ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗನ ಕಾಯಿಲೆ: ಮೂರು ತಿಂಗಳು ತೀವ್ರ ನಿಗಾ

Last Updated 11 ಜನವರಿ 2017, 5:26 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಮಾರ್ಚ್ ಅಂತ್ಯದವರೆಗೆ ಮಂಗನ ಕಾಯಿಲೆ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ತೀವ್ರ ನಿಗಾ ವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಮಂಗನ ಕಾಯಿಲೆ ನಿಯಂತ್ರಣ ಲಸಿಕಾ ಜಿಲ್ಲಾ ಸಮಿತಿ ಹಾಗೂ ಸಾಂಕ್ರಾಮಿಕ ರೋಗ ನಿಯಂತ್ರಣ ಜಿಲ್ಲಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಂಗನ ಕಾಯಿಲೆ ಜನವರಿ, ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಹರಡುವ ಸಾಧ್ಯತೆ ಹೆಚ್ಚಿದೆ. ಈ ಅವಧಿಯಲ್ಲಿ ಹಿಂದಿನ ವರ್ಷಗಳ ಪ್ರಕರಣ ಆಧರಿಸಿ ಕಾಯಿಲೆ ಹರಡದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ಅನುಸರಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

‘ಮಂಗನ ಕಾಯಿಲೆ ರೋಗ ಬಾಧಿತ ತೀರ್ಥಹಳ್ಳಿ, ಹೊಸನಗರ ತಾಲ್ಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಈಗಾಗಲೇ 18 ಸಾವಿರ ಜನರಿಗೆ ಲಸಿಕೆ ಹಾಕಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮುಂದಿನ ಮೂರು ತಿಂಗಳು ತೀವ್ರ ನಿಗಾ ಇರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

‘ಕಾಡಿನ ಅಂಚಿನಲ್ಲಿರುವ ಹಳ್ಳಿಗಳು, ಕಾಡಿನ ಸಂಪರ್ಕ ಇರುವವರು ಹಾಗೂ ಅರಣ್ಯ ರಕ್ಷಕರೂ ರೋಗವಾಹಕ ಉಣ್ಣೆಗಳ ವಿಕರ್ಷಕ ತೈಲ ಲೇಪನ ಮಾಡಿ
ಕೊಂಡು ಕಾಡಿಗೆ ತೆರಳಬೇಕು. ನಂತರ ಬಂದ ಕೂಡಲೇ ಬಿಸಿನೀರಿನಿಂದ ಸ್ನಾನ ಮಾಡಿ ಹಾಗೂ ಬಟ್ಟೆಗಳನ್ನು ಶುಚಿ ಮಾಡಬೇಕು. ಈ ಕುರಿತು ಮುನ್ನೆಚ್ಚರಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳ ಭಾಗವಹಿಸುವಿಕೆಯನ್ನು ಪರಿಗಣಿಸಲಾಗಿದೆ’ ಎಂದರು.

ಹಕ್ಕಿಜ್ವರವಿಲ್ಲ: ಜಿಲ್ಲೆಯಲ್ಲಿ ಹಕ್ಕಿಜ್ವರ ಮತ್ತು ಹಂದಿ ಜ್ವರದ ಪ್ರಕರಣಗಳು ಕಂಡುಬಂದಿಲ್ಲ. ಆದರೆ, ಜಿಲ್ಲಾಡಳಿತದಿಂದ ಮುನ್ನೆಚ್ಚರಿಕಾ ಕ್ರಮ ಅನುಸರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಆರೋಗ್ಯ ಇಲಾಖೆ ವ್ಯಾಪ್ತಿಯ ಆಶಾ ಕಾರ್ಯಕರ್ತರು ಮತ್ತು ಕಿರಿಯ ಆರೋಗ್ಯ ಸಹಾಯಕರು ಹಕ್ಕಿಜ್ವರ ರೋಗ ನಿಯಂತ್ರಣ ಸಂಬಂಧ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈ ರೋಗನಿಯಂತ್ರಣದಲ್ಲಿ ಇದೆ ಎಂದು ಅವರುಸಭೆಗೆ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ, ಪರಿಮಾಣು ಕ್ರಿಮಿ ಸಂಶೋಧನಾ ಪ್ರಯೋಗಾಲಯದ ಉಪನಿರ್ದೇಶಕ ಡಾ.ರವಿಕುಮಾರ್, ಜಿಲ್ಲಾ ಸರ್ವೇಕ್ಷಣಾಅಧಿಕಾರಿ ಡಾ.ಶಂಕರಪ್ಪ, ಜಿಲ್ಲಾ ಕೀಟಜನ್ಯ ರೋಗ ನಿಯಂತ್ರಣಾಧಿಕಾರಿ ಡಾ.ಕಾಂತರಾಜು, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಟರಾಜ್, ತೀರ್ಥಹಳ್ಳಿ ತಹಶೀಲ್ದಾರ್ ಧರ್ಮೋಜಿರಾವ್ ಸೇರಿದಂತೆ ಎಲ್ಲ ತಾಲ್ಲೂಕುಗಳ ವೈದ್ಯಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT