ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ

ತುಂಗಾ ನಾಲೆ ಆಧುನೀಕರಣ ಕಾಮಗಾರಿ ಪರಿಶೀಲಿಸಿದ ‘ಕಾಡಾ’ ಅಧ್ಯಕ್ಷ ಸುಂದರೇಶ್
Last Updated 11 ಜನವರಿ 2017, 5:32 IST
ಅಕ್ಷರ ಗಾತ್ರ

ಶಿವಮೊಗ್ಗ: ‘ತುಂಗಾ ನಾಲೆ ಆಧುನೀಕರಣ ಕಾಮಗಾರಿ ಸಮರ್ಪಕ ರೀತಿಯಲ್ಲಿ ನಡೆಯುತ್ತಿದ್ದು, ರೈತರಿಗೆ ತೊಂದರೆಯಾಗದಂತೆ ನಿಗಾ ವಹಿಸಲಾ
ಗುವುದು’ ಎಂದು ಭದ್ರಾ ‘ಕಾಡಾ’ ಅಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.

ಗಾಜನೂರು ಸಮೀಪ ತುಂಗಾ ನಾಲೆ ಆಧುನೀಕರಣ ಕಾಮಗಾರಿ ನಡೆಯುವ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬರಗಾಲದ ಸಂದರ್ಭದಲ್ಲಿ ರೈತರು ಸಾಕಷ್ಟು ತೊಂದರೆಗೊಳಗಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಮತ್ತಷ್ಟು ಸಮಸ್ಯೆಗಳಿಗೆ ಸಿಲುಕುವುದು ಬೇಡ. ನಾಲೆಯ ಆಧುನೀಕರಣ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಬಾರದು.  ಗುಣಮಟ್ಟದ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ’ ಎಂದರು.

‘ಕಾಮಗಾರಿ ನಡೆಯುವ ಸ್ಥಳಗಳ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಲಾಗುವುದು. ಸರ್ಕಾರ ರೈತರ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯಕ್ರಮ ಹಮ್ಮಿ
ಕೊಳ್ಳುತ್ತಿದೆ. ಅದನ್ನು ಶ್ರಮವಹಿಸಿ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ರೈತರು ಹಾಗೂ ಸಂಘಟನೆ ಗಳ ಮೇಲಿದೆ. ಒಂದು ವೇಳೆ ಕಾಮಗಾರಿ
ಯಲ್ಲಿ ಲೋಪ ಕಂಡುಬಂದರೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲಾಗುವುದು. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಅವರು ತಿಳಿಸಿದರು.

‘ರೈತರು ಈ ಹಿಂದಿನ ಎರಡು ವರ್ಷಗಳಲ್ಲಿ ನಿರೀಕ್ಷಿತ ಪ್ರಮಾಣದ ಭತ್ತ ಬೆಳೆದಿಲ್ಲ. ಮುಂದೆಯೂ ಇದೇ ಪರಿಸ್ಥಿತಿಯಾದರೆ ಊಟ ಮಾಡಲು ಅಕ್ಕಿಯೇ ದೊರೆಯುವುದಿಲ್ಲ. ತುಂಬ ತೊಂದರೆಆಗುತ್ತದೆ. ಹಾಗಾಗಿ ಭತ್ತದ ಬೆಳೆ ಬೆಳೆಯುವಂತೆ ರೈತರಿಗೆ ಮನವಿ ಮಾಡಲಾಗಿದೆ. ಕಾಮಗಾರಿಗೆ ಸುಖಾಸುಮ್ಮನೆ ಅಡ್ಡಿ ಮಾಡುವುದು ಬೇಡ ಎಂದು ರೈತರಲ್ಲಿ ವಿನಂತಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಕಾಮಗಾರಿ ವಿನಾಕಾರಣ ಸ್ಥಗಿತಗೊಂಡಲ್ಲಿ, ಕೃಷಿಕರಿಗೆ ಹಾಗೂ ಕಾರ್ಮಿಕರಿಗೆ ತೀವ್ರ ತೊಂದರೆಯಾಗಲಿದೆ. ರೈತರ ಜತೆ ನಾವಿದ್ದೇವೆ’ ಎಂದು ಅವರು ಇದೇವೇಳೆ ಭರವಸೆ ನೀಡಿದರು.

‘ಕಾಮಗಾರಿಯ ವಿವರ, ಯೋಜನೆ, ಅಂದಾಜು ವೆಚ್ಚ ಯಾವುದನ್ನೂ ಅರಿಯದೇ ಸಂಘಟನೆಗಳು ದೂರುವ ಕೆಲಸ ಮಾಡುತ್ತಿವೆ. ಆದರೆ, ಕಾಮಗಾರಿ
ಯಲ್ಲಿ ತಪ್ಪುಗಳು ಸಂಭವಿಸಲು ಬಿಡುವುದಿಲ್ಲ. ಒಂದು ವೇಳೆ ಕಳಪೆ ಎಂದು ಕಂಡುಬಂದಲ್ಲಿ, ಸಂಬಂಧಿಸಿದ ಎಂಜಿನಿಯರ್‌ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

ಹೊಸಹಳ್ಳಿ, ಗಾಜನೂರು ಅಗ್ರಹಾರ ಸೇರಿದಂತೆ ನಾಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಂಜಿನಿಯರ್‌ಗಳಾದ ಓಂಕಾರಪ್ಪ, ಕುಮಾರಸ್ವಾಮಿ ಇದ್ದರು.

₹ 110 ಕೋಟಿ ಅನುದಾನಕ್ಕೆ ಮನವಿ
‘ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ವ್ಯಾಪ್ತಿಯಲ್ಲಿ ಬರುವ ಕೆರೆಗಳ ಪುನಶ್ಚೇತನಕ್ಕೆ ₹ 110 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು’ ಎಂದು ‘ಕಾಡಾ’ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.

‘ಅಚ್ಚುಕಟ್ಟು ಪ್ರದೇಶದಲ್ಲಿ ಬಹಳಷ್ಟು ಸಣ್ಣ ಹಾಗೂ ಮಧ್ಯಮ ಹಾಗೂ ಬೃಹತ್ ಕೆರೆಗಳು ಅಸ್ತಿತ್ವದಲ್ಲಿವೆ. ಹಲವು ಕೆರೆಗಳು ಪಾಳು ಬಿದ್ದಿವೆ. ನೀರು ಸಂಗ್ರಹಣಾ ಉದ್ದೇಶ
ದಿಂದ ಪುನಶ್ಚೇತನ ಮಾಡುವುದು ಅನಿವಾರ್ಯ’ ಎಂದು ಮನವಿ ಪತ್ರದಲ್ಲಿ ಅವರು ತಿಳಿಸಿದ್ದಾರೆ.

‘ಭದ್ರಾವತಿ ಮತ್ತು ಶಿವಮೊಗ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ತುಂಗಾ ಅಣೆಕಟ್ಟೆಯ ಎಡದಂಡೆ ಮತ್ತು ಬಲದಂಡೆ ನಾಲೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 42 ಕೆರೆಗಳಿವೆ. ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಮತ್ತು ಅಂಬ್ಲಿಗೊಳ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ 66 ಮತ್ತು 58 ಕೆರೆಗಳು ಇವೆ. ಈ ಎಲ್ಲ ಕೆರೆಗಳು ಒತ್ತುವರಿಯಾಗಿವೆ ಎಂದು ತಿಳಿದುಬಂದಿದೆ’ ಎಂದು ಮನವಿಯಲ್ಲಿ ಹೇಳಿದ್ದಾಗಿ ಅವರು ತಿಳಿಸಿದರು.

‘ಜಿಲ್ಲಾಧಿಕಾರಿ ಕೆರೆಗಳ ಒತ್ತುವರಿ ತೆರವು ಸಂಬಂಧ ಮನವಿಗೆ ಸ್ಪಂದಿಸಿದ್ದು, ಸರ್ವೆಯರ್ ಮೂಲಕ ತೆರವು ಮಾಡುವುದಾಗಿ ಹೇಳಿದ್ದಾರೆ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಕೂಡ ಕೆರೆಗಳ ಪುನಶ್ಚೇತನಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ’ ಎಂದು ಸುಂದರೇಶ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT