ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಶ್ರೀಮಂತಿಕೆ ಉಳಿಸಿ ಬೆಳೆಸೋಣ

Last Updated 11 ಜನವರಿ 2017, 5:24 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಜಿಲ್ಲೆ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ಪರಂಪರೆಯ ತವರೂರು. ಈ ಸಾಹಿತ್ಯ ಶ್ರೀಮಂತಿಕೆ ಉಳಿಸಿ ಬೆಳೆಸುವ ಕೆಲಸ ನಡೆಯಬೇಕಿದೆ’ ಎಂದು ಯುವ ಲೇಖಕಿ ಮುದ್ದು ತೀರ್ಥಹಳ್ಳಿ ಹೇಳಿದರು.

ನಗರದ ಸಮೀಪ ಅನುಪಿನಕಟ್ಟೆಯ ರಾಮಕೃಷ್ಣ ಗುರುಕುಲ ಆಂಗ್ಲ ಮಾಧ್ಯಮ ವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜಿಲ್ಲಾ ಒಂಬತ್ತನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಬಾಲ್ಯಾವಸ್ಥೆಯಲ್ಲಿಯೇ ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡಲ್ಲಿ ಪ್ರಬುದ್ಧತೆಗೆ ಹೆಚ್ಚಿನ ಆದ್ಯತೆ ದೊರಕಿದಂತಾಗುತ್ತದೆ. ಅನುಭವ ಎಲ್ಲವನ್ನು ಕೊಡುವುದಿಲ್ಲ. ಅನುಭವದಿಂದ ದಕ್ಕಿಸಿಕೊಳ್ಳಲಾಗದ್ದನ್ನು ಓದಿನಿಂದ ಪಡೆಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಬರಹಗಳು ಪುಸ್ತಕ ಪ್ರಕಟಣೆಗೆ ಸೀಮಿತವಾಗಬಾರದು. ಅಧ್ಯಯನ, ಆಸಕ್ತಿ ಸೃಜನಶೀಲತೆ ನಿರಂತರವಾಗಿ ತನ್ನದಾಗಿಸುವ ಪ್ರಯತ್ನದಲ್ಲಿರಬೇಕು. ಮಕ್ಕಳಲ್ಲಿ ಕೀಳರಿಮೆ ಬೆಳೆಸಬಾರದು. ಭಯ ಮುಕ್ತ ಕಲಿಕೆಯಲ್ಲಿ ಅವರು ತೊಡಗುವಂತಾಗಬೇಕು. ಕಿರಿಯರಿಗೆ ಹಿರಿಯರ ಮಾರ್ಗದರ್ಶನ ಅತಿ ಅಗತ್ಯವಾಗಿದ್ದು, ದಾರಿ ತಪ್ಪುತ್ತಿರುವ ಯುವ ಪೀಳಿಗೆಯನ್ನು ಸರಿ ದಾರಿಗೆ ತರುವ ಪ್ರಯತ್ನ ಎಲ್ಲರ ಮೇಲಿದೆ’ ಎಂದರು.

ಜಿಲ್ಲಾ ಒಂಬತ್ತನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಪಲ್ಲವಿ ನಿಟ್ಟೂರು ಮಾತನಾಡಿ, ‘ಶಿವಮೊಗ್ಗ ಜಿಲ್ಲೆ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಇಲ್ಲಿ ಬರಹಕ್ಕೆ ಪೂರಕ ಪರಿಸರವಿದೆ’ ಎಂದರು.

‘ನೈಜ ಕಾಡುಗಳು ಮರೆಯಾಗಿ ಇಂದು ಕಾಂಕ್ರೀಟ್ ಕಾಡುಗಳು ಬೆಳೆಯಲಾರಂಭಿಸಿವೆ. ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ. ರಾಜಕಾರಣಿಗಳು ಪ್ರಚಾರಕ್ಕೆ ಮಾತ್ರ ಸೀಮಿತವಾಗುತ್ತಿದ್ದಾರೆ. ಹಿರಿಯರ ಆದರ್ಶ ದಾರಿ ತಪ್ಪುತ್ತಿವೆ. ಕಟ್ಟುವ ಕೆಲಸದ ಬದಲಾಗಿ ಒಡೆದಾಳುವ ನೀತಿ ಸಾರ್ವತ್ರಿಕವಾಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು
.
ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ‘ಇಂದಿನ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವ ಕೆಲಸ ಆಗಬೇಕು. ಮಕ್ಕಳೆಂದು ನಾವು ಅವರನ್ನು ಎಂದಿಗೂ ನಿರ್ಲಕ್ಷ್ಯಿಸಬಾರದು. ಪ್ರತಿಯೊಂದು ಮಗುವಿನಲ್ಲೂ ಒಂದಲ್ಲಾ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕು. ಮಕ್ಕಳನ್ನು ಕೀಳರಿಮೆಯಿಂದ ಹೊರತರುವ ಕೆಲಸವಾಗಬೇಕು’ ಎಂದರು.

ಶಿವಮೊಗ್ಗ ತಾಲ್ಲೂಕಿನ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಪಾವನಿ ಧ್ವಜಾರೋಹಣ ನೆರವೇರಿಸಿ ದರು. ಭಾವನಾ ಆನವಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಎಂಟನೇ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಅಂತಃಕರಣ, ರಾಮಕೃಷ್ಣ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಡಿ.ಆರ್. ನಾಗೇಶ್, ಕಾರ್ಯದರ್ಶಿ ಶೋಭಾ ವೆಂಕಟರಮಣ, ಬಿ.ಪಾಪಯ್ಯ, ಡಿ.ಆರ್.ಶ್ರೀನಿವಾಸ್, ಕೋಗಲೂರು ತಿಪ್ಪೇಸ್ವಾಮಿ, ಕೆ.ಎಸ್.ಹುಚ್ಚರಾಯಪ್ಪ, ಉಮೇಶ್ ಹಿರೇನೆಲ್ಲೂರು. ವಿ.ಟಿ. ಸ್ವಾಮಿ, ಮಂಜುನಾಥ್ ಕಾಮತ್, ಕೆಸುವಿನಮನೆ ರತ್ನಾಕರ ಉಪಸ್ಥಿತರಿದ್ದರು. ಸುಕೃತ ಮತ್ತು ತಂಡದವರು ನಾಡಗೀತೆ ಹಾಡಿದರು. ಸಮೃದ್ಧ್ ಸ್ವಾಗತಿಸಿದರು. ನಂದೀಶ್ ವಂದಿಸಿದರು. ದಾನೇಶ್ವರಿ ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಸಮಿತಿ, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಸಂಯುಕ್ತಾಶ್ರಯದಲ್ಲಿ  ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT