ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಮಸ್ಯೆ ಮುಂದಿಡದೆ ಮತಯಾಚನೆ

Last Updated 11 ಜನವರಿ 2017, 5:27 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಚುನಾವಣೆ ಕಾವು ಏರುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯ ಪೂರ್ವ ತಯಾರಿಯ ತಾಲೀಮು ಎಂಬಂತೆ ವಿವಿಧ ಪಕ್ಷದ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ತೀರ್ಥಹಳ್ಳಿ ಎಪಿಎಂಸಿಗೆ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳಲ್ಲಿ ಹೋರಾಟ ಬಿರುಸಾಗಿದೆ.
ಜನವರಿ 12ರಂದು ನಡೆಯುವ ಚುನಾವಣೆ ಬರ, ಅಡಿಕೆ ಧಾರಣೆ ಕುಸಿತ, ವಿದ್ಯುತ್‌ ಅಭಾವ, ಕೊಳವೆಬಾವಿ ಕೊರೆಸುವುದರ ನಿಷೇಧ ಸೇರಿದಂತೆ ಅನೇಕ ಸಮಸ್ಯೆಗಳು ಚುನಾವಣಾ ಪ್ರಚಾರದ ಅಬ್ಬರದ ನಡುವೆ ಕಳೆದುಹೋಗಿವೆ.

ರೈತರ ಪ್ರಾತಿನಿಧಿಕ ಅಧಿಕಾರದ ಎಪಿಎಂಸಿ ಆಡಳಿತಕ್ಕೆ ಸಮರ್ಥ ಅಭ್ಯರ್ಥಿಗಳು ಆಯ್ಕೆ ಆಗಬೇಕು ಎನ್ನುವ ಬದಲಾಗಿ ಪಕ್ಷ, ಹಣ, ವಿವಿಧ ಆಮಿಷಗಳಿಗೆ ಬಾಯಿ ಬಿಟ್ಟಿರುವ ಅಭ್ಯರ್ಥಿಗಳಿಗೆ ಅವಕಾಶ ಲಭಿಸಲಿದೆ ಎಂಬ ವಾತಾವರಣ ಸೃಷ್ಟಿಯಾಗಿದೆ.

ಶಾಸಕ ಕಿಮ್ಮನೆ ರತ್ನಾಕರ, ಮಾಜಿ ಶಾಸಕ ಆರಗ ಜ್ಞಾನೇಂದ್ರ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡ ನೇತೃತ್ವದಲ್ಲಿ ಅಲ್ಲಲ್ಲಿ ಸಭೆ, ಗುಂಪು ಚರ್ಚೆಗಳು ನಡೆಯುತ್ತಿವೆ. ರಾಜಕೀಯ ಮುಖಂಡರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಂತಿದೆ. ಯಾರ ಕಡೆಯ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಆರಂಭವಾಗಿದೆ. ಕಿಮ್ಮನೆ ರತ್ನಾಕರ, ಆರಗ ಜ್ಞಾನೇಂದ್ರ ಹಾಗೂ ಮಂಜುನಾಥ ಗೌಡ ಅವರ ನಡುವೆಯೇ ಚುನಾವಣೆ ನಡೆಯುತ್ತಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುವಂತಾಗಿದೆ.

ಚುನಾವಣೆ ಮೇಲೆ ನೋಟು ಅಮಾನ್ಯದ ಸಂಗತಿ ಪರಿಣಾಮ ಬೀರಲಿದೆ ಎಂಬ ನಿರೀಕ್ಷೆ ಹುಸಿಯಾದಂತಿದೆ. ಹೊಸ ನೋಟುಗಳ ಮೂಲಕ ವೋಟು ಖರೀದಿ ಮಾಡುವ ಕುರಿತು ಸಾರ್ವಜನಿಕರು ಮಾತನಾಡಿಕೊಳ್ಳುವಂತಾಗಿದೆ. ಜಿದ್ದಿಗೆ ಬಿದ್ದ ಅಭ್ಯರ್ಥಿಗಳು ಹೇಗಾದರೂ ಮಾಡಿ ಗೆಲುವನ್ನು ತಮ್ಮದಾಗಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ. ಎಪಿಎಂಸಿ ಚುನಾವಣೆ ಕ್ಷೇತ್ರದ ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದೇ ಪರಿಗಣಿಸಲಾಗಿದೆ.

ತಾಲ್ಲೂಕು ವ್ಯಾಪ್ತಿಯ ಆರಗ, ಮಂಡಗದ್ದೆ, ಮಾಳೂರು, ಕೋಣಂದೂರು, ಮೇಗರವಳ್ಳಿ, ಹಾದಿಗಲ್ಲು, ಹೊದಲಾ ಅರಳಾಪುರ ಪ್ರತಿಷ್ಠಿತ ಕ್ಷೇತ್ರಗಳಾಗಿದ್ದು, ಈ ಕ್ಷೇತ್ರಗಳಲ್ಲಿ ಬಹುತೇಕ ನೇರ ಹಣಾಹಣಿ ನಡೆಯುತ್ತಿದೆ.

ಹಳ್ಳಿ ಹಳ್ಳಿಗಳಲ್ಲಿ ಜನರ ಓಡಾಟ ಜೋರಾಗಿದೆ. ಅಭ್ಯರ್ಥಿಗಳ, ಮುಖಂಡರ ಲೆಕ್ಕಾಚಾರ ಏನೇ ಇದ್ದರೂ ಮತದಾರರು ಮಾತ್ರ ಯಾವುದೇ ಗುಟ್ಟು ಬಿಡುತ್ತಿಲ್ಲ. ಎಪಿಎಂಸಿ ಆಡಳಿತದಲ್ಲಿ ರೈತರಿಗೆ ಸಿಗುವ ಸೌಲಭ್ಯ, ಬೆಳೆ ಧಾರಣೆ ಮುಂತಾದ ಅನುಕೂಲಗಳ ಕುರಿತು ಅಭ್ಯರ್ಥಿಗಳಿಂದ ಮಾಹಿತಿ, ಭರವಸೆ ಪಡೆಯುತ್ತಿಲ್ಲ. ಎಪಿಎಂಸಿ ರೈತರ ಪ್ರಾತಿನಿಧಿಕ ಸಂಸ್ಥೆಯಾಗಿದ್ದರೂ ಕೆಲ ಅಭ್ಯರ್ಥಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಬದಲಾಗಿ ತಮ್ಮ ಪ್ರತಿಷ್ಠೆ, ರಾಜಕೀಯ ಉದ್ದೇಶ ಇಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂಬ ಅಸಮಾಧಾನ ರೈತರಿಂದ ಕೇಳಿಬಂದಿದೆ.

ಶಿವಮೊಗ್ಗ ಎಪಿಎಂಸಿ ಆಡಳಿತಕ್ಕೆ ಒಳಪಟ್ಟ ತೀರ್ಥಹಳ್ಳಿಯಲ್ಲಿ 2002ರಲ್ಲಿ ಉಪ ಮಾರುಕಟ್ಟೆ ವಹಿವಾಟು ಆರಂಭಕ್ಕೆ ಸರ್ಕಾರ ಆದೇಶ ಪ್ರಕಟಿಸಿತು. ಪಟ್ಟಣದ ಬಾಳೇಬೈಲಿನ ಸಮೀಪ ಸುಮಾರು 7 ಎಕರೆ ಪ್ರದೇಶದ ವಿಶಾಲ ಪ್ರಾಂಗಣದಲ್ಲಿ ಕಟ್ಟಡ ನಿರ್ಮಾಣಗೊಂಡಿತು. 2011ರಲ್ಲಿ ಪ್ರತ್ಯೇಕ ಆಡಳಿತ ಮಂಡಳಿ ರಚನೆಯಾಯಿತು. ಮೊದಲ ಬಾರಿ 5 ವರ್ಷದ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಒಟ್ಟು 17 ಮಂದಿ ನಾಮ ನಿರ್ದೇಶಿತ ಆಡಳಿತ ಮಂಡಳಿ ರಚನೆಯಾಯಿತು.

2014ರಲ್ಲಿ ಮೂರೂವರೆ ವರ್ಷ ಅವಧಿ ಪೂರೈಸಿದ ಮೇಲೆ ಆಡಳಿತ ಮಂಡಳಿ ರದ್ದುಗೊಳಿಸಿ 2ನೇ ಬಾರಿಗೆ ನಾಮ ನಿರ್ದೇಶನ ಮಂಡಳಿ ಅಸ್ತಿತ್ವಕ್ಕೆ ಬಂದು, ಬಾಕಿ ಇದ್ದ ಒಂದೂವರೆ ವರ್ಷ ಅಧಿಕಾರ ಪೂರೈಸಿತು. ನಿರ್ದೇಶನ ಮಂಡಳಿಯಲ್ಲಿ ಒಟ್ಟು 18 ಜನರಿರಬೇಕು. 14 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. 3 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, 3 ಜನ ಸರ್ಕಾರದಿಂದ, ಒಬ್ಬರು ಇಲಾಖೆಯಿಂದ ನಾಮನಿರ್ದೇಶನ ಗೊಳ್ಳಲಿದ್ದಾರೆ.

ತೀರ್ಥಹಳ್ಳಿ ಎಪಿಎಂಸಿಗೆ ಮೊದಲ ಬಾರಿಗೆ 11 ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು, ಒಟ್ಟು 31,381 ಮತದಾರರಿದ್ದಾರೆ. 24,432 ಪುರುಷ ಹಾಗೂ 6,946 ಮಹಿಳಾ ಮತದಾರರನ್ನು ಒಳಗೊಂಡಿದೆ. ಒಟ್ಟು 51 ಮತಗಟ್ಟೆಗಳಿದ್ದು, ಮಾಳೂರು ಕ್ಷೇತ್ರದಲ್ಲಿ ಅತಿ ಹೆಚ್ಚು 7, ಹಾದಿಗಲ್ಲು ಕ್ಷೇತ್ರದಲ್ಲಿ ಅತಿ ಕಡಿಮೆ 2 ಮತಗಟ್ಟೆಗಳಿವೆ. ಚುನಾವಣಾ ಕಾರ್ಯನಿರ್ವಹಣೆಗೆ 204 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. 7 ಬಸ್‌ ಹಾಗೂ 13 ವಾಹನಗಳನ್ನು ಬಳಸಲಾಗುತ್ತದೆ.
- ಶಿವಾನಂದ ಕರ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT