ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌, ಬಿಜೆಪಿ ಬೆಂಬಲಿತರ ನಡುವೆ ಹಣಾಹಣಿ

ಎಪಿಎಂಸಿ ಚುನಾವಣೆ ನಾಳೆ: ಜಿಲ್ಲೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ 161 ಅಭ್ಯರ್ಥಿಗಳು
ಅಕ್ಷರ ಗಾತ್ರ

ದಾವಣಗೆರೆ: ಜನವರಿ 12ರಂದು ನಡೆಯಲಿರುವ ಜಿಲ್ಲೆಯ ಆರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಚುನಾವಣೆಗೆ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಮಂಗಳವಾರ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಅಭ್ಯರ್ಥಿಗಳು ಗೆಲುವಿನ ನಗೆ ಬೀರಲು ಕೊನೆ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ.

ನೇರವಾಗಿ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಅವಕಾಶ ಇಲ್ಲದಿದ್ದರೂ, ಎಪಿಎಂಸಿ ಚುನಾವಣೆಯಲ್ಲೂ ರಾಜಕೀಯ ಪಕ್ಷಗಳ ಪ್ರಭಾವವೇ ಹೆಚ್ಚು. ದಾವಣಗರೆಯು ಕೃಷಿ ಮಾರುಕಟ್ಟೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ತವರು ಜಿಲ್ಲೆಯಾಗಿರುವುದರಿಂದ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾದರೆ, ಬಿಜೆಪಿಗೆ ಗೆಲುವಿನ ಹೆಜ್ಜೆ ಗುರುತು ಮೂಡಿಸುವ ಹುಮ್ಮಸ್ಸು. ಹೀಗಾಗಿ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ನಾಯಕರೂ ಪ್ರಚಾರ ನಡೆಸಿ ಪ್ರಭಾವ ಬೀರಿದ್ದಾರೆ. ಈ ಎರಡು ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ನಡುವೆಯೇ ಹೆಚ್ಚಿನ ಕಡೆ ಹಣಾಹಣಿ ನಡೆಯಲಿದೆ.

ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮ:  ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಂಡರು ತಮ್ಮ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗಾಗಿ ಈಗಾಗಲೇ ಜಿಲ್ಲೆಯಲ್ಲಿನ ಎಲ್ಲ ಎಪಿಎಂಸಿ ಮತಕ್ಷೇತ್ರಗಳಲ್ಲಿ ಸದ್ದಿಲ್ಲದೇ ಬಿರುಸಿನ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಕಂಡು ಬಂದಿದ್ದರೂ ಬಿಜೆಪಿಯ ಕೆಲ ಮುಖಂಡರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಕೆಲವೆಡೆ ಅವರೂ ಬಿಜೆಪಿಗೆ ಸೆಡ್ಡು ಹೊಡೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಜಿಲ್ಲೆಯ ಇತರ ತಾಲ್ಲೂಕುಗಳಿಗೆ ಹೋಲಿಸಿದರೆ, ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಅವರ ಹೊನ್ನಾಳಿ ಕ್ಷೇತ್ರದಲ್ಲಿಯೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಂಘಟನೆಯ ಪ್ರಭಾವ ತುಸು ಹೆಚ್ಚಿದೆ. ರೇಣುಕಾಚಾರ್ಯ ಹಾಗೂ ಶಾಸಕ ಡಿ.ಜಿ.ಶಾಂತನಗೌಡ ಅವರು ತಮ್ಮ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಇದರ ನಡುವೆಯೇ ಬಿಸಾಟಿ ಸುರೇಶ್‌ ಹಾಗೂ ಹೊನ್ನಾಳಿ ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಎ.ಬಿ. ಹನುಮಂತಪ್ಪ ಅವರು ರೇಣುಕಾಚಾರ್ಯ ವಿರುದ್ಧ ಸಿಡಿದೆದ್ದಿದ್ದಾರೆ. ರಾಯಣ್ಣ ಬ್ರಿಗೇಡ್‌ ಮೂಲಕ ತಮ್ಮ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.

ಜಿಲ್ಲೆಯ 6 ತಾಲ್ಲೂಕುಗಳ ಎಪಿಎಂಸಿಗಳಿಗೆ ಒಟ್ಟು 80 ಮತ ಕ್ಷೇತ್ರಗಳಿವೆ. 16 ಕ್ಷೇತ್ರಗಳಲ್ಲಿ ಅಭ್ಯರ್ಥಿ ಗಳು ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ. ಉಳಿದ 64 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 161 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 3,27,763 ಮತದಾರರಿದ್ದಾರೆ. ಜ. 12ರಂದು ರೈತರು ತಮ್ಮ ಹಕ್ಕನ್ನು ಚಲಾಯಿಸುವ ಅಭ್ಯರ್ಥಿಗಳು ‘ಹಣೆಬರಹ’ವನ್ನು ನಿರ್ಧರಿಸಲಿದ್ದಾರೆ.

ಇಂದು ಮತಗಟ್ಟೆಗೆ ಅಧಿಕಾರಿಗಳು
‘ಜಿಲ್ಲೆಯಲ್ಲಿ ಒಟ್ಟು 373 ಮತಗಟ್ಟೆಗಳಲ್ಲಿ ಜ.12ರಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಚುನಾವಣೆ ನಡೆಯಲಿದೆ. ಚುನಾವಣಾ ಅಧಿಕಾರಿಗಳು ಬುಧವಾರ ಬ್ಯಾಲೆಟ್‌ ಬಾಕ್ಸ್‌ ಹಾಗೂ ಚುನಾವಣಾ ಸಾಮಗ್ರಿಗಳೊಂದಿಗೆ ಮತಗಟ್ಟೆಗೆ ತೆರಳಲಿದ್ದಾರೆ. ಚುನಾವಣೆಯು ಸುಗಮವಾಗಿ ನಡೆಯಲು 411 ಮತಗಟ್ಟೆ ಅಧಿಕಾರಿಗಳ ತಂಡವಿದೆ. ಇವರೊಂದಿಗೆ 45 ಸೆಕ್ಟರ್‌ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಕೆಎಸ್‌ಆರ್‌ಟಿಸಿಯ 64 ಬಸ್‌ಗಳನ್ನೂ ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಚುನಾವಣಾ ತಹಶೀಲ್ದಾರ್‌ ಎಸ್‌.ಎ.ಪ್ರಸಾದ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT