ ಹಾಗೂ ಪ್ರತಿಕ್ರಿಯೆಗಳು ದೈನಂದಿನ ಜೀವನದ ಆಗುಹೋಗುಗಳಲ್ಲಿಯೂ ನೆಮ್ಮದಿ–ದುಗುಡಗಳಲ್ಲಿಯೂ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತವೆ.

ಎಂಥ ಪರಿಸ್ಥಿತಿಯೇ ಆದರೂ ಅದನ್ನು ಬದಲಾಯಿಸುವ ಸಾಮರ್ಥ್ಯ ನಮ್ಮ ಪ್ರತಿಕ್ರಿಯೆಗೆ ಇರುತ್ತದೆ. ನಾವಾಡುವ ಪ್ರತಿಯೊಂದು ಮಾತು ಹಾಗೂ ನಮ್ಮ ನಡವಳಿಕೆ ಇತರರ ಮೇಲೆ ಪರಿಣಾಮವನ್ನು ಬೀರುತ್ತವೆಂಬುದನ್ನು ಮೊದಲು ಅರಿಯಬೇಕು.

ಯಾವುದೇ ಘಟನೆ ನಡೆದರೂ ಅಲ್ಲಿ ಕಾಲು ಭಾಗದಷ್ಟು ಮಾತ್ರ ಕ್ರಿಯೆ ನಡೆದಿರುತ್ತದೆ. ಉಳಿದ ಮುಕ್ಕಾಲು ಭಾಗ ನಮ್ಮ ಪ್ರತಿಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ.ಅಂದರೆ ಘಟನೆಯ ಫಲಿತಾಂಶ ನಮ್ಮ ಪ್ರತಿಕ್ರಿಯೆಯನ್ನು ಆಶ್ರಯಿಸಿರುತ್ತದೆ. ಉದಾಹರಣೆಗೆ, ವ್ಯಕ್ತಿಯೊಬ್ಬ ನಿಮ್ಮನ್ನು ಕೆರಳಿಸುವ ಉದ್ದೇಶದಿಂದಲೇ ಕೆಲವು ಕೆಲಸ ಮಾಡುತ್ತಾರೆ, ಮಾತಿನ ಈಟಿಯ ಮೂಲಕ ನಿಮ್ಮನ್ನು ತಿವಿಯುತ್ತಾರೆ ಎಂದು ಕೊಳ್ಳೋಣ.

ಇಲ್ಲಿ ಪ್ರಸ್ತುತ ಘಟನೆಗೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದರ ಮೇಲೆ ಪರಿಣಾಮಗಳು ನಿರ್ಧಾರವಾಗುತ್ತವೆ. ಕ್ರಿಯೆ ಯಾವುದಾದರೂ ಅದನ್ನು ನಿಭಾಯಿಸುವುದು ಹೇಗೆ ಎನ್ನುವುದು ನಮ್ಮ ಆಯ್ಕೆಗೆ ಬಿಟ್ಟ ವಿಚಾರ. ಕೆಲವೊಮ್ಮೆ ನಿರುತ್ತರವನ್ನು ನಮ್ಮ ಪ್ರತಿ ಪರಿಣಾಮವನ್ನಾಗಿ ಉಪಯೋಗಿಸಿದಲ್ಲಿ ಪರಿಸ್ಥಿತಿಯು ಹತೋಟಿಯಲ್ಲಿರುತ್ತದೆ.

ಮೌನಕ್ಕಿಂತ ದೊಡ್ಡ ಅಸ್ತ್ರ ಬೇರೊಂದಿಲ್ಲ!
ಕೋಪದಿಂದ ಕೂಗಾಡುವುದರಿಂದ ಅಥವಾ ಜೋರಾಗಿ ಮಾತನಾಡಿ ಎದುರಿಗಿರುವವರ ಬಾಯಿ ಮುಚ್ಚಿಸುವುದರಿಂದ ನಾವು ಬಲಶಾಲಿ ಎಂದೇನೂ ರುಜುವಾತಾಗುವುದಿಲ್ಲ.ಪರಿಸ್ಥಿತಿಯ ಆಗುಹೋಗುಗಳು ನಮ್ಮ ವರ್ತನೆಯ ಮೇಲೆ ನಿರ್ಧಾರವಾಗುತ್ತವೆ. ಮುಂಗೋಪಿಗಳ ಪ್ರತಿಯೊಂದು ಕ್ರಿಯೆಗೂ ಕೋಪವೇ ಪ್ರತ್ಯುತ್ತರವಾದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ.

ಬುದ್ಧಿವಂತನಾದವನು ತಾಳ್ಮೆಯಿಂದ ವರ್ತಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುತ್ತಾನೆ. ನಮ್ಮಿಷ್ಟಕ್ಕನುಗುಣವಾದ ಆಯ್ಕೆಯ ಹಕ್ಕು, ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಅದರ ಫಲಿತಾಂಶದಿಂದ ಯಾರಿಗೂ ವಿನಾಯಿತಿ ಇಲ್ಲ. ಫಲಾಫಲವನ್ನು ಅನುಭವಿಸಿಯೇ ತೀರಬೇಕು. ‘ಮಾಡಿದ್ದುಣ್ಣೋ ಮಹರಾಯ’ ಎಂಬ ಗಾದೆಯಂತೆ, ನಾವು ಮಾಡಿದ ಕರ್ಮದ ಫಲವನ್ನು ನಾವೇ ತಿನ್ನಬೇಕು.

ಇದನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಪರಿಸ್ಥಿತಿಯನ್ನು ಅಥವಾ ವಿಷಯವನ್ನು ಜಾಗರೂಕರಾಗಿ ಆಯ್ಕೆ ಮಾಡಬೇಕು. ಈ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಮತ್ತೊಬ್ಬರ ತಪ್ಪನ್ನು ಹುಡುಕುವುದರಲ್ಲೇ ಜೀವಿತದ ಬಹಳಷ್ಟು ಸಮಯವನ್ನು ಕಳೆಯುತ್ತೇವೆ. ಅನ್ಯರ ತಪ್ಪನ್ನು ನಿರ್ಣಯಿಸುವುದು ಸುಲಭ. ಆದರೆ ನಮ್ಮ ತಪ್ಪನ್ನು ಗುರುತಿಸುವುದು ಬಹಳ ಕಷ್ಟ.

ಯಾವಾಗಲೂ ಒಬ್ಬ ವ್ಯಕ್ತಿಯ ಸ್ವಭಾವದ ಕಾರಣದಿಂದಾಗಿ ಅಥವಾ ಯಾವುದೋ ಒಂದು ಪರಿಸ್ಥಿತಿಯ ಬಗ್ಗೆ ಅಸಮಾಧಾನ ಗೊಂಡು ಉದ್ವೇಗಕ್ಕೆ ಒಳಗಾಗುವುದು ಸರಿಯಲ್ಲ.

ನಮ್ಮ ಪ್ರತಿಕ್ರಿಯೆ ಇಲ್ಲದಿದ್ದಾಗ ಇವೆರಡೂ ತಮ್ಮ ಪ್ರಭಾವವನ್ನು ಕಳೆದು ಕೊಳ್ಳುತ್ತವೆ. ಒಬ್ಬ ವ್ಯಕ್ತಿಯ ಮನಸ್ಸಿನ ಭಾವನೆಗಳು ಆತನ ಕ್ರಿಯೆಗಳಿಗೆ ಕಾರಣವಾಗುತ್ತವೆ.ಕ್ರಿಯೆಗಳು ಪರಿಸ್ಥಿತಿಯ ಪರಿಣಾಮಗಳಿಗೆ ಕಾರಣವಾಗುತ್ತವೆ. ಈ ಪರಿಣಾಮ ಅಥವಾ ಫಲಿತಾಂಶಗಳು ವ್ಯಕ್ತಿಯ ಜೀವನಶೈಲಿಗೆ ಕಾರಣವಾಗುತ್ತವೆ.

ಆದ್ದರಿಂದ ಇಲ್ಲಿ ನಮ್ಮ ಮನೋಭಾವವು ನಮ್ಮ ಜೀವನಶೈಲಿಯ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಬಹುದೆಂದು ಚೆನ್ನಾಗಿ ಯೋಚಿಸಿ ಆ ಬಳಿಕವಷ್ಟೆ ಬೇರೊಬ್ಬರ ಭಾವನೆಗಳಿಗೆ ಪ್ರತಿಕ್ರಿಯೆ ಕೊಡಲು ಮುಂದಾಗಬೇಕು. ಬಾಳಿನಲ್ಲಿ ವ್ಯಕ್ತಿಯ ಪ್ರತಿಯೊಂದು ಕ್ರಿಯೆಯೂ ಆತನ ಬುದ್ಧಿವಂತಿಕೆಯ ಮಾಪನವಾಗುತ್ತದೆ. ಹೀಗೆ ತಿಳಿವಳಿಕೆಯಿಂದ ಭಾವನೆಗಳನ್ನು ನಿಯಂತ್ರಿಸಿ ಅವನ್ನು ಸರಿಯಾದ ದಿಕ್ಕಿನಲ್ಲಿ ತೊಡಗಿಸಿದರೆ ನಮ್ಮ ಜೀವನಶೈಲಿ ಬದಲಾಗುತ್ತದೆ.

ಪರಿಸ್ಥಿತಿ ಏನೇ ಆಗಿರಲಿ, ಯಾವುದೇ ಕಾರಣಕ್ಕೂ ನಮ್ಮ ಭಾವನೆಗಳು ಬುದ್ಧಿಶಕ್ತಿಯ ಮೇಲೆ ಸವಾರಿ ಮಾಡದಂತೆ ನೋಡಿಕೊಳ್ಳಬೇಕು.  ಕ್ರಿಯೆ–ಪ್ರತಿಕ್ರಿಯೆಗಳಿಂದಲೇ ಮನುಷ್ಯನ ಜಾಣ್ಮೆಯ ಪರೀಕ್ಷೆಯಾಗುತ್ತದೆ. ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳಿಗೂ,  ಆ ಘಟನೆಯ ಹಿಂದಿರುವ ವ್ಯಕ್ತಿಯ ಕ್ರಿಯೆಗೂ ಕಾರಣಗಳಿರುತ್ತವೆ.

ಅವನ್ನು ಅರಿಯದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ತರವಲ್ಲ. ಬೇರೆಯವರ ಭಾವನೆಗಳನ್ನು, ಕ್ರಿಯೆಗಳನ್ನು ಹತೋಟಿಯಲ್ಲಿಡಲು ನಮಗೆ ಸಾಧ್ಯವಿಲ್ಲ. ಬದಲಿಗೆ ನಮ್ಮ ಪ್ರತಿಕ್ರಿಯೆಗಳನ್ನು ಅಂಕೆಯಲ್ಲಿಟ್ಟುಕೊಳ್ಳಬಹುದಾಗಿದೆ. ಪರಿಸ್ಥಿತಿಯನ್ನು ಮತ್ತು ಅದರ ಫಲಾಫಲಗಳನ್ನು ನಿಯಂತ್ರಿಸಲು ಯಾರೂ ಶಕ್ಯರಲ್ಲ. ಆದರೆ ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬಹುದು. ಇದರಿಂದ ವಸ್ತುಸ್ಥಿತಿಯೇ ಬದಲಾಗುತ್ತದೆ.

ಅಸಂಸ್ಕೃತ ಅಥವಾ ಅನಾಗರಿಕ ವರ್ತನೆಗಳಿಗೆ ಎಂದೂ ಅದೇ ವಿಧಾನದಲ್ಲಿ ಪ್ರತಿಕ್ರಿಯಿಸಲು ಹೋಗಬಾರದು. ವ್ಯಕ್ತಿಯ ನಡವಳಿಕೆಗಳಿಂದಲೇ ಅವನ ವ್ಯಕ್ತಿತ್ವ ಎಂಥದ್ದೆಂದು ಸಾಬೀತಾಗುತ್ತದೆ. ನಾವು ಮಾಡುವ ಕರ್ಮಗಳಿಗೆ ವ್ಯವಸ್ಥಿತವಾದ ಕ್ರಮವೊಂದು ನಮಗೆ ಕಾಣದು. ಆದರೆ ನಮ್ಮ ಯೋಗ್ಯತಾನುಸಾರವಾಗಿ ಅದರ ಫಲ ಪ್ರತಿಯೊಬ್ಬರಿಗೂ ಸಂದಾಯವಾಗುತ್ತದೆ. ಕೆಲವೊಮ್ಮೆ ಅಪ್ರಜ್ಞಾವಂತ ಕ್ರಿಯೆಗಳಿಗೂ ಬುದ್ಧಿವಂತಿಕೆಯಿಂದ ಪ್ರತಿಕ್ರಿಯಿಸಬೇಕಾಗುತ್ತದೆ.

ದುರ್ಬಲ ವ್ಯಕ್ತಿಗಳು ತಮ್ಮ ಸಾಮರ್ಥ್ಯವನ್ನು ಯಾವಾಗಲೂ ಒರಟಾಗಿ ಅಥವಾ ಅಸಭ್ಯವಾಗಿ ವರ್ತಿಸುವುದರ ಮೂಲಕವೇ ತೋರಿಸಿಕೊಳ್ಳು ತ್ತಾರೆ. ಈ ಸಂದರ್ಭದಲ್ಲಿ ಮೌನದ ಹಾದಿಯಲ್ಲಿ ನಡೆಯುವುದು ಒಳ್ಳೆಯದು. ವಾಕ್ಚಾತುರ್ಯ ಹೊಂದಿರುವ ವ್ಯಕ್ತಿಗಳು ಮಾತಿನಲ್ಲೇ ಮರುಳು ಮಾಡುತ್ತಾರೆ. ಆದರೆ ವ್ಯಕ್ತಿಯ ಕ್ರಿಯೆಯಿಂದ ಅವನ ನಿಜವಾದ ಗುಣ ಪ್ರಕಟವಾಗುತ್ತದೆ. ನಮ್ಮ ಪ್ರತಿಯೊಂದು ಕ್ರಿಯೆ–ಪ್ರಕಿಯೆಯ ಬಗ್ಗೆಯೂ ಜಾಗರೂಕರಾಗಿರಬೇಕು. ಬಹಳಷ್ಟು ಸನ್ನಿವೇಶ ಗಳಲ್ಲಿ ನಮ್ಮ ಪ್ರತಿಕ್ರಿಯೆ ಮೌನ ಅಥವಾ ಮುಗುಳುನಗೆಯಾದರೆ ನಮಗೆ ಎದುರಾಗಿರುವ  ಎಂಥ ಪರಿಸ್ಥಿತಿಯೂ ಶಾಂತವಾಗಬಲ್ಲದು.

***
* ಅಸಂಸ್ಕೃತ ಅಥವಾ ಅನಾಗರಿಕ ವರ್ತನೆಗಳಿಗೆ ಎಂದೂ ಅದೇ ವಿಧಾನದಲ್ಲಿ ಪ್ರತಿಕ್ರಿಯಿಸಲು ಹೋಗಬಾರದು.

* ಪರಿಸ್ಥಿತಿಯ ಆಗುಹೋಗುಗಳು ನಮ್ಮ ವರ್ತನೆಯ ಮೇಲೆ ನಿರ್ಧಾರವಾಗುತ್ತವೆ.

* ನಮ್ಮ ಪ್ರತಿಯೊಂದು ಕ್ರಿಯೆ–ಪ್ರತಿಕ್ರಿಯೆಯ ಬಗ್ಗೆಯೂ ಜಾಗರೂಕರಾಗಿರಬೇಕು. 

* ಕ್ರಿಯೆ–ಪ್ರತಿಕ್ರಿಯೆಗಳಿಂದಲೇ ಮನುಷ್ಯನ ಜಾಣ್ಮೆಯ ಪರೀಕ್ಷೆಯಾಗುತ್ತದೆ.

* ಕೋಪದಿಂದ ಕೂಗಾಡುವುದರಿಂದ ನಾವು ಬಲಶಾಲಿ ಎಂದೇನೂ ರುಜುವಾತಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT