ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿ ಕಡಲೆ ಗಿಡಕ್ಕೆ ಉತ್ತಮ ಬೇಡಿಕೆ

Last Updated 11 ಜನವರಿ 2017, 5:37 IST
ಅಕ್ಷರ ಗಾತ್ರ

ಹೊಸದುರ್ಗ: ಹಿಂಗಾರು ಮಳೆಯೂ ಕೈಕೊಟ್ಟಿದ್ದರಿಂದ ತಾಲ್ಲೂಕಿನಲ್ಲಿ ಈ ಬಾರಿ ಕಡಲೆ ಬಿತ್ತನೆ ಹಾಗೂ ಇಳುವರಿ ಕಡಿಮೆಯಾಗಿದ್ದು, ಹಸಿ ಕಡಲೆ ಗಿಡಕ್ಕೆ ಬೇಡಿಕೆ ಹೆಚ್ಚಾಗಿದೆ.
ಪ್ರತಿವರ್ಷ ಜನವರಿ ತಿಂಗಳು ಆರಂಭವಾಗುತ್ತಿದ್ದಂತೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಹೋಬಳಿ ಕೇಂದ್ರಗಳಾದ ಬಾಗೂರು, ಮಾಡದಕೆರೆ, ಮತ್ತೋಡು, ಶ್ರೀರಾಂಪುರ, ಬೆಲಗೂರಿನ ಬಸ್‌ನಿಲ್ದಾಣ ಮತ್ತು ಬಸ್‌ಗಳ ಒಳಗೂ ಹಸಿ ಕಡಲೆ ಗಿಡದ ಮಾರಾಟ  ಭರ್ಜರಿಯಾಗಿ ಇರುತ್ತಿತ್ತು. ಆದರೆ ಈ ಬಾರಿ ಮಾರಾಟವೂ ಕ್ಷೀಣಿಸಿದೆ.

  ಈ ಬಾರಿ ಈರುಳ್ಳಿ ಧಾರಣೆ ಕುಸಿತದಿಂದ ಕಂಗೆಟ್ಟ ಕೆಲವು ಬೆಳೆಗಾರರು, ಈರುಳ್ಳಿ ಬಿತ್ತನೆ ಮಾಡಿದ್ದ ಜಮೀನನ್ನು ಹಸನುಗೊಳಿಸಿ, ಹಿಂಗಾರು ಹಂಗಾಮಿನಲ್ಲಾದರೂ ಒಂದಷ್ಟು ಆದಾಯ ಬರುವಂತಹ ಕಡಲೆ ಬಿತ್ತನೆ ಮಾಡಲು ಸಿದ್ಧರಾದರೂ ಮಳೆ ಬರಲೇ ಇಲ್ಲ. ಆದರೂ ಕೆಲವು ರೈತರು ಒಮ್ಮೆ ಜಮೀನಿಗೆ ಬೋರ್‌ವೆಲ್‌ನಿಂದ ನೀರು ಹಾಯಿಸಿ, ಮಳೆ ನಂಬಿಕೊಂಡು ಕಡಲೆ ಬಿತ್ತನೆ ಮಾಡಿದ್ದರು. ಆದರೆ, ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಭೂಮಿ ಯಲ್ಲಿ ತೇವಾಂಶ ಇಲ್ಲವಾಗಿ ಇಳುವರಿ ಸಂಪೂರ್ಣ ಕುಸಿತವಾಗಿದೆ.

ಎರೆ ಜಮೀನಿನಲ್ಲೇ ಬೆಳೆ ಇಲ್ಲ:  ಕಸಬಾ ಹೋಬಳಿಯ ಅರಳೀಹಳ್ಳಿ, ಹೊನ್ನೇಕೆರೆ, ನಾಗೇನಹಳ್ಳಿ, ಬಾಗೂರು, ಪಾಳೇದ ಹಳ್ಳಿ, ನೀರಗುಂದ, ಶೆಟ್ಟಿಹಳ್ಳಿ, ಬೋಕಿಕೆರೆ,
ಎಂ.ಜಿ.ದಿಬ್ಬ, ಮಳಲಿ ಸೇರಿದಂತೆ ಇನ್ನಿತರ ಹಳ್ಳಿಗಳ ಎರೆ ಜಮೀನಿನಲ್ಲಿ ಹೆಚ್ಚಾಗಿ ಕಡಲೆ ಬೆಳೆಯುತ್ತಿದ್ದರು. ಈ ಭಾಗದ ಜನರು ಪ್ರತಿವರ್ಷ ಹಸಿ ಕಡಲೆಯನ್ನು ಬಯಸಿದಷ್ಟು ತಿನ್ನುತ್ತಿದ್ದರು. ಆದರೆ, ಈ ಬಾರಿ ಮಳೆ ಅಭಾವದಿಂದ ಕಡಲೆ ಬೆಳೆಗೆ ಪ್ರಸಿದ್ಧಿಯಾದ ತಾಲ್ಲೂಕಿನ ಹಳ್ಳಿಗಳಲ್ಲೇ ಬೆಳೆ ಇಲ್ಲದಂತಾಗಿದೆ.  ಹಸಿ ಕಡಲೆ ತಿನ್ನಲು ಬಯಸುವವರಿಗೆ ಕಡಲೆ ಗಿಡ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಕಡಲೆಕಾಳು ಧಾರಣೆ ಗಗನಕ್ಕೇರುವ ಸಾಧ್ಯತೆ ಇದೆ ಎನ್ನುತ್ತಾರೆ ರೈತ ತಿಮ್ಮಪ್ಪ.

ಕಡಿಮೆಯಾದ ಮಳೆ: ಡಿಸೆಂಬರ್‌ ಅಂತ್ಯಕ್ಕೆ ಒಟ್ಟು 588 ಮಿ.ಮೀ ಮಳೆಯಾಗಬೇಕಿತ್ತು. ಅದರೆ 363 ಮಿ.ಮೀ ಮಳೆಯಾಗಿದ್ದು, ಇನ್ನೂ 225 ಮಿ.ಮೀ ಮಳೆ ಪ್ರಮಾಣ ಕುಸಿದಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಬೆಳೆ ಇಲ್ಲದಿರುವಾಗ ಬೇಡಿಕೆ: ಜಮೀನಿನಲ್ಲಿ ಬೆಳೆ ಇಲ್ಲದಿರುವಾಗ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಹಸಿ ಕಡಲೆ ಗಿಡ ಮಾರಾಟ ಮಾಡಲು ಸ್ಥಳೀಯವಾಗಿ ಕಡಲೆ ಗಿಡ ಸಿಗುತ್ತಿಲ್ಲ. ಮಾರಾಟ ಮಾಡುವವರು ತರೀಕೆರೆ ತಾಲ್ಲೂಕಿನ ಕಾಟಿನೆರೆ, ತಮ್ಮಟನಹಳ್ಳಿ, ಸೊಲ್ಲಾಪುರ ಈ ಭಾಗದಲ್ಲಿ ಒಂದು ಕೆ.ಜಿ ಹಸಿ ಕಡಲೆ ಗಿಡಕ್ಕೆ ₹ 40 ಕೊಟ್ಟು ಖರೀದಿಸುತ್ತಿದ್ದಾರೆ. ‘ಖರೀದಿಸಿದ ಒಂದು ಕೆ.ಜಿ ಕಡಲೆ ಗಿಡವನ್ನು 8ರಿಂದ 10 ಕಟ್ಟುಗಳಾಗಿ (ಸಿವುಡು) ಕಟ್ಟಿದ್ದೇವೆ. ತಲಾ ಒಂದು ಕಟ್ಟನ್ನು ₹ 10ಕ್ಕೆ ಹಾಗೂ 3 ಕಟ್ಟನ್ನು ₹ 20ಕ್ಕೆ ಮಾರಾಟ ಮಾಡುತ್ತಿದ್ದೇವೆ. ಪ್ರತಿದಿನ 30ರಿಂದ 40 ಕೆ.ಜಿ ಕಡಲೆ ಗಿಡ ಮಾರಾಟ ಮಾಡು ತ್ತಿದ್ದೇನೆ’ ಎನ್ನುತ್ತಾರೆ ವ್ಯಾಪಾರಿ ರತ್ನಮ್ಮ.
- ಎಸ್‌.ಸುರೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT