ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ತುಂಗಭದ್ರಾ: ನೀರು ಪೂರೈಕೆಯಲ್ಲಿ ವ್ಯತ್ಯಯ?

ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಕ್ರಮ: ಸಹಕರಿಸುವಂತೆ ನಾಗರಿಕರಿಗೆ ಮನವಿ
Last Updated 11 ಜನವರಿ 2017, 5:18 IST
ಅಕ್ಷರ ಗಾತ್ರ

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ ಶೇ 60ರಷ್ಟು ಭಾಗಕ್ಕೆ ನೀರು ಸರಬರಾಜು ಮಾಡುವ ಹರಿಹರದ ರಾಜನಹಳ್ಳಿ ಜಾಕ್‌ವೆಲ್‌ನಲ್ಲಿ ನೀರು ಸಂಪೂರ್ಣ ಬತ್ತಿಹೋಗಿದ್ದು, ಈ ಜಾಕ್‌ವೆಲ್‌ನಿಂದ ನಗರಕ್ಕೆ ನೀರು ಸರಬರಾಜಾಗುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಮೇಯರ್ ರೇಖಾ ನಾಗರಾಜ್ ತಿಳಿಸಿದರು.

ನಗರಕ್ಕೆ ಕುಡಿಯುವ ನೀರು ಪೂರೈಕೆ ಸಂಬಂಧ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಮಂಗಳವಾರ ಪಾಲಿಕೆಯಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ‘ನೀರಿನ ಸಮಸ್ಯೆ ಉಲ್ಬಣಿಸದಂತೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಸೂಚಿಸಿದರು.

‘ನೀರಿನ ಲಭ್ಯತೆ ಕುರಿತು ತುಂಗಭದ್ರಾ ನದಿಯಿಂದ ನೀರು ಸರಬರಾಜಾಗುವ ರಾಜನಹಳ್ಳಿ ಜಾಕ್‌ವೆಲ್‌ಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ನದಿ ಸಂಪೂರ್ಣ ಬತ್ತಿಹೋಗಿದ್ದು, ಮುಂದೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಆಗುವ ಸಾಧ್ಯತೆಗಳಿವೆ. ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಜ .15ರಂದು ತುಂಗಭದ್ರಾ ನದಿ ನೀರು ಹರಿಸಲಾಗುತ್ತಿದ್ದು, ರಾಜನಹಳ್ಳಿ ಜಾಕ್‌ವೆಲ್‌ಗೆ ಜ.22ಕ್ಕೆ ತಲುಪುವ ನಿರೀಕ್ಷೆಯಿದೆ. ಸಮಸ್ಯೆ ನಿವಾರಣೆಗೆ ಈಗಾಗಲೇ ನಗರ ವ್ಯಾಪ್ತಿಯ 41 ವಾರ್ಡ್‌ಗಳಲ್ಲಿ 571 ಸಬ್ ಮರ್ಸಿಬಲ್ ಮೋಟಾರ್ ಅಳವಡಿಸಲಾಗಿದ್ದು, ಬೋರ್‌ವೆಲ್‌ ಮೂಲಕ ನೀರು ಸರಬರಾಜು ಮಾಡಲಾಗುವುದು. ನಗರ ವ್ಯಾಪ್ತಿಯಲ್ಲಿ 395 ಹ್ಯಾಂಡ್‌ಪಂಪ್‌ಗಳಿದ್ದು, ದುರಸ್ತಿಯಲ್ಲಿ ದ್ದರೆ ತಕ್ಷಣ ಸರಿಪಡಿಸಿ, ನಾಗರಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ತಾಕೀತು ಮಾಡಿದರು.

ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರಿನ ಸಮಸ್ಯೆ ಹೆಚ್ಚಾಗಿರುವ 3, 4, 5, 6,18,19,20,22,23,24, 25,29,40ನೇ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಬೇಕು. ಬೋರ್‌ವೆಲ್‌ ಮಾಲೀಕರು ನೀರಿನ ಸಮಸ್ಯೆ ಇರುವ ಸುತ್ತಮುತ್ತಲಿನ ನಾಗರಿಕರಿಗೆ ನೀರು ಕೊಡಬೇಕು ಎಂದು ಮನವಿ ಮಾಡಿದರು.

ಪಾಲಿಕೆ ಆಯುಕ್ತ ಬಿ.ಎಚ್.ನಾರಾಯಣಪ್ಪ, ಉಪ ಮಹಾಪೌರ ಬೆಳವನೂರು ನಾಗರಾಜಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಜೆ.ಎನ್‌.ಶ್ರೀನಿವಾಸ್, ಎಂ.ಹಾಲೇಶ್‌, ಗೌರಮ್ಮ ಚಂದ್ರಪ್ಪ, ಅಧೀಕ್ಷಕ ಎಂಜಿನಿಯರ್ ಎಂ.ಸತೀಶ್, ಕಾರ್ಯಪಾಲಕ ಎಂಜಿನಿಯರ್ ಕರಿಯಪ್ಪ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಕೆ.ಎಂ. ಮಂಜುನಾಥ್, ಕೆ.ಎನ್.ತೀರ್ಥೇಶ್, ಸಹಾಯಕ ಎಂಜಿನಿಯರ್ ಚಂದ್ರಶೇಖರ್ ಮತ್ತಿತರರು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT